ಬೆಂಗಳೂರು: ಸೈಬರ್ ವಂಚನೆಗೆ ಒಳಗಾದವರಿಗೆ ಕಾನೂನು ಸೇವೆ ಒದಗಿಸಿಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಬೃಹತ್ ಸೈಬರ್ ವಂಚನೆ ಜಾಲವನ್ನು ಪತ್ತೆಹಚ್ಚಿರುವ ಸಿಸಿಬಿ ಪೊಲೀಸರು, ತಮಿಳುನಾಡಿನ ತುಫೆಲ್ ಅಹಮದ್ ಎಂಬಾತನನ್ನು ಬಂಧಿಸಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ.
‘ನಕಲಿ ಕಾಲ್ ಸೆಂಟರ್‌ನಲ್ಲಿದ್ದ 10 ಹಾರ್ಡ್ ಡಿಸ್ಕ್, ನಕಲಿ ಕಂಪನಿಗಳ ಮುದ್ರೆ, ಬಾಡಿಗೆ ಒಪ್ಪಂದದ ಪತ್ರಗಳು, ಚೆಕ್‌ಬುಕ್, ಮೊಬೈಲ್, ಸಿಪಿಯು, ವೋಡಾಫೋನ್ ಕಂಪನಿಯ 11 ಸಿಮ್ ಕಾರ್ಡ್‌ಗಳು, ಎಸ್‌ಐಪಿ ಟ್ರಂಕ್ ಸರ್ವರ್ ವ್ಯವಸ್ಥೆಯ ಡೇಟಾ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಹೇಳಿದರು.
‘ಈ ಜಾಲವು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಿರುವುದು ಪತ್ತೆಯಾಗಿದೆ. ವಂಚನೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಸೈಬರ್ ಅಪರಾಧ ವರದಿ ಪೋರ್ಟಲ್‌ನಲ್ಲಿ 19 ಪ್ರಕರಣಗಳು ದಾಖಲಾಗಿವೆ’ ಎಂದು ಮಾಹಿತಿ ನೀಡಿದರು.
‘ಕಾಲ್ ಸೆಂಟರ್ ಎಂದು ನಾಮಫಲಕ ಹಾಕಿಕೊಂಡು ಕೇಂದ್ರದ ಒಳಗೆ ವಂಚನೆ ವ್ಯವಹಾರಗಳನ್ನು ನಡೆಸಲಾಗುತ್ತಿತ್ತು. ಪೊಲೀಸರಿಗೆ ವಿಷಯ ತಿಳಿಯಬಾರದೆಂದು ಪದೇ ಪದೇ ಕಚೇರಿಗಳನ್ನು ಬದಲಾವಣೆ ಮಾಡಲಾಗುತ್ತಿತ್ತು. ಆರೋಪಿಗಳು ಐದು ಕಡೆ ಕಚೇರಿ ಬದಲಾವಣೆ ಮಾಡಿರುವ ಮಾಹಿತಿ ಸಿಕ್ಕಿದೆ’ ಎಂದು ಮಾಹಿತಿ ನೀಡಿದರು.
‘ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟ್‌ಲ್ ಮೂಲಕ ಬಂದ ಮಾಹಿತಿ ಆಧರಿಸಿ, ಫೆಬ್ರುವರಿ 12ರಂದು
ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ವಂಚನೆ ಜಾಲಪತ್ತೆ ಹಚ್ಚಲಾಯಿತು’ ಎಂದು ಪೊಲೀಸರು ಹೇಳಿದರು.
