ADVERTISEMENT

Deepavali 2025: ವಿಭಿನ್ನ ಆಚರಣೆಯ ಮಲೆನಾಡಿನ ದೀಪಾವಳಿಯ ಆರಂಭ ಹೀಗಿರುತ್ತದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಅಕ್ಟೋಬರ್ 2025, 12:12 IST
Last Updated 16 ಅಕ್ಟೋಬರ್ 2025, 12:12 IST
   

ಬೆಳಕಿನ ಹಬ್ಬ ದೀಪಾವಳಿ. ಆ ದಿನ ಎಲ್ಲೆಲ್ಲೂ ಸಡಗರ ಸಂಭ್ರಮ. ಅದರಲ್ಲೂ ಚಿಕ್ಕಮಗಳೂರು,ಶಿವಮೊಗ್ಗ, ಹಾಸನ ಸೇರಿದಂತೆ ಮಲೆನಾಡು ಭಾಗಗಳಲ್ಲಿ ದೀಪಾವಳಿಯ ಮೊದಲ ದಿನವನ್ನು ವಿಭಿನ್ನವಾಗಿ ಆಚರಿಸುವ ಮೂಲಕ ಹಬ್ಬವನ್ನು ಆರಂಭಿಸುತ್ತಾರೆ.

‘ಮೊದಲ ದಿನ ನೀರು ತುಂಬುವುದು ‘

ಎಲ್ಲಾ ಪಾತ್ರೆ, ಬಟ್ಟೆ ತೊಳೆದು ಮನೆಯನ್ನು ಶುಚಿಗೊಳಿಸಿ ಹಂಡೆಗಳಿಗೆ, ಬಿಂದಿಗೆಗೆ ನೀರು ತುಂಬಿ ಪೂಜೆ ಸಲ್ಲಿಸುವುದು. ಜತೆಗೆ ಆ ದಿನವೇ ಗೋವುಗಳಿಗೆ ಸಿಂಗರಗೊಳಿಸಿ ಪೂಜೆ ಸಲ್ಲಿಸುವ ಮೂಲಕ ಹಾಸನದ ಭಾಗಗಳಲ್ಲಿ ದೀಪಾವಳಿಯ ಮೊದಲನೆಯ ದಿನದ ಹಬ್ಬ ಆಚರಿಸುತ್ತಾರೆ.

ADVERTISEMENT

‘ಬೂರೇ ಹಬ್ಬ’

ಶಿವಮೊಗ್ಗ ಭಾಗದಲ್ಲಿ ಬೂರೇ ಹಬ್ಬದ ಮೂಲಕ ದೀಪಾವಳಿ ಹಬ್ಬವನ್ನು ಆರಂಭಿಸುತ್ತಾರೆ. ಮೊದಲ ದಿನದ ಬೂರೇ ಹಬ್ಬಹಬ್ಬದಂದು ಬೋರೆಗೊಚ್ಚು ಅಂದರೆ ಗೊಚ್ಚು ಮಣ್ಣನ್ನು ಮನೆಯ ಅಂಗಳ, ಬಾಗಿಲು, ಉಬ್ಬು ತಗ್ಗಾದ ಕೊಟ್ಟಿಗೆಯ ಭಾಗಕ್ಕೆ ಹಾಕಿ ಸಮತಟ್ಟು ಮಾಡುತ್ತಾರೆ. ನಂತರ ಸಗಣಿಯಿಂದ ಅಂಗಳವನ್ನು ಸಾರಿಸಿ, ಜೇಡಿ ಕೆಮ್ಮಣ್ಣು ಬಳಸಿ ಒರೆಯದು ನಂತರ ರಂಗೋಲಿಯಿಂದ ಸಿಂಗರಿಸಲಾಗುತ್ತದೆ.

ಮುಂಜಾನೆ ಸೂರ್ಯೋದಯಕ್ಕೆ ಮುನ್ನ ಹೆಣ್ಣುಮಕ್ಕಳೆಲ್ಲ ಸೇರಿ ಹೊಸ ಮಣ್ಣಿನ ಮಗೆಗೆ (ಮಡಿಕೆಗೆ) ಬಾವಿಯಿಂದ ನೀರು ತಂದು ತುಂಬುತ್ತಾರೆ. ಕಲ್ಲಿನ ಹರಳು ಹಾಕಿ ಬಲೀಂದ್ರನ ತಂದು ಅಡಿಕೆ ಹಿಂಗಾರ, ಹಸಿ ಅಡಿಕೆ, ವೀಳ್ಯದೆಲೆ ಹೂವು ಬೋರೆ ಕಣ್ಣಿ(ಜಾನುವಾರುಗಳನ್ನ ಕಟ್ಟುವ ಹಗ್ಗ, ಕಣ್ಣಿಮಿಣಿ)ಗಳನ್ನ ಇಟ್ಟು ಪೂಜಿಸಲಾಗುತ್ತದೆ. ಆ ದಿನ ರಾಜ್ಯದ ಮಕ್ಕಳನ್ನು ನೋಡಲು ಬಲಿಚಕ್ರವರ್ತಿ ಬರುತ್ತಾನೆ ಎಂಬ ನಂಬಿಕೆ ಇರುವುದರಿಂದ ಅವನನ್ನು ಆರಾಧಿಸಲಾಗುತ್ತದೆ.

