ADVERTISEMENT

ಹಣಕಾಸು ಸಾಕ್ಷರತೆ | ಕ್ರೆಡಿಟ್ ಸ್ಕೋರ್: ಹೆಚ್ಚಿಸುವುದು ಹೇಗೆ?

ರಾಜೇಶ್ ಕುಮಾರ್ ಟಿ. ಆರ್.
Published 23 ಡಿಸೆಂಬರ್ 2024, 1:06 IST
Last Updated 23 ಡಿಸೆಂಬರ್ 2024, 1:06 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಸಾಲಕ್ಕೆ ಅಥವಾ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದಾಗ, ಅದನ್ನು ಅನುಮೋದಿಸುವ ಮೊದಲು ಬ್ಯಾಂಕ್‌ಗಳು ಹಲವು ಮಾನದಂಡಗಳನ್ನು ನೋಡುತ್ತವೆ. ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಆ ಮಾನದಂಡಗಳಲ್ಲಿ ಪ್ರಮುಖ ವಾದದ್ದು. ಸಾಲಕ್ಕೆ, ಕ್ರೆಡಿಟ್ ಕಾರ್ಡ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಬೇಕಾದರೆ ಸಿಬಿಲ್ ಸ್ಕೋರ್ ಬಹಳ ಮುಖ್ಯ. ಬ್ಯಾಂಕ್‌ಗಳು ಕ್ರೆಡಿಟ್ ಸ್ಕೋರ್ ಪರಿಶೀಲಿಸಿದ ಬಳಿಕವಷ್ಟೇ ಸಾಲ ಕೊಡಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸುತ್ತವೆ. 750ರಿಂದ 900ರ ಆಸುಪಾಸಿನಲ್ಲಿರುವ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ.

ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದಾಗ ನಿಮಗೆ ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಸಾಲ ದೊರೆಯುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಾಗ ಬ್ಯಾಂಕ್‌ಗಳ ತಾಳಕ್ಕೆ ತಕ್ಕಂತೆ ಕುಣಿಯುವ ಅನಿವಾರ್ಯ
ಸೃಷ್ಟಿಯಾಗುವುದಲ್ಲದೆ ಸಾಲದ ಅರ್ಜಿಯೇ ತಿರಸ್ಕೃತವಾಗುವ ಸಂಭವವೂ ಇರುತ್ತದೆ. ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ 6 ಅಂಶಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ADVERTISEMENT

ಸಾಲ ಪಾವತಿ ಇತಿಹಾಸ

ನಿಮ್ಮ ಸಾಲದ ಇತಿಹಾಸ (ಕ್ರೆಡಿಟ್ ಹಿಸ್ಟರಿ) ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಈ ಹಿಂದೆ ಯಾವಾಗ ಸಾಲ ಪಡೆದಿದ್ದೀರಿ ಮತ್ತು ಮರುಪಾವತಿ ಮಾಡಿದ್ದೀರಿ ಎನ್ನುವುದರ ವಿವರ ಕ್ರೆಡಿಟ್ ಹಿಸ್ಟರಿಯಲ್ಲಿರುತ್ತದೆ. ಸಾಲ ಪಾವತಿ ಇತಿಹಾಸದಲ್ಲಿ ಸರಿಯಾದ ಸಮಯಕ್ಕೆ ಸಾಲ ಕಟ್ಟುತ್ತಿದ್ದೀರಾ ಎನ್ನುವ ಮಾಹಿತಿ ದಾಖಲಾಗಿರುತ್ತದೆ. ಸಾಲದ ಕಂತುಗಳನ್ನು ತಪ್ಪಿಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಆಗುತ್ತದೆ. ಆಗ ಬ್ಯಾಂಕ್‌ಗಳು ನೀವು ವಿಶ್ವಾಸಾರ್ಹ ಸಾಲಗಾರನಲ್ಲ ಎಂದು ತೀರ್ಮಾನಿಸಿ ಬಿಡುತ್ತವೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಸಾಲದ ಕಂತುಗಳನ್ನು ಕಟ್ಟಿ.

ಸಾಲ ಬಳಕೆ ಅನುಪಾತ

ಸಾಲ ಬಳಕೆ ಅನುಪಾತ (ಕ್ರೆಡಿಟ್ ಯುಟಿಲೈಸೇಷನ್ ರೇಷಿಯೋ) ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಕ್ರೆಡಿಟ್ ಕಾರ್ಡ್ ನೀಡಿದಾಗ ಬಳಕೆ ಮಾಡಬಹುದಾದ ಗರಿಷ್ಠ ಮೊತ್ತದ ಮಿತಿ ಇರುತ್ತದೆ. ಆ ಗರಿಷ್ಠ  ಮೊತ್ತದ ಮಿತಿಯಲ್ಲಿ ಸಣ್ಣ ಪ್ರಮಾಣದ ಮೊತ್ತವನ್ನು ನಿಯಮಿತವಾಗಿ ಬಳಸಿಕೊಂಡರೆ, ನೀವು ಸರಿಯಾಗಿ ಸಾಲ ನಿರ್ವಹಣೆ ಮಾಡುತ್ತೀರಿ ಎಂದು ಬ್ಯಾಂಕ್ ಭಾವಿಸುತ್ತದೆ. ಒಂದೊಮ್ಮೆ ಗರಿಷ್ಠ ಮೊತ್ತದ ಮಿತಿಯಲ್ಲಿ ಹೆಚ್ಚಿನ ಪಾಲಿನ ಹಣವನ್ನು  ಬಳಸಿಕೊಂಡರೆ ಸಾಲದ ಮೊತ್ತದ ಮೇಲೆ ನಿಮಗೆ ಅತಿಯಾದ ಅವಲಂಬನೆ ಇದೆ ಎಂದು ಬ್ಯಾಂಕ್ ಭಾವಿಸುತ್ತದೆ. ಹಾಗಾಗಿ ಸಾಲ ಬಳಕೆ ಅನುಪಾತವನ್ನು ಹತೋಟಿಯಲ್ಲಿಟ್ಟುಕೊಳ್ಳಿ.

ಹಲವು ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು

ಹಲವು ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವುದರಿಂದ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಒಂದೇ ಬಾರಿಗೆ ನಾಲ್ಕೈದು ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಿದಾಗ ನಿಮ್ಮ ಆದಾಯವೆಷ್ಟು ಎಂದು ಎಲ್ಲ ಕ್ರೆಡಿಟ್ ಕಾರ್ಡ್ ಕಂಪನಿಗಳು ಬ್ಯಾಂಕ್‌ಗಳ ಬಳಿ ಮಾಹಿತಿ ಕೇಳುತ್ತವೆ. ಹೀಗೆ ಹಲವು ಬಾರಿ ಪರಿಶೀಲನೆಯಾದಾಗ ತಾತ್ಕಾಲಿಕವಾಗಿ ಕ್ರೆಡಿಟ್ ಸ್ಕೋರ್ ಗಣನೀಯ ಇಳಿಕೆ ಕಾಣುತ್ತದೆ.

ಸಿಬಿಲ್ ರಿಪೋರ್ಟ್‌ನಲ್ಲಿ ತಪ್ಪುಗಳಿದ್ದಾಗ

ಸಿಬಿಲ್ ರಿಪೋರ್ಟ್‌ನಲ್ಲಿ ಈ ಹಿಂದೆ ನೀವು ಪಡೆದಿರುವ ಸಾಲಗಳು, ಈಗ ಪಡೆದಿರುವ ಸಾಲಗಳು ಸೇರಿದಂತೆ ಎಲ್ಲ ವಿವರ ಇರುತ್ತವೆ. ಒಂದೊಮ್ಮೆ ನೀವು ಸಾಲ ಮರುಪಾವತಿ ಮಾಡಿದ್ದಾಗಲೂ ಅದು ಸಿಬಿಲ್ ರಿಪೋರ್ಟ್‌ನಲ್ಲಿ ನಮೂದಾಗಿಲ್ಲದಿದ್ದರೆ ಕ್ರೆಡಿಟ್ ಸ್ಕೋರ್ ಮೇಲೆ ಅದು ಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ ಸಿಬಿಲ್ ರಿಪೋರ್ಟ್ ಅನ್ನು ಕಾಲಕಾಲಕ್ಕೆ ಪರಾಮರ್ಶಿಸಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಿ.

