
ಬೆಂಗಳೂರು: ಪ್ರಯಾಣಿಕರಿಗೆ ವಿಮಾನಯಾನದ ಅನುಭವವು ಬಸ್‌ನಲ್ಲಿಯೂ ಸಿಗಬೇಕು ಎಂಬ ಕಾರಣಕ್ಕೆ ಶೌಚಾಲಯದ ವ್ಯವಸ್ಥೆ, ಪ್ರಯಾಣದ ಮಧ್ಯೆ ತಿಂಡಿ ಪೊಟ್ಟಣ ನೀಡುವ ವ್ಯವಸ್ಥೆ ಇನ್ನಿತರ ಆಧುನಿಕ ಸೌಲಭ್ಯಗಳನ್ನು ಒದಗಿಸಿರುವ ಕೆಎಸ್‌ಆರ್‌ಟಿಸಿ ಫ್ಲೈಬಸ್ ಈಗ ವಿಶೇಷ ಆಕರ್ಷಣೆಗೆ ಒಳಗಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸಂಚರಿಸುವವರು ಫ್ಲೈಬಸ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ.
ಕೆಐಎ–ಮೈಸೂರು ನಡುವೆ ಫ್ಲೈಬಸ್‌ಗಳು 2013ರಲ್ಲಿಯೇ ಆರಂಭವಾಗಿದ್ದವು. ಆ ನಂತರ ಮಡಿಕೇರಿ ಮತ್ತು ಕುಂದಾಪುರಕ್ಕೆ ಫ್ಲೈಬಸ್ ಶುರು ಮಾಡಲಾಗಿತ್ತು. ಅದರಲ್ಲಿ ಕುರುಕಲು ತಿಂಡಿ ನೀಡುವ ವ್ಯವಸ್ಥೆ ಇರಲಿಲ್ಲ. ತಿಂಗಳ ಹಿಂದೆ ದಾವಣಗೆರೆಗೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫ್ಳೈಬಸ್ ಶುರುವಾದಾಗ ನಂದಿನಿ ಬ್ರ್ಯಾಂಡ್‌ನ ತಿಂಡಿಯ ಪೊಟ್ಟಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರಯಾಣಿಕರು ಉಪಾಹಾರ ಸೇವಿಸಲು ದಾರಿ ಮಧ್ಯೆ ಬಸ್‌ಗಳನ್ನು ನಿಲ್ಲಿಸಬೇಕಾದ ಪ್ರಮೇಯ ತಪ್ಪಿದೆ.
ಆಧುನಿಕ ಬಸ್: ಫ್ಲೈಬಸ್ ಹವಾನಿಯಂತ್ರಿತವಾಗಿದ್ದು, ಉತ್ತಮ ಗುಣಮಟ್ಟದ ಮಲ್ಟಿ ಆ್ಯಕ್ಸಲ್‌ಗಳನ್ನು ಹೊಂದಿದೆ. ಇದರಿಂದ ರಸ್ತೆಯಲ್ಲಿ ಹೊಂಡ–ಗುಂಡಿಗಳಿದ್ದರೂ ಪ್ರಯಾಣಿಕರಿಗೆ ಅದರ ಅನುಭವ ಆಗದಷ್ಟು ಐಷಾರಾಮಿಯಾಗಿದೆ. ರಿಕ್ಲೈನಿಂಗ್ ಆಸನಗಳು, ಹೆಚ್ಚಿನ ಸ್ಥಳಾವಕಾಶ ಲೆಗ್‌ರೂಮ್, ಹೆಡ್‌ರೆಸ್ಟ್, ಪ್ರತಿಯೊಂದು ಆಸನದಲ್ಲಿಯೂ ಚಾರ್ಜಿಂಗ್ ಪಾಯಿಂಟ್‌ಗಳಿವೆ. ಉಚಿತವಾಗಿ ದಿನ ಪತ್ರಿಕೆಗಳನ್ನು ನೀಡಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಕೇಂದ್ರ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜಮೂರ್ತಿ ತಿಳಿಸಿದರು.
ಹ್ಯಾಟ್ ರ‍್ಯಾಕ್, ವಿದ್ಯುತ್ ದೀಪ, ಲಗೇಜು ಇರಿಸಲು ವಿಶಾಲ ಸ್ಥಳ, ಕಾರ್ಪೆಟಿಂಗ್, ಆರಾಮದಾಯಕ ಲೆದರ್ ಆಸನಗಳಿವೆ ಎಂದು ಘಟಕಾಧಿಕಾರಿ ಸುರೇಶ್ ಮಾಹಿತಿ ನೀಡಿದರು.
