ADVERTISEMENT

ಗತಿಬಿಂಬ | ಉಭಯ ಸದನಗಳಲ್ಲೂ ಹೆಚ್ಚುತ್ತಿದೆ ಹರಕು ಬಾಯಿ ಶೂರರ ಸಂಖ್ಯೆ

ವೈ.ಗ.ಜಗದೀಶ್‌
Published 6 ಫೆಬ್ರುವರಿ 2026, 6:47 IST
Last Updated 6 ಫೆಬ್ರುವರಿ 2026, 6:47 IST
<div class="paragraphs"><p>ವಿಧಾನ ಪರಿಷತ್ತಿನ ಕಲಾಪದಲ್ಲಿ ಸದಸ್ಯರ ಮಾತಿನ ಚಕಮಕಿ</p></div>

ವಿಧಾನ ಪರಿಷತ್ತಿನ ಕಲಾಪದಲ್ಲಿ ಸದಸ್ಯರ ಮಾತಿನ ಚಕಮಕಿ

   

ಪ್ರಜಾವಾಣಿ ಚಿತ್ರ

ಸರಿ ಸುಮಾರು ಎರಡು ದಶಕದ ಹಿಂದೆ ದೇಶಕ್ಕೇ ಮಾದರಿಯಾಗುವಂತೆ, ತನ್ನದೇ ಉನ್ನತ ಪರಂಪರೆಯನ್ನು ಹೊಂದಿದ್ದ ಕರ್ನಾಟಕದ ವಿಧಾನಮಂಡಲ, ಈಚೆಗಿನ ವರ್ಷಗಳಲ್ಲಿ ಮಾತಿನ ಮೇಲೆ ಹಿಡಿತ ತಪ್ಪಿದ, ಜಾರು ನಾಲಗೆಯವರ ‘ಮಾರುಕಟ್ಟೆ’ಯಾಗಿದೆ. ಕಳೆದ ಒಂಬತ್ತು ದಿನಗಳು ನಡೆದ ಕಲಾಪದಲ್ಲಿ ಸದಸ್ಯರ ಬಾಯಿಂದ ಹೊರಬಿದ್ದ ಪದಗಳಂತೂ ಸದನದ ಘನತೆ, ಗಾಂಭೀರ್ಯವನ್ನೇ ಮಣ್ಣುಪಾಲು ಮಾಡಿವೆ.

ADVERTISEMENT

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದ್ವೇಷಭಾಷಣ ತಡೆಗೆ ಮಸೂದೆಯೊಂದನ್ನು ತಂದಿದೆ. ಅದರ ಸಾಧಕ–ಬಾಧಕಗಳ ಚರ್ಚೆ ನಡೆಯುತ್ತಲೇ ಇದೆ. ವಿಧಾನಮಂಡಲದ ಕಲಾಪ ಹಾದಿ ತಪ್ಪಿದ ಬಗೆಯನ್ನು ನೋಡಿದರೆ, ‘ಹೊಲಸು ಭಾಷಣ’ ತಡೆಗೂ ಕಠಿಣವಾದ ನಿಯಮ ರೂಪಿಸಲೇಬೇಕಾದ ಪರಿಸ್ಥಿತಿ ಕರ್ನಾಟಕಕ್ಕೆ ಬಂದೊದಗಿದೆ. ಕರ್ನಾಟಕದಲ್ಲಿ ವರ್ಷಕ್ಕೆ ಕನಿಷ್ಠ 60 ದಿನ ಕಲಾಪ ನಡೆಸಲೇಬೇಕು ಎಂಬ ನಿಯಮವನ್ನು ಸರ್ಕಾರ ಮಾಡಿಕೊಂಡಿದೆ. ಅದೇ ಮಾದರಿಯಲ್ಲಿ ಅವಾಚ್ಯ, ಅಶ್ಲೀಲ, ಮತ್ತೊಬ್ಬರ ವ್ಯಕ್ತಿತ್ವಕ್ಕೆ ಅಗೌರವ ತರುವ ಪದಗಳನ್ನು ಬಳಸದಂತೆ ವಿಧಾನಮಂಡಲವೇ ಸ್ವನಿಯಮವನ್ನು ಹೇರಿಕೊಂಡರೆ, ನಮ್ಮ ರಾಜ್ಯದ ಹಿರಿಮೆ ಉಳಿದು ಬೆಳೆದೀತು. 

