
ಜಕ್ಕೂರು ವೈಮಾನಿಕ ತರಬೇತಿ ಶಾಲೆ
(ಸಂಗ್ರಹ ಚಿತ್ರ)
ತರಬೇತಿ ಶಾಲೆಗೆ ಬಳಸಲು ಮಹಾರಾಜರ ಷರತ್ತು | ಲಾಬಿಗೆ ಮಣಿದು ವಾಯುನೆಲೆಯನ್ನೇ ಮುಚ್ಚುವ ಹುನ್ನಾರ | ಮೂಲಸೌಕರ್ಯ ಕಲ್ಪಿಸಿ, ಮಾದರಿ ಶಾಲೆಯನ್ನಾಗಿಸಲು ಆಗ್ರಹ
ಬೆಂಗಳೂರು: ವಿಮಾನ ಹಾರಾಟದ ತರಬೇತಿ ಪಡೆಯುವ ಉತ್ಸಾಹ ಸಾವಿರಾರು ಯುವಕರಲ್ಲಿ ಇದೆ. ಆದರೆ, ಇದನ್ನು ಪರಿಗಣಿಸಿ ಸೌಲಭ್ಯ ಕಲ್ಪಿಸಲು ಮುಂದಾಗದ ಸರ್ಕಾರ, ಜಕ್ಕೂರಿನಲ್ಲಿ ಇರುವ ವೈಮಾನಿಕ ತರಬೇತಿ ಶಾಲೆಯನ್ನೇ ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿದೆ.
‘ವೈಮಾನಿಕ ತರಬೇತಿ ಶಾಲೆ ಮಾತ್ರ ಆರಂಭಿಸಬೇಕು’ ಎಂಬ ಷರತ್ತಿನೊಂದಿಗೆ ಮೈಸೂರು ಮಹಾರಾಜರು, ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದ ಈ ಜಾಗವನ್ನು ಬೇರೆ ಉದ್ದೇಶಕ್ಕೆ ನೀಡುವ ಪ್ರಯತ್ನ ನಡೆದಿದೆ. ರಿಯಲ್ ಎಸ್ಟೇಟ್ ಲಾಬಿಗೆ ಮಣಿದು, ತರಬೇತಿ ಶಾಲೆಯನ್ನು ಮೈಸೂರಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಮಹಾರಾಜರ ಆಶಯಕ್ಕೆ ಧಕ್ಕೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಾಗರಿಕ ವಿಮಾನಯಾನದ ಪ್ರಧಾನ ನಿರ್ದೇಶಕರಿಗೆ 2025ರ ನವೆಂಬರ್ 29ರಂದು ಪತ್ರ ಬರೆದು, ಜಕ್ಕೂರಿನಲ್ಲಿರುವ ವೈಮಾನಿಕ ತರಬೇತಿ ಶಾಲೆಯನ್ನು ಮೈಸೂರಿಗೆ ಸ್ಥಳಾಂತರಿಸಲು ಅನುಮತಿ ಕೋರಲಾಗಿದೆ.
1948ರಲ್ಲಿ ಜಕ್ಕೂರಿನ 218 ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡ ಅಂದಿನ ಮೈಸೂರು ಮಹಾರಾಜರು, ಅಲ್ಲಿ ಏರೊಡ್ರಮ್ ನಿರ್ಮಿಸಿದ್ದರು. 1948ರ ಡಿಸೆಂಬರ್‌ನಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಈ ವೈಮಾನಿಕ ತಾಣವನ್ನು ಉದ್ಘಾಟಿಸಿದ್ದರು. ಬಳಿಕ ವೈಮಾನಿಕ ತರಬೇತಿ ಶಾಲೆ ಆರಂಭಿಸಬೇಕು ಎಂಬ ಷರತ್ತಿನೊಂದಿಗೆ ಈ ಪ್ರದೇಶವನ್ನು ಮೈಸೂರು ಮಹಾರಾಜರು ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದರು.
