ADVERTISEMENT

ಟ್ರಂಪ್ ತೆರಿಗೆ | ಜಾಗತಿಕ ಮಾರುಕಟ್ಟೆ ತತ್ತರ: ಸೆನ್ಸೆಕ್ಸ್, ನಿಫ್ಟಿ ಮಹಾ ಕುಸಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಏಪ್ರಿಲ್ 2025, 5:44 IST
Last Updated 7 ಏಪ್ರಿಲ್ 2025, 5:44 IST
<div class="paragraphs"><p>ಷೇರು ಮಾರುಕಟ್ಟೆಯಲ್ಲಿ ತಲ್ಲಣ: ಕೋಟ್ಯಂತರ ರೂ. ನಷ್ಟ ಅನುಭವಿಸಿದ ಕಂಪನಿಗಳು</p></div>

ಷೇರು ಮಾರುಕಟ್ಟೆಯಲ್ಲಿ ತಲ್ಲಣ: ಕೋಟ್ಯಂತರ ರೂ. ನಷ್ಟ ಅನುಭವಿಸಿದ ಕಂಪನಿಗಳು

   

ಮುಂಬಯಿ: ಸ್ಟಾಕ್ ಮಾರುಕಟ್ಟೆಯಲ್ಲಿ ಸೋಮವಾರ ವಹಿವಾಟು ಆರಂಭವಾದಾಗಲೇ ಭಾರಿ ಹೊಡೆತ ಎದುರಾಗಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಭರ್ಜರಿಯಾಗಿ ಕುಸಿತ ಕಂಡು ತಲ್ಲಣ ಸೃಷ್ಟಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವೂ ಸೇರಿದಂತೆ ವಿವಿಧ ದೇಶಗಳ ಮೇಲೆ ವಿಧಿಸಿದ ಪ್ರತಿಸುಂಕವು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ್ದು, ಹೂಡಿಕೆದಾರರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಅಮೆರಿಕ ಮಾರುಕಟ್ಟೆಯೂ ಇದಕ್ಕೆ ಹೊರತಾಗಿಲ್ಲ. ಚೀನಾವು ಅಮೆರಿಕ ಉತ್ಪನ್ನಗಳಿಗೆ ಶೇ.34 ಪ್ರತಿ ಸುಂಕ ವಿಧಿಸಿದ ಬಳಿಕವಂತೂ ಜಾಗತಿಕ ಮಾರುಕಟ್ಟೆ ಮತ್ತಷ್ಟು ಹೊಡೆತ ಅನುಭವಿಸಿತು.

ADVERTISEMENT

ಭಾರತೀಯ ಮಾರುಕಟ್ಟೆಯಲ್ಲಿ ಬೆಳಿಗ್ಗೆ ವಹಿವಾಟು ಆರಂಭವಾದಾಗಲೇ ಕುಸಿತ ಕಾಣಿಸಲಾರಂಭಿಸಿತು. ಬೆಳಿಗ್ಗೆ 10.15ರವೇಳೆಗೆ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕವು 3000ದಷ್ಟು ಅಂಶ ಎಂದರೆ ಸುಮಾರು ಶೇ.4 ರಷ್ಟು ಕುಸಿತ ದಾಖಲಿಸಿ 72,313ಕ್ಕೆ ಇಳಿಯಿತು. ಶುಕ್ರವಾರ ವಹಿವಾಟು ಮುಕ್ತಾಯದ ವೇಳೆಗೆ ಇದು 75,405 ಇತ್ತು. ನಿಫ್ಟಿ 500 ಸೂಚ್ಯಂಕವು 1,000ಕ್ಕೂ ಹೆಚ್ಚು ಎಂದರೆ ಶೇ.5ರಷ್ಟು ಕುಸಿತ ಕಂಡು, 21,918ಕ್ಕೆ ಇಳಿಯಿತು. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ ಶುಕ್ರವಾರ 22,912ರಲ್ಲಿ ವಹಿವಾಟು ಮುಕ್ತಾಯಗೊಳಿಸಿತ್ತು.

ಮಾರುಕಟ್ಟೆ ತಜ್ಞರ ಅಂದಾಜಿನ ಪ್ರಕಾರ, ಎಲ್ಲ ಪ್ರಮುಖ ಕಂಪನಿಗಳು ಈ ಮಹಾನ್ ಕುಸಿತದ ಪ್ರಭಾವಕ್ಕೆ ಒಳಗಾಗಿದ್ದು, ಬೆಳಿಗ್ಗೆಯೇ ಸುಮಾರು 19 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತು ಕರಗಿದೆ. ಮಾಧ್ಯಮ, ರಿಯಾಲ್ಟಿ, ಐಟಿ, ಆಟೋ ಮತ್ತು ಲೋಹ ಮುಂತಾದ ಎಲ್ಲ ಕ್ಷೇತ್ರಗಳೂ ಮಾರುಕಟ್ಟೆಯ ಹೊಡೆತಕ್ಕೆ ತತ್ತರಿಸಿದವು.

