ADVERTISEMENT

ತೈಲ ಬಿಕ್ಕಟ್ಟು, ಷೇರುಪೇಟೆಗೆ ಇಕ್ಕಟ್ಟು: ಕುಸಿದ ವಹಿವಾಟು

ಪಿಟಿಐ
Published 17 ಸೆಪ್ಟೆಂಬರ್ 2019, 10:16 IST
Last Updated 17 ಸೆಪ್ಟೆಂಬರ್ 2019, 10:16 IST
   

ಮುಂಬೈ: ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ಡ್ರೋನ್‌ ದಾಳಿ ನಡೆದಿರುವುದರಿಂದ ತೈಲ ದರಗಳು ಏರುಗತಿಯಲ್ಲಿವೆ. ಇದರಿಂದಾಗಿ ಭಾರತದ ಷೇರುಪೇಟೆಯಲ್ಲಿ ಮಂಗಳವಾರ ಸೂಚ್ಯಂಕಗಳು ಹೆಚ್ಚಿನ ಹಾನಿ ಅನುಭವಿಸಿದವು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 642 ಅಂಶಗಳಷ್ಟು ಹಾನಿ ಅನುಭವಿಸಿ 36,481 ಅಂಶಗಳಿಗೆ ತಲುಪಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್ಇ) ಸೂಚ್ಯಂಕ ನಿಫ್ಟಿ 185 ಅಂಶಗಳಷ್ಟು ಇಳಿಕೆ ಕಂಡಿದೆ.

ADVERTISEMENT

ಬ್ಯಾಂಕಿಂಗ್‌, ಇಂಧನ ಮತ್ತು ಐಟಿ ವಲಯದ ಷೇರುಗಳು ಹೆಚ್ಚಿನ ನಷ್ಟ ಕಂಡಿವೆ.

ಜಾಗತಿಕ ಮಂದಗತಿಯ ಆರ್ಥಿಕತೆ,ತೈಲ ಬಿಕ್ಕಟ್ಟು ಮತ್ತು ಅಮೆರಿಕ–ಚೀನಾದಲ್ಲಿ ನಡೆಯುತ್ತಿರುವ ವಾಣಿಜ್ಯ ಸಮರದ ಪ್ರಭಾವಕ್ಕೆ ಒಳಗಾಗಿ ಹೂಡಿಕೆ ಚಟುವಟಿಕೆ ದುರ್ಬಲವಾಗುತ್ತಿದೆ. ಇದರಿಂದ ಸೂಚ್ಯಂಕಗಳು ನಕಾರಾತ್ಮಕ ಮಟ್ಟದಲ್ಲಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಏಷ್ಯಾದ ಮಾರುಕಟ್ಟೆಗಳಲ್ಲಿಯೂ ನಕಾರಾತ್ಮಕ ವಹಿವಾಟು ನಡೆಯಿತು.

ಬ್ರೆಂಟ್‌ ತೈಲ ದರ ಸದ್ಯ ಒಂದು ಬ್ಯಾರೆಲ್‌ಗೆ 68.38 ಡಾಲರ್‌ಗಳಷ್ಟಿದೆ. ಸೋಮವಾರ ಇದ್ದ 71.95 ಡಾಲರ್‌ಗಳಿಗೆ ಹೋಲಿಸಿದರೆ ದರದಲ್ಲಿ ಇಳಿಕೆ ಕಂಡುಬಂದಿದೆ. ಆದರೆ ದಿನದ ವಹಿವಾಟಿನ ಅಂತ್ಯದ ವೇಳೆಗೆ ಮತ್ತೆ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸದ್ಯ ಒಂದು ಡಾಲರ್‌ಗೆ ರೂಪಾಯಿ ₹ 71.88ರಂತೆ ವಹಿವಾಟು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.