
ಇರಾನ್ ಮೇಲೆ ಮುಗಿಬಿದ್ದಿರುವ ಅಮೆರಿಕ ಮತ್ತು ಇಸ್ರೇಲ್ ತಮ್ಮ ದಾಳಿಗೆ ನೀಡಿರುವ ಪ್ರಮುಖ ಕಾರಣ, ಅಣ್ವಸ್ತ್ರ ಹೊಂದದಂತೆ ಇರಾನ್ ಅನ್ನು ತಡೆಯುವುದು. ಆದರೆ, ಇರಾನ್‌ನ ಅಣ್ವಸ್ತ್ರದ ಕನಸಿಗೆ ಮೊದಲು ನೀರೆರೆದಿದ್ದೇ ಅಮೆರಿಕ! ಈಗ, ತನ್ನ ಆರ್ಥಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ತೈಲ ಸಂಪನ್ಮೂಲಗಳನ್ನು ಹೊಂದಿರುವ ದೇಶಗಳನ್ನು ಅಂಕೆಯಲ್ಲಿ ಇಟ್ಟುಕೊಳ್ಳಲು ಮುಂದಾಗಿದೆ.
ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಮುಗಿಬಿದ್ದಿವೆ. ಇರಾನ್ ಮೇಲೆ ದಾಳಿ ನಡೆಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಲೇ ಬಂದಿದ್ದರು. ಇದೀಗ ಅವರ ಮಾತು ಕಾರ್ಯರೂಪಕ್ಕೆ ಬಂದಿದೆ. ಇರಾನ್ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕ ಆರಂಭಿಸಿರುವ ಯುದ್ಧ ತನ್ನ ಗುರಿಯನ್ನು ಮೊದಲ ದಿನವೇ ಸಾಧಿಸಿದೆ. ಇರಾನ್‌ನ ಪರಮೋಚ್ಚ ನಾಯಕ ಅಯಾತೊಲ್ಲಾ ಖಮೇನಿ ಹತ್ಯೆಯಾಗಿದ್ದಾರೆ.
ಇರಾನ್ ಮೇಲಿನ ದಾಳಿ ಹಾಗೂ ಖಮೇನಿ ಹತ್ಯೆಯನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಮತ್ತು ಇಸ್ರೇಲ್, ತಮ್ಮ ಸಮರ್ಥನೆಗೆ ಎರಡು ಕಾರಣಗಳನ್ನು ನೀಡುತ್ತಿವೆ. ಇರಾನ್ ಪರಮಾಣು ಅಸ್ತ್ರ ಹೊಂದುವ ಅಂತಿಮ ಹಂತದಲ್ಲಿದೆ, ಖಮೇನಿ ಪರಮಾಣು ಒಪ್ಪಂದಕ್ಕೆ ಅಡ್ಡಿಯಾಗಿದ್ದರು ಎಂಬುದು ಮೊದಲ ಕಾರಣ. ಇಸ್ರೇಲ್ ಈ ಕುರಿತು ಹಲವು ವರ್ಷಗಳಿಂದ ಜಾಗತಿಕ ವೇದಿಕೆಗಳಲ್ಲಿ ಮಾತನಾಡುತ್ತಾ ಬಂದಿದೆ. ಕಳೆದ ವರ್ಷ ಜೂನ್‌ನಲ್ಲಿ ಇರಾನ್ ಮೇಲೆ ದಾಳಿ ನಡೆಸಿದ್ದ ಇಸ್ರೇಲ್, ಅದರ ಪರಮಾಣು ಕಾರ್ಯಕ್ರಮದ ಕೆಲವು ತಾಣಗಳನ್ನು ಹಾಗೂ ಕ್ಷಿಪಣಿ ಉತ್ಪಾದನಾ ಘಟಕಗಳನ್ನು ನಾಶಪಡಿಸಿತ್ತು. ಪ್ರಮುಖ ಮಿಲಿಟರಿ ಕಮಾಂಡರ್‌ಗಳನ್ನು ಕೊಂದಿತ್ತು. ಈ ಹಿಂದೆಯೂ ಇಸ್ರೇಲ್, ಇರಾನ್ ಮೇಲೆ ದಾಳಿ ನಡೆಸಿ ಪರಮಾಣು ಯೋಜನೆಯ ನೇತೃತ್ವವಹಿಸಿದ್ದ ಪರಮಾಣು ತಜ್ಞರನ್ನು, ವಿಜ್ಞಾನಿಗಳನ್ನು ಹತ್ಯೆ ಮಾಡಿತ್ತು. ಇರಾನ್ ಅಣ್ವಸ್ತ್ರ ಹೊಂದುವುದು ತನ್ನ ಅಸ್ತಿತ್ವಕ್ಕೆ ಮಾರಕ ಎನ್ನುವುದು ಇಸ್ರೇಲ್ ವಾದ. ಅಣ್ವಸ್ತ್ರ ತನ್ನ ಇರುವಿಕೆಗೆ ಅನಿವಾರ್ಯ ಎನ್ನುವುದು ಇರಾನಿನ ವಾದ. ಆರ್ಥಿಕ ನಿರ್ಬಂಧ, ಇಸ್ರೇಲಿನ ದಾಳಿ, ಅಮೆರಿಕದ ಬೆದರಿಕೆ, ತನ್ನದೇ ಆರ್ಥಿಕ ಸಂಕಷ್ಟ, ಎಲ್ಲವನ್ನೂ ಮೀರಿ ಅಣ್ವಸ್ತ್ರ ಹೊಂದುವ ನಿಟ್ಟಿನಲ್ಲಿ ಇರಾನ್ ಮುಂದಡಿ ಇಡುತ್ತಿದೆ.
ಇರಾನಿನ ಆರ್ಥಿಕ ಕುಸಿತಕ್ಕೆ ಮತ್ತು ಅಲ್ಲಿನ ಜನರ ದುಃಸ್ಥಿತಿಗೆ ಖಮೇನಿ ಅವರ ದಮನಕಾರಿ ಆಡಳಿತ ನೀತಿ ಕಾರಣ, ತಾನು ಇರಾನ್ ಜನರನ್ನು ದುರಾಡಳಿತದಿಂದ ರಕ್ಷಿಸುವ ಕೆಲಸ ಮಾಡಿದ್ದೇನೆ ಎಂದು ಅಮೆರಿಕ ಹೇಳಿಕೊಳ್ಳುತ್ತಿದೆ. ಹಾಗಾಗಿಯೇ, ಖಮೇನಿ ಹತ್ಯೆಯನ್ನು ಘೋಷಿಸುವ ಜೊತೆಗೆ, ಆಡಳಿತದ ಬದಲಾವಣೆಗೆ ಇದು ಸಕಾಲ ಎಂದು ಇರಾನ್ ಜನತೆಗೆ ಟ್ರಂಪ್ ಕರೆ ನೀಡಿದ್ದಾರೆ. ಹಾಗಾದರೆ, ಇರಾನ್ ಮೇಲಿನ ದಾಳಿಗೆ ಮತ್ತು ಖಮೇನಿ ಹತ್ಯೆಗೆ ಇದಿಷ್ಟೇ ಕಾರಣವೇ? ಇತಿಹಾಸದ ಪುಟಗಳನ್ನು ತಿರುವಿದರೆ ಇತರ ಆಯಾಮಗಳು ಕಾಣುತ್ತವೆ.