ಸೋಮವಾರ ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಏಷ್ಯಾದ ಎಲ್ಲ ಮಾರುಕಟ್ಟೆಗಳಲ್ಲಿಯೂ ಕೆಂಪು ಗುರುತು ಕಾಣಿಸಲಾರಂಭಿಸಿತು. ಜಪಾನ್‌ನ ನಿಕ್ಕಿ 225 ಮತ್ತು ಟಾಪಿಕ್ಸ್ ಸೂಚ್ಯಂಕಗಳು ಶೇ.7ರಷ್ಟು ಕುಸಿತದೊಂದಿಗೆ ಆರಂಭವಾಗಿ, ವಹಿವಾಟು ಸ್ಥಗಿತಗೊಳ್ಳುವ ಹಂತಕ್ಕೂ ತಲುಪಿತು. ವಹಿವಾಟು ಆರಂಭವಾದಾಗ ನಿಕ್ಕಿ 2278 ಅಂಶಗಳಷ್ಟು ಕುಸಿದು 32,254ಕ್ಕೆ ತಲುಪಿದ್ದರೆ, ಹ್ಯಾಂಗ್ ಸೆಂಗ್ 2396 ಅಂಶ ಕುಸಿದು 20,453ಕ್ಕೆ ತಲುಪಿತ್ತು. ತೈವಾನ್‌ನ ವೈಯ್ಟೆಡ್ ಸೂಚ್ಯಂಕವೂ 2063 ಅಂಶ ಕುಸಿದು 19,234ಕ್ಕೆ ತಲುಪಿತ್ತು. ಸಿಂಗಪುರದ ಸ್ಟ್ರೈಟ್ ಟೈಮ್ಸ್ 117 ಅಂಶ ಕುಸಿತ ದಾಖಲಿಸಿ 3,825ಕ್ಕೆ, ಕೋಸ್ಪಿ ಸೂಚ್ಯಂಕವು 21 ಅಂಶ ಕುಸಿದು 2465ಕ್ಕೆ ತಲುಪಿತ್ತು. ಈ ಮಧ್ಯೆ ಕಚ್ಚಾ ತೈಲ ಬೆಲೆಯೂ ಬ್ಯಾರೆಲ್‌ಗೆ 60 ಡಾಲರ್‌ಗಿಂತ ಕೆಳಕ್ಕೆ ಕುಸಿಯಿತು.

ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ 2ರಂದು ಮಾಡಿದ ಘೋಷಣೆಗಳ ಬಳಿಕ ಸ್ವತಃ ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲ ಮಾರುಕಟ್ಟೆಗಳು ತೀವ್ರ ನಷ್ಟ ಅನುಭವಿಸಿದ್ದವು. ಇದೀಗ ಸೋಮವಾರವೂ ಪರಿಸ್ಥಿತಿ ಮತ್ತಷ್ಟು ಆತಂಕಕಾರಿಯಾಗಿದೆ. ಶುಕ್ರವಾರವೂ ಅಮೆರಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ನಾಸ್ಡಾಕ್ ಕಾಂಪೊಸಿಟ್ ಸೂಚ್ಯಂಕವು 962 ಅಂಶ (ಶೇ.5.82) ಕುಸಿದು 15,587ಕ್ಕೆ ಇಳಿದರೆ, ಎಸ್ಆ್ಯಂಡ್‌ಪಿ ಸೂಚ್ಯಂಕವು 322 ಅಂಶ ಕುಸಿತ ದಾಖಲಿಸಿ, 5074ರಲ್ಲಿ ಕೊನೆಗೊಂಡಿತ್ತು.

ಮಾರುಕಟ್ಟೆಯ ವಹಿವಾಟು ಮುಂದುವರಿದಿದ್ದು, ಕುಸಿತವೂ ಮುಂದುವರಿದಿದೆ. ಸಾಯಂಕಾಲ ಮಾರುಕಟ್ಟೆ ವಹಿವಾಟು ಅಂತ್ಯದ ವೇಳೆಗೆ ಎಷ್ಟರ ಮಟ್ಟಕ್ಕೆ ಕುಸಿತವಾಗಲಿದೆ ಅಥವಾ ನಡುವೆ ಚೇತರಿಕೆ ಕಂಡುಬರಬಹುದೇ ಎಂಬುದು ಹೂಡಿಕೆದಾರರ ಕುತೂಹಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.