ADVERTISEMENT

ಬೇಡ ಜಂಗಮ, ಬೇಡುವ ಜಂಗಮ ಒಂದೇ ಅಲ್ಲ: ಎಸ್‌.ಎಂ. ಜಾಮದಾರ

‘ಬುಡ್ಗಜಂಗಮ, ಬೇಡ ಜಂಗಮ, ಬೇಡುವ ಜಂಗಮ’ ದುಂಡು ಮೇಜಿನ ಸಭೆಯಲ್ಲಿ ಜಾಮದಾರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 16:02 IST
Last Updated 14 ಜೂನ್ 2025, 16:02 IST
<div class="paragraphs"><p>‘ಬುಡ್ಗಜಂಗಮ, ಬೇಡಜಂಗಮ ಮತ್ತು ಬೇಡುವ ಜಂಗಮ’ ದುಂಡು ಮೇಜಿನ ಸಭೆಯಲ್ಲಿ ಎಸ್.ಎಂ. ಜಾಮದಾರ, ಸಿ.ಎಸ್. ದ್ವಾರಕಾನಾಥ್, ಶಿವಶರಣಪ್ಪ ಅವರು ಬಿ.ಆರ್‌. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು </p></div>

‘ಬುಡ್ಗಜಂಗಮ, ಬೇಡಜಂಗಮ ಮತ್ತು ಬೇಡುವ ಜಂಗಮ’ ದುಂಡು ಮೇಜಿನ ಸಭೆಯಲ್ಲಿ ಎಸ್.ಎಂ. ಜಾಮದಾರ, ಸಿ.ಎಸ್. ದ್ವಾರಕಾನಾಥ್, ಶಿವಶರಣಪ್ಪ ಅವರು ಬಿ.ಆರ್‌. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಲಿಂಗಾಯತರಲ್ಲಿಯೂ ಚಾತುರ್ವರ್ಣ ಪದ್ಧತಿ ಇದೆ ಎಂದು ಶತಮಾನದ ಹಿಂದೆ ಪ್ರತಿಪಾದಿಸಿದವರೇ ಇಂದು ಬೇಡುವ ಜಂಗಮ ಹೆಸರಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ಪಡೆಯಲು ಹೊರಟಿದ್ದಾರೆ. ಬೇಡುವ ಜಂಗಮ ಮತ್ತು ಬೇಡ ಜಂಗಮ ಒಂದೇ ಅಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮದಾರ ಹೇಳಿದರು.

ADVERTISEMENT

ಅಲೆಮಾರಿ ಬುಡಕಟ್ಟು ಮಹಾಸಭಾ ಶನಿವಾರ ಹಮ್ಮಿಕೊಂಡಿದ್ದ ‘ಬುಡ್ಗಜಂಗಮ, ಬೇಡ ಜಂಗಮ, ಬೇಡುವ ಜಂಗಮ’ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

ವೀರಶೈವ ಲಿಂಗಾಯತರಲ್ಲಿಯೂ ವರ್ಣಾಶ್ರಮ ವ್ಯವಸ್ಥೆ ಇದೆ. ಆರಾಧ್ಯರು, ಐನೋರು, ಜಂಗಮರೆಲ್ಲ ವೀರಶೈವರ ಬ್ರಾಹ್ಮಣರು. ಕೆಳದಿ, ಇಕ್ಕೇರಿ ಸಹಿತ ವಿವಿಧ ರಾಜರ ಮನೆತನಗಳು ಕ್ಷತ್ರಿಯರು, ಬಣಜಿಗ ಸಹಿತ ಕೆಲವು ಪಂಗಡಗಳು ವೈಶ್ಯರು, ಉಳಿದವರು ಶೂದ್ರರು ಎಂದು 1906ರಲ್ಲಿ ಮಹಾರಾಜರಿಗೆ ಅರ್ಜಿ ಸಲ್ಲಿಸಿ, ಅದೇ ರೀತಿ ಗುರುತಿಸಬೇಕು ಎಂದು ಒತ್ತಾಯಿಸಿದ್ದರು ಎಂದು ಇತಿಹಾಸವನ್ನು ವಿವರಿಸಿದರು.