ಸಾಲದ ಸರಿಯಾದ ಮಿಶ್ರಣ ಇಲ್ಲದಿದ್ದಾಗ

ಪ್ರಮುಖವಾಗಿ ಎರಡು ಮಾದರಿಯ ಸಾಲಗಳಿರುತ್ತವೆ. ಒಂದನೆಯದ್ದು ಅಡಮಾನ ಸಾಲ (ಸೆಕ್ಯೂರ್ಡ್ ಲೋನ್‌), ಎರಡನೆಯದ್ದು ಅಡಮಾನ ರಹಿತ ಸಾಲ (ಅನ್ ಸೆಕ್ಯೂರ್ಡ್ ಲೋನ್). ಸಾಲ ಪಡೆಯುವಾಗ ಅಡಮಾನ ಸಾಲ ಮತ್ತು ಅಡಮಾನ ರಹಿತ ಸಾಲದ ಸರಿಯಾದ ಮಿಶ್ರಣವಿರಬೇಕು. ಇದರಲ್ಲಿ ಸರಿಯಾದ ಮಿಶ್ರಣವಿಲ್ಲದಿದ್ದಾಗ ಅದು ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಆದಾಯ ಮತ್ತು ಸಾಲದ ಅನುಪಾತ

ನಮಗಿರುವ ಆದಾಯವೆಷ್ಟು, ಸಾಲವೆಷ್ಟು ಎನ್ನುವುದನ್ನು ಆದಾಯ ಮತ್ತು ಸಾಲದ ಅನುಪಾತ (ಡೆಟ್ ಟು ಇನ್‌ಕಂ ರೇಷಿಯೋ) ತಿಳಿಸಿ ಕೊಡುತ್ತದೆ. ಸಾಲಕ್ಕೂ ನಮ್ಮ ಆದಾಯಕ್ಕೂ ಒಂದು ಸರಿಯಾದ ತಾಳೆ ಇರಬೇಕು. ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಸಾಲವನ್ನು ಪಡೆಯಲು ಮುಂದಾದರೆ ಸಾಲದ ಮೇಲಿನ ಅತಿಯಾದ ಅವಲಂಬನೆ ಇದೆ ಅಂತಾಗುತ್ತದೆ. ಅದು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಕೆಲವರು ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಹೀಗೆ ಎಲ್ಲ ಮಾದರಿಯ ಸಾಲಗಳನ್ನು ಪಡೆದುಕೊಳ್ಳಲು ಹೋಗಿ ಆದಾಯ ಮತ್ತು ಸಾಲದ ಅನುಪಾತ ಹಳಿ ತಪ್ಪುವಂತೆ ಮಾಡಿಕೊಳ್ಳುತ್ತಾರೆ. ಹೀಗಾದಾಗ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮವಾಗುತ್ತದೆ.

ಕುಸಿತ ಕಂಡ ಸೆನ್ಸೆಕ್ಸ್, ನಿಫ್ಟಿ

ಡಿಸೆಂಬರ್ 20ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಗಣನೀಯ ಕುಸಿತ ದಾಖಲಿಸಿವೆ. 78,041 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 4.98 ರಷ್ಟು ಇಳಿಕೆ ಕಂಡಿದೆ. 23,587 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 4.77ರಷ್ಟು ತಗ್ಗಿದೆ. ಜೂನ್ 2022ರ ನಂತರ ಷೇರುಪೇಟೆ ಸೂಚ್ಯಂಕಗಳು ವಾರದ ಅವಧಿಯಲ್ಲಿ ಕಂಡಿರುವ ಅತ್ಯಂತ ದೊಡ್ಡ ಮಟ್ಟದ ಕುಸಿತ ಇದಾಗಿದೆ.

ಅಮೆರಿಕ ಫೆಡರಲ್ ಬ್ಯಾಂಕ್ 2025ರಲ್ಲಿ ನಾಲ್ಕರ ಬದಲಾಗಿ ಎರಡು ಬಾರಿ ಮಾತ್ರ ಬಡ್ಡಿ ದರ ಇಳಿಕೆ ಮಾಡುವ ಮುನ್ಸೂಚನೆ ನೀಡಿರುವ ಪರಿಣಾಮ ಜಾಗತಿಕವಾಗಿ ಮಾರುಕಟ್ಟೆಗಳಲ್ಲಿ ತಲ್ಲಣ ಉಂಟಾಗಿದೆ. ಇದಲ್ಲದೆ, ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಪನಿಗಳ ಸಾಧಾರಣ ಬೆಳವಣಿಗೆ, ಭಾರತದ ಮಾರುಕಟ್ಟೆ ಆಂತರಿಕ ಮೌಲ್ಯಕ್ಕಿಂತ ಹೆಚ್ಚು ಜಿಗಿದಿದೆ ಎಂಬ ಭಾವನೆ ಸೇರಿದಂತೆ ಇನ್ನು ಅನೇಕ ಅಂಶಗಳು ಮಾರುಕಟ್ಟೆಯಲ್ಲಿ ಷೇರುಗಳ ಮಾರಾಟದ ಒತ್ತಡ ಸೃಷ್ಟಿಯಾಗಲು ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಫಾರ್ಮಾ ಶೇ 1.55ರಷ್ಟು ಗಳಿಸಿರುವುದು ಹೊರತುಪಡಿಸಿ ಇನ್ನುಳಿದ 11 ಸೂಚ್ಯಂಕಗಳು ಭಾರಿ ಇಳಿಕೆ ಕಂಡಿವೆ. ನಿಫ್ಟಿ ಲೋಹ ಶೇ 6.63, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 6.34, ಎನರ್ಜಿ ಶೇ 6.14, ಬ್ಯಾಂಕ್ ಶೇ 5.27, ಫೈನಾನ್ಸ್ ಶೇ 5.18, ಆಟೊ ಶೇ 5.02, ಅನಿಲ ಮತ್ತು ತೈಲ ಶೇ 4.95, ಮಾಹಿತಿ ತಂತ್ರಜ್ಞಾನ ಶೇ 4.84, ಮಾಧ್ಯಮ ಶೇ 3.35, ರಿಯಲ್ ಎಸ್ಟೇಟ್ ಶೇ 2.3 ಮತ್ತು ಎಫ್‌ಎಂಜಿಸಿ ಶೇ 2.23 ರಷ್ಟು ಕುಸಿದಿವೆ.

