ADVERTISEMENT

ಷೇರುಪೇಟೆ: ಆರು ದಿನಗಳಲ್ಲಿ ಕಳೆದುಕೊಂಡಿದ್ದು ₹ 11.31 ಲಕ್ಷ ಕೋಟಿ

ಪಿಟಿಐ
Published 24 ಸೆಪ್ಟೆಂಬರ್ 2020, 14:42 IST
Last Updated 24 ಸೆಪ್ಟೆಂಬರ್ 2020, 14:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ವೈರಾಣುವಿನಿಂದಾಗಿ ಕುಸಿತ ಕಂಡಿರುವ ಅರ್ಥವ್ಯವಸ್ಥೆಯ ಪುನಶ್ಚೇತನದ ಬಗ್ಗೆ ಕಳವಳಗಳು ವ್ಯಕ್ತವಾಗುತ್ತಿರುವ ಕಾರಣ ಆರು ದಿನಗಳಿಂದಲೂ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿದೆ. ಇದರ ಪರಿಣಾಮವಾಗಿ, ಈ ಆರು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಒಟ್ಟು ₹ 11.31 ಲಕ್ಷ ಕೋಟಿ ಸಂಪತ್ತು ಕರಗಿದೆ.

ಗುರುವಾರವೂ ನಕಾರಾತ್ಮಕ ವಹಿವಾಟು ಕಂಡ ಬಿಎಸ್‌ಇ ಸೆನ್ಸೆಕ್ಸ್, 1,114 ಅಂಶಗಳ ಕುಸಿತ ದಾಖಲಿಸಿತು. ದಿನದ ಅಂತ್ಯಕ್ಕೆ 36,553 ಅಂಶಗಳಲ್ಲಿ ಕೊನೆಗೊಂಡಿತು. ಜಾಗತಿಕ ಮಾರುಕಟ್ಟೆಗಳಲ್ಲೂ ನಕಾರಾತ್ಮಕ ವಹಿವಾಟು ನಡೆಯಿತು. ಗುರುವಾರದ ವಹಿವಾಟಿನಲ್ಲೇ ಹೂಡಿಕೆದಾರರ ಸಂಪತ್ತು ₹ 3.95 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ. ಸೆಪ್ಟೆಂಬರ್ 16ರ ನಂತರ ಬಿಎಸ್‌ಇ ಸೆನ್ಸೆಕ್ಸ್, 2,749 ಅಂಶಗಳಷ್ಟು ಇಳಿಕೆ ಕಂಡಿದೆ.

ಹಿಂದೂಸ್ತಾನ್ ಯೂನಿಲಿವರ್‌ ಹೊರತುಪಡಿಸಿದರೆ ಉಳಿದೆಲ್ಲ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಗುರುವಾರ ಇಳಿಕೆ ಆಗಿದೆ. ಇಂಡಸ್‌ ಇಂಡ್‌ ಬ್ಯಾಂಕ್‌ನ ಷೇರು ಮೌಲ್ಯ ಅತಿಹೆಚ್ಚು ಅಂದರೆ ಶೇಕಡ 7.10ರಷ್ಟು ಕುಸಿತ ಕಂಡಿದೆ. ಇದರ ನಂತರದ ಸ್ಥಾನಗಳಲ್ಲಿ ಬಜಾಜ್ ಫೈನಾನ್ಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಟೆಕ್ ಮಹೀಂದ್ರ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಟಾಟಾ ಸ್ಟೀಲ್‌ನ ಷೇರುಗಳು ಇವೆ.

ADVERTISEMENT

‘ಅಮೆರಿಕದಲ್ಲಿ ಆರ್ಥಿಕ ಪುನಶ್ಚೇತನ ಪ್ಯಾಕೇಜ್ ವಿಚಾರದಲ್ಲಿನ ಅನಿಶ್ಚಿತತೆ, ವಿಶ್ವದ ಎಲ್ಲೆಡೆ ಕೋವಿಡ್–19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆರ್ಥಿಕ ಚೇತರಿಕೆಯ ಬಗ್ಗೆ ಕಳವಳ ಮೂಡಲು ಕಾರಣವಾಗಿವೆ’ ಎಂದು ರೆಲಿಗೇರ್ ಬ್ರೋಕಿಂಗ್‌ನ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.

ಬಿಎಸ್‌ಇ ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಸೂಚ್ಯಂಕಗಳು ಶೇ 2.28ರಷ್ಟು ಇಳಿಕೆ ದಾಖಲಿಸಿವೆ. ಮಾಹಿತಿ ತಂತ್ರಜ್ಞಾನ ವಲಯದ ಸೂಚ್ಯಂಕವು ಶೇ 4.45ರಷ್ಟು ಕುಸಿತ ಕಂಡಿತು. ಐರೋಪ್ಯ ರಾಷ್ಟ್ರಗಳಲ್ಲಿ ಇನ್ನೊಂದು ಸುತ್ತಿನ ಲಾಕ್‌ಡೌನ್‌ ವಿಧಿಸಬಹುದು ಎಂಬ ಭೀತಿ ಕೂಡ ಈ ಕುಸಿತಕ್ಕೆ ಕಾರಣವಾಯಿತು ಎಂದು ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾದಿಯಾ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.