ಬುಡ್ಗ ಜಂಗಮ, ಬೇಡ ಜಂಗಮರು ಮಾಂಸಾಹಾರಿಗಳು, ವೀರಶೈವ ಜಂಗಮರು ಸಸ್ಯಾಹಾರಿಗಳು. ವೀರಶೈವ ಜಂಗಮರು ಭಕ್ತರ ಮನೆಯಲ್ಲಷ್ಟೇ ಬೇಡುತ್ತಾರೆ. ಅದೂ ಸ್ವಯಂ ಪಾಕ ಭಿಕ್ಷೆ (ಅಡುಗೆಗೆ ಬೇಕಾದ ವಸ್ತುಗಳನ್ನು ನೀಡುವುದು) ಮತ್ತು ಕಜ್ಜಾಯದಲ್ಲಿ ಭಿಕ್ಷೆ (ಅಡುಗೆ ಮಾಡಿ ನೀಡುವುದು) ಈ ಎರಡೇ ಭಿಕ್ಷೆಗಳು ಅವರಲ್ಲಿರುವುದು ಎಂದು ಹೇಳಿದರು.

ಪರಿಶಿಷ್ಟ ಜಾತಿಯಲ್ಲಿ ಇರುವವರು ಯಾರು? ಪಂಗಡಗಳು ಯಾರು ಎಂಬುದೆಲ್ಲ ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಬ್ರಿಟಿಷರ ಆಳ್ವಿಕೆಯ ಸಂದರ್ಭದ ಕಾನೂನುಗಳನ್ನು ನೋಡಿದರೂ ಯಾರು ಎಸ್‌ಸಿ–ಎಸ್‌ಟಿ ಎಂಬುದು ಗೊತ್ತಾಗುತ್ತದೆ. ಎಲ್ಲ ದಾಖಲೆಗಳನ್ನು ನ್ಯಾ.ನಾಗಮೋಹನದಾಸ್‌ ಆಯೋಗದ ಮುಂದೆ ಇಡಬೇಕು ಎಂದು ಸಲಹೆ ನೀಡಿದರು.

ಅಲೆಮಾರಿ ಬುಡಕಟ್ಟು ಮಹಾಸಭಾ ಗೌರವಾಧ್ಯಕ್ಷ ಸಿ.ಎಸ್‌. ದ್ವಾರಕಾನಾಥ್‌ ಮಾತನಾಡಿ, ‘ಜಿಲ್ಲಾಧಿಕಾರಿಗಳು ಎಲ್ಲ ಜಾತಿ ಪ್ರಮಾಣಪತ್ರಗಳನ್ನು ಮರುಪರಿಶೀಲನೆ ಮಾಡಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಹುದ್ದೆಗಳನ್ನು ಪಡೆದವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು. ಅವರಿಗೆ ಶಿಕ್ಷೆಯಾದರೆ ಮುಂದೆ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುವುದು ಕಡಿಮೆಯಾಗಲಿದೆ’ ಎಂದು ಹೇಳಿದರು.

ಶರಣ ತತ್ವ ಚಿಂತಕ ಶಿವಶರಣಪ‍್ಪ ಮಾತನಾಡಿ, ‘ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ಅದಕ್ಕೆ ಮಾನ್ಯತೆ ಪಡೆಯಲು ಹೊರಟರೆ ಅಡ್ಡಗಾಲು ಇಡುವವರೇ ಇಲ್ಲಿ ನಾವು ಬೇಡುವ ಜಂಗಮರು ಪರಿಶಿಷ್ಟ ಜಾತಿಯವರು ಎಂದು ಹೇಳಿಕೊಂಡು ದಲಿತರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ’ ಎಂದರು.