ಇಳಿಕೆ – ಗಳಿಕೆ: ನಿಫ್ಟಿಯಲ್ಲಿ ಶ್ರೀರಾಮ್ ಫೈನಾನ್ಸ್ ಶೇ 9.2, ಟಾಟಾ ಮೋಟರ್ಸ್ ಶೇ 8.42, ಜೆಎಸ್‌ಡಬ್ಲ್ಯು ಸ್ಟೀಲ್ ಶೇ 8.27, ಭಾರತ್ ಎಲೆಕ್ಟ್ರಾನಿಕ್ಸ್ ಶೇ 7.83, ಗ್ರಾಸಿಮ್ ಇಂಡಸ್ಟ್ರೀಸ್ ಶೇ 7.38, ಅದಾನಿ ಎಂಟರ್ ಪ್ರೈಸಸ್ ಶೇ 7.29, ಟಿಸಿಎಸ್ ಶೇ 6.83, ಒಎನ್‌ಜಿಸಿ ಶೇ 6.81, ಕೋಲ್ ಇಂಡಿಯಾ ಶೇ 6.79, ಎನ್‌ಟಿಪಿಸಿ ಶೇ 6.72, ಎಲ್ ಆ್ಯಂಡ್‌ ಟಿ ಶೇ 6.67 ಮತ್ತು ಎಕ್ಸಿಸ್‌  ಬ್ಯಾಂಕ್ ಶೇ 6.66ರಷ್ಟು ಕುಸಿದಿವೆ. ಡಾ ರೆಡ್ಡೀಸ್ ಲ್ಯಾಬ್ಸ್ ಶೇ 7.71 ಮತ್ತು ಸಿಪ್ಲಾ ಶೇ 1.7ರಷ್ಟು ಗಳಿಸಿಕೊಂಡಿವೆ.

ಮುನ್ನೋಟ: ಸದ್ಯದ ಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಏರಿಳಿತದ ಸ್ಥಿತಿ ಮುಂದುವರಿಯಲಿದೆ. ಕೆಲ ಉತ್ತಮ ಷೇರುಗಳು ಭಾರಿ ಕುಸಿತ ಕಂಡಿದ್ದರೂ ಇನ್ನಷ್ಟು ಕುಸಿತ ತಳ್ಳಿಹಾಕುವ ಸ್ಥಿತಿ ಈಗಿಲ್ಲ. ಉಳಿದಂತೆ ಫೆಬ್ರುವರಿಯ ಆರ್‌ಬಿಐ ಹಣಕಾಸು ಸಮಿತಿ ಸಭೆ ಮತ್ತು ಬಜೆಟ್ ಮೇಲೆ ಹೂಡಿಕೆದಾರರು ಚಿತ್ತ ಹರಿಸಲಿದ್ದಾರೆ. ಜಾಗತಿಕ ಮಾರುಕಟ್ಟೆಗಳಲ್ಲಿ ಉಂಟಾಗುವ ಬೆಳವಣಿಗೆ ದೇಶೀಯ ಷೇರುಪೇಟೆಗಳ ಮೇಲೆ ನೇರ ಪರಿಣಾಮ ಉಂಟು ಮಾಡಲಿದೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.