ವರ್ಷದ ಆರಂಭದಲ್ಲಿ ರಾಜ್ಯಪಾಲರ ಭಾಷಣದೊಂದಿಗೆ ಜಂಟಿ ಅಧಿವೇಶನ ಆರಂಭಿಸುವುದು ರೂಢಿ. ಜನ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ವಾರ್ಷಿಕ ವರದಿಯನ್ನು ಒಪ್ಪಿಸುವ ಜತೆಗೆ, ಸರ್ಕಾರದ ಮುಂದಿರುವ ಒಂದು ವರ್ಷದ ದಿಕ್ಸೂಚಿಯನ್ನು ತೋರಿಸಿ ಸರಿಯಾದ ನಡೆಯ ಕಡೆಗೆ ಜನಪ್ರತಿನಿಧಿಗಳನ್ನು ಕರೆದೊಯ್ಯುವುದು ಆರಂಭಿಕ ಅಧಿವೇಶನದ ಸಂಕಲ್ಪ. ಹೀಗಾಗಿಯೇ, ಜಂಟಿ ಅಧಿವೇಶನದ ಹೆಸರಿನಲ್ಲಿ ವಿಧಾನಸಭೆಯೊಳಗೆ ಪರಿಷತ್ತಿನ ಸದಸ್ಯರನ್ನೂ ಕೂರಿಸಿಕೊಂಡು ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದುತ್ತಾರೆ.

ಆದರೆ, ಈ ವರ್ಷದ ಆರಂಭದಲ್ಲಿಯೇ ರಾಜಭವನ–ಸರ್ಕಾರದ ಮಧ್ಯದ ತಿಕ್ಕಾಟಕ್ಕೆ ಜಂಟಿ ಅಧಿವೇಶನ ಸಾಕ್ಷಿಯಾಯಿತು. ಕೇಂದ್ರವನ್ನು ದೂರುವ ಅಂಶಗಳಿವೆ ಎಂಬ ಕಾರಣ ಮುಂದಿಟ್ಟ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು, ಅಧಿವೇಶನಕ್ಕೆ ಬರಲು ಮೊದಲು ನಿರಾಕರಿಸಿದರು. ಬಳಿಕ ಬರಲೊಪ್ಪಿದರೂ ಭಾಷಣದ ಬಗ್ಗೆ ತಮ್ಮ ಆಕ್ಷೇಪ ಎತ್ತಿದರು. ಭಾಷಣ ತಿದ್ದಲು ಸರ್ಕಾರ ಒಪ್ಪದೇ ಇದ್ದುದರಿಂದ, ಭಾಷಣದ ಮೊದಲ ಹಾಗೂ ಕೊನೆಯ ಕೆಲವು ವಾಕ್ಯಗಳನ್ನಷ್ಟೇ ಓದಿ ರಾಜ್ಯಪಾಲರು ಸದನದಿಂದ ಹೊರನಡೆದರು. ರಾಷ್ಟ್ರಗೀತೆ ನುಡಿಸುವುದರೊಂದಿಗೆ ರಾಜ್ಯಪಾಲರ ಭಾಷಣದ ಕಾರ್ಯಕಲಾಪ ಮುಕ್ತಾಯವಾಗುವುದು ಸಂಪ್ರದಾಯ. ಆದರೆ, ರಾಷ್ಟ್ರಗೀತೆ ಮೊಳಗಿಸುವ ಮುನ್ನವೇ, ರಾಜ್ಯಪಾಲರು ಸದನದಿಂದ ಹೊರನಡೆದರು ಎಂಬುದು ಆಡಳಿತರೂಢ ಕಾಂಗ್ರೆಸ್‌ ಸದಸ್ಯರ ಗಂಭೀರ ಆರೋಪ.

