ನವದೆಹಲಿ/ ಲಂಡನ್: ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಬ್ರಿಟನ್ ಪ್ರವಾಸ ಕೈಗೊಂಡಿದ್ದು, ಉಭಯ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಹಾಗೂ ಬ್ರಿಟನ್ ಗುರುವಾರ ಸಹಿ ಹಾಕುವ ಸಾಧ್ಯತೆಗಳಿವೆ.
ಇದರಿಂದಾಗಿ ಬ್ರಿಟನ್‌ನ ವಿಸ್ಕಿ, ಕಾರು ಮತ್ತು ಕೆಲ ಆಹಾರ ಪದಾರ್ಥಗಳ ಮೇಲಿನ ಆಮದು ಸುಂಕವನ್ನು ಭಾರತ ಕಡಿತಗೊಳಿಸಲಿದೆ. ಇದಕ್ಕೆ ಬದಲಾಗಿ ಭಾರತದ ಜವಳಿ, ವಿದ್ಯುತ್ ಚಾಲಿತ ವಾಹನಗಳನ್ನು ಸುಂಕ ರಹಿತವಾಗಿ ಬ್ರಿಟನ್ ಪಡೆಯಬಹುದಾಗಿದೆ.
ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಮಾತುಕತೆಯ ಭಾಗವಾಗಿ ಈ ಒಪ್ಪಂದವು ಕಳೆದ ಮೇನಲ್ಲಿ ಅಂತಿಮ ರೂಪ ಪಡೆದಿತ್ತು. ಇದರಿಂದ ಉಭಯ ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರಕ್ಕೆ ಅಡ್ಡವಾಗಿದ್ದ ಹಲವು ತೊಡಕುಗಳು ನಿವಾರಣೆಯಾಗಲಿದ್ದು, ಎರಡೂ ರಾಷ್ಟ್ರಗಳ ವ್ಯಾಪಾರ ಮುಕ್ತವಾಗಲಿದೆ. ಈ ಒಪ್ಪಂದಕ್ಕೆ ಬ್ರಿಟಿಷ್ ಸಂಸತ್ತು ಮತ್ತು ಭಾರತದ ಸಂಪುಟ ಒಪ್ಪಿಗೆ ದೊರೆತ ನಂತರ ಸುಂಕ ಕಡಿತ ಪ್ರಕ್ರಿಯೆ ಜಾರಿಗೆ ಬರಲಿದೆ. ಇದಕ್ಕೆ ಸುಮಾರು ಒಂದು ವರ್ಷ ತಗಲುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರು ಈ ಕುರಿತು ಮಾಹಿತಿ ನೀಡಿ, ‘ಬ್ರಿಟನ್ ಮತ್ತು ಮಾಲ್ದೀವ್ಸ್‌ಗೆ ಪ್ರಧಾನಿ ಅವರ ನಾಲ್ಕು ದಿನಗಳ ಪ್ರವಾಸದ ಸಂದರ್ಭದಲ್ಲೇ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಒಪ್ಪಂದದ ಕರಡು ಕುರಿತ ಕಾನೂನಿನ ಚರ್ಚೆಗಳು ನಡೆಯುತ್ತಿವೆ. ಒಪ್ಪಂದಕ್ಕೆ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಸಹಿ ಹಾಕಲಿದ್ದಾರೆ’ ಎಂದಿದ್ದಾರೆ.
2014ರ ನಂತರದಲ್ಲಿ ಪ್ರಧಾನಿ ಮೋದಿ ಅವರು ಬ್ರಿಟನ್‌ಗೆ ನಾಲ್ಕನೇ ಬಾರಿ ಭೇಟಿ ನೀಡುತ್ತಿದ್ದಾರೆ. ಈ ಬಾರಿ ಭೇಟಿಯಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ವ್ಯಾಪಾರ, ಇಂಧನ, ಭದ್ರತೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಕುರಿತು ಮಾತನಾಡಲಿದ್ದಾರೆ. ಜತೆಗೆ ಕೆಲ ಉದ್ಯಮಿಗಳೊಂದಿಗೂ ಸಮಾಲೋಚನೆ ನಡೆಸಲಿದ್ದಾರೆ.
‘2023–24ರಲ್ಲಿ ಉಭಯ ರಾಷ್ಟ್ರಗಳ ನಡುವೆ ₹4.74 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿದೆ. ಜತೆಗೆ ಭಾರತದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿರುವ 6ನೇ ರಾಷ್ಟ್ರ ಬ್ರಿಟನ್ ಆಗಿದ್ದು, ₹3 ಲಕ್ಷ ಕೋಟಿ ಹೂಡಿಕೆ ಮಾಡಿದೆ’ ಎಂದು ಮಿಸ್ರಿ ತಿಳಿಸಿದ್ದಾರೆ.
ಬ್ರಿಟನ್‌ನಲ್ಲಿ ಭಾರತದ ಸುಮಾರು ಒಂದು ಸಾವಿರ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಸುಮಾರು ಒಂದು ಲಕ್ಷ ಉದ್ಯೋಗಿಗಳು ಇದ್ದಾರೆ. ಬ್ರಿಟನ್‌ನಲ್ಲಿ ಭಾರತವು ₹1.72 ಲಕ್ಷ ಕೋಟಿ ಹೂಡಿಕೆ ಮಾಡಿದೆ ಎಂದಿದ್ದಾರೆ.
ಮುಕ್ತ ವ್ಯಾಪಾರ ಒಪ್ಪಂದದ ಭಾಗವಾಗಿ ಸ್ಕಾಚ್ ವಿಸ್ಕಿ ಬೆಲೆಯು ಶೇ 75ರಷ್ಟು ತಗ್ಗಲಿದೆ. ಸದ್ಯ ಇದು ಶೇ 150ರಷ್ಟಿದೆ. ಮುಂದಿನ ಒಂದು ದಶಕದಲ್ಲಿ ಇದು ಮತ್ತೆ ಶೇ 40ರಷ್ಟು ಕಡಿತಗೊಳ್ಳಲಿದೆ. ಬ್ರಿಟನ್‌ನ ಕಾರುಗಳಾದ ಲ್ಯಾಂಡ್ ರೋವರ್ ಇತ್ಯಾದಿಗಳ ಮೇಲೆ ಸದ್ಯ ಇರುವ ಶೇ 100ರಷ್ಟು ತೆರಿಗೆಯನ್ನು ಭಾರತವು ಶೇ 10ಕ್ಕೆ ಇಳಿಸಲಿದೆ. ಇದೂ ಹಂತಹಂತವಾಗಿ ಇಳಿಮುಖವಾಗಲಿದೆ.
ಇದಕ್ಕೆ ಬದಲಾಗಿ ಭಾರತದ ತಯಾರಕರಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ತಾವು ತಯಾರಿಸಿದ ವಿದ್ಯುತ್ ಚಾಲಿತ ಹಾಗೂ ಹೈಬ್ರಿಡ್ ವಾಹನಗಳ ಮಾರಾಟಕ್ಕೆ ಅವಕಾಶ ಸಿಗಲಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
‘ಭಾರತದಿಂದ ರಫ್ತಾಗುವ ಶೇ 99ರಷ್ಟು ಉತ್ಪನ್ನಗಳು ಸುಂಕವಿಲ್ಲದೆ ಬ್ರಿಟನ್ ಜನರಿಗೆ ಸಿಗಲಿದೆ. ಇದರಲ್ಲಿ ಜವಳಿ ಮೇಲಿನ ಸುಂಕವು ಶೇ 90ಕ್ಕೆ ಇಳಿಯಲಿದೆ. ಭಾರತದ ರಫ್ತು ಮಾರುಕಟ್ಟೆಗೆ ಬ್ರಿಟನ್ ಉತ್ತಮ ವೇದಿಕೆಯಾಗಿದೆ. ಜತೆಗೆ ಭಾರತದ ಪಾದರಕ್ಷೆ, ಸಾಗರೋತ್ಪನ್ನ, ಎಂಜಿನಿಯರಿಂಗ್ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಯು ಈ ಒಪ್ಪಂದದ ಮೂಲಕ ಸಿಗಲಿದೆ’ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ ಮಹಾನಿರ್ದೇಶಕ ಅಜಯ್ ಸಹಾಯ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.