1949ರ ಮಾರ್ಚ್ 26ರಂದು ಸರ್ಕಾರಿ ವೈಮಾನಿಕ ತರಬೇತಿ ಶಾಲೆ (ಜಿಎಫ್‌ಟಿಎಸ್) ಆರಂಭವಾಗಿದ್ದು. ಇಲ್ಲಿ ತರಬೇತಿ ಪಡೆದ ನೂರಾರು ವಿದ್ಯಾರ್ಥಿಗಳು ಪೈಲಟ್‌ಗಳಾಗಿದ್ದಾರೆ. 1997ರ ನಂತರ ಇದರ ನಿರ್ವಹಣೆ, ಎಂಜಿನಿಯರ್‌ಗಳು, ಬೋಧಕರು, ವಿಮಾನಗಳು, ಇಂಧನ ಸೇರಿದಂತೆ ಒಂದೊಂದೇ ಸಮಸ್ಯೆಗಳು ಉದ್ಭವಿಸಿದವು. ಅಂದಿನಿಂದಲೂ ಇವುಗಳನ್ನು ಬಗೆಹರಿಸುವುದಾಗಿ ಸರ್ಕಾರ ಭರವಸೆ ನೀಡುತ್ತಲೇ ಇದೆ. ಆದರೆ, ಇದುವರೆಗೂ ಕಾರ್ಯಗತವಾಗಿಲ್ಲ. ಈಗ ಅದು ಮುಚ್ಚುವ ಹಂತಕ್ಕೆ ಬಂದಿದೆ.
‘ಬೆಂಗಳೂರಿನಲ್ಲಿ ಎಲ್ಲ ರೀತಿಯ ಅವಕಾಶಗಳು ಇವೆ. ರನ್‌ವೇ ಅನ್ನು 3000 ಅಡಿಯವರೆಗೆ ನಿರ್ಮಿಸಲು ಅವಕಾಶವಿದ್ದರೂ ಸರ್ಕಾರ, ಜಿಎಫ್‌ಟಿಎಸ್ ಅನ್ನು ಏಕೆ ಸ್ಥಳಾಂತರಿಸುತ್ತಿದೆಯೋ ಗೊತ್ತಿಲ್ಲ. ಪೈಲಟ್‌ಗಳಾಗಬೇಕೆಂಬ ಕನಸು ಹೊತ್ತವರಿಗೆ ಸರ್ಕಾರ ಆಸರೆಯಾಗಿ ನಿಂತರೆ ನೂರಾರು ಪೈಲಟ್‌ಗಳು ಇಲ್ಲಿಂದ ಹೊರಬರುತ್ತಾರೆ’ ಎಂದು ಕ್ಯಾಪ್ಟನ್ ಮುರಳಿ ರಾಮಕೃಷ್ಣ ಹೇಳಿದರು.
ಮುರಳಿಯವರು ಜಿಎಫ್‌ಟಿಎಸ್‌ನಲ್ಲೇ ಕಲಿತು, ಪೈಲಟ್ ಆಗಿ ಇದೀಗ ಅವರದ್ದೇ ಮೂರು ವಿಮಾನಗಳನ್ನು ಜಕ್ಕೂರು ವೈಮಾನಿಕ ಪ್ರದೇಶದಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ‘ಜಿಎಫ್‌ಟಿಎಸ್‌ನಲ್ಲಿ ಎಲ್ಲ ರೀತಿಯ ಅವಕಾಶಗಳಿವೆ. ಮೂಲಸೌಕರ್ಯವನ್ನು ನೀಡಿದರೆ, ದೇಶದಲ್ಲೇ ಅತ್ಯುತ್ತಮ ವೈಮಾನಿಕ ತರಬೇತಿ ಕೇಂದ್ರವಾಗುವುದರಲ್ಲಿ ಯಾವುದೇ ಸಂಶಯ ಇಲ್ಲ’ ಎಂದರು.
