ADVERTISEMENT

2026ಕ್ಕೆ ಐದು ಸರಳ ಉಳಿತಾಯ ಸೂತ್ರಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2025, 4:56 IST
Last Updated 11 ಡಿಸೆಂಬರ್ 2025, 4:56 IST
<div class="paragraphs"><p>2026ಕ್ಕೆ ಐದು ಸರಳ ಉಳಿತಾಯ ಸೂತ್ರಗಳು</p></div>

2026ಕ್ಕೆ ಐದು ಸರಳ ಉಳಿತಾಯ ಸೂತ್ರಗಳು

   

ತಿಂಗಳ ಸಂಬಳದಲ್ಲಿ ಅಥವಾ ನಿತ್ಯ ದುಡಿದಿದ್ದರಲ್ಲಿ ಇಂತಿಷ್ಟು ಉಳಿತಾಯ ಮಾಡಬೇಕು ಎಂದು ಯೋಜನೆ ಹಾಕಿಕೊಂಡರೂ ಅದು ಸಾಧ್ಯವಾಗುತ್ತಿಲ್ಲ ಎನ್ನುವುದು ಹಲವರ ದೂರು. ಉಳಿತಾಯ ಮಾಡಬೇಕು ಎಂದು ಎಷ್ಟೇ ಪ್ರಯತ್ನಪಟ್ಟರೂ ಆಗುತ್ತಿಲ್ಲ ಎಂದು ಹೇಳುವವರೇ ಹೆಚ್ಚು. 2026ರ ಹೊಸ ವರ್ಷದಿಂದ ಹಣ ಉಳಿತಾಯ ಮಾಡಬೇಕು ಎನ್ನುವವರು ಈ ಐದು ಹವ್ಯಾಸ ಬೆಳೆಸಿಕೊಳ್ಳಿ. ಪ್ರತಿ ತಿಂಗಳು ಇದನ್ನು ಪುನಾರಾವರ್ತಿಸಿ.

ಮಾಸಿಕ ಉಳಿತಾಯದ ಹಣ ಎಷ್ಟು ಎನ್ನುವುದನ್ನು ನಿರ್ಧರಿಸಿ

ತಿಂಗಳಿಗೆ ಇಷ್ಟು ಹಣ ಉಳಿತಾಯ ಮಾಡಲೇಬೇಕು ಎನ್ನು ದೃಢ ನಿರ್ಧಾರಕ್ಕೆ ಬನ್ನಿ. ಸಂಬಳದ ಇಂತಿಷ್ಟು ಹಣ ಅಥವಾ ಪ್ರಮಾಣ ಉಳಿತಾಯಕ್ಕಾಗಿಯೇ ಮೀಸಲಿಡಿ. ಸಂಬಳ ಬಂದ ಕೂಡಲೇ ನಿಗದಿ ಮಾಡಿದ ಹಣವನ್ನು ಉಳಿತಾಯಕ್ಕೇ ಹಾಕಿ. ಇದರಲ್ಲಿ ಯಾವುದೇ ರಾಜಿ ಬೇಡ. ಇದು ಭವಿಷ್ಯಕ್ಕೆ ಹೂಡಿಕೆ ಎನ್ನುವುದು ನಿಮ್ಮ ತಲೆಯಲ್ಲಿರಲಿ. ತಿಂಗಳ ಕೊನೆಗೆ ಉಳಿದಿದ್ದನ್ನು ಉಳಿತಾಯಕ್ಕೆ ಹಾಕುತ್ತೇನೆ ಎನ್ನುವ ಮನೋಭಾವ ಬೇಡ.

ADVERTISEMENT

ಆದಾಯ– ಖರ್ಚು= ಉಳಿತಾಯ ಎನ್ನುನ ನಿಯಮ ತಪ್ಪು

ಆದಾಯ–ಉಳಿತಾಯ= ಖರ್ಚು ಎನ್ನುವ ನಿಯಮ ಪಾಲಿಸಿ. ಹೀಗಾದರೆ ಮಾತ್ರ ಹಣ ಉಳಿತಾಯ ಮಾಡಲು ಸಾಧ್ಯ.

