ADVERTISEMENT

ಚಿನ್ನ, ಕಚ್ಚಾ ತೈಲ ದರ ಕುಸಿತ; ಷೇರುಪೇಟೆಯಲ್ಲೂ ಮಾರಾಟದ ಒತ್ತಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಏಪ್ರಿಲ್ 2022, 10:01 IST
Last Updated 25 ಏಪ್ರಿಲ್ 2022, 10:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದ ಷೇರುಪೇಟೆಗಳಲ್ಲಿ ಸೋಮವಾರ ಸೂಚ್ಯಂಕ ಕುಸಿತ ಕಂಡಿರುವ ಬೆನ್ನಲ್ಲೇ ಚಿನ್ನ, ಬೆಳ್ಳಿ ಹಾಗೂ ಕಚ್ಚಾ ತೈಲ ದರದಲ್ಲೂ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ₹266ರಷ್ಟು ಕಡಿಮೆ ದಾಖಲಾಗಿದೆ.

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್‌) 10 ಗ್ರಾಂ ಚಿನ್ನದ ಫ್ಯೂಚರ್ಸ್‌ ಶೇಕಡ 0.51ರಷ್ಟು ಕಡಿಮೆಯಾಗಿ ₹51,995 ತಲುಪಿದೆ. ಜಾಗತಿಕವಾಗಿ ಚಿನ್ನ ಶೇಕಡ 0.79ರಷ್ಟು ಇಳಿಕೆಯಾಗಿದೆ.

ಇದೇ ಅವಧಿಯಲ್ಲಿ ಪ್ರತಿ ಕಿಲೋಗ್ರಾಂ ಬೆಳ್ಳಿ ₹1,084ರಷ್ಟು (ಶೇ 1.63) ಇಳಿಕೆಯಾಗಿ ₹65,462ರಲ್ಲಿ ವಹಿವಾಟು ನಡೆದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿ ದರ ಶೇಕಡ 1.76ರಷ್ಟು ಕುಸಿದಿದೆ.

ADVERTISEMENT

ಏರುಗತಿಯಲ್ಲಿದ್ದ ಕಚ್ಚಾ ತೈಲ ಫ್ಯೂಚರ್ಸ್‌ ದರ ಪ್ರತಿ ಬ್ಯಾರೆಲ್‌ಗೆ ಶೇಕಡ 3.44ರಷ್ಟು (₹269) ಕಡಿಮೆಯಾಗಿ ₹7,555 ಮುಟ್ಟಿದೆ. ಕಚ್ಚಾ ತೈಲಕ್ಕೆ ಬೇಡಿಕೆ ಕುಸಿದಿರುವುದರಿಂದ ದರದಲ್ಲಿ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ಶೇಕಡ 3.62ರಷ್ಟು ಇಳಿಕೆಯಾಗಿದ್ದು, ವೆಸ್ಟ್ ಟೆಕ್ಸಸ್‌ ಇಂಟರ್‌ಮೀಡಿಯೇಟ್‌ ಕಚ್ಚಾ ತೈಲವು ಶೇಕಡ 3.58ರಷ್ಟು ಕಡಿಮೆಯಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 628 ಅಂಶ ಕಡಿಮೆಯಾಗಿ 56,568.95 ಅಂಶಗಳಲ್ಲಿ ವಹಿವಾಟು ನಡೆದಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 225 ಅಂಶ ಕುಸಿದು 16,945.55 ಅಂಶ ತಲುಪಿದೆ.

ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌, ಇನ್ಫೊಸಿಸ್‌, ಟಿಸಿಎಸ್‌, ಏಷಿಯನ್‌ ಪೇಯಿಂಟ್ಸ್‌, ಹಿಂದುಸ್ತಾನ್‌ ಯೂನಿಲಿವರ್‌, ವಿಪ್ರೊ, ಟೈಟಾನ್‌ ಸೇರಿದಂತೆ ಪ್ರಮುಖ ಕಂಪನಿಗಳ ಷೇರುಗಳು ಮಾರಾಟ ಒತ್ತಡಕ್ಕೆ ಒಳಗಾದವು. ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾದ ಕಾರಣ ಇಡೀ ದಿನದ ವಹಿವಾಟು ಇಳಿಮುಖವಾಗಿಯೇ ಸಾಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.