ಮಾಂಸಾಹಾರ ಸೇವಿಸುವ ಸವಾಲು

ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ‘ಒಡೆಯರ್‌’ ಎಂಬ ವೀರಶೈವ ಜಂಗಮರೊಬ್ಬರು ಮಾತನಾಡಿ ‘ನಮ್ಮನ್ನೂ ಬ್ರಾಹ್ಮಣರು ಹೊರಗಿಟ್ಟಿದ್ದಾರೆ. ನಾವು ಊಟ ಮಾಡಿದರೆ ಸೆಗಣಿ ಸಾರಿಸಿ ಬರಬೇಕು. ಹಾಗಾಗಿ ಬ್ರಾಹ್ಮಣರನ್ನು ಹೊರತುಪಡಿಸಿ ಎಲ್ಲರೂ ಅಸ್ಪೃಶ್ಯರೇ ಆಗಿದ್ದಾರೆ. ಬೇಡ ಜಂಗಮರು ಬೇರೆಯಲ್ಲ ಬೇಡುವ ಜಂಗಮ ಬೇರೆಯಲ್ಲ. ಎಲ್ಲರೂ ಒಂದೇ’ ಎಂದು ಪ್ರತಿಪಾದಿಸಿದರು.

ಸರ್ಕಾರದ ಆದೇಶ ಹೈಕೋರ್ಟ್‌ ಆದೇಶ ಅಂಬೇಡ್ಕರ್‌ ಬರಹಗಳನ್ನೆಲ್ಲ ಅವರು ಉಲ್ಲೇಖ ಮಾಡಿದರು. ಅದೆಲ್ಲ ಕೆಲವು ಅರ್ಧ ಮಾಹಿತಿ ಕೆಲವು ತಪ್ಪು ಮಾಹಿತಿ ಎಂಬುದನ್ನು ಎಸ್‌.ಎಂ. ಜಾಮದಾರ ಸಿ.ಎಸ್‌. ದ್ವಾರಕಾನಾಥ್‌ ವಿವರಿಸಿದರು. 

‘ಬುಡ್ಗ ಬೇಡ ಜಂಗಮರು ಮಾಂಸಾಹಾರಿಗಳು. ಅವರು ಬೆಕ್ಕು ನರಿ ಅಳಿಲುಗಳನ್ನೆಲ್ಲ ತಿನ್ನುತ್ತಾರೆ. ಈಗಲೇ ಮಾಂಸಾಹಾರ ತರಿಸುವ ವ್ಯವಸ್ಥೆ ಮಾಡುತ್ತೇವೆ. ಅವರೊಂದಿಗೆ ಕುಳಿತು ನೀವೂ ಅದನ್ನು ಸೇವಿಸಬೇಕು. ಆಗ ಬೇಡುವ ಜಂಗಮ ಮತ್ತು ಬೇಡ ಜಂಗಮ ಒಂದೇ ಎಂದು ಒಪ್ಪಿಕೊಳ್ಳುತ್ತೇವೆ’ ಎಂದು ದ್ವಾರಕಾನಾಥ್‌ ಸವಾಲು ಹಾಕಿದರು.

‘ಅಳಿಲಿನಂತೆ ಸದ್ದು ಮಾಡಿಕೊಂಡು ಮರ ಏರಿ ಅಳಿಲು ಹಿಡಿಯುವ ಕಲೆ ನಮಗೆ ಗೊತ್ತು. ನೀವು ನಮ್ಮವರೇ ಆಗಿದ್ದರೆ ಬನ್ನಿ. ನಮ್ಮ ಹಾಗೇ ಅಳಿಲು ಹಿಡಿದು ತೋರಿಸಿ’ ಎಂದು ಸಭೆಯಲ್ಲಿದ್ದ ಬೇಡ ಜಂಗಮರು ಸವಾಲೊಡ್ಡಿದರು. ಆ ವೀರಶೈವ ಜಂಗಮರು ಸಭೆಯಿಂದ ಹೊರನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.