19ನೆಯ ಶತಮಾನದ ಅಂತ್ಯದ ವೇಳೆಗೆ ಬ್ರಿಟಿಷರು ಖುಜೆಸ್ತಾನ್‌ನಲ್ಲಿ ಪೆಟ್ರೋಲಿಯಂ ಕಂಡುಕೊಂಡ ನಂತರ, ಪರ್ಷಿಯಾದಲ್ಲಿ ತೀವ್ರವಾದ ಆಸಕ್ತಿ ಬೆಳೆಸಿಕೊಂಡರು. ಸೋವಿಯತ್ ರಷ್ಯಾ ಕೂಡ ಪಶ್ಚಿಮ ಏಷ್ಯಾದಲ್ಲಿ ಹಿಡಿತ ಕಾಯ್ದುಕೊಂಡಿತು. ಎಷ್ಟರ ಮಟ್ಟಿಗೆ ಎಂದರೆ, ಇರಾನ್‌ನ ಆಡಳಿತದ ಮುಖ್ಯ ನೇಮಕಾತಿಗಳಿಗೆ ಆಂಗ್ಲೊ–ರಷ್ಯನ್ ಅನುಮೋದನೆ ಅನಿವಾರ್ಯವಾಗಿತ್ತು. 1925ರಲ್ಲಿ ಖಜರ್ ರಾಜವಂಶವನ್ನು ಪದಚ್ಯುತಗೊಳಿಸಿ ಆಡಳಿತದ ಚುಕ್ಕಾಣಿ ಹಿಡಿದ ರೆಜಾ ಖಾನ್, ಪಹ್ಲವಿ ರಾಜವಂಶವನ್ನು ಸ್ಥಾಪಿಸಿ ಮೊದಲ ಷಾ ಆದರು. ರೆಜಾ ಷಾ 16 ವರ್ಷಗಳ ಆಳ್ವಿಕೆ ನಡೆಸಿದರು. ರೆಜಾ ಷಾ ಅನೇಕ ಸಾಮಾಜಿಕ–ಆರ್ಥಿಕ ಸುಧಾರಣೆ ತಂದರು. ಅವರ ಬಳಿಕ ಆತನ ಮಗ ಮೊಹಮ್ಮದ್ ರೆಜಾ ಪಹ್ಲವಿ ಇರಾನಿನ ಸಾರಥ್ಯ ವಹಿಸಿಕೊಂಡರು.
ಮೊಹಮ್ಮದ್ ರೆಜಾ ಷಾ ಪಹ್ಲವಿ ‘ಶ್ವೇತ ಕ್ರಾಂತಿ’ ಸುಧಾರಣೆಗಳನ್ನು ಮುಂದುವರಿಸಿದರು. ಆದರೆ, ಆಡಳಿತದ ದಮನಕಾರಿ ನೀತಿ ಕಪ್ಪುಚುಕ್ಕೆಯಾಗಿತ್ತು. ತನ್ನ ಹಿತಾಸಕ್ತಿಗಳಿಗೆ ಪೂರಕವಾಗಿದ್ದ ಕಾರಣ ಷಾ ಬೆಂಬಲಕ್ಕೆ ಅಮೆರಿಕ ನಿಂತಿತು. ಸ್ನೇಹ ಒಪ್ಪಂದಕ್ಕೆ ಸಹಿ ಹಾಕಿತು ಮತ್ತು ಪರಮಾಣು ಸಾಮರ್ಥ್ಯ ವೃದ್ಧಿಸಿಕೊಳ್ಳಲು ಸಹಾಯ ಮಾಡಿತು. ಇರಾನಿಗೆ ಪರಮಾಣು ಅಸ್ತ್ರ ಹೊಂದುವ ಕನಸು ತುಂಬಿದ್ದೇ ಅಮೆರಿಕ. ಇದು ಪಶ್ಚಿಮ ಏಷ್ಯಾದಲ್ಲಿ ಸೋವಿಯತ್ ಪ್ರಭಾವ ಕುಗ್ಗಿಸುವ ಅಮೆರಿಕದ ತಂತ್ರವಾಗಿತ್ತು. 1951ರಲ್ಲಿ ಇರಾನ್ ಪ್ರಧಾನಿ ಮೊಸಡೆಗ್ ತೈಲ ಉದ್ಯಮವನ್ನು ರಾಷ್ಟ್ರೀಕರಣಗೊಳಿಸುವ ಮಹತ್ವದ ಕೆಲಸ ಮಾಡಿದರು. ವಿದೇಶಿ ಶೋಷಣೆ ತಡೆಯುವ ಮತ್ತು ಇರಾನಿನ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಸಾರ್ವಭೌಮತ್ವ ಸಾಧಿಸುವ ಕ್ರಮ ಅದಾಗಿತ್ತು. ಅದರಿಂದ ಬ್ರಿಟನ್ ಮೂಲದ ತೈಲ ಕಂಪನಿಗಳಿಗೆ ಹೊಡೆತ ಬಿತ್ತು. ಬ್ರಿಟನ್ ಮತ್ತು ಅಮೆರಿಕ ಇರಾನ್‌ನಲ್ಲಿ ದಂಗೆಯನ್ನು ಪ್ರಾಯೋಜಿಸಿ, ಪ್ರಧಾನಿ ಮೊಸಡೆಗ್ ಅವರನ್ನು ಪದಚ್ಯುತಗೊಳಿಸಿದವು. ಇದರಿಂದಾಗಿ ಇರಾನ್‌ನಲ್ಲಿ ಅಮೆರಿಕ ಕುರಿತು ಅಪನಂಬಿಕೆ ಮೊಳೆಯಿತು. ಷಾ ಆಡಳಿತ ರಾಷ್ಟ್ರದ ಹಿತಾಸಕ್ತಿಯನ್ನು ಬದಿಗೊತ್ತಿ ಅಮೆರಿಕದ ತಾಳಕ್ಕೆ ಕುಣಿಯುತ್ತಿದೆ ಎಂಬ ಅಭಿಪ್ರಾಯ ಮೂಡಿತು. 1979ರ ಇಸ್ಲಾಮಿಕ್ ಕ್ರಾಂತಿಗೆ ಭೂಮಿಕೆ ಸಿದ್ಧವಾಯಿತು. ಇಸ್ಲಾಮಿಕ್ ಕ್ರಾಂತಿಯಿಂದಾಗಿ ಮೊಹಮ್ಮದ್ ರೆಜಾ ಪಹ್ಲವಿ ದೇಶ ತೊರೆಯಬೇಕಾಯಿತು. ಮತೀಯ ಗುರು ಅಯಾತೊಲ್ಲಾ ರುಹೊಲ್ಲಾ ಖಮೇನಿ ಇರಾನಿನ ಪರಮೋಚ್ಚ ನಾಯಕರಾದರು. ಖಮೇನಿ ಪ್ರಭುತ್ವ ಅಮೆರಿಕವನ್ನು ‘ಮಹಾ ಸೈತಾನ’ ಎಂದು ಕರೆಯಿತು.
1979ರಲ್ಲಿ ಇರಾನಿನ ವಿದ್ಯಾರ್ಥಿಗಳು ಅಮೆರಿಕದ ರಾಯಭಾರ ಕಚೇರಿಯನ್ನು ವಶಪಡಿಸಿಕೊಂಡು ರಾಜತಾಂತ್ರಿಕರನ್ನು 444 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡರು. ಅಲ್ಲಿಂದ ಇರಾನ್ ಮತ್ತು ಅಮೆರಿಕದ ನಡುವೆ ವೈರತ್ವ ಹೆಚ್ಚಾಯಿತು. 1980ರ ದಶಕದ ಇರಾನ್–ಇರಾಕ್ ಯುದ್ಧದ ಸಮಯದಲ್ಲಿ, ಅಮೆರಿಕ ಇರಾಕ್ ಅನ್ನು ಬೆಂಬಲಿಸಿತು. ಇರಾನ್ ಅನ್ನು ಭಯೋತ್ಪಾದನೆಯ ಪ್ರಾಯೋಜಕ ರಾಷ್ಟ್ರ ಎಂದು ಘೋಷಿಸಿತು. ಆರ್ಥಿಕ ದಿಗ್ಬಂಧನ ಹೇರಿತು. ತೈಲ ಸಂಪನ್ಮೂಲದ ರಕ್ಷಣೆಗೆ, ಅಮೆರಿಕ, ಇಸ್ರೇಲ್, ಸೌದಿ, ಜೋರ್ಡಾನ್ ಹಾಗೂ ಯುಎಇ ಜೊತೆಗಿನ ವೈರತ್ವವನ್ನು ನಿಭಾಯಿಸಲು ಅಣ್ವಸ್ತ್ರ ಅಗತ್ಯ ಎಂದು ಪರಮಾಣು ಯೋಜನೆಯನ್ನು ಇರಾನ್ ಮುಂದುವರಿಸಿತು. 2014ರ ಹೊತ್ತಿಗೆ ಇರಾನ್‌ನ ಅಣ್ವಸ್ತ್ರ ಯೋಜನೆ ಕೊನೆಯ ಹಂತ ತಲಪಿತ್ತು. ಆಗ ಇಸ್ರೇಲ್ ಮತ್ತು ಅಮೆರಿಕ ಎಚ್ಚರಗೊಂಡವು. ಇರಾನ್‌ನ ಆರ್ಥಿಕ ದುಃಸ್ಥಿತಿಯನ್ನು ಮುಂದುಮಾಡಿಕೊಂಡು ಇರಾನ್ ಜೊತೆಗೆ ಅಮೆರಿಕ ಮಾತುಕತೆ ನಡೆಸಿತು.