ವಿಧಾನಮಂಡಲದ ಇಡೀ ವರ್ಷದ ಕಲಾಪಕ್ಕೆ ಚೌಕಟ್ಟು ಹಾಕಿಕೊಡುವ ಶುಭಾರಂಭವಾಗಬೇಕಾದ ಜಂಟಿ ಅಧಿವೇಶನಕ್ಕೆ ಮೊದಲ ದಿನವೇ ಭಂಗ ಬಂದೊದಗಿತು. ಸಾಂವಿಧಾನಾತ್ಮಕವಾಗಿ ತಮ್ಮ ಕರ್ತವ್ಯ ನಿರ್ವಹಿಸಲೇಬೇಕಾದ ರಾಜ್ಯಪಾಲರು ಅದನ್ನು ಮಾಡಲಿಲ್ಲ. ಅವರೂ ಸಂವಿಧಾನಯುತ ಕರ್ತವ್ಯಕ್ಕೆ ಚ್ಯುತಿ ತಂದರು. ಆದರೆ, ಅವರನ್ನು ಗೌರವಯುತವಾಗಿ ಕಳುಹಿಸಿಕೊಟ್ಟು, ಖಂಡನಾ ನಿರ್ಣಯವನ್ನು ಕೈಗೊಳ್ಳುವ ಮುಕ್ತ ಅವಕಾಶವನ್ನು ಕಾಂಗ್ರೆಸ್ ಸದಸ್ಯರು ಬಳಸಿಕೊಳ್ಳಲಿಲ್ಲ. ಸದನದಲ್ಲಿ ಹಿರಿಯ ಸದಸ್ಯ ಎಂದೇ ಹೇಳಬಹುದಾದ ಬಿ.ಕೆ. ಹರಿಪ್ರಸಾದ್ ಅವರೇ ಮುಂದೆ ನಿಂತು, ತಮ್ಮ ಪಕ್ಷದ ಸದಸ್ಯರನ್ನು ಕೂಡಿಸಿಕೊಂಡು ರಾಜ್ಯಪಾಲರನ್ನು ಅಡ್ಡಗಟ್ಟುವ ಯತ್ನ ಮಾಡಿದರು. ರಾಜ್ಯಪಾಲರಿಗೆ ಧಿಕ್ಕಾರ ಕೂಗಿದ ಘಟನೆಯೂ ನಡೆಯಿತು. ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿ ಸದನದೊಳಗೆ ರಾಜ್ಯಪಾಲರನ್ನು ಇಷ್ಟು ಹೀನಾಯವಾಗಿ ನಡೆಸಿಕೊಂಡ ಕಪ್ಪು ಪುಟವೊಂದು ಈ ವರ್ಷದ ಮೊದಲ ದಿನವೇ ದಾಖಲಾಯಿತು.

ಅಲ್ಲಿಂದೀಚೆಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ, ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಡೆದ ಹೋರಾಟದ ವೇಳೆ ವಿಧಾನಸಭೆ– ಪರಿಷತ್ತಿನಲ್ಲಿ ಬಳಕೆಯಾದ ಪದಗಳನ್ನು ಗಮನಿಸಿದರೆ, ಇವರೆಲ್ಲ ನಮ್ಮ ಜನಪ್ರತಿನಿಧಿಗಳಾ ಅಥವಾ ‘. . . ಪ್ರತಿನಿಧಿಗಳಾ’ ಎಂಬ ಸಂದೇಹವಂತೂ ಉಳಿದೇ ಹೋಗುತ್ತದೆ.

ರಾಜ್ಯಪಾಲರ ನಡೆ, ಅವರನ್ನು ಕಾಂಗ್ರೆಸ್ ಸದಸ್ಯರು ನಡೆಸಿಕೊಂಡ ವಿಧಾನದ ಖಂಡನೆಗಳಿಗೆ ‘ವಂದನಾ ನಿರ್ಣಯ’ದ ಚರ್ಚೆಯ ಸಮಯ ಮೀಸಲಾಯಿತು. ಪರ–ವಿರೋಧದ ಚರ್ಚೆಯಲ್ಲಿ ಆಡಳಿತ–ವಿಪಕ್ಷ ಸದಸ್ಯರು ಪರಸ್ಪರ ವಾಚಾಮಗೋಚರವಾಗಿ ಬೈದಾಡಿಕೊಂಡರು. 

ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ ಅವರಿಗೆ ಈ ಬಾರಿ ಗಂಟಲ ಆರೋಗ್ಯ ಕೆಟ್ಟಿದ್ದರಿಂದಾಗಿ ಆರಂಭದಲ್ಲಿ ಹೆಚ್ಚು ಮಾತನಾಡಲಿಲ್ಲ. ಇದನ್ನು ಸಕಾಲಿಕವಾಗಿ ಬಳಸಿಕೊಂಡ ವಿ.ಸುನಿಲ್ ಕುಮಾರ್, ಎಸ್. ಸುರೇಶ್‌ಕುಮಾರ್‌, ಆರಗ ಜ್ಞಾನೇಂದ್ರ, ಅರವಿಂದ ಬೆಲ್ಲದ, ಬಿ.ವೈ. ವಿಜಯೇಂದ್ರ ಮತ್ತಿತರರು ಸರ್ಕಾರವನ್ನು ನಿರ್ದುಷ್ಟ ಭಾಷೆಯಲ್ಲಿ ತಿವಿದು, ಆಳುವವರನ್ನು ಎಚ್ಚರಿಸುವ ಮಾತುಗಳನ್ನು ಆಡಿದರು. ವಿರೋಧ ಪಕ್ಷವೊಂದು ರಾಜ್ಯದಲ್ಲಿದೆ ಎಂದು ತೋರಿಸುವ ಯತ್ನ ಮಾಡಿದರು. ಕೊನೆಯ ದಿನ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅಶೋಕ, ತಮ್ಮ ಹೆಚ್ಚುಗಾರಿಕೆ ಪ್ರದರ್ಶಿಸುವ ಪ್ರಯತ್ನವನ್ನೂ ನಡೆಸಿದರು.

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಯ ಅಸ್ತ್ರವನ್ನು ಹಿಡಿದ ಬಿಜೆಪಿ ಸರ್ಕಾರವನ್ನು ಮಣಿಸುವ ಯತ್ನ ನಡೆಸಿತು. ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಪ್ರದರ್ಶಿಸಲಿಲ್ಲವಾದರೂ, ಕಲಾಪ ಸುಗಮವಾಗಿ ನಡೆಯಲು ಬಿಡಲಿಲ್ಲ. ತಮ್ಮ ಅರ್ಥಪೂರ್ಣ ಚರ್ಚೆಯ ಮೂಲಕ ಅಬಕಾರಿ ಇಲಾಖೆಯ ಭ್ರಷ್ಟಾಚಾರವನ್ನು ಜನರಿಗೆ ತಿಳಿಸಲು ಸದನವನ್ನು ಬಳಸಿಕೊಳ್ಳುವ ಬದಲು, ಧರಣಿಗೆ ಮಿತಗೊಳಿಸಿತು. 

ವಿಬಿ ಜಿ ರಾಮ್‌ ಜಿ ವಿರುದ್ಧದ ಚರ್ಚೆಯಲ್ಲಿ ಕಾಂಗ್ರೆಸ್‌ನ ಕೆ.ಎಂ. ಶಿವಲಿಂಗೇಗೌಡ ಮಾತನಾಡುತ್ತಿರುವ ವೇಳೆ ಧರಣಿ ನಿರತ ಬಿಜೆಪಿ ಸದಸ್ಯರು ಅವರ ಭಾಷಣಕ್ಕೆ ಅಡ್ಡಿಪಡಿಸಿದರು. ಇದರಿಂದ ಕೆರಳಿದ ಶಿವಲಿಂಗೇಗೌಡ ಅವರು, ಲೇ ಆರೆಸ್ಸೆಸ್‌ನವ್ರಾ ...ಥೂ ನಿಮ್ಮ... ಅಯೋಗ್ಯರಾ. . ಯಾಕೆ ಕೂಗಾಡ್ತೀರಿ... ನಿಮಗೆ ಬೆಂಕಿ ಹಾಕಾ. ಅಸೆಂಬ್ಲಿಗೆ ಬಂದು ಡಾನ್ಸ್‌ ಮಾಡ್ತೀರಾ? ನಿಮಗೆ ನಾಚಿಕೆ ಮಾನ– ಮರ್ಯಾದೆ ಇಲ್ವಾ? ನಿಮ್ಮಂತ ನೂರು ನಾಯಿಗಳು ಬಂದರೂ ನಾನು ಹೆದರಲ್ಲ. . . ಏಯ್ ವಿರೋಧ ಪಕ್ಷದ ನಾಯಕರೇ ಕೋತಿಗಳನ್ನೆಲ್ಲ ತಂದು ಇಲ್ಲಿ ಕುಣಿಸ್ತೀರಾ’ ಎಂದು ತಮ್ಮದೇ ಭಾಷೆಯಲ್ಲಿ ಬಾಯಿಗೆ ಬಂದಂತೆ ಅರಚಾಡಿದರು. ಬಿಜೆಪಿಯ ವೇದವ್ಯಾಸ ಕಾಮತ್, ಶರಣು ಸಲಗರ ಅವರು ‘ಕೊಬ್ಬರಿ ಕಳ್ಳ, ಕಾಯಿ ಕಳ್ಳ, ಅರಸೀಕೆರೆ ಕಳ್ಳ’ ಎಂದು ಶಿವಲಿಂಗೇಗೌಡರನ್ನು ಹೀಗಳೆದರು. 