ಎಲ್ಲೆಲ್ಲಿ ಸಂಚಾರ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಒಂದು ಮತ್ತು ಎರಡರಿಂದ ಫ್ಲೈಬಸ್‌ಗಳು ಹೊರಡುತ್ತವೆ. ಮೈಸೂರು, ಮಡಿಕೇರಿ, ದಾವಣಗೆರೆಗೆ ಸಂಚರಿಸುತ್ತವೆ. ಕುಂದಾಪುರ ದೂರದ ಊರು ಆಗಿರುವುದರಿಂದ ಇಲ್ಲಿಗೆ ಸಂಚರಿಸುತ್ತಿದ್ದ ಫ್ಲೈಬಸ್‌ಗಳನ್ನು ಬದಲಾಯಿಸಲಾಗಿದೆ. ಐಷಾರಾಮಿ ಸ್ಲೀಪರ್ ಅಂಬಾರಿ ಉತ್ಸವ್
ಬಸ್‌ಗಳು ಸಂಚರಿಸುತ್ತಿವೆ. 10.30 ತಾಸು ಬೇಕಿರುವುದರಿಂದ ಕುಳಿತುಕೊಂಡು ಹೋಗುವ ಬದಲು ಮಲಗಿಕೊಂಡು ಹೋಗುವ ಬಸ್ ಒಳ್ಳೆಯದು ಎಂಬ ಕಾರಣಕ್ಕೆ ಈ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಬಸ್‌ನಿಂದ ತ್ವರಿತವಾಗಿ ಹೊರಬರಲು ಅನುಕೂಲವಾಗುವಂತೆ ಎರಡು ತುರ್ತು ಬಾಗಿಲುಗಳನ್ನು ಇಡಲಾಗಿದೆ. ಗಾಜುಗಳನ್ನು ಒಡೆದು ಬರಲು ಸುತ್ತಿಗೆ (ಹ್ಯಾಮರ್) ಇದೆ. ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡರೆ ಕೂಡಲೇ ಅಲ್ಲೇ ನಂದಿಸುವ ಸಂವೇದನಾ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದರು.
ಕೆಮಿಕಲ್ ಟಾಯ್ಲೆಟ್: ಫ್ಲೈಬಸ್‌ನಲ್ಲಿ ಕೆಮಿಕಲ್ ಟಾಯ್ಲೆಟ್ ಇದೆ. ಇದು ಮೂತ್ರ ವಿಸರ್ಜನೆಗೆ ಮಾತ್ರ ಬಳಸುವ ಶೌಚಾಲಯವಾಗಿದೆ. ನೀರು ಬಳಸದೇ ರಾಸಾಯನಿಕ ಬಳಸಿ ಸ್ವಚ್ಛಗೊಳಿಸಲಾಗುತ್ತದೆ. ಶೌಚಾಲಯ ಇರುವುದರಿಂದ ಬಸ್‌ಗಳನ್ನು ದಾರಿ ಮಧ್ಯೆ ನಿಲ್ಲಿಸುವುದು ತಪ್ಪಿದೆ ಎಂದು ವಿವರಿಸಿದರು.
ತಿಂಡಿಯ ಮಹತ್ವ ಗೊತ್ತಾಯಿತು
ವಾರಕ್ಕೆ ಒಂದು ಬಾರಿಯಾದರೂ ವಿಮಾನದಲ್ಲಿ ಹೋಗುತ್ತಿರುತ್ತೇನೆ. ಈ ವಾರವೂ ಮುಂಬೈ ಮತ್ತು ಕೊಲ್ಲಾಪುರಕ್ಕೆ ಭೇಟಿ ಇದೆ. ಫ್ಲೈಬಸ್‌ನಲ್ಲಿ ನೀಡುತ್ತಿರುವ ತಿಂಡಿಯ ಮಹತ್ವ ನನಗೆ ಅಷ್ಟಾಗಿ ಗೊತ್ತಾಗಿರಲಿಲ್ಲ. ವಾರದ ಹಿಂದೆ ಜೈಪುರದಿಂದ ನಾವು ಕುಟುಂಬ ಸಹಿತ ಬರುತ್ತಿದ್ದೆವು. ವಿಮಾನ ಹಾರಾಟದ ಸಮಸ್ಯೆ ಉಂಟಾಗಿದ್ದರಿಂದ ಬರುವುದು ತಡವಾಯಿತು. ವಿಮಾನದಿಂದ ಇಳಿದ ಕೂಡಲೇ ತರಾತುರಿಯಲ್ಲಿ ಬಸ್ ಹತ್ತಿದೆವು. ಊಟ ಕೂಡ ಮಾಡಿರಲಿಲ್ಲ. ಬಸ್‌ನಲ್ಲಿ ನೀರು, ನಂದಿನಿಯ ಕೋಡುಬಳೆ, ಬಿಸ್ಕೆಟ್, ಕೇಕ್ ಇನ್ನಿತರ ತಿಂಡಿಗಳನ್ನು ನೀಡಿದರು. ಇದರಿಂದ ತಕ್ಷಣದ ಹಸಿವು ನೀಗಿತು. ಮೈಸೂರುವರೆಗೆ ಆರಾಮ ದಾಯಕವಾಗಿ ಹೋದೆವು. ಬಸ್‌ನಲ್ಲಿ ನೀಡುವ ಲಘು ಉಪಾಹಾರದ ಮಹತ್ವ ಆಗ ಗೊತ್ತಾಯಿತು.
