
ಆಂಧ್ರಪ್ರದೇಶದಲ್ಲಿ ಹತ್ತಾರೂ ಧಾರ್ಮಿಕ ಕ್ಷೇತ್ರಗಳಿವೆ. ಪ್ರಮುಖವಾಗಿ ಶೈವ ದೇವಾಲಯಗಳು, ಶಕ್ತಿ ಪೀಠಗಳು ಹಾಗೂ ವೈಷ್ಣವ ದೇವಾಲಯಗಳು ಸೇರಿದಂತೆ ನೂರಾರು ದೇವಾಲಯಗಳಿವೆ. ಆಂಧ್ರವನ್ನು ಆಳಿದ ಶಾತವಾಹನರಿಂದ ಹಿಡಿದು ಪಲ್ಲವರವರೆಗೆ ಹಲವು ವಿಭಿನ್ನ ವಾಸ್ತುಶಿಲ್ಪ ಶೈಲಿಯ ದೇವಾಸ್ಥನಗಳು ಹಾಗೂ ಧಾರ್ಮಿಕ ಸ್ಥಳಗಳು ನಿರ್ಮಾಣವಾಗಿವೆ.
ಕರ್ನಾಟಕದ ಪಕ್ಕದ ರಾಜ್ಯವಾಗಿರುವ ಆಂಧ್ರಪ್ರದೇಶದ ದೇವಾಲಯಗಳಿಗೆ ಅಸಂಖ್ಯಾತ ಕನ್ನಡಿಗ ಭಕ್ತರಿದ್ದಾರೆ. ಇಲ್ಲಿನ ದ್ರಾವಿಡ ಹಾಗೂ ನಾಗರ ಶೈಲಿಯ ದೇವಾಲಯಗಳು ಎಲ್ಲರ ಗಮನ ಸೆಳೆಯುತ್ತವೆ. ಹಾಗಾದರೆ, ಆಂಧ್ರಪ್ರದೇಶದ ಪ್ರಮುಖ ವಿಷ್ಣು ದೇವಾಲಯಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
ದ್ವಾರಕಾ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ:
ಎಲೂರು ಜಿಲ್ಲೆಯ ದ್ವಾರಕ ತಿರುಮಲ ದೇವಾಲಯ ವಿಷ್ಟುವಿನ ದೇವಾಲಯವಾಗಿದೆ. ಚಿನ್ನದ ತಿರುಪತಿ, ಮಿನಿ ತಿರುಪತಿ ಎಂತಲೂ ಕರೆಯಲಾಗುತ್ತದೆ. ಇಲ್ಲಿ ವೆಂಕಟೇಶ್ವರನ ಎರಡು ವಿಗ್ರಹಗಳಿರುವುದು ವಿಶೇಷವಾಗಿದೆ. ಈ ದೇವಾಲಯದ ರಚನೆ ದ್ರಾವಿಡ ಶೈಲಿಯದ್ದಾಗಿದೆ.
ಕೃಷ್ಣ ಹಾಗೂ ಗೋದಾವರಿ ನದಿಗಳ ನಡುವಿನ ಬೆಟ್ಟದ ಮೇಲೆ ಈ ದೇವಾಲಯವಿದೆ. ದಂತಕತೆಯ ಪ್ರಕಾರ ಒಂದು ವಿಷ್ಟು ವಿಗ್ರಹ ಪಾತಾಳದಲ್ಲಿದೆ. ಅದನ್ನು ಬಲಿಚಕ್ರವರ್ತಿ ಪೂಜಿಸುತ್ತಾನೆ ಎಂಬ ನಂಬಿಕೆ ಇದೆ. ಮತ್ತೊಂದು ವಿಷ್ಟುವಿಗ್ರಹವನ್ನು ರಾಮಾನುಜಾಚಾರ್ಯರು 12ನೇ ಶತಮಾನದಲ್ಲಿ ಪ್ರತಿಷ್ಟಾಪನೆ ಮಾಡಿದರು ಎಂದು ಹೇಳಲಾಗುತ್ತದೆ.
ಅಹೋಬಿಲಂ ದೇವಾಲಯ:
ಕರ್ನೂಲ್ ಜಿಲ್ಲೆಯಲ್ಲಿರುವ ಅಹೋಬಿಲಂ ದೇವಾಲಯವಿದೆ. ಪುರಾಣ ಕಥೆಯ ಪ್ರಕಾರ ವಿಷ್ಣು ನರಸಿಂಹ ಅವತಾರದಲ್ಲಿ ಹಿರಣ್ಯ ಕಶಿಪುವನ್ನು ಕೊಂದ ಸ್ಥಳವಾಗಿದೆ ಎಂದು ನಂಬಲಾಗಿದೆ. ಇಲ್ಲಿ ಅಹೋಬಿಲಂ ಹಾಗೂ ಕೆಳಗಿನ ಅಹೋಬಿಲ ಎಂಬ ಎರಡು ದೇವಾಲಯಗಳಿವೆ.