‘ಮೈಸೂರಿನಲ್ಲಿ ಎಲ್ಲವನ್ನೂ ಹೊಸದಾಗಿ ಮಾಡುವ ಬದಲು ಜಕ್ಕೂರಿನಲ್ಲೇ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದರೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಹೆಲಿಕಾಪ್ಟರ್‌ಗಳ ತಾಣ ಜಕ್ಕೂರು
ವೈಮಾನಿಕ ಪ್ರದೇಶದಿಂದ ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಪ್ರಮುಖರು ಹೆಲಿಕಾಪ್ಟರ್‌ನಲ್ಲಿ ವಿವಿಧ ಭಾಗಗಳಿಗೆ ಪ್ರಯಾಣಿಸುತ್ತಾರೆ. ಕೆಲವು ಖಾಸಗಿ ಸಂಸ್ಥೆಗಳು ಏಳು ಆಸನ ವ್ಯವಸ್ಥೆಯುಳ್ಳ ವಿಮಾನವನ್ನು ಇಲ್ಲಿಂದಲೇ ಕಾರ್ಯಾಚರಣೆ ಮಾಡುತ್ತಿದ್ದಾರೆ. ಜಿಎಫ್‌ಟಿಎಸ್ ಮುಚ್ಚುವ ಜೊತೆಗೆ ವಿಮಾನ ಹೆಲಿಕಾಪ್ಟರ್‌ಗಳ ಹಾರಾಟವನ್ನೂ ಇಲ್ಲಿಂದ ಮುಕ್ತಗೊಳಿಸುವ ಹುನ್ನಾರ ನಡೆಸಲಾಗಿದೆ ಎನ್ನಲಾಗಿದೆ. ಜಕ್ಕೂರು ವೈಮಾನಿಕ ಪ್ರದೇಶದ ಸುತ್ತಮುತ್ತ ಬೃಹತ್ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇಲ್ಲ. ಅಲ್ಲದೆ ಈಗಿರುವ ಕೆಲವು ಬೃಹತ್ ಕಟ್ಟಡಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಹೀಗಾಗಿ ಜಿಎಫ್‌ಟಿಎಸ್‌ನೊಂದಿಗೆ ಜಕ್ಕೂರು ವೈಮಾನಿಕ ಪ್ರದೇಶವನ್ನೇ ಮುಚ್ಚಲು ಯೋಜಿಸಲಾಗಿದೆ. ಖಾಸಗಿ ಬಿಲ್ಡರ್‌ಗಳ ಒತ್ತಾಸೆ ಹಾಗೂ ಐಎಎಸ್ ಅಧಿಕಾರಿಗಳ ಲಾಬಿಯೂ ಇದಕ್ಕೆ ಕಾರಣ. ಜಕ್ಕೂರು ವೈಮಾನಿಕ ಪ್ರದೇಶದಲ್ಲಿ ಕ್ರೀಡಾ ಸಂಕೀರ್ಣ ಗಾಲ್ಫ್ ಕೋರ್ಸ್ ಸೇರಿದಂತೆ ಮನರಂಜನೆ ತಾಣ ನಿರ್ಮಿಸುವ ಯೋಜನೆ ಹೊಂದಲಾಗಿದೆ ಎನ್ನಲಾಗಿದೆ.
ವಿದ್ಯಾರ್ಥಿಗಳಿಗೆ ಅನುಕೂಲ
‘ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ಶಿಕ್ಷಣ ಯೋಜನೆಯಡಿ ಪೈಲಟ್ ಶಿಕ್ಷಣವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಜಿಎಫ್‌ಟಿಎಸ್‌ನಲ್ಲಿ ನೀಡಬಹುದು. ಅಲ್ಲದೆ ಪೈಲಟ್ ಕೋರ್ಸ್‌ಗೆ ಸಾಕಷ್ಟು ಬೇಡಿಕೆ ಇರುವುದರಿಂದ ಸರ್ಕಾರ ಲಾಭವನ್ನೂ ಗಳಿಸಬಹುದು’ ಎಂದು ತಜ್ಞರು ಅಭಿಪ್ರಾಯಪಟ್ಟರು. ‘ಜಿಎಫ್‌ಟಿಎಸ್‌ನಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಎಂದು ಐದಾರು ವರ್ಷಗಳಿಂದ ಇಲ್ಲಿರುವ ಸುಮಾರು 75 ವಿದ್ಯಾರ್ಥಿಗಳಿಗೆ ತರಬೇತಿಯನ್ನೇ ನೀಡುತ್ತಿಲ್ಲ. ಎರಡು ವರ್ಷದ ಕೋರ್ಸ್‌ನಲ್ಲಿ ಮೂರು ತಿಂಗಳು ಸತತವಾಗಿ ಶಿಕ್ಷಣ ನೀಡುವ ವ್ಯವಸ್ಥೆ ಇಲ್ಲಿಲ್ಲ. ಇದನ್ನು ಸರ್ಕಾರ ಪರಿಗಣಿಸಿ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.