ಒಬಾಮ ಅವರ ಅವಧಿಯಲ್ಲಿ ಪರಮಾಣು ಒಪ್ಪಂದಕ್ಕೆ ಇರಾನ್ ಸಹಿ ಹಾಕಿತು. ಆದರೆ, ಟ್ರಂಪ್ ಅವರ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಇರಾನ್ ಜೊತೆಗಿನ ಒಪ್ಪಂದವನ್ನು ಅಮೆರಿಕ ಅನೂರ್ಜಿತಗೊಳಿಸಿತು. ಅದಕ್ಕೆ ಪ್ರಮುಖ ಕಾರಣ, ಅಮೆರಿಕದಲ್ಲಿ ಪ್ರಭಾವ ಹೊಂದಿರುವ ಇಸ್ರೇಲ್ ಪರ ಲಾಬಿ ಮತ್ತು ಇರಾನ್ ತೆರೆಮರೆಯಲ್ಲಿ ನಡೆಸಿದ್ದ ಅಣ್ವಸ್ತ್ರ ಹೊಂದುವ ಪ್ರಯತ್ನ. ಬೈಡನ್ ಅವರ ಅವಧಿಯಲ್ಲಿ ಮಾತುಕತೆಯ ಮೂಲಕ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸುವಂತೆ ಇರಾನ್ ಮನವೊಲಿಸುವ ಪ್ರಯತ್ನ ಆಯಿತಾದರೂ, ಅದು ಯಶಸ್ಸು ಕಾಣಲಿಲ್ಲ. ಚೀನಾಕ್ಕೆ ಹೆಚ್ಚಿನ ತೈಲ ಪೂರೈಸುತ್ತಾ, ಚೀನಾದ ಜೊತೆಗೆ ಸಂಬಂಧ ಬಲಪಡಿಸಿಕೊಂಡ ಇರಾನ್, ಪರಮಾಣು ಕಾರ್ಯಕ್ರಮದ ರಭಸ ಹೆಚ್ಚಿಸಿತು. ಅಮೆರಿಕದ ಆರ್ಥಿಕ ದಿಗ್ಬಂಧನವನ್ನು ಉಪೇಕ್ಷಿಸಿತು.
ಇರಾನ್ ಅಣ್ವಸ್ತ್ರ ಹೊಂದುವುದನ್ನು ತಡೆಯಲು ಇದ್ದ ಮಾರ್ಗಗಳು ಎರಡು. ಒಂದು, ನೇರವಾಗಿ ದಾಳಿ ನಡೆಸುವುದು. ಇದನ್ನು ಇಸ್ರೇಲ್ ಆಯ್ದುಕೊಂಡಿತು. ಮತ್ತೊಂದು, ಖಮೇನಿ ಆಡಳಿತವನ್ನು ಕೊನೆಗೊಳಿಸುವುದು ಮತ್ತು ಮಾತುಕತೆಯ ಮೇಜಿಗೆ ಇರಾನನ್ನು ಎಳೆಯುವುದು. ಅಮೆರಿಕ ಎರಡನೆಯ ಮಾರ್ಗಕ್ಕೆ ಒತ್ತು ನೀಡಿತು. ಕಳೆದ ಹಲವು ತಿಂಗಳಿನಿಂದ ಇರಾನಿನಲ್ಲಿ ನಡೆದ ನಾಗರಿಕರ ಹರತಾಳಕ್ಕೆ ಅಮೆರಿಕದ ಪ್ರಚೋದನೆ ಇತ್ತು. ಖಮೇನಿ ಆಡಳಿತ ಆ ಪ್ರತಿಭಟನೆಗಳನ್ನು ನಿಗ್ರಹಿಸಿತು. ಅಮೆರಿಕ ಹಿಂಬಾಗಿಲಿನ ಮೂಲಕ ಮಾತುಕತೆಯ ಪ್ರಯತ್ನ ನಡೆಸಿತಾದರೂ, ಖಮೇನಿ ಆಡಳಿತ ಮಾತುಕತೆಯಲ್ಲಿ ತೊಡಗಿಯೂ ಸಮರಕ್ಕೆ ಸಿದ್ಧಗೊಳ್ಳತೊಡಗಿತು ಮತ್ತು ಪರಮಾಣು ಕಾರ್ಯಕ್ರಮವನ್ನು ಮುಂದುವರಿಸಿತು. ಹಾಗಾಗಿ ಖಮೇನಿ ಅವರ ನಿವಾಸ ಅಮೆರಿಕದ ಗುರಿಯಾಯಿತು. ಈಗ ಖಮೇನಿ ಹತ್ಯೆ ನಡೆದಿದೆ. ಮುಂದೇನು?
