ADVERTISEMENT

ಹೊಸಕೋಟೆ ಸರಣಿ ಅಪಘಾತ: 150 ಕಿ.ಮೀ ವೇಗದಲ್ಲಿದ್ದ ಕಾರು

ಏರ್‌ ಬ್ಯಾಗ್‌ ತೆರೆದುಕೊಳ್ಳದ ಕಾರಣ ಸಾವು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 0:30 IST
Last Updated 15 ಫೆಬ್ರುವರಿ 2026, 0:30 IST
ಹೊಸಕೋಟೆ ತಾಲ್ಲೂಕಿನ ಎಂ.ಸತ್ಯವಾರ ಬಳಿ ಸಂಭವಿಸಿದ ಭೀಕರ ಸರಣಿ ಅಪಘಾತ ಸ್ಥಳದಲ್ಲಿ ಪೊಲೀಸರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಶನಿವಾರ ಜಂಟಿ ಸಮೀಕ್ಷೆ ನಡೆಸಿದರು
ಹೊಸಕೋಟೆ ತಾಲ್ಲೂಕಿನ ಎಂ.ಸತ್ಯವಾರ ಬಳಿ ಸಂಭವಿಸಿದ ಭೀಕರ ಸರಣಿ ಅಪಘಾತ ಸ್ಥಳದಲ್ಲಿ ಪೊಲೀಸರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಶನಿವಾರ ಜಂಟಿ ಸಮೀಕ್ಷೆ ನಡೆಸಿದರು   

ಹೊಸಕೋಟೆ: ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ ತಾಲ್ಲೂಕಿನ ಎಂ.ಸತ್ಯವಾರ ಬಳಿ ಆರು ವಿದ್ಯಾರ್ಥಿಗಳು ಸೇರಿದಂತೆ ಏಳು ಜನರನ್ನು ಬಲಿ ಪಡೆದ ಭೀಕರ ಅಪಘಾತಕ್ಕೆ ಅತಿಯಾದ ವೇಗವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ. 

ಅಪಘಾತಕ್ಕೆ ಕಾರಣ ಪತ್ತೆ ಹಚ್ಚಲು ಪೊಲೀಸರ ನೇತೃತ್ವದಲ್ಲಿ ಹೆದ್ದಾರಿ, ಆರ್‌ಟಿಓ ಅಧಿಕಾರಿಗಳು ಹಾಗೂ ಮಹೇಂದ್ರ ಕಂಪನಿಯ ಸಿಬ್ಬಂದಿ ಶನಿವಾರ ಜಂಟಿ ಸಮೀಕ್ಷೆ ಹಾಗೂ ಸ್ಥಳ ಮಹಜರು ನಡೆಸಿದರು.

ಕೊತ್ತನೂರು ನಿವಾಸಿ, ಸಿಎಂಆರ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಯಾನ್ ಅಲಿ (17) ಕಾರು ಓಡಿಸುತ್ತಿದ್ದ ಎಂಬುದು ಗೊತ್ತಾಗಿದೆ. 

ADVERTISEMENT

ಎಕ್ಸ್‌ಯುವಿ 700 ಕಾರು ಗಂಟೆಗೆ 140 ರಿಂದ 150 ಕಿ.ಮೀ ವೇಗದಲ್ಲಿ ಹೊಸಕೋಟೆ ಭಾಗದಿಂದ ದೇವನಹಳ್ಳಿ ಕಡೆ ಬರುವಾಗ ವಾಹನ ಅಪಘಾತ ಸಂಭವಿಸಿದೆ. ಆಟೊ ಡ್ರೈವ್‌ನಲ್ಲಿ ಕಾರು ಓಡುತ್ತಿತ್ತು. ಅತಿವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಕ್ಯಾಂಟರ್‌ಗೂ ಡಿಕ್ಕಿ ಹೊಡೆದಿದೆ. ಪರಿಣಾಮ ಆರು ವಿದ್ಯಾರ್ಥಿಗಳ ತಲೆ ಚಿಪ್ಪು ಮತ್ತು ಮುಖ ಛಿದ್ರಗೊಂಡು ಸ್ಥಳದಲ್ಲಿ ಮೃತಪಟ್ಟರು ಎಂದು ಜಂಟಿ ಸಮೀಕ್ಷೆಯ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಏಳು ಜರ ಮೃತ ದೇಹಗಳನ್ನು ಎಂವಿಜೆ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರಿಸಲಾಗಿದೆ.

ಮುಂಜಾನೆ ಹೊಸಕೋಟೆ ಬಿರಿಯಾನಿ ತಿನ್ನಲು ಬಂದು ಸಾಕಷ್ಟು ಅಪಘತಗಳು ಸಂಭವಿಸುತ್ತಿದ್ದ ಕಾರಣ ಹೊಸಕೋಟೆಯಲ್ಲಿ ಬೆಳಗ್ಗೆ 6 ಗಂಟೆ ನಂತರವೇ ಬಿರಿಯಾನಿ ಹೊಟೇಲ್ ತೆಗೆಯಲು ಆರು ತಿಂಗಳ ಹಿಂದೆಯೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ
ಮಲ್ಲೇಶ್ ಡಿವೈಎಸ್ಪಿ ಹೊಸಕೋಟೆ

ಅಧಿಕಾರಿಗಳಿಗೆ ತರಾಟೆ

ಸ್ಥಳ ಮಹಜರು ವೇಳೆ ಡಿವೈಎಸ್ಪಿ ಮಲ್ಲೇಶ್ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಚೆನ್ನೈ ಎಕ್ಸ್‌ಪ್ರೆಸ್‌ ವೇ ನಾವು ನೋಡಿದ ಅತಿ ಕೆಟ್ಟ ಹೆದ್ದಾರಿಗಳಲ್ಲಿ ಒಂದು. ಹೊಸಕೋಟೆ ನಗರದಲ್ಲಿ ಹಾದು ಹೋಗಿರುವ ಹೆದ್ದಾರಿಗಳನ್ನು ನೋಡಿದರೆ ಎಷ್ಟು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಾರೆ ಎಂಬುದು ತಿಳಿಯುತ್ತದೆ. ಕಿರಿದಾದ ರಸ್ತೆ ಸಮರ್ಪಕ ಸರ್ವಿಸ್ ರಸ್ತೆ  ಮತ್ತು ಎಲ್ಲೂ ಸೂಕ್ತ ನಾಮಫಲಕ ಇಲ್ಲದಿರುವುದು ಅಪಘಾತಕ್ಕೆ ಕಾರಣ. ಇಂತಹ ರಸ್ತೆಯಲ್ಲಿ ಪೊಲೀಸರು ಹೇಗೆ ವಾಹನ ದಟ್ಟಣೆ ಅಪಘಾತ ನಿಯಂತ್ರಣ ಮಾಡಬೇಕು’ ಎಂದು ತರಾಟೆಗೆ ತೆಗೆದುಕೊಂಡರು.

ಪೋಷಕರ ವಿರುದ್ಧ ಕ್ರಮ

ಇನ್ನೂ 18 ವರ್ಷ ಪೂರ್ಣಗೊಳ್ಳದ ಮೃತ ಅಯಾನ್ ಅಲಿ (17ವರ್ಷ)ಕಾರು ಚಲಾಯಿಸುತಿದ್ದದ್ದು ದೃಢವಾಗಿದೆ. ಅದನ್ನು ಮತ್ತೊಮ್ಮೆ ಪರಿಶೀಲಿಸಿ ಅದು ಖಚಿತ ಆದರೆ ಅವರ ಪೋಷಕರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ ಪಿ ಚಂದ್ರಕಾಂತ್ ತಿಳಿಸಿದ್ದಾರೆ.

2 ವರ್ಷದಲ್ಲಿ 23 ಬಲಿ

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೇಸ್‌ ವೇ ಸೂಲಿಬೆಲೆ ಠಾಣಾ ವ್ಯಾಪ್ತಿಯ ದಾಬಸಪೇಟೆ– ಹೊಸಕೋಟೆ ಮಾರ್ಗದಲ್ಲಿ 2024ರಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿಎಂಟು ಮಂದಿ 2025ರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.  2026ರಲ್ಲಿ ಫೆಬ್ರುವರಿ 13ರ ವೇಳೆ ಎಂಟು ಮಂದಿ ಸೇರಿ ಎರಡು ವರ್ಷ ಎರಡು ಒಂದೂವರೆ ತಿಂಗಳಲ್ಲಿ 23 ಮಂದಿ ಅಪಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.