
ಬೆಂಗಳೂರು: ಎಂಟು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಶೇ 94ರಷ್ಟು ಬೋಧಕ ಹಾಗೂ ಶೇ 95ರಷ್ಟು ಬೋಧಕೇತರ ಹುದ್ದೆಗಳು ಖಾಲಿ ಇರುವುದರಿಂದ ಬೋಧನಾ ಚಟುವಟಿಕೆಗಳು, ಅಧ್ಯಯನ ಕೇಂದ್ರಗಳು, ಸಂಶೋಧನಾ ಕೇಂದ್ರಗಳ ಆಡಳಿತ ನಿರ್ವಹಣೆಗೆ ತುಂಬಾ ತೊಂದರೆಯಾಗುತ್ತಿದೆ.
ಬೆಂಗಳೂರು ವಿಶ್ವವಿದ್ಯಾಲಯ ಅತಿ ದೊಡ್ಡ ವಿ.ವಿ.ಯಾಗಿದ್ದ ಕಾರಣ 2017ರಲ್ಲಿ ಅದನ್ನು ವಿಭಜಿಸಿ, ಬೆಂಗಳೂರು ನಗರ ಮತ್ತು ಉತ್ತರ ವಿಶ್ವವಿದ್ಯಾಲಯ ಆರಂಭಿಸಲಾಯಿತು. 2018ರಿಂದ ಪ್ರತ್ಯೇಕವಾಗಿ ನಗರ ವಿಶ್ವವಿದ್ಯಾಲಯ ಕಾರ್ಯಾರಂಭ ಮಾಡಿದ್ದು, ವಿಶ್ವವಿದ್ಯಾಲಯದಲ್ಲಿ ಇರುವ 23 ವಿಭಾಗಗಳಿಗೆ, ವಿಭಾಗವಾರು ಹುದ್ದೆಗಳು ಮಂಜೂರಾಗಿವೆ. ಆದರೆ, ಖಾಲಿ ಇರುವ ಹುದ್ದೆಗಳು ಭರ್ತಿಯಾಗಿಲ್ಲ.
23 ಪ್ರಾಧ್ಯಾಪಕರು, 46 ಸಹ ಪ್ರಾಧ್ಯಾಪಕರು ಹಾಗೂ 92 ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಒಟ್ಟು 161 ಬೋಧಕ ಹುದ್ದೆಗಳು ಮಂಜೂರಾಗಿವೆ. ಆದರೆ, ವಿಶ್ವವಿದ್ಯಾಲಯದಲ್ಲಿ ಈಗ ಒಬ್ಬ ಸಹ ಪ್ರಾಧ್ಯಾಪಕ, 9 ಮಂದಿ ಸಹಾಯಕ ಪ್ರಾಧ್ಯಾಪಕ ಸೇರಿದಂತೆ ಕೇವಲ ಹತ್ತು ಮಂದಿ ಕಾಯಂ ಬೋಧಕರು ಇದ್ದಾರೆ. ಇನ್ನು ಬೋಧಕೇತರ ವಿಭಾಗದಲ್ಲಿ ಒಟ್ಟು 123 ಹುದ್ದೆಗಳು ಇದ್ದು, ಆರು ಮಂದಿ ಮಾತ್ರ ಕಾಯಂ ಸಿಬ್ಬಂದಿ ಇದ್ದಾರೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.
ಒಬ್ಬರೂ ಇಲ್ಲ: ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಮಾಜ ಕಾರ್ಯ ವಿಭಾಗ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಭೌತವಿಜ್ಞಾನ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಪರಿಸರ ಮತ್ತು ಹವಾಮಾನ ಬದಲಾವಣೆ ಸೇರಿದಂತೆ 16 ವಿಭಾಗಗಳಲ್ಲಿ ಒಬ್ಬರೂ ಕಾಯಂ ಬೋಧಕರೇ ಇಲ್ಲ. ಎಲ್ಲ ವಿಭಾಗಗಳಲ್ಲೂ ಪ್ರಾಧ್ಯಾಪಕರ (ಪ್ರೊಫೆಸರ್) ಹುದ್ದೆಗಳು ಖಾಲಿ ಇವೆ. ರಸಾಯನ ವಿಜ್ಞಾನ ವಿಭಾಗದಲ್ಲಿ ಮಾತ್ರ ಒಬ್ಬ ಸಹ ಪ್ರಾಧ್ಯಾಪಕರು ಇದ್ದಾರೆ. ಉಳಿದ ಯಾವ ವಿಭಾಗದಲ್ಲೂ ಸಹ ಪ್ರಾಧ್ಯಾಪಕರು ಇಲ್ಲ.