ಕೆಳಗಿನ ಅಹೋಬಿಲಂನಲ್ಲಿ ಲಕ್ಷ್ಮೀನರಸಿಂಹನ ಶಾಂತ ಮೂರ್ತಿ ಇದೆ. ಇಲ್ಲಿಂದ 8 ಕಿ.ಮೀ ದೂರದ ಎತ್ತರದ ಬೆಟ್ಟದ ಮೇಲೆ ನರಸಿಂಹನ ಉಗ್ರ ಸ್ವರೂಪದ ದೇವಾಲಯವಿದೆ. ನರಸಿಂಹನ 9 ರೂಪಗಳ ಮೂರ್ತಿಗಳೂ ಇಲ್ಲಿವೆ.
ಶ್ರೀ ಜಗನ್‌ಮೋಹಿನಿ ಕೇಶವ ಸ್ವಾಮಿ ದೇವಸ್ಥಾನ:
ಶ್ರೀ ಜಗನ್‌ಮೋಹಿನಿ ಕೇಶವ ಸ್ವಾಮಿ ದೇವಾಲಯ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿದೆ. ಪ್ರಸಿದ್ದ ವಿಷ್ಣು ದೇವಾಲಯದಲ್ಲಿ ಒಂದಾಗಿರುವ ಈ ದೇವಾಲಯ ಏಕಶಿಲಾ ರಚನೆಯಾಗಿದೆ. ಉದ್ಯೋಗದಲ್ಲಿರುವವರು ಬಯಸಿದ ಸ್ಥಳಕ್ಕೆ ವರ್ಗಾವಣೆಯಾಗಲು ಈ ದೇವಾಸ್ಥಾನಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ.
ರಾಜಾ ವಿಕ್ರಮನು ಈ ದೇವಾಸ್ಥಾನವನ್ನು 11ನೇ ಶತಮಾನದಲ್ಲಿ ನಿರ್ಮಿಸಿದನು. ವಿಗ್ರಹದ ಮುಂಭಾಗದಲ್ಲಿ ಮಹಾವಿಷ್ಣುವಿನ ರೂಪ ವಿದ್ದರೆ, ವಿಗ್ರಹದ ಹಿಂಭಾಗ ಮೋಹಕ ಸ್ವರೂಪದಲ್ಲಿರುವ ಜಗನ್ಮೋಹಿನಿ ರೂಪವನ್ನು ಹೊಂದಿದೆ. ಇಲ್ಲಿ ವಿಷ್ಟುವಿನ ಸ್ತ್ರೀ ರೂಪವನ್ನು ಪೂಜಿಸಲಾಗುತ್ತದೆ.
ವರಾಹ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ:
ಆಂಧ್ರಪ್ರದೇಶದ ವಿಶಾಖಪಟ್ಟಣಂದ ಸಿಂಹಾಚಲಂ ಬೆಟ್ಟದ ಮೇಲಿರುವ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವೂ ಸೇರಿದೆ. ಇಲ್ಲಿ ವಿಷ್ಟುವಿನ ವರಾಹ ರೂಪದ ವಿಗ್ರಹವಿರುವುದು ಈ ದೇವಾಲಯದ ವಿಶೇಷವಾಗಿದೆ. ವಿಗ್ರಹಕ್ಕೆ ಶ್ರೀಗಂಧದ ಲೇಪನ ಮಾಡಲಾಗುತ್ತದೆ.
ಆಂಧ್ರಪ್ರದೇಶದ ಎರಡನೇ ಅತಿ ದೊಡ್ಡ ದೇವಾಲಯ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಸಿಂಹದ ತಲೆ ಮತ್ತು ಮಾನವ ದೇಹದೊಂದಿಗೆ ವಿಷ್ಣುವಿನ ವಿಗ್ರಹವಿದೆ. ಚೋಳ ರಾಜ ಕುಲೋತ್ತುಂಗನ ಕಾಲಕ್ಕೆ ಸೇರಿದ ದೇವಾಲಯವಾಗಿದ್ದು, ಕಳಿಂಗ, ಚಾಲುಕ್ಯ, ಕಾಕತೀಯ ಮತ್ತು ಚೋಳ ಶೈಲಿಗಳ ವಾಸ್ತು ಶಿಲ್ಪಗಳ ಮಿಶ್ರಣವಾಗಿದೆ.
ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ:
ಭೂಲೋಕದ ವೈಕುಂಠ ಎಂದೇ ಕರೆಯುವ ತಿರುಪತಿ ತಿಮ್ಮಪ್ಪನಿಗೆ ಲಕ್ಷಾಂತರ ಭಕ್ತರಿದ್ದಾರೆ. ‘ಏಳು ಬೆಟ್ಟಗಳ ದೇವಾಲಯ‘, ‘ಕಲಿಯುಗ ವೈಕುಂಠ’ವಾಗಿರುವ ಈ ದೇವಾಲಯ ವಿಷ್ಟುವಿನ ಅವತಾರವಾಗಿರುವ ವೆಂಕಟೇಶ್ವರನ ದೇವಾಲಯವಾಗಿದೆ.
ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿರುವ ಈ ದೇವಾಲಯಕ್ಕೆ ಹಣಕಾಸಿನ ತೊಂದರೆ, ದಾಂಪತ್ಯದಲ್ಲಿ ಕಲಹ ಹಾಗೂ ವಿವಾಹ ದೋಷವಿರುವವರು ವೆಂಕಟೇಶ್ವರನ ಸನ್ನಿದಿಗೆ ಭೇಟಿ ನೀಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.