ಮಾತಿಗೆ ಮಾತು ಬೆಳೆದು, ತಮ್ಮ ವಿವೇಕ ಕಳೆದುಕೊಂಡ ಶಿವಲಿಂಗೇಗೌಡ ಅವರು, ಶರಣು ಸಲಗರ ಅವರನ್ನು ಉದ್ದೇಶಿಸಿ ‘ಹೆಂಡತಿಯನ್ನು ತಹಶೀಲ್ದಾರ್ ಮಾಡಿಸಿ ಹಣ ಹೊಡಯುತ್ತಿರುವವನು ನೀನು’ ಎಂದು ಕಿರುಚಾಡಿದರು. ಸಲಗರ ಅವರ ಪತ್ನಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಭ್ರಷ್ಟಾಚಾರ ಮಾಡುತ್ತಿದ್ದರೆ ಅದನ್ನು ದಾಖಲೆ ಸಮೇತ ಸದನದಲ್ಲಿ ಮಂಡಿಸುವ ಅವಕಾಶ ಇತ್ತು. ಸಲಗರ ಅವರ ಮೇಲಿನ ಸಿಟ್ಟಿಗೆ ಅವರ ಪತ್ನಿಯ ವೃತ್ತಿಯನ್ನು ಪ್ರಸ್ತಾಪಿಸಿ, ಅವಮಾನ ಮಾಡಿದ್ದು ಆಕ್ಷೇಪಾರ್ಹ ಹಾಗೂ ಸದನಕ್ಕೆ ಸಲ್ಲದ ನುಡಿ. ಈ ವೇಳೆ, ಮಾತು ನಿಯಂತ್ರಿಸಬೇಕಾದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ನಗುತ್ತಲೇ ಪ್ರತಿಕ್ರಿಯಿಸಿದ್ದು ಮಾತ್ರ ಅಕ್ಷಮ್ಯ. ಇದು ಸಭಾಧ್ಯಕ್ಷರ ಪೀಠಕ್ಕೆ ಮಾಡಿದ ಅವಮಾನ.

ಪರಿಷತ್ತಲ್ಲ, ಬೀದಿಜಗಳದ ಜಾಗ:

ಈ ಬಾರಿಯ ವಿಧಾನ ಪರಿಷತ್ತಿನ ಕಲಾಪವಂತೂ ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ನುಡಿಯುತ್ತದೆ; ಹೇಗೆ ಬೇಕಾದರೂ ಹೊರಳುತ್ತದೆ ಎಂಬುದಕ್ಕೆ ನಿದರ್ಶನದಂತೆ ಇತ್ತು. 