ಡಾ. ಟಿ.ಎಸ್. ಸತ್ಯನಾರಾಯಣ ರಾವ್, ದಂತವೈದ್ಯ, ಮೈಸೂರು
ತ್ವರಿತ ಬಸ್
ವಿಮಾನಯಾನಿಗಳು ಬಸ್‌ಗಳಲ್ಲಿ ಸಂಚರಿಸಿದಾಗ ಅವರಿಗೆ ವಿಮಾನದಲ್ಲಿ ಸಂಚರಿಸಿದ ಭಾವನೆ ಕಳೆದುಹೋಗುತ್ತದೆ. ಆದರೆ, ಫ್ಲೈಬಸ್‌ಗಳಲ್ಲಿ ವಿಮಾನಯಾನದ ಅನುಭವ ಪಡೆಯಬಹುದು. ಅಲ್ಲದೇ ತಡೆರಹಿತ ಬಸ್‌ಗಳಾಗಿರುವು ದರಿಂದ ವೇಗವಾಗಿ ಅವರು ತಲುಪಬೇಕಾದ ನಿಗದಿತ ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತದೆ. ಬೇರೆಡೆಯಿಂದ ವಿಮಾನ ನಿಲ್ದಾಣಕ್ಕೆ ಬರುವವರಿಗೂ ಸಕಾಲದಲ್ಲಿ ಬರಲು ಫ್ಲೈಬಸ್‌ಗಳು ಸೂಕ್ತವಾಗಿವೆ.
ಅಕ್ರಂ ಪಾಷ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ
ಫ್ಲೈಬಸ್ ಸಾರಿಗೆಗಳ ವಿವರ
9; ಮೈಸೂರಿಗೆ ಸಂಚರಿಸುವ ಬಸ್‌ಗಳು
2; ಮಡಿಕೇರಿಗೆ
2;ದಾವಣಗೆರೆಗೆ
2; ಕುಂದಾಪುರಕ್ಕೆ (ಅಂಬಾರಿ ಉತ್ಸವ)
44; ಪ್ರತಿದಿನ ಟ್ರಿಪ್
10,240; ದಿನಕ್ಕೆ ಸಂಚರಿಸುವ ಕಿ.ಮೀ.
₹90; ಪ್ರತಿ ಕಿ.ಮೀ. ಆದಾಯ
27,267; ನ.15ರಿಂದ ಡಿ.7ರವರೆಗೆ ವಿತರಿಸಿದ ತಿಂಡಿ ಪೊಟ್ಟಣಗಳು
1,180; ದಿನಕ್ಕೆ ಸರಾಸರಿ ಪ್ರಯಾಣಿಕರ ಸಂಖ್ಯೆ
ಕೆಐಎಯಿಂದ ಹೊರಡುವ ಬಸ್‌ಗಳ ಅಂಕಿಅಂಶ
ಎಲ್ಲಿಗೆ;ಕಿ.ಮೀ.;ಸಂಚಾರದ ಅವಧಿ;ದರ
ಮೈಸೂರು;175;3.15 ಗಂಟೆ;₹960
ದಾವಣಗೆರೆ;270 ಕಿ.ಮೀ.;5 ಗಂಟೆ;₹1250
ಮಡಿಕೇರಿ;290 ಕಿ.ಮೀ.;6.15 ಗಂಟೆ;₹1267
ಕುಂದಾಪುರ;430 ಕಿ.ಮೀ.;10.30 ಗಂಟೆ; ₹2297
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.