ಅಮೆರಿಕಕ್ಕೆ ಇರಾನ್‌ನಲ್ಲಿ ತನ್ನ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುವ ಸರ್ಕಾರ ಬೇಕಿದೆ. ಅಂತಹ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ಅಮೆರಿಕ ಕೆಲಸ ಮಾಡುತ್ತದೆ. ಪರಮಾಣು ಕಾರ್ಯಕ್ರಮಕ್ಕೆ ತಡೆಯಾದರೆ ಅಷ್ಟರ ಮಟ್ಟಿಗೆ ಇಸ್ರೇಲ್ ನಿರಾಳ. ಇರಾನ್ ಜನತೆ ತಮಗೆ ಯಾವ ಬಗೆಯ ಆಡಳಿತ ಬೇಕು ಎಂದು ನಿರ್ಧರಿಸಬೇಕಿದೆ. ಅದು ಎಷ್ಟರಮಟ್ಟಿಗೆ ಸಾಧ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕು.
ಒಂದಂತೂ ನಿಜ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಮೇಕ್ ಅಮೆರಿಕ ಗ್ರೇಟ್ ಎಗೈನ್’ ನೀತಿಯ ಪ್ರಮುಖ ಆಶಯ, ಜಾಗತಿಕವಾಗಿ ಅಮೆರಿಕದ ಹಿಡಿತವನ್ನು ಪುನರ್ ಸ್ಥಾಪಿಸುವುದು. ಆ ಆಶಯ ಸಾಧ್ಯವಾಗಬೇಕಾದರೆ, ತೈಲ ಸಂಪನ್ಮೂಲಗಳ ಮೇಲೆ ಅಮೆರಿಕ ತನ್ನ ಹಿಡಿತವನ್ನು ಪುನಃ ಸಾಧಿಸಬೇಕು ಮತ್ತು ಅಮೆರಿಕದ ಡಾಲರ್ ಮೇಲಿನ ಅವಲಂಬನೆ ಜಾಗತಿಕವಾಗಿ ಹೆಚ್ಚಬೇಕು. ಆ ನಿಟ್ಟಿನಲ್ಲಿಯೇ ಈಗ ಅಮೆರಿಕ ಮುಂದಡಿ ಇಡುತ್ತಿದೆ. ಅಮೆರಿಕದ ಲೆಕ್ಕಾಚಾರದಂತೆಯೇ ವೆನೆಜುವೆಲಾ ಬಳಿಕ ಇರಾನ್‌ನಲ್ಲಿ ಈ ಬೆಳವಣಿಗೆಗಳು ನಡೆದಿವೆ.
ತೈಲ ಸಂಪದ್ಭರಿತ ರಾಷ್ಟ್ರಗಳ ಆಡಳಿತವನ್ನು ಬುಡಮೇಲು ಮಾಡುವ, ಅಲ್ಲಿನ ಪರಮೋಚ್ಚ ನಾಯಕರನ್ನು ಕೊಲ್ಲುವ ಅಮೆರಿಕದ ತಂತ್ರ ಬಹಳ ಹಳೆಯದು. ಕುಗ್ಗುತ್ತಿರುವ ಅಮೆರಿಕದ ಪ್ರತಿಷ್ಠೆಯನ್ನು ಎತ್ತಿ ಹಿಡಿಯಲು ಆ ತಂತ್ರವನ್ನೇ ಟ್ರಂಪ್ ಬಳಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.