ಸದನದ ಕಿರಿಯ ಸದಸ್ಯರಿಗೆ ಮಾದರಿಯಾಗಬೇಕಾದ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಅವರ ನಾಲಗೆ ಪದೇ ಪದೇ ಜಾರಿತು. ಬಿಜೆಪಿ, ಆರೆಸ್ಸೆಸ್ ಸದಸ್ಯರನ್ನು ಉದ್ದೇಶಿಸಿ ಅವರು ಆಡಿದ ಮಾತು ಸಭ್ಯತೆಯ ಎಲ್ಲೆ ಮೀರಿತ್ತು. ಆ ಪದಗಳನ್ನೆಲ್ಲ ಕಡತದಿಂದ ತೆಗೆದು ಹಾಕಲಾಯಿತು.  ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ,  ಹರಿಪ್ರಸಾದ್‌ ಅವರನ್ನೇ ನಾಚಿಸುವಂತೆ ಬಳಸಬಾರದ ಪದಗಳನ್ನೆಲ್ಲ ಸದನದಲ್ಲಿ ಹರಿಬಿಟ್ಟರು.

ಎಲ್ಲರಿಗೂ ಸಂಯಮದ ಪಾಠ ಹೇಳಬೇಕಾದ, ಅತ್ಯಂತ ಹಿರಿಯ, ಅನುಭವಿಯಾದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸದಸ್ಯರ ಮಾತಿಗೆ ಕಡಿವಾಣ ಹಾಕಬೇಕಿತ್ತು. ಆದರೆ, ಅವರೂ ಈ ಬಾರಿ ಬಾಯಿ ತಪ್ಪಿ ಪುಂಖಾನುಪುಂಖವಾಗಿ ತಮ್ಮ ಕೀಳು ಮಾತುಗಳನ್ನು ಬಳಸಿಯೇ ಬಿಟ್ಟರು. ‘ಸಿನಿಮಾದವರ ರೀತಿ ಇಲ್ಲಿ ನಾಟಕ ಮಾಡಬೇಡಿ, ಡೈಲಾಗ್‌ ಹೊಡೆಯಬೇಡಿ’ ಎಂದು ಬಿಜೆಪಿಯ ಭಾರತಿ ಶೆಟ್ಟಿ ಅವರು, ಕಾಂಗ್ರೆಸ್‌ನ ಉಮಾಶ್ರೀ ಅವರನ್ನು ಉದ್ದೇಶಿಸಿ ಹೇಳಿದರು. ಆಗ ಭಾರತಿ ಶೆಟ್ಟಿ ಅವರಿಗೆ ಬುದ್ಧಿ ಹೇಳಬೇಕಾದ ಸಭಾಪತಿ ಹೊರಟ್ಟಿ, ಅದೇ ಮಾದರಿಯ ಮಾತುಗಳನ್ನು ಬಳಸಿ, ಉಮಾಶ್ರೀಯವರನ್ನು ಗದರಿದರು. 

ನಸೀರ್ ಅಹಮದ್ ಅವರ ಮಾತು ನಿಲ್ಲಿಸಲು ಮುಂದಾದ ಸಭಾಪತಿ, ಮುಖ್ಯಸಚೇತಕ ಸಲೀಂ ಅಹಮದ್‌ ಅವರನ್ನು ಉದ್ದೇಶಿಸಿ, ಮಾತು ನಿಲ್ಲಿಸದಿದ್ದರೆ ಅವರ ನಾಲಗೆ ಕೀಳಬೇಕಾಗುತ್ತದೆ ಎಂದು ನಸೀರ್ ಅಹಮದ್‌ಗೆ ಹೇಳಿ ಎಂದು ಹೇಳಿದರು. 

