ನವದೆಹಲಿ: ಜಿಎಸ್‌ಟಿ ದರ ಪರಿಷ್ಕರಣೆಯ ಪ್ರಯೋಜನವು ಬೆಲೆ ಇಳಿಕೆಯ ರೂಪದಲ್ಲಿ ಗ್ರಾಹಕರಿಗೆ ಸಿಗಲಾರಂಭಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹೇಳಿದರು.
‘ಜಿಎಸ್‌ಟಿ ಉಳಿತಾಯ ಉತ್ಸವ’ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 54 ಉತ್ಪನ್ನಗಳ ಬೆಲೆಯ ಮೇಲೆ ಕೇಂದ್ರ ಸರ್ಕಾರವು ದೇಶದಾದ್ಯಂತ ನಿಗಾ ಇರಿಸಿದೆ ಎಂದು ತಿಳಿಸಿದರು. ಜಿಎಸ್‌ಟಿ ದರ ಪರಿಷ್ಕರಣೆ ಜಾರಿಗೆ ಬಂದ ದಿನದಿಂದಲೂ ನಿಗಾ ಇಡಲಾಗಿದೆ ಎಂದರು.
‘ಜಿಎಸ್‌ಟಿ ದರ ಇಳಿಕೆಯ ಕಾರಣದಿಂದಾಗಿ ಖರೀದಿ ಹೆಚ್ಚಾಗಿದೆ. ಹೆಚ್ಚು ಖರೀದಿ ಪ್ರವೃತ್ತಿಯು ಮುಂದುವರಿಯಲಿದೆ. ಪ್ರತಿ ಉತ್ಪನ್ನಗಳ ಮೇಲೆ ಸಿಗುವ ಪ್ರಯೋಜನವನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸುತ್ತಿವೆ ಎಂಬುದು ನಮಗೆ ಮನವರಿಕೆಯಾಗಿದೆ’ ಎಂದು ಅವರು ಹೇಳಿದರು.
ಜಿಎಸ್‌ಟಿ ದರ ಇಳಿಕೆಗೆ ಅನುಗುಣವಾಗಿ ಬೆಲೆಯನ್ನು ಇಳಿಕೆ ಮಾಡಿಲ್ಲ ಎಂಬುದನ್ನು ಹೇಳುವ 3,169 ದೂರುಗಳು ಗ್ರಾಹಕ ವ್ಯವಹಾರಗಳ ಇಲಾಖೆಗೆ ಬಂದಿವೆ. ಈ ಪೈಕಿ 3,075 ದೂರುಗಳನ್ನು ಪರೋಕ್ಷ ತೆರಿಗೆಗಳು ಮತ್ತು ಸುಂಕಗಳ ಕೇಂದ್ರೀಯ ಮಂಡಳಿಯ (ಸಿಬಿಐಸಿ) ನೋಡಲ್ ಅಧಿಕಾರಿಗಳಿಗೆ ರವಾನಿಸಲಾಗಿದೆ. ಒಟ್ಟು 94 ದೂರುಗಳನ್ನು ಇಲಾಖೆಯು ಇತ್ಯರ್ಥಪಡಿಸಿದೆ ಎಂದು ನಿರ್ಮಲಾ ಅವರು ವಿವರ ನೀಡಿದರು.
ದರ ಇಳಿಕೆಯ ಬಗ್ಗೆ ಮಾಹಿತಿ ನೀಡಿದ ನಿರ್ಮಲಾ, ‘ಶಾಂಪೂ, ಟಾಕಂ ಪೌಡರ್, ಮೇಜು, ಅಡುಗೆ ಮನೆ ಉಪಕರಣಗಳು, ಕಬ್ಬಿಣ, ಉಕ್ಕು, ತಾಮ್ರದ ಪಾತ್ರೆಗಳು, ಆಟಿಕೆಗಳು, ಕೊಡೆಗಳ ಬೆಲೆಯು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಇಳಿಕೆ ಕಂಡಿವೆ’ ಎಂದರು.
₹20 ಸಾವಿರ ಕೋಟಿ ಹೆಚ್ಚುವರಿ ಖರೀದಿ: ಜಿಎಸ್‌ಟಿ ವ್ಯವಸ್ಥೆಯಲ್ಲಿ ತಂದ ಸುಧಾರಣೆಗಳ ಕಾರಣದಿಂದಾಗಿ ಈ ವರ್ಷದಲ್ಲಿ ಹೆಚ್ಚುವರಿಯಾಗಿ ₹20 ಸಾವಿರ ಕೋಟಿ ಮೌಲ್ಯದ ಎಲೆಕ್ಟ್ರಾನಿಕ್ಸ್ ಉಪಕರಣಗಳ ಖರೀದಿ ಆಗುವ ನಿರೀಕ್ಷೆ ಇದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಕಳೆದ ವರ್ಷದ ನವರಾತ್ರಿ ಸಂದರ್ಭದಲ್ಲಿ ಆಗಿದ್ದ ಮಾರಾಟ ಪ್ರಮಾಣಕ್ಕೆ ಹೋಲಿಸಿದರೆ ಈ ಬಾರಿಯ ಮಾರಾಟವು ಶೇ 20ರಿಂದ ಶೇ 25ರವರೆಗೆ ಹೆಚ್ಚಾಗಿದೆ ಎಂಬುದನ್ನು ರಿಟೇಲ್ ಮಳಿಗೆಗಳಿಂದ ಪಡೆದಿರುವ ಮಾಹಿತಿ ಹೇಳುತ್ತಿದೆ ಎಂದು ವೈಷ್ಣವ್ ತಿಳಿಸಿದರು.
‘ಎಲೆಕ್ಟ್ರಾನಿಕ್ಸ್ ಸರಕುಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದಾಗಿ ಅವುಗಳ ತಯಾರಿಕಾ ಕ್ಷೇತ್ರವು ಎರಡಂಕಿಗಳ ವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ. ಈ ವರ್ಷ ಬೇಡಿಕೆಯು ಶೇ 10ರಷ್ಟಕ್ಕಿಂತ ಹೆಚ್ಚಾಗಲಿದೆ’ ಎಂದರು.