
ಹಳೆ ಮದ್ರಾಸ್ ರಸ್ತೆಯ ಟಿನ್ ಫ್ಯಾಕ್ಟರಿ ಬಳಿ ಉಂಟಾಗಿದ್ದ ವಾಹನ ದಟ್ಟಣೆ
–ಚಿತ್ರಗಳು: ರಂಜು ಪಿ
ಬೆಂಗಳೂರು: ಪೂರ್ವಭಾಗದಿಂದ ನಗರ ಪ್ರವೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿರುವ ಹಳೆ ಮದ್ರಾಸ್ ರಸ್ತೆಯಲ್ಲಿ ಅತಿ ಹೆಚ್ಚು ವಾಹನದಟ್ಟಣೆ ಇದ್ದು, ಸುಗಮ ಸಂಚಾರ ಎನ್ನುವುದು ಪ್ರಯಾಣಿಕರಿಗೆ ಕನಸಿನ ಮಾತಾಗಿದೆ.
ಹಳೆ ಮದ್ರಾಸ್ ರಸ್ತೆಯ ಸ್ವಾಮಿ ವಿವೇಕಾನಂದ ಮೆಟ್ರೊ ನಿಲ್ದಾಣದಿಂದ ಕೆ.ಆರ್.ಪುರ ಬಳಿಯ ಭಟ್ರಹಳ್ಳಿ
ವರೆಗೆ ಸದಾ ವಾಹನದಟ್ಟಣೆ ಇರುತ್ತದೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಸಮಸ್ಯೆ ತುಂಬಾ ಗಂಭೀರವಾಗಿದೆ. ಆದರೆ, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನವೇ ಆಗಿಲ್ಲ.
ನಗರಪ್ರದೇಶದಲ್ಲಿ ಬರುವ ರಾಮಮೂರ್ತಿ ನಗರ, ಕೆ.ಆರ್.ಪುರ, ಎ.ನಾರಾಯಣಪುರ, ಬಿ.ನಾರಾಯಣ ಪುರ, ಮಹದೇವಪುರ, ಹೂಡಿ, ವೈಟ್‌ಫೀಲ್ಡ್ ಮೊದಲಾದ ಪ್ರದೇಶಗಳಿಗೆ ತೆರಳುವ ವಾಹನಗಳು ಅಷ್ಟೇ ಅಲ್ಲದೆ, ಹೊಸಕೋಟೆ, ಕೋಲಾರ, ಚಿಂತಾಮಣಿ, ಮಾಲೂರು, ಬಂಗಾರಪೇಟೆಗೆ ಹೋಗುವ ವಾಹನಗಳೂ ಇದೇ ಮಾರ್ಗದಲ್ಲಿ ಸಂಚರಿಸುತ್ತವೆ.
ಅಷ್ಟೇ ಅಲ್ಲದೆ, ಆಂಧ್ರಪ್ರದೇಶ, ಚೆನ್ನೈಗೆ ಹೋಗುವ ವಾಹನಗಳು ಈ ಮಾರ್ಗದಲ್ಲೇ ಸಾಗುತ್ತವೆ. ಬೆಂಗಳೂರು–ಚೆನ್ನೈ ಕಾರಿಡಾರ್ ಆದ ಬಳಿಕ, ಹೊಸೂರು ಮೂಲಕ ಚೆನ್ನೈಗೆ ಹೋಗುವ ಬದಲು ಈ ಮಾರ್ಗದಲ್ಲಿಯೇ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ದಟ್ಟಣೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಐಟಿಪಿಎಲ್, ಹೂಡಿ, ಮಹದೇವ ಪುರ ಭಾಗದಲ್ಲಿ ಐ.ಟಿ ಕಂಪನಿಗಳು ಹೆಚ್ಚಾಗಿವೆ. ಕಂಪನಿ ವಾಹನಗಳು, ಉದ್ಯೋಗಿಗಳು ತೆರಳುವ ಕ್ಯಾಬ್‌ಗಳು, ಸ್ವಾಮಿ ವಿವೇಕಾನಂದ, ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣಗಳಿಗೆ ಬರುವವರು ಈ ಮಾರ್ಗದಲ್ಲೇ ಸಂಚರಿಸುವುದರಿಂದ ನಿತ್ಯ ಸಂಚಾರ ದಟ್ಟಣೆಯ ಸಮಸ್ಯೆಯಲ್ಲಿ ಸಿಲುಕಿ ಪ್ರಯಾಣಿಕರು ಒದ್ದಾಡುವಂತಾಗಿದೆ.
ಸುಗಮ ಸಂಚಾರಕ್ಕೆ ಅನುಕೂಲ ವಾಗಲಿ ಎಂಬ ಉದ್ದೇಶದಿಂದ ಸುಮಾರು 23 ವರ್ಷಗಳ ಹಿಂದೆ ಕೆ.ಆರ್.ಪುರ ರೈಲು ನಿಲ್ದಾಣದ ಬಳಿ ತೂಗು ಸೇತುವೆ ನಿರ್ಮಿಸಲಾಗಿತ್ತು. ಆದರೆ, ಇದಾದ ನಂತರವೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಟಿನ್ ಫ್ಯಾಕ್ಟರಿಯಿಂದ ಐಟಿಐವರೆಗೆ ತೂಗು ಸೇತುವೆ ಇದ್ದು, ಇದರ ಮೇಲೆಯೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ.
ಎನ್‌ಜಿಇಎಫ್ ವೃತ್ತದ ಬಳಿ ಹರಸಾಹಸ: ಈ ವೃತ್ತದಲ್ಲಿ ಸಿಗ್ನಲ್ ದಾಟಿ ಮುಂದಕ್ಕೆ ಹೋಗಲು ದಟ್ಟಣೆ ಅವಧಿಯಲ್ಲಿ ಕೆಲವೊಮ್ಮೆ 10ರಿಂದ