ಒಬ್ಬ ಪ್ರೊಫೆಸರ್, 21 ಮಂದಿ ಸಹ ಪ್ರಾಧ್ಯಾಪಕರು, 37 ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಒಟ್ಟು 59 ಬೋಧಕ ಹುದ್ದೆಗಳನ್ನು ಹಾಗೂ ಹೊರ ಗುತ್ತಿಗೆ ಮೂಲಕ 22, ನಿಯೋಜನೆ ಮೇಲೆ ಐದು ಹಾಗೂ ಕಾಯಂ ಆಗಿ 20 ಹುದ್ದೆಗಳು ಸೇರಿದಂತೆ ಒಟ್ಟು 47 ಬೋಧಕೇತರ ಹುದ್ದೆಗಳ ಭರ್ತಿಗೆ 2019ರಲ್ಲಿ ಸರ್ಕಾರ ಅನುಮತಿ ನೀಡಿದೆ. ಆದರೆ, ಇದುವರೆಗೂ ನೇಮಕಾತಿ ನಡೆದಿಲ್ಲ. ಹೀಗಾಗಿ ಅತಿಥಿ ಉಪನ್ಯಾಸಕರು, ಹೊರ ಗುತ್ತಿಗೆ ಸಿಬ್ಬಂದಿ ಮೇಲೆ ವಿಶ್ವವಿದ್ಯಾಲಯ ಅವಲಂಬಿತವಾಗಿದೆ.
‘ರೋಸ್ಟರ್ ನಿಗದಿ, ನೇಮಕಾತಿ ನಿಯಮಗಳನ್ನು ರೂಪಿಸಲು ಸಮಯ ತೆಗೆದುಕೊಂಡಿತು. ಈ ಪ್ರಕ್ರಿಯೆಗಳು ಮುಗಿಯುವ ವೇಳೆಗೆ ಒಳ ಮೀಸಲಾತಿಯಿಂದಾಗಿ ಹೊಸ ನೇಮಕಾತಿಗಳ ಮೇಲೆ ಸರ್ಕಾರ ನಿರ್ಬಂಧ ವಿಧಿಸಿತು. ಈಗ ಒಳ ಮೀಸಲಾತಿ ವಿಷಯ ಇತ್ಯರ್ಥವಾಗಿದೆ. ಆದರೆ, ಒಳ ಮೀಸಲಾತಿ ನಿಗದಿಗೆ ವಿಭಾಗ ಬದಲು, ವಿಶ್ವವಿದ್ಯಾಲಯವನ್ನು ಘಟಕವನ್ನಾಗಿ ಪರಿಗಣಿಸಬೇಕು ಎಂದು ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇದು ಇತ್ಯರ್ಥವಾಗುವವರೆಗೂ ನೇಮಕಾತಿ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ವಿಭಾಗವಾರು ಒಳ ಮೀಸಲಾತಿ ನೀಡಿದರೆ ಪ್ರವರ್ಗ 3ಎ, 3ಬಿಗೆ ಒಂದೂ ಹುದ್ದೆ ಸಿಗುವುದಿಲ್ಲ. ಹೀಗಾಗಿ ವಿಶ್ವವಿದ್ಯಾಲಯವನ್ನು ಘಟಕವನ್ನಾಗಿ ಪರಿಗಣಿಸಿ, ಒಳ ಮೀಸಲಾತಿ ನಿಗದಿಪಡಿಸುವ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ. ಸರ್ಕಾರದಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ’ ಎಂದು ಹೇಳಿದರು.
ಅತಿಥಿ ಉಪನ್ಯಾಸಕರನ್ನು ವಿಭಾಗದ ಮುಖ್ಯಸ್ಥರನ್ನಾಗಿ, ಡೀನ್‌ಗಳನ್ನಾಗಿ ನೇಮಕ ಮಾಡಲು ಬರುವುದಿಲ್ಲ. ಹೀಗಾಗಿ ಈಗಿರುವ ಹತ್ತು ಮಂದಿ ಕಾಯಂ ಬೋಧಕರಿಗೆ 2–3 ವಿಭಾಗಗಳ ಮುಖ್ಯಸ್ಥರ ಜವಾಬ್ದಾರಿ ನೀಡಲಾಗಿದೆ. ಇದರ ಜೊತೆಗೆ ವಿವಿಧ ಅಧ್ಯಯನ ಕೇಂದ್ರಗಳ ಹೊಣೆಯನ್ನು ವಹಿಸಿದ್ದು ಒಬ್ಬರು 4–5 ಜವಾಬ್ದಾರಿ ನಿಭಾಯಿಸಬೇಕಾಗಿದೆ.
ಗಾಂಧಿ ಅಧ್ಯಯನ ಕೇಂದ್ರ, ಯೋಗ ಅಧ್ಯಯನ ಕೇಂದ್ರ, ಮಹಿಳಾ ಅಧ್ಯಯನ ಕೇಂದ್ರ, ಅಂಬೇಡ್ಕರ್ ಅಧ್ಯಯನ ಕೇಂದ್ರ, ಕೌಶಲ ಅಭಿವೃದ್ಧಿ ಮಂಡಳಿ ಸೇರಿದಂತೆ ಒಟ್ಟು 22 ಕೇಂದ್ರಗಳಿವೆ. ಒಬ್ಬರಿಗೆ 2–3 ಕೇಂದ್ರಗಳ ಹೊಣೆ ವಹಿಸಲಾಗಿದೆ. ಬೋಧನೆ ಜೊತೆಗೆ ಈ ಕಾರ್ಯವನ್ನೂ ಮಾಡಬೇಕಾಗಿದೆ. ಹೀಗಾಗಿ ಯಾರಿಗೂ ಸಮಯ ಇಲ್ಲ. ಸಂಶೋಧನಾ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.