‘ಸೋಲಾರ್ ಘಟಕ ಅಳವಡಿಸಿಕೊಡುವುದಾಗಿ ದೂರುದಾರರಿಗೆ ಸೈಬರ್ ವಂಚಕರು ₹1.50 ಕೋಟಿ ವಂಚಿಸಿದ್ದರು. ಆ ಹಣವನ್ನು ವಾಪಸ್ ಪಡೆಯಲು ಕಾನೂನು ನೆರವಿಗಾಗಿ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಿದ್ದರು. ‘ಕ್ವಿಕ್‌ಮೊಟೊ ಲೀಗಲ್ ಸರ್ವಿಸ್’ ಹೆಸರಿನ ವೆಬ್‌ಸೈಟ್ ಅನ್ನು ದೂರುದಾರರು ಪತ್ತೆಹಚ್ಚಿದ್ದರು. ಅದಾದ ಮೇಲೆ ದೂರುದಾರಿಗೆ ಕರೆ ಮಾಡಿದ್ದ ವಂಚಕರು, ಕಾನೂನು ಸೇವೆ ಒದಗಿಸುವುದಾಗಿ ನಂಬಿಸಿದ್ದರು. ವಂಚಕರ ಮಾತು ನಂಬಿದ್ದ ದೂರುದಾರರು, ಹಂತಹಂತವಾಗಿ ₹12.50 ಲಕ್ಷವನ್ನು ವರ್ಗಾವಣೆ ಮಾಡಿದ್ದರು. ತನಿಖೆ ನಡೆಸಿದಾಗ ಕಂಪನಿಯೇ ನಕಲಿ ಎಂಬುದು ಗೊತ್ತಾಯಿತು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
‘ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ದೂರಸಂಪರ್ಕ ಇಲಾಖೆ ಹಾಗೂ ಟಾಟಾ ಟೆಲಿ ಸರ್ವಿಸ್ ನೆರವು ಪಡೆದುಕೊಳ್ಳಲಾಗುತ್ತಿದೆ. ಅಪರಾಧ ವಿಭಾಗದ ಡಿಸಿಪಿ ರಾಜಾ ಇಮಾಮ್ ಕಾಸಿಂ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ’ ಎಂದು ಮೂಲಗಳು ತಿಳಿಸಿವೆ.
ಆರಂಭಿಕ ತನಿಖೆಯಲ್ಲಿ ‘ಕ್ವಿಕ್‌ಮೊಟೊ ಲೀಗಲ್ ಕಂಪನಿ’ಯು ವಿಳಾಸದಲ್ಲಿ ಇಲ್ಲದಿರುವುದು ಸಿಸಿಬಿ ಪೊಲೀಸರಿಗೆ ಪತ್ತೆಯಾಗಿತ್ತು. ತನಿಖೆ ಮುಂದುವರಿಸಿದಾಗ ಕಸ್ತೂರಿನಗರದಲ್ಲಿ ‘ಇಂಡಿಯಾ ಲೀಗಲ್ ಸರ್ವಿಸ್’ ಹೆಸರಿನಲ್ಲಿ ಕಂಪನಿಯೊಂದು ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿತ್ತು. ‘12 ಟೆಲಿಕಾಲರ್‌ಗಳನ್ನು ನೇಮಿಸಿಕೊಂಡು ZOIPER-5 ಎನ್ನುವ ಅಪ್ಲಿಕೇಶನ್ ಬಳಸಿಕೊಂಡು ವಂಚನೆಗೆ ಒಳಗಾದವರನ್ನು ಆರೋಪಿಗಳು ಪತ್ತೆಹಚ್ಚುತ್ತಿದ್ದರು. ಸೈಬರ್ ವಂಚನೆಗೆ ಒಳಗಾದವರಿಗೆ ಕರೆ ಮಾಡುತ್ತಿದ್ದ ಟೆಲಿಕಾಲರ್‌ಗಳು ಹಣ ಮರಳಿ ಕೊಡಿಸುವುದಾಗಿ ನಂಬಿಸುತ್ತಿದ್ದರು. ಅವರ ಮಾತು ನಂಬಿ ಹಣ ನೀಡಿದ ಬಳಿಕ ವಂಚನೆ ಮಾಡಲಾಗುತ್ತಿತ್ತು’ ಎಂದು ಪೊಲೀಸರು ಹೇಳಿದರು.
ರಾಮಮೂರ್ತಿನಗರದಲ್ಲಿ ದಾಖಲಾದ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಜಂಟಿ ಪೊಲೀಸ್ ಕಮಿಷನರ್ ಅಜಯ್ ಹಿಲೋರಿ ಅವರ ನೇತೃತ್ವದಲ್ಲಿ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ‘ಕಸ್ತೂರಿನಗರದಲ್ಲಿದ್ದ ನಕಲಿ ಕಾಲ್ ಸೆಂಟರ್‌ನಲ್ಲಿ 12 ಮಂದಿ ಟೆಲಿಕಾಲರ್‌ಗಳು ಕೆಲಸ ಮಾಡುತ್ತಿದ್ದರು. ಆ ಪೈಕಿ ತುಫೆಲ್ ಅಹಮದ್ ಅವರನ್ನು ಬಂಧಿಸಲಾಗಿದೆ. ತುಫೆಲ್‌ನ ಸಹೋದರ ದುಬೈನಲ್ಲಿ ನೆಲಸಿದ್ದು ನಕಲಿ ಕಂಪನಿ ಸ್ಥಾಪಿಸಿ ಆನ್‌ಲೈನ್‌ನಲ್ಲಿ ವಂಚನೆ ನಡೆಸುತ್ತಿರುವುದು ಗೊತ್ತಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.