ಅಮಾವಾಸ್ಯೆಯ ದಿನದಂದು ಮತ್ತೆ ಮನೆಯನ್ನೆಲ್ಲ ಚೊಕ್ಕ ಮಾಡಿ, ಅಡಿಕೆ, ತೆಂಗು, ಮಾವು ಇತ್ಯಾದಿ ಮರಗಳಿಗೆ ಜೇಡಿ ಕೆಮ್ಮಣ್ಣಿನಿಂದ ಚಿತ್ತಾರ ಬರೆಯಲಾಗುತ್ತದೆ. ಈ ಪದ್ಧತಿ ಮೂಲಕ ಮೊದಲ ದಿನದ ಹಬ್ಬ ಆಚರಿಸಲಾಗುತ್ತದೆ.

ಮುಂಡುಗ ಪೂಜೆ

‌‌‌‌ಚಿಕ್ಕಮಗಳೂರು ಭಾಗದಲ್ಲಿ ಮುಂಡುಗ (ಕೇದಗೆ) ಪೂಜಿಸುವ ಮೂಲಕ ದೀಪಾವಳಿ ಹಬ್ಬ ಆಚರಣೆಯನ್ನು ಆರಂಭಿಸುತ್ತಾರೆ.

ಮುಂಡುಗ ಪೂಜೆಯ ದಿನದಂದು ಮೊದಲು ಮನೆಯನ್ನು ಶುಚಿಗೊಳಿಸಿ, ನಂತರ ಮನೆಯೊಳಗಿನ ಹಂಡೆ ಅಥವಾ ಬಿಂದಿಗೆ ನೀರು ತುಂಬಿಸಿ, ಚೆಂಡು ಹೂವಿನ ಹಾರ ಹಾಕಿ ಪೂಜೆ ಸಲ್ಲಿಸುತ್ತಾರೆ.

ಕೇದಿಗೆಗಳನ್ನು ನೀರಿನಲ್ಲಿ ಅದ್ದಿ ತೆಗೆದು ಶುಚಿಗೊಳಿಸಿದ ಬಳಿಕ ಪೂಜೆ ಆರಂಭಿಸುತ್ತಾರೆ.

ಒಂದಿಷ್ಟು ಜಾಗದ ಅಂಗಳವನ್ನು ಸಗಣಿಯಿಂದ ಸಾರಿಸಿ ಶುಚಿಗೊಳಿಸಿ ಅದರ ಮೇಲೆ ಮುಂಡುಗಗಳನ್ನು ಇಡುತ್ತಾರೆ. ನಂತರ ಸಾರಿಸಿದ ಅಂಗಳಕ್ಕೆ ಹಾಗೂ ಮುಂಡುಗಕ್ಕೆ ಅರಶಿನ ಕುಂಕುಮ ಇಟ್ಟು, ಕೇದಗೆ ಸುತ್ತಾ ಚೆಂಡು ಹೂ, ಲಕ್ಕಿ ಸೊಪ್ಪು, ಉತ್ರಾಣಿ ಕಡ್ಡಿ ಸೇರಿದಂತೆ ಹತ್ತು ವಿಧದ ಸೊಪ್ಪಗಳಿಂದ ಅಲಂಕರಿಸುತ್ತಾರೆ.

ನಂತರ ಮನೆ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ, ಚೆಂಡು ಹೂ ಹಾಗೂ ಹತ್ತು ವಿಧದ ಸೊಪ್ಪುಗಳಿಂದ ಸಿಂಗರಿಸಿಟ್ಟ ಮುಂಡುಗಗಳಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಪೂಜೆ ಮಾಡಿದ ಮುಂಡುಗಳನ್ನು ಮನೆ ಎದುರು ಮೆಟ್ಟಿಲು ಅಥವಾ ಎರಡು ಬಾಗಿಲ ಸಂಧಿ, ಹಂಡೆ ಬದಿ, ಗ್ರಾಮ ದೇವಸ್ಥಾನದ ಬಾಗಿಲ ಎದುರು, ತೋಟ, ಗದ್ದೆಗಳಿಗೆ ಇಡುತ್ತಾರೆ. ಕೇದಗೆ ಪೂಜಿಸುವುದರಿಂದ ಗೋ ಮಾತೆಗೆ, ಕುಟುಂಬದ ಏಳಿಗೆಗೆ ಹಾಗೂ ಭಿತ್ತಿ, ಬೆಳೆದ ಕೃಷಿ ಕೈ ಹಿಡಿಯುತ್ತದೆ ಎಂಬುವುದು ಮಲೆನಾಡಿಗರ ನಂಬಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.