ADVERTISEMENT

ಬೆಂಗಳೂರಿನ ರಸ್ತೆ ಅವ್ಯವಸ್ಥೆಗೆ ಉದ್ಯಮಿಗಳ ಆಕ್ರೋಶ:ಆಂಧ್ರಕ್ಕೆ ಬನ್ನಿ ಎಂದ ಲೋಕೇಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಸೆಪ್ಟೆಂಬರ್ 2025, 9:13 IST
Last Updated 17 ಸೆಪ್ಟೆಂಬರ್ 2025, 9:13 IST
<div class="paragraphs"><p>ನಾರಾ ಲೋಕೇಶ್</p></div>

ನಾರಾ ಲೋಕೇಶ್

   

ಬೆಂಗಳೂರು: ಸಂಚಾರ ದಟ್ಟಣೆ ಹಾಗೂ ಕಳಪೆ ರಸ್ತೆಯಿಂದ ನಗರದ ಹೊರ ವರ್ತುಲ ರಸ್ತೆಯಲ್ಲಿರುವ ಕಚೇರಿಯನ್ನು ಸ್ಥಳಾಂತರಗೊಳಿಸುವುದಾಗಿ ಬೆಂಗಳೂರು ಮೂಲದ ಲಾಜಿಸ್ಟಿಕ್ ಟೆಕ್ ಕಂಪನಿ ‘ಬ್ಲ್ಯಾಕ್‌ ಬಕ್’ ಘೋಷಿಸಿದ ಬೆನ್ನಲ್ಲೇ, ಕಂಪನಿಯನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರಿಸುವಂತೆ ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಆಹ್ವಾನ ನೀಡಿದ್ದಾರೆ.

‘ಕಳೆದ 9 ವರ್ಷಗಳಿಂದ ಬೆಳ್ಳಂದೂರು ನಮ್ಮ ಕಚೇರಿ ಮತ್ತು ಮನೆ ಆಗಿದೆ. ಆದರೆ ಈಗ ಇಲ್ಲಿ ಮುಂದುವರಿಯುವುದು ತುಂಬಾ ಕಷ್ಟ. ನಾವು ಇಲ್ಲಿಂದ ಹೊರಗೆ ಹೋಗಲು ನಿರ್ಧರಿಸಿದ್ದೇವೆ. ನಮ್ಮ ಸಹೋದ್ಯೋಗಿಗಳಿಗೆ ಸಂಚಾರ ಮಾಡುವುದು ಕಷ್ಟವಾಗಿದೆ. ಒಂದು ಕಡೆಯ ಪ್ರಯಾಣಕ್ಕೆ ಒಂದೂವರೆ ಗಂಟೆ ಸಮಯ ಬೇಕಾಗಿದೆ. ಬೆಂಗಳೂರಿನ ರಸ್ತೆಗಳು ಗುಂಡಿ ಮತ್ತು ಧೂಳಿನಿಂದ ತುಂಬಿವೆ. ಅವುಗಳನ್ನು ಸರಿಪಡಿಸುವ ಕನಿಷ್ಠ ಉದ್ದೇಶವೂ ಇಲ್ಲ. ಕಳೆದ 5 ವರ್ಷದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ’ ಎಂದು ‘ಬ್ಲ್ಯಾಕ್‌ ಬಕ್’ ಕಂ‍ಪನಿ ಸಿಇಒ ರಾಜೇಶ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿ ಬೇಸರ ಹೊರಹಾಕಿದ್ದಾರೆ.

ರಾಜೇಶ್ ಪೋಸ್ಟ್‌ ಕುರಿತು ಪ್ರತಿಕ್ರಿಯಿಸಿರುವ ನಾರಾ ಲೋಕೇಶ್, ‘ಹಾಯ್ ರಾಜೇಶ್, ನಿಮ್ಮ ಕಂಪನಿಯನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಬಹುದು. ನಾವು ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದೇವೆ. ಗುಣಮಟ್ಟದ ಮೂಲಸೌಕರ್ಯ ನಿರ್ಮಾಣವಾಗುತ್ತಿದೆ. ಮಹಿಳೆಯರಿಗೆ ಸುರಕ್ಷಿತ ನಗರವೆಂದು ರೇಟಿಂಗ್ ಪಡೆದಿದ್ದೇವೆ. ನಿಮ್ಮ ಕಂಪನಿಯನ್ನು ಇಲ್ಲಿಗೆ ಸ್ಥಳಾಂತರಿಸುವ ಬಗ್ಗೆ ಒಮ್ಮೆ ಪರಿಶೀಲಿಸಿ’ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಸರ್ಕಾರ ತ್ವರಿತವಾಗಿ ಮಧ್ಯಪ್ರವೇಶ ಮಾಡಬೇಕು ಎಂದು ಉದ್ಯಮಿಗಳಾದ ಮೋಹನದಾಸ್ ಪೈ ಹಾಗೂ ಕಿರಣ್‌ ಮಜುಂದಾರ್‌ ಷಾ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.