ವರ್ಷದ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ವಿರುದ್ಧ ಕೀಳಾಗಿ ಮಾತನಾಡಿ, ಮಹಿಳಾ ಸಂಕುಲವನ್ನೇ ಅವಮಾನಿಸಿ ಆಕ್ರೋಶಕ್ಕೆ ಗುರಿಯಾಗಿದ್ದ ಬಿಜೆಪಿಯ ಸಿ.ಟಿ. ರವಿ ತಮ್ಮ ಚಾಳಿಯನ್ನು ಮತ್ತೆ ಬೆಂಗಳೂರಿನಲ್ಲೂ ಮುಂದುವರಿಸಿದರು. ಕಾಂಗ್ರೆಸ್‌ನ ನಸೀರ್ ಅಹಮದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಆಡಿದ ಮಾತನ್ನು ಕಡತದಿಂದ ತೆಗೆದು ಹಾಕಲಾಗಿತ್ತು. ಹಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ಧರಣಿ ನಡೆಸುತ್ತಿತ್ತು. ಆ ವೇಳೆ, ನಸೀರ್ ಅಹಮದ್ ವಿಷಾದವನ್ನೂ ವ್ಯಕ್ತಪಡಿಸಿದ್ದರು. ಚರ್ಚೆಯ ಮಧ್ಯೆ, ನೆರೆಯ ದೇಶದ ನಾಲಗೆ ಎಂಬ ಪದವನ್ನು ರವಿ ಬಳಸಿದರು. ಇದು ಕಾಂಗ್ರೆಸ್‌ ಸದಸ್ಯರನ್ನು ರೊಚ್ಚಿಗೆಬ್ಬಿಸಿತು. ಸಿ.ಟಿ. ರವಿ ಅವರ ಕ್ಷಮೆಗೆ ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಹೊರಟ್ಟಿ ಹಾಗೂ ಬಿಜೆಪಿ ಸದಸ್ಯರು ಮನವೊಲಿಸಿದರೂ ಕ್ಷಮೆಯಾಚಿಸಲು ಅಥವಾ ವಿಷಾದ ವ್ಯಕ್ತಪಡಿಸಲು ರವಿ ಒಪ್ಪಲೇ ಇಲ್ಲ. ಕೊನೆಗೆ, ಅವರನ್ನು ಒಂದು ದಿನದ ಮಟ್ಟಿಗೆ ಸದನದಿಂದ ಅಮಾನತು ಮಾಡಲಾಯಿತು.

ಇದೇ ರೀತಿಯ ಮಾತಿನ ಪ್ರಹಾರಗಳನ್ನು ಕಾಂಗ್ರೆಸ್, ಬಿಜೆಪಿ ಸದಸ್ಯರು ಎಂಬ ಭೇದವಿಲ್ಲದೇ ಬಹುತೇಕರು ಪರಸ್ಪರರ ಮೇಲೆಯೇ ನಡೆಸಿದರು. ಹೀಗಾಗಿ, ಎರಡೂ ಸದನದ ಕಲಾಪಗಳು ದಿಕ್ಕು ತಪ್ಪಿ, ಎಲ್ಲೆಲ್ಲೋ ಸಾಗಿತು.  ಬಜೆಟ್ ಅಥವಾ ಸಾಮಾನ್ಯ ಅಧಿವೇಶನದ ಅವಧಿಯಲ್ಲಿ ನಿಗದಿತ ಕಲಾಪದ ಮೇಲಷ್ಟೇ ಚರ್ಚೆ ಮಾಡಲು ಅವಕಾಶ ಇರುತ್ತದೆ. ಆದರೆ, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತ ಚರ್ಚೆಗೆ ವಿಷಯದ ಮಿತಿ ಇರುವುದಿಲ್ಲ. ರಾಜ್ಯದ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಎಲ್ಲ ಅವಕಾಶಗಳೂ ಇದ್ದವು. ಅದನ್ನು ವಿರೋಧ ಪಕ್ಷದ ಸಮರ್ಥವಾಗಿ ಉಪಯೋಗಿಸಿಕೊಳ್ಳಲಿಲ್ಲ. ಎರಡೂ ಕಡೆಯುವರು ‘ನಿಂದನಾ ಸ್ತುತಿ’ಗೆ ಪಕ್ಕಾದರು. ಸದನದ ಘನತೆಗೆ ಧಕ್ಕೆ ತರುವ, ಕರ್ನಾಟಕದ ವಿಧಾನಮಂಡಲದ ಉನ್ನತ ಪರಂಪರೆಯನ್ನು, ಧರಾಶಾಯಿಯಾಗಿಸುವ ಕೆಲಸ ನಿರಾತಂಕವಾಗಿ ಮುಂದುವರಿಯಿತು. ಇದಕ್ಕೆ ಕಡಿವಾಣ ಹಾಕುವ ಕೆಲಸವನ್ನು ಹಿರಿಯರಾದರೂ ಮಾಡಬೇಕು. ಆದರೆ, ಅವರೇ ಹಾದಿ ತಪ್ಪಿದರೆ, ಕಿರಿಯರು ಏನು ಮಾಡಿಯಾರು? 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.