ನಿಮ್ಮ ಖರ್ಚುಗಳನ್ನು ಬರೆದಿಡಿ

ನಿಮ್ಮ ನಿತ್ಯದ ಖರ್ಚುಗಳನ್ನು ತಪ್ಪದೇ ಬರೆದಿಡಿ. ಇದು ಭಾರಿ ಪ್ರಯಾಸದ ಕೆಲಸ. ಆದರೆ ಒಮ್ಮೆ ಇದು ರೂಢಿಯಾದರೆ ನಿಮ್ಮ ಖರ್ಚುಗಳ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತದೆ. ಬರೆದಿಡುವುದರೆಂದರೆ ಹಾಳೆಯಲ್ಲಿ ಅಥವಾ ಡೈರಿಯಲ್ಲಿ ದಾಖಲಿಸುವುದು ಎಂದರ್ಥವಲ್ಲ. ಈಗ ಅದಕ್ಕೆಂದೇ ಹಲವು ಆ್ಯಪ್‌ಗಳಿದ್ದು ಅವುಗಳನ್ನು ಬಳಸಬಹುದು. ಇದು ನಿಮ್ಮ ಖರ್ಚಿನ ‍ಪ್ರಕಾರಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಯಾವುದಕ್ಕೆ ಹೆಚ್ಚು ಖರ್ಚು ಆಗುತ್ತಿದೆ. ಅನಗತ್ಯ ಖರ್ಚುಗಳು ಯಾವುದೆಲ್ಲಾ ಎನ್ನುವುದನ್ನು ತಿಳಿದುಕೊಳ್ಳಬಹುದು. ಪ್ರತಿಯೊಂದು ಖರ್ಚಿನ ಪ್ರಕಾರಕ್ಕೂ ಮಿತಿ ನಿಗದಿ ಮಾಡಿ. ಉದಾಹರಣೆಗೆ ಶಾಪಿಂಗ್‌ಗೆ ಇಷ್ಟು, ಆಹಾರಕ್ಕೆ ಇಷ್ಟು, ಮಾಸಿಕ ‍ಪಡಿತರಕ್ಕೆ ಇಷ್ಟು ಎನ್ನುವುದನ್ನು ನಿಗದಿ ಮಾಡಿ. ಅದಕ್ಕಿಂತ ಹೆಚ್ಚು ಖರ್ಚು ಮಾಡುವುದೇ ಬೇಡ.

ಕನಿಷ್ಠ ಒಂದು ಅನಗತ್ಯ ಖರ್ಚು ತಪ್ಪಿಸಿ

ಅನಗತ್ಯವಾಗಿ ಎಂದು ನಿಮಗೆ ಅನಿಸುವ ಒಂದು ಖರ್ಚನ್ನು ಗುರುತು ಮಾಡಿಕೊಳ್ಳಿ. ಅದನ್ನು ತಪ್ಪಿಸಲು ನೋಡಿ. ಉದಾಹರಣೆಗೆ ಬಳಕೆ ಮಾಡದ ಒಟಿಟಿ ಚಂದಾದಾರಿಕೆ, ‍ಪದೇ ಪದೇ ಊಟಕ್ಕೆ ಹೊರಗೆ ಹೋಗುವುದು, ಅನಗತ್ಯ ಆನ್‌ಲೈನ್ ಶಾಪಿಂಗ್ ತಪ್ಪಿಸಿ. ಆ ಹಣವನ್ನು ಉಳಿತಾಯ ಖಾತೆ ಅಥವಾ ಆರ್‌ಡಿಯಲ್ಲಿ ಹೂಡಿಕೆ ಮಾಡಿ. ಖರ್ಚುಗಳನ್ನು ಬರೆದಿಡುವುದರಿಂದ ಅನಗತ್ಯ ಖರ್ಚನ್ನು ತಪ್ಪಿಸಬಹುದು. ಅದನ್ನು ಭವಿಷ್ಯಕ್ಕೆ ಎತ್ತಿಟ್ಟುಕೊಳ್ಳಬಹುದು. ಹಣವನ್ನು ಖರ್ಚು ಮಾಡುವಾಗ ವಿವೇಚನೆ ಬಳಸಿ. ಒಂದು ರೂಪಾಯಿ ಖರ್ಚು ಮಾಡುವ ಮುನ್ನ 10 ಬಾರಿ ಯೋಚಿಸಿ.

ಬಿಲ್ ಹಾಗೂ ದೈನಂದಿನ ಖರ್ಚು ನಿಯಂತ್ರಿಸಿ

ಸಣ್ಣ ಸಣ್ಣ ಉಳಿತಾಯ ಯೋಜನೆಗಳೇ ಭವಿಷ್ಯಕ್ಕೆ ದೊಡ್ಡ ಮೊತ್ತವಾಗುತ್ತದೆ. ಅಗತ್ಯ ಇಲ್ಲದಾಗ ಲೈಟ್, ಫ್ಯಾನ್, ಎ.ಸಿಗಳನ್ನು ಆರಿಸಿ. ಹೊರಗೆ ಊಟಕ್ಕೆ ಹೋಗುವಾಗ ಬಜೆಟ್ ನಿಗದಿ ಮಾಡಿ. ಅಗತ್ಯ ವಸ್ತುಗಳನ್ನು ಪಟ್ಟಿ ಮಾಡಿಕೊಂಡೆ ದಿನಸಿ ಖರೀದಿಗೆ ಹೋಗಿ. ಹಸಿದಿರುವಾಗ ದಿನಸಿ ಖರೀದಿ ಮಾಡಲೇಬೇಡಿ. ಅನಗತ್ಯ ಖರೀದಿಗೆ ಬೇಡ. ಒಂದು ಕೊಂಡರೆ ಒಂದು ಉಚಿತ ಮುಂತಾದ ಕೊಡುಗೆಗಳು ನಿಮ್ಮನ್ನು ಹೆಚ್ಚು ಖರೀದಿಗೆ ಪ್ರೇರಿಸುತ್ತವೆಯೇ ವಿನಾ ಉಳಿತಾಯಕ್ಕಲ್ಲ. ಪ್ರತಿ ತಿಂಗಳು ಇಂತಹ ಸಣ್ಣ ಉಳಿತಾಯಗಳೇ ಭವಿಷ್ಯಕ್ಕೆ ಬುನಾದಿಯಾಗಬಲ್ಲವು.

ಸ್ವಯಂಚಾಲಿತ ಉಳಿತಾಯ

ಹಣ ಉಳಿತಾಯಕ್ಕೆಂದೇ ಬೇರೆಯದೇ ಖಾತೆ ಇರಲಿ. ಆರ್‌.ಡಿ ಖಾತೆ ಅಥವಾ ಉಳಿತಾಯ ಖಾತೆ ತೆರೆಯಿರಿ. ಸಂಬಳ ಬಂದ ಕೂಡಲೇ ನಗದು ಸ್ವಯಂ ಚಾಲಿತವಾಗಿ ಅದಕ್ಕೆ ವರ್ಗಾವಣೆಯಾಗುವ ಹಾಗೆ ನೋಡಿಕೊಳ್ಳಿ. ಸಣ್ಣ ಮೊತ್ತದಿಂದ ಪ್ರಾರಂಭಿಸಿ, ಅದರ ಪ್ರಗತಿ ಹೂಡಿಕೆ ಮಾಡಲು ನಿಮಗೆ ಇನ್ನಷ್ಟು ಉತ್ತೇಜನ ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.