
ಹೊಸೂರು ರಸ್ತೆಯಲ್ಲಿ ದಟ್ಟಣೆಯಿಂದಾಗಿ ನಿಧಾನವಾಗಿ ಸಾಗಿದ ವಾಹನಗಳು
ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರು: ನಗರದ ಪೂರ್ವ ಭಾಗದಲ್ಲಿ ಐ.ಟಿ ಕಂಪನಿಗಳ ಸಂಖ್ಯೆ ಹೆಚ್ಚಾಗುತ್ತಿದಂತೆ ಸಂಚಾರ ದಟ್ಟಣೆ ಸಮಸ್ಯೆ ಬಿಗಡಾಯಿಸುತ್ತಲೇ ಇದೆ. ಈ ಭಾಗದಲ್ಲಿ ನಿತ್ಯ ಕಿ.ಮೀ. ವರೆಗೂ ವಾಹನಗಳು ರಸ್ತೆಯಲ್ಲೇ ನಿಂತಿರುವುದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ.
ಹೊಸೂರು ಮಾರ್ಗದಲ್ಲಿ ತಮಿಳುನಾಡು, ಕೇರಳ ಕಡೆಗೆ ಸಂಪರ್ಕ ಕಲ್ಪಿಸುವ ಕೋರಮಂಗಲ ಭಾಗ, ಪ್ರಮುಖ ಐ.ಟಿ ಕಂಪನಿಗಳ ಹಬ್ ಆಗಿರುವ ಬೆಳ್ಳಂದೂರು– ಮಾರತ್‌ಹಳ್ಳಿ ಹೊರವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಆಡುಗೋಡಿಯಿಂದ ಆರಂಭಗೊಂಡು ಕೋರಮಂಗಲ, ಮಡಿವಾಳ, ಎಚ್‌ಎಸ್ಆರ್ ಬಡಾವಣೆ, ಬೆಳ್ಳಂದೂರು, ಮಾರತ್‌ಹಳ್ಳಿವರೆಗೂ ವಾಹನಗಳು ರಸ್ತೆಯಲ್ಲೇ ಹೆಚ್ಚು ಹೊತ್ತು ನಿಂತಿರುತ್ತವೆ. ಅದರಲ್ಲೂ ಕೋರಮಂಗಲದ ಸೇಂಟ್ ಜಾನ್ಸ್ ವೃತ್ತವನ್ನು ದಾಟಿ ಸಿಲ್ಕ್‌ಬೋರ್ಡ್ ಜಂಕ್ಷನ್ ತಲುಪುವ ಹೊತ್ತಿಗೆ ವಾಹನ ಸವಾರರು ಸುಸ್ತಾಗಿ ಹೋಗುತ್ತಾರೆ. ಬೆಳಿಗ್ಗೆ ಕಚೇರಿ ಆರಂಭಕ್ಕೂ ಮುನ್ನವೇ ಶುರುವಾಗುವ ವಾಹನಗಳ ಸಾಲು ರಾತ್ರಿವರೆಗೂ ಕಡಿಮೆ ಆಗುವುದಿಲ್ಲ.
ಕೋರಮಂಗಲ ವೃತ್ತ: ರೂಪೇನ ಅಗ್ರಹಾರದಿಂದ ಸಿಲ್ಕ್ ಬೋರ್ಡ್ ಜಂಕ್ಷನ್, ಮಡಿವಾಳ, ಕೋರಮಂಗಲದ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ವೃತ್ತ ದಾಟಿ ಆಡುಗೋಡಿವರೆಗಿನ 8ರಿಂದ 9 ಕಿ.ಮೀ. ಮಾರ್ಗದಲ್ಲಿನ ಸಂಚಾರ ದಟ್ಟಣೆ ವಾಹನ ಸವಾರರನ್ನು ಹೈರಾಣಾಗಿಸುತ್ತಿದೆ. ಶುಕ್ರವಾರ ಇಲ್ಲವೇ ರಜೆಯ ಮುನ್ನಾದಿನ ರಾತ್ರಿ 11 ಗಂಟೆಯಾದರೂ ದಟ್ಟಣೆ ಕರಗುವುದಿಲ್ಲ.
ಸೇಂಟ್ ಜಾನ್ಸ್ ವೃತ್ತದಲ್ಲಿ ಸಿಗ್ನಲ್ ದಾಟಿ ಹೋಗಲು ಕನಿಷ್ಠ 8ರಿಂದ 10 ನಿಮಿಷ ಕಾಯಬೇಕು. ಅದರಲ್ಲೂ ಬಲ ಬದಿಯಲ್ಲಿ ಚಲಿಸುವವರಿಗೆ ಕೆಲವೊಮ್ಮೆ ಇನ್ನೂ ಹೆಚ್ಚು ಸಮಯ ಬೇಕಾಗುತ್ತದೆ. ಈ ಮಾರ್ಗದಲ್ಲಿ ಆಂಬುಲೆನ್ಸ್ ಏನಾದರೂ ಸಿಲುಕಿಕೊಂಡರೆ, ಅಲ್ಲಿಂದ ಹೊರಬರಲು ಚಾಲಕ ಹರಸಾಹಸ ಪಡಬೇಕಾಗುತ್ತದೆ.
‘ಮೂರು ದಶಕಗಳಿಗೆ ಹೋಲಿಸಿದರೆ ವಾಹನಗಳ ಸಂಖ್ಯೆ ಈಗ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆ, ರಸ್ತೆಗಳ ಅಗಲ ಮಾತ್ರ ಅಷ್ಟೇ ಇದೆ. ಸೇಂಟ್ ಜಾನ್ಸ್ ವೃತ್ತದಲ್ಲಂತೂ ದಟ್ಟಣೆ ಹೆಚ್ಚಾಗಿದೆ. ಒಂದು ಕಡೆ ಹೆಚ್ಚು ಅಗಲದ ರಸ್ತೆ ಇದ್ದರೆ, ಇನ್ನೊಂದು ಕಡೆ ಕಿರಿದಾಗಿದೆ. ನಾಲ್ಕೂ ಕಡೆಗಳಿಂದ ವಾಹನಗಳು ಬರುತ್ತವೆ. ಇಲ್ಲಿ ಏಕಮುಖ ರಸ್ತೆ ಪ್ರಯೋಗ ಮಾಡಿದರೆ ದಟ್ಟಣೆಯನ್ನು ಶೇ 25ರಷ್ಟಾದರೂ ತಪ್ಪಿಸಬಹುದು. ಇಲ್ಲದೇ ಇದ್ದರೆ ಮೇಲ್ಸೇತುವೆ ನಿರ್ಮಿಸಿದರೆ ಆಡುಗೋಡಿವರೆಗೂ ದಟ್ಟಣೆ ತಗ್ಗಿಸಬಹುದು’ ಎನ್ನುತ್ತಾರೆ ಸ್ಥಳೀಯರು.
ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಕಡೆ ತಿರುಗುವಾಗ ಇರುವ ಅಡೆ–ತಡೆಯನ್ನು ನಿವಾರಿಸಿ, ವೃತ್ತವನ್ನು ಸಂಚಾರಿಸ್ನೇಹಿಯಾಗಿ ಅಭಿವೃದ್ಧಿಪಡಿಸಬೇಕು. ವೃತ್ತದ ಸಮೀಪದಲ್ಲಿಯೇ ಬಸ್ ನಿಲ್ದಾಣ ಇದ್ದರೂ ಅಲ್ಲಿ ಅನಗತ್ಯವಾಗಿ ಬಸ್ ಬೇ ನಿರ್ಮಿಸಿ ವಾಹನಗಳ ಸಾಲು ನಿಲ್ಲುವುದನ್ನು ತಪ್ಪಿಸಬೇಕು ಎನ್ನುವುದು ಸ್ಥಳೀಯರ ಸಲಹೆ.
ಯೂ ಟರ್ನ್ ಸಮಸ್ಯೆ: ಆಡುಗೋಡಿಯ ಯೂಕೋ ಬ್ಯಾಂಕ್ ಅಕ್ಕಪಕ್ಕದ ಪ್ರದೇಶದಲ್ಲಿ ಪಬ್‌ಗಳ ಸಂಖ್ಯೆ ಅಧಿಕ. ಎದುರಿನಲ್ಲೇ ಮಾಲ್ ಕೂಡ ಇದೆ. ವಾರಾಂತ್ಯ ಇಲ್ಲವೇ ಹಬ್ಬದ ಹಿಂದಿನ ದಿನ ಇಲ್ಲಿ ದಟ್ಟಣೆ ಹೆಚ್ಚಾಗಿರುತ್ತದೆ. ಇಲ್ಲಿ ಯೂ ಟರ್ನ್ ಪಡೆಯಲು ಕನಿಷ್ಠ 2 ಕಿ.ಮೀ. ದೂರವನ್ನು ಸವಾರರು ಕ್ರಮಿಸಬೇಕು. ಸೇಂಟ್ ಜಾನ್ಸ್ ವೃತ್ತದವರೆಗೆ ಬರಬೇಕಾದ ಸ್ಥಿತಿ ಇರುವುದರಿಂದ ಸಹಜವಾಗಿಯೇ ದಟ್ಟಣೆ ಹೆಚ್ಚುತ್ತದೆ.
ಹೊರ ವರ್ತುಲ ರಸ್ತೆ: ಮಡಿವಾಳ ದಾಟಿ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಶುರುವಾಗುವ ವರ್ತುಲ ರಸ್ತೆ ಪ್ರವೇಶಿಸಿದರೆ ದಟ್ಟಣೆ ಪ್ರಮಾಣ ಇನ್ನೂ ಹೆಚ್ಚುತ್ತದೆ. ಬೆಳ್ಳಂದೂರು, ಅಗರ, ಇಬ್ಬಲೂರು ಮಾರ್ಗವಾಗಿ ಮಾರತ್‌ಹಳ್ಳಿವರೆಗೂ ಇದು ಮುಂದುವರಿಯುತ್ತದೆ. ಇಲ್ಲಿ ಐ.ಟಿ ಕಂಪನಿಗಳು ಅಧಿಕ ಸಂಖ್ಯೆಯಲ್ಲಿವೆ. ನಗರ ಪ್ರವೇಶಿಸುವುದನ್ನು ತಪ್ಪಿಸಲು ವಾಹನ ಸವಾರರು ಹೆಚ್ಚಾಗಿ ಹೊರ ವರ್ತುಲ ರಸ್ತೆ ಬಳಸುವುದರಿಂದ ಮಧ್ಯಾಹ್ನ 12 ಗಂಟೆಯಾದರೂ ದಟ್ಟಣೆ ಇದ್ದೇ ಇರುತ್ತದೆ.
ದೇವರಬಿಸನಹಳ್ಳಿ, ಕಾಡುಬಿಸನಹಳ್ಳಿ ಜಂಕ್ಷನ್‌ಗಳು, ಸರ್ವಿಸ್ ರಸ್ತೆಯಲ್ಲಿ ವಾಹನಗಳು ಸಾಲು ಗಟ್ಟಿ ನಿಧಾನಗತಿಯಲ್ಲಿ ಸಂಚರಿಸುತ್ತವೆ. ಈ ಭಾಗದಲ್ಲಿ ಸಂಚಾರ ಪೊಲೀಸರನ್ನು ಕಟ್ಟುನಿಟ್ಟಾಗಿ ನಿಯೋಜಿಸಿ ದಟ್ಟಣೆ ನಿವಾರಣೆಗೆ ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯ.
* ಆಡುಗೋಡಿ ಚೆಕ್‌ಪೋಸ್ಟ್
* ಕೋರಮಂಗಲ ಸೇಂಟ್ ಜಾನ್ಸ್ ವೃತ್ತ
* ಮಡಿವಾಳ ಅಂಡರ್‌ಪಾಸ್
* ಬೆಳ್ಳಂದೂರು ಸರ್ವಿಸ್ ರಸ್ತೆ
* ಕಾಡುಬಿಸನಹಳ್ಳಿ ಜಂಕ್ಷನ್
* ಮಾರತ್‌ಹಳ್ಳಿಯ ಗಿರಿಯಾಸ್ ಎದುರು
ಮಾರತ್‌ಹಳ್ಳಿಯಿಂದ ಎಚ್ಎಎಲ್ ಕಡೆಗೆ ಹೋಗುವ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಿಲ್ಲ. ಬಿಎಂಟಿಸಿ ಬಸ್‌ಗಳನ್ನು ನಿಲ್ದಾಣ ಬರುವುದಕ್ಕೂ ಮುನ್ನವೇ ನಿಲ್ಲಿಸಲಾಗುತ್ತಿದೆ. ದೊಡ್ಡ ನೆಕ್ಕುಂದಿ ಕ್ರಾಸ್ ನಿಲ್ದಾಣದಲ್ಲೂ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಎಚ್ಎಎಲ್‌ಗೆ ಹೊಂದಿಕೊಂಡಿರುವ ರಸ್ತೆಯ ಪಾದಚಾರಿ ಮಾರ್ಗದ ನಿರ್ವಹಣೆಯೂ ಚೆನ್ನಾಗಿಲ್ಲ. ಅಲ್ಲಲ್ಲಿ ಕಲ್ಲುಗಳು ಎದ್ದಿದ್ದು ಜನರು ಮುಖ್ಯರಸ್ತೆಯಲ್ಲೇ ನಡೆದುಹೋಗುವ ವಾತಾವರಣವಿದೆ.
ಸಿಲ್ಕ್ ಬೋರ್ಡ್‌ನಿಂದ ಎಚ್‌ಎಸ್‌ಆರ್ ಲೇಔಟ್ ಅಗರ ಇಬ್ಬಲೂರು ಬೆಳ್ಳಂದೂರು ಕಾಡುಬೀಸನಹಳ್ಳಿ ಮಾರತ್‌ಹಳ್ಳಿ ಮಾರ್ಗವಾಗಿ ಹೆಬ್ಬಾಳವರೆಗೂ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗದ ಮೆಟ್ರೊ ಕಾಮಗಾರಿ ಆರಂಭವಾಗಿ ಐದು ವರ್ಷವಾದರೂ ಮುಗಿದಿಲ್ಲ. ಈ ವರ್ಷ ಮೆಟ್ರೊ ಮಾರ್ಗ ಭಾಗಶಃ ಆರಂಭವಾದರೆ ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಬಹುದು. ‘ಇಬ್ಬಲೂರು ಬಳಿ ಸದಾ ದಟ್ಟಣೆ ಇರುತ್ತದೆ. ಈ ಮಾರ್ಗದಲ್ಲಿ ಐ.ಟಿ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಐದು ವರ್ಷವಾದರೂ ಮೆಟ್ರೊ ಕಾಮಗಾರಿ ಮುಗಿಯದ ಕಾರಣ ಸ್ವಂತ ವಾಹನ ಬಳಸುವವರ ಪ್ರಮಾಣ ಹೆಚ್ಚಾಗಿದೆ. ಇದರಿಂದ ಸದಾ ವಾಹನಗಳ ಸಾಲು ನೋಡುವಂತಾಗಿದೆ’ ಎನ್ನುತ್ತಾರೆ ಇಬ್ಬಲೂರಿನ ವ್ಯಾಪಾರಿ ವೆಂಕಟೇಶ್.
ಕೋರಮಂಗಲದಲ್ಲಿ ಕಚೇರಿ ಇರುವುದರಿಂದ ಬೆಳಿಗ್ಗೆ ಬರುವ ಹೊತ್ತಿಗೆ ಸೇಂಟ್ ಜಾನ್ಸ್ ವೃತ್ತದಲ್ಲಿ ದಟ್ಟಣೆ ಇರುತ್ತದೆ. ಸಂಜೆ ವೇಳೆಯಂತೂ ಇದು ಮೂರು ಪಟ್ಟು ಹೆಚ್ಚುತ್ತದೆ. ಸಂಚಾರ ನಿರ್ವಹಣೆಗೆ ಇಲ್ಲಿ ವಿಶೇಷ ಒತ್ತು ನೀಡಲೇಬೇಕು.-ತ್ರಿಷ್ಮಾ, ಖಾಸಗಿ ಉದ್ಯೋಗಿ
ಸಿಂಗಸಂದ್ರದ ಮನೆಯಿಂದ ಕೋರಮಂಗಲ ಆರು ಕಿ.ಮೀ. ದೂರವಿದೆ. ಆದರೂ ಕಚೇರಿಗೆ ಪತ್ನಿಯನ್ನು ಬಿಡಲು 1 ಗಂಟೆ ಬೇಕಾಗುತ್ತದೆ. ಮಡಿವಾಳದಲ್ಲಿ ಯು ಟರ್ನ್ ಇದ್ದರೂ ಸಂಚಾರಕ್ಕೆ ಅವಕಾಶ ನೀಡದಿರುವುದರಿಂದ ದಟ್ಟಣೆ ಹೆಚ್ಚಾಗಿದೆ-ಶ್ರೀನಿವಾಸ್, ವಿಪ್ರೊ ಉದ್ಯೋಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.