ADVERTISEMENT

GST ಸಮಿತಿ ಸಭೆ: ಹೊಸ ಸ್ಲಾಬ್‌ನಲ್ಲಿ ಯಾವುದೆಲ್ಲ ಅಗ್ಗ..? ಯಾವುದು ದುಬಾರಿ..?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2025, 10:41 IST
Last Updated 3 ಸೆಪ್ಟೆಂಬರ್ 2025, 10:41 IST
<div class="paragraphs"><p>ದೆಹಲಿಯಲ್ಲಿ ಬುಧವಾರ ನಡೆದ 56ನೇ ಜಿಎಸ್‌ಟಿ ಸಮಿತಿ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಮತ್ತು ಕಂದಾಯ ಇಲಾಖೆ ಕಾರ್ಯದರ್ಶಿ ಅರವಿಂದ್ ಶ್ರೀವಾಸ್ತವ ಪಾಲ್ಗೊಂಡಿದ್ದರು</p></div>

ದೆಹಲಿಯಲ್ಲಿ ಬುಧವಾರ ನಡೆದ 56ನೇ ಜಿಎಸ್‌ಟಿ ಸಮಿತಿ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಮತ್ತು ಕಂದಾಯ ಇಲಾಖೆ ಕಾರ್ಯದರ್ಶಿ ಅರವಿಂದ್ ಶ್ರೀವಾಸ್ತವ ಪಾಲ್ಗೊಂಡಿದ್ದರು

   

ಪಿಟಿಐ ಚಿತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST) ಸಮಿತಿಯ 56ನೇ ಸಭೆ ಇಂದು ಆರಂಭವಾಗಿದ್ದು, ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಹಬ್ಬದ ಸಂದರ್ಭದಲ್ಲಿ ಯಾವೆಲ್ಲ ವಸ್ತುಗಳ ಬೆಲೆ ಇಳಿಯಲಿದೆ ಹಾಗೂ ಹೆಚ್ಚಲಿದೆ ಎಂಬ ಕುತೂಹಲ ಗ್ರಾಹಕ ವಲಯದಲ್ಲೂ ಮನೆಮಾಡಿದೆ.

ADVERTISEMENT

ಏನೆಲ್ಲಾ ನಿರೀಕ್ಷೆ ಇದೆ?

ಜಿಎಸ್‌ಟಿ ಸುಧಾರಣೆ ಮೂಲಕ ವರ್ತಕರ ವಲಯವು ದೀಪಾವಳಿ ಉಡುಗೊರೆ ನಿರೀಕ್ಷಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಹೇಳಿದ್ದರು. ಅದರ ಆಧಾರದಲ್ಲಿ ಹಲವು ವಿಭಾಗಗಳಲ್ಲಿ ತೆರಿಗೆ ಕಡಿತವಾಗುವ ನಿರೀಕ್ಷೆ ಇದೆ. ಸಮಿತಿಯಲ್ಲಿ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಇದ್ದಾರೆ. ಹಾಲಿ ಇರುವ ಶೇ 5, ಶೇ 12, ಶೇ 18 ಮತ್ತು ಶೇ 28 ತೆರಿಗೆಯ ನಾಲ್ಕು ಹಂತಗಳನ್ನು ಸರಳಗೊಳಿಸುವ ಸಾಧ್ಯತೆಗಳಿವೆ ಎಂದೆನ್ನಲಾಗಿದೆ.

ಯಾವ ವಸ್ತುಗಳು ಅಗ್ಗವಾಗಲಿವೆ?

ಈಗಾಗಲೇ ಸಲ್ಲಿಕೆಯಾಗಿರುವ ಪ್ರಸ್ತಾವದಂತೆ ಶೇ 28ರ ತೆರಿಗೆಯನ್ನು ಶೇ 18ಕ್ಕೆ ಇಳಿಸಲು ಸಚಿವರ ಸಮಿತಿ ಒಪ್ಪಿಗೆ ಸೂಚಿಸಿದೆ. ಹಾಗೆಯೇ ಶೇ 18ರ ತೆರಿಗೆ ಸ್ಲಾಬ್‌ ಶೇ 12ಕ್ಕೆ ಇಳಿಯಲಿವೆ. ಶೇ 12ರದ್ದು ಶೇ 5ಕ್ಕೆ ಕ್ರಮವಾಗಿ ಇಳಿಕೆಯಾಗುವ ಸಾಧ್ಯತೆಗಳಿವೆ.

  • ಸರಕು ಮತ್ತು ಸೇವಾ ತೆರಿಗೆಯನ್ನು ವಿಶಾಲ ಅರ್ಥದಲ್ಲಿ ‘ಮೆರಿಟ್’ ಅಥವಾ ‘ಸ್ಟಾಂಡರ್ಡ್‌’ ಎಂದು ವರ್ಗೀಕರಿಸಲಾಗಿದೆ. ತಂಬಾಕು ಮತ್ತು ವಿಲಾಸಿ ವಾಹನಗಳಿಗೆ ಸದ್ಯ ಇರುವ ಶೇ 40ರ ‘ಸಿನ್‌ ಟ್ಯಾಕ್ಸ್‌’ ಮುಂದುವರಿಯಲಿದೆ.

  • 1200 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಎಂಜಿನ್‌ ಹೊಂದಿರುವ ಸಣ್ಣ ಕಾರುಗಳು, 350 ಸಿಸಿ ಒಳಗಿನ ಮೋಟಾರ್‌ಸೈಕಲ್‌ಗಳು ಮತ್ತು ಬಿಡಿಭಾಗಗಳ ಮೇಲಿನ ತೆರಿಗೆ ಶೇ 28ರಿಂದ ಶೇ 18ಕ್ಕೆ ಇಳಿಕೆ

  • ಹೋಟೆಲ್ ಮತ್ತು ಮನರಂಜನಾ ಕ್ಷೇತ್ರದಲ್ಲಿ ಈವರೆಗೂ ಇದ್ದ ಶೇ 12ರಷ್ಟು ತೆರಿಗೆಯು ಶೇ 5ಕ್ಕೆ ಇಳಿಕೆ; ಕ್ಯಾನ್ಸರ್ ಔಷಧ ಮೇಲಿನ ಜಿಎಸ್‌ಟಿ ರದ್ದು; ಔಷಧ ಮತ್ತು ಇತರ ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ಶೇ 12ರಿಂದ ಶೇ 5; ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆಗೆ ತೆರಿಗೆ ವಿನಾಯ್ತಿ

  • ದಿನನಿತ್ಯ ಬಳಸುವ ವಸ್ತುಗಳಾದ ಪನ್ನೀರ್, ಪಿಟ್ಜಾ ಬ್ರೆಡ್‌, ಖಾಕ್ರ, ಹಣ್ಣಿನ ರಸ, ಎಳನೀರು, ಮಜ್ಜಿಗೆ, ಚೀಸ್, ಪಾಸ್ತಾ ಮತ್ತು ಐಸ್‌ ಕ್ರೀಂ ಅಗ್ಗವಾಗಲಿದೆ. ಇವುಗಳ ಮೇಲಿನ ತೆರಿಗೆ ಶೇ 12ರಿಂದ ಶೇ 5ಕ್ಕೆ ಇಳಿಸುವ ಸಾಧ್ಯತೆಗಳಿವೆ.

  • ಕೃಷಿ ಕ್ಷೇತ್ರದಲ್ಲಿ ರಸಗೊಬ್ಬರಗಳ ಬೆಲೆ ಇಳಿಕೆಯಾಗುವ ಸಾಧ್ಯತೆಗಳಿವೆ. ಈ ಕ್ಷೇತ್ರಕ್ಕೆ ಅಗತ್ಯವಿರುವ ಸಲ್‌ಫ್ಯೂರಿಕ್‌ ಆ್ಯಸಿಡ್, ನೈಟ್ರಿಕ್ ಆ್ಯಸಿಡ್ ಮತ್ತು ಅಮೋನಿಯಾ ಮೇಲಿನ ತೆರಿಗೆ ಶೇ 18ರಿಂದ ಶೇ 5ಕ್ಕೆ ಇಳಿಕೆ

  • ಜವಳಿ ಕ್ಷೇತ್ರದಲ್ಲಿ ಸಿಂಥೆಟಿಕ್ ಯಾರ್ನ್, ಕೈಮಗ್ಗದ ನಾರಿನ ನೂಲು, ಕರಕುಶಲ ವಸ್ತುಗಳ ಮೇಲಿನ ತೆರಿಗೆ ಶೇ 12ರಿಂದ 5ಕ್ಕೆ ಇಳಿಕೆ

  • ಸೌರಶಕ್ತಿಯ ಕುಕ್ಕರ್‌ ಮೇಲಿನ ತೆರಿಗೆ ಶೇ 12ರಿಂದ ಶೇ 5ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ. ಸ್ಟೇಷನರಿ ವಿಭಾಗದಲ್ಲಿ ಪೇಪರ್‌ ಮೇಲಿನ ಬರಹ ಅಳಿಸುವ ಎರೇಸರ್‌ಗೆ ಈ ಮೊದಲು ಶೇ 12ರಷ್ಟು ತೆರಿಗೆ ಇತ್ತು. ಅದನ್ನು ಕೈಬಿಡುವ ಸಾಧ್ಯತೆಗಳಿವೆ. ಭೂಪಟ, ಚಾರ್ಟ್‌ಗಳು, ನೋಟ್‌ಪುಸ್ತಕ, ಅಟ್ಲಾಸ್‌ ಮೇಲಿನ ಜಿಎಸ್‌ಟಿ ಶೇ 12ರಿಂದ 5ಕ್ಕೆ ಇಳಿಯಲಿದೆ. ಛತ್ರಿ ಮೇಲಿನ ತೆರಿಗೆ ಶೇ 5ಕ್ಕೆ ಇಳಿಕೆಯಾಗಲಿದೆ.

  • ಹಲ್ಲುಜ್ಜುವ ಪುಡಿ ಅಗ್ಗವಾಗುವ ನಿರೀಕ್ಷೆಗಳಿವೆ. ಇದರ ಮೇಲಿನ ಜಿಎಸ್‌ಟಿ ಶೇ 5ಕ್ಕೆ ಇಳಿಕೆಯಾಗುವ ಸಾಧ್ಯತಗಳಿವೆ. ಈ ಮೊದಲು ಶೇ 12ರಷ್ಟಿತ್ತು. ಜತೆಗೆ ಟೂತ್‌ಪೇಸ್ಟ್‌ ಮೇಲಿನ ತೆರಿಗೆಯೂ ಶೇ 18ರಿಂದ ಶೇ 12ಕ್ಕೆ; ಶಾಂಪೂ, ಎಣ್ಣೆ ಮತ್ತು ಸೋಪುಗಳ ಮೇಲಿನ ತೆರಿಗೆ ಶೇ 18ರಿಂದ ಶೇ 5ಕ್ಕೆ ಇಳಕೆಯಾಗುವ ಸಾಧ್ಯತೆಗಳಿವೆ.

  • ₹7,500 ಒಳಗಿನ ಹೋಟೆಲ್ ಕೊಠಡಿಗಳ ಬಾಡಿಗೆ ಮೇಲಿನ ತೆರಿಗೆಯು ಶೇ 12ರಿಂದ ಶೇ 5ಕ್ಕೆ ಇಳಿಸಲು ಸಮಿತಿ ಪ್ರಸ್ತಾವ ಸಲ್ಲಿಸಿದೆ.

ಯಾವುದೆಲ್ಲಾ ದುಬಾರಿಯಾಗಲಿದೆ..?

  • ವಿಲಾಸಿ ಮತ್ತು ಹಾನಿಕಾರಕ ವಸ್ತುಗಳಲ್ಲಿ ತಂಬಾಕು, ಪಾನ್ ಮಸಾಲಾ ಮತ್ತು ವಿಲಾಸಿ ವಾಹನಗಳ ಮೇಲಿನ ತೆರಿಗೆ ಶೇ 40ರಲ್ಲೇ ಮುಂದುವರಿಯುವ ಸಾಧ್ಯತೆಗಳಿವೆ.

  • ಬ್ಯಾಟರಿ ಚಾಲಿತ (EV) ₹20 ಲಕ್ಷ ಮೇಲಿನ ವಾಹನಗಳ ಬೆಲೆ ಈಗಿರುವ ಶೇ 5ರ ಜಿಎಸ್‌ಟಿಯಿಂದ ಶೇ 18ಕ್ಕೆ ಏರಿಕೆಯಾಗಲಿದೆ. ₹40 ಲಕ್ಷ ಮೇಲಿನ ಇವಿ ವಾಹನಗಳಿಗೆ ಶೇ 40ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ

  • ಕಲ್ಲಿದ್ದಲು ಮೇಲಿನ ಜಿಎಸ್‌ಟಿ ಶೇ 5ರಿಂದ ಶೇ 18ಕ್ಕೆ ಏರಿಕೆಯಾಗಲಿದೆ. ಇದು ವಿದ್ಯುತ್ ಶುಲ್ಕದ ಮೇಲೆ ಪರಿಣಾಮ ಬೀರಲಿದೆ.

  • ₹2,500ಕ್ಕಿಂತ ಮೇಲಿನ ಪ್ರತಿ ಸಿದ್ಧ ಉಡುಪಿಗೆ ಈಗಿರುವ ಶೇ 12ರ ಜಿಎಸ್‌ಟಿಯನ್ನು ಶೇ 18ಕ್ಕೆ ಏರಿಸುವ ಪ್ರಸ್ತಾವವಿದೆ.

ಮಧ್ಯಮ ವರ್ಗದ ಗ್ರಾಹಕರ ಹಿತ ಮತ್ತು ಖಾಸಗಿ ಹೂಡಿಕೆಯನ್ನು ಗಮನದಲ್ಲಿಟ್ಟುಕೊಂಡು ಜಿಎಸ್‌ಟಿ ಸಮಿತಿ ಶಿಫಾರಸುಗಳನ್ನು ಮಾಡಿದ್ದು, ಇದರಿಂದ ಆದಾಯದಲ್ಲಿ ₹50 ಸಾವಿರ ಕೋಟಿ ನಷ್ಟ ಉಂಟಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.