
ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
10 ಗ್ರಾಂ ಚಿನ್ನದ ದರವು ₹1,685 ಹೆಚ್ಚಳವಾಗಿ, ₹1,38,200ರಂತೆ ಮಾರಾಟವಾಗಿದೆ. ಬೆಳ್ಳಿ ದರವು ಕೆ.ಜಿಗೆ ₹10,400ರಷ್ಟು ಜಿಗಿತವಾಗಿ, ₹2,14,500ಕ್ಕೆ ತಲುಪಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಇದೇ ಡಿಸೆಂಬರ್ 2ರಂದು 10 ಗ್ರಾಂ ಚಿನ್ನದ ಬೆಲೆ ₹1,31,530 ಇದ್ದರೆ, ಕೆ.ಜಿ ಬೆಳ್ಳಿ ಧಾರಣೆ ₹1,81,360ರಷ್ಟಿತ್ತು. ಡಿಸೆಂಬರ್ 22ರ ವೇಳೆಗೆ ಚಿನ್ನದ ದರದಲ್ಲಿ ₹6,670 ಏರಿಕೆಯಾಗಿದ್ದರೆ, ಬೆಳ್ಳಿ ದರದಲ್ಲಿ ₹33,140 ಜಿಗಿತವಾಗಿದೆ.
ದರ ಏರಿಕೆಗೆ ಕಾರಣವೇನು?: ಅಮೆರಿಕದಲ್ಲಿ ಬಡ್ಡಿ ದರ ಇಳಿಕೆ ಮತ್ತು ಆರ್ಥಿಕ ಅನಿಶ್ಚಿತತೆಯು ಹೆಚ್ಚುತ್ತಿರುವುದರಿಂದ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯ ಕಡೆ ಒಲವು ತೋರಿದ್ದಾರೆ. ಇದೇ ಬೆಲೆ ಏರಿಕೆಗೆ ಕಾರಣ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸೌಮಿಲ್ ಗಾಂಧಿ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ರಾಜಕೀಯ ಬಿಕ್ಕಟ್ಟಿನಿಂದ ಸುರಕ್ಷಿತ ಹೂಡಿಕೆಯಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಇದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಬೆಳ್ಳಿ ಗಣಿಗಾರಿಕೆಯಲ್ಲಿ ಅಡಚಣೆ ಉಂಟಾಗಿರುವುದು, ಪ್ರಸ್ತುತ ಬೆಳ್ಳಿ ದಾಸ್ತಾನು ಸೀಮಿತವಾಗಿರುವುದರಿಂದ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಜೊತೆಗೆ ಕೈಗಾರಿಕೆಗಳಲ್ಲಿ ಬೆಳ್ಳಿಗೆ ಹೆಚ್ಚಿದ ಬೇಡಿಕೆ, ಬೆಳ್ಳಿಯಲ್ಲಿ ಹೆಚ್ಚುತ್ತಿರುವ ಹೂಡಿಕೆಯು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.