ಉದ್ಯೋಗಿಗಳ ಪ್ರತಿಭಟನೆ
ವಾಷಿಂಗ್ಟನ್: ಇಸ್ರೇಲ್ ಸೇನೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪೂರೈಸಲು ಒಪ್ಪಂದ ಮಾಡಿಕೊಂಡ ನಿರ್ಧಾರವನ್ನು ವಿರೋಧಿಸಿ ಮೈಕ್ರೋಸಾಫ್ಟ್ ಉದ್ಯೋಗಿಗಳು ಕಂಪನಿಯ 50ನೇ ವಾರ್ಷಿಕೋತ್ಸವ ಆಚರಣೆ ವೇಳೆ ಪ್ರತಿಭಟನೆ ನಡೆಸಿದ್ದಾರೆ.
ಕಂಪನಿಯ ಎಐ ಅಸಿಸ್ಟೆಂಟ್ ಉತ್ಪನ್ನ ‘Copilot’ ಬಗ್ಗೆ ಮೈಕ್ರೋಸಾಫ್ಟ್ ಎಐ ಸಿಇಒ ಮುಸ್ತಫಾ ಸುಲೇಮಾನ್ ಅವರು ವಿವರಿಸುತ್ತಿದ್ದ ವೇಳೆ ಪ್ರತಿಭಟನೆ ನಡೆದಿದೆ. ಈ ವೇಳೆ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಹಾಗೂ ಮಾಜಿ ಸಿಇಒ ಸ್ಟೀವ್ ಬಾಲ್ಮರ್ ಇದ್ದರು.
‘ಮುಸ್ತಫಾ ನಿಮಗೆ ನಾಚಿಕೆಯಾಗಬೇಕು’ ಎಂದು ಘೋಷಣೆ ಕೂಗಿದ ಇಬ್ತಿಹಾಲ್ ಅಬೂಸದ್ ಎನ್ನುವ ಮಹಿಳಾ ಉದ್ಯೋಗಿ, ವೇದಿಕೆಯ ಬಳಿ ತೆರಳಿದ್ದಾರೆ. ಈ ವೇಳೆ ಮುಸ್ತಫಾ ಭಾಷಣ ನಿಲ್ಲಿಸಿದ್ದಾರೆ. ‘ಎಐ ಅನ್ನು ಒಳಿತಿತಾಗಿ ಬಳಕೆ ಮಾಡಲಾಗುವುದು ಎಂದು ನೀವು ಹೇಳುತ್ತೀರಿ. ಆದರೆ ಇಸ್ರೇಲ್ ಸೇನೆಗೆ ಮೈಕ್ರೋಸಾಫ್ಟ್ ಉತ್ಪನ್ನಗಳನ್ನು ಒದಗಿಸುತ್ತಿದೆ. 50 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಈಗ ನಮ್ಮ ಪ್ರದೇಶದ ನರಮೇಧಕ್ಕೆ ಇಸ್ರೇಲ್ ಬೆಂಬಲ ನೀಡುತ್ತಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪ್ರತಿಭಟನೆ ದಾಖಲಿಸಿದ್ದಕ್ಕೆ ಧನ್ಯವಾದಗಳು, ನಾನು ಕೇಳುತ್ತೇನೆ’ ಎಂದು ಮುಸ್ತಫಾ ಹೇಳಿದ್ದಾರೆ. ಅದಾಗ್ಯೂ ಪ್ರತಿಭಟನೆ ಮುಂದುವರಿಸಿದ ಅಬೂಸದ್, ‘ಇಡೀ ಮೈಕ್ರೋಸಾಫ್ಟ್‌ನವರ ಕೈಯಲ್ಲಿ ರಕ್ತದ ಕಲೆ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಪ್ಯಾಲೆಸ್ಟೀನಿ ಜನರ ಬೆಂಬಲ ಸೂಚಕವಾಗಿರುವ ಕೆಫಿಯೆ ಸ್ಕಾರ್ಫ್ ಅನ್ನು ವೇದಿಕೆಗೆ ಎಸೆದರು. ಬಳಿಕ ಅವರನ್ನು ಕಾರ್ಯಕ್ರಮದಿಂದ ಹೊರಗೆ ಕಳುಹಿಸಲಾಯಿತು.
ಮತ್ತೊಬ್ಬ ಪ್ರತಿಭಟನಾಕಾರ, ಮೈಕ್ರೋಸಾಫ್ಟ್ ಉದ್ಯೋಗಿ ವನಿಯಾ ಅಗರಲ್ ಎಂಬವರು ಸಮಾರಂಭದ ಇನ್ನೊಂದು ವೇಳೆಯಲ್ಲಿ ಪ್ರತಿಭಟನೆ ದಾಖಲಿಸಿದರು. ಈ ವೇಳೆ ಬಿಲ್ ಗೇಟ್ಸ್, ಬಾಲ್ಮರ್ ಹಾಗೂ ಹಾಲಿ ಸಿಒಒ ಸತ್ಯ ನಾದೆಲ್ಲಾ ವೇದಿಕೆಯಲ್ಲಿದ್ದರು.
ಇತ್ತೀಚೆಗೆ ಇಸ್ರೇಲ್ ಹಾಗೂ ಲೆಬನಾನ್ ಮೇಲೆ ಬಾಂಬ್ ದಾಳಿ ನಡೆಸಲು ಗುರಿ ನಿಗದಿಗೆ ಇಸ್ರೇಲ್ ಮೈಕ್ರೋಸಾಫ್ಟ್ ಹಾಗೂ ಒಪನ್‌ಎಐನ ಕೃತಕ ಬುದ್ಧಮತ್ತೆ ತಂತ್ರಜ್ಞಾನವನ್ನು ಬಳಸಿತ್ತು.
ಫೆಬ್ರುವರಿ ತಿಂಗಳಿನಲ್ಲಿ ಸತ್ಯ ನಾದೆಲ್ಲಾ ಅವರ ಸಭೆಯಿಂದ ಹೊರನಡೆಯುವ ಮೂಲಕ ಹಲವು ಉದ್ಯೋಗಿಗಳು ಈ ಒಪ್ಪಂದವನ್ನು ವಿರೋಧಿಸಿದ್ದರು. ಆದರೆ ಅದು ಆಂತರಿಕ ಸಭೆಯಾಗಿತ್ತು. ಶುಕ್ರವಾರದ ಸಾರ್ವಜನಿಕ ಸಭೆಯಲ್ಲಿ ನಡೆದ ಪ್ರತಿಭಟನೆ ಅದರ ಮುಂದುವರಿದ ಭಾಗವಾಗಿತ್ತು. ಕೆಲವು ಉದ್ಯೋಗಿಗಳು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ರ್‍ಯಾಲಿಯನ್ನೂ ನಡೆಸಿದರು.
ಎಲ್ಲರ ಅಭಿಪ್ರಾಯಗಳನ್ನು ನಾವು ಆಲಿಸುತ್ತೇವೆ. ಆದರೆ ಉದ್ಯಮಕ್ಕೆ ಅಡ್ಡಿಯಾಗದ ರೀತಿಯಲ್ಲಿ ಮಾಡಬೇಕು ಎಂದು ನಾವು ಕೋರುತ್ತೇವೆ’ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿಭಟನಾಕಾರರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಮೈಕ್ರೋಸಾಫ್ಟ್ ನಿರಾಕರಿಸಿದೆ.
ಆದರೆ ಪ್ರತಿಭಟನೆ ಬಳಿಕ ಇಬ್ಬರಿಗೂ ಕಂಪನಿಯ ಸಿಸ್ಟಂಗೆ ಇದ್ದ ಲಾಗಿನ್ ಅನುಮತಿಯನ್ನು ಹಿಂಪಡೆಯಲಾಗಿದೆ ಎಂದು ಇಬ್ಬರು ತಿಳಿಸಿದ್ದಾರೆ. ಇದು ವಜಾಗೊಳಿಸಿದ್ದರ ಸಂಕೇತ ಎಂದು ಅವರು ಹೇಳಿದ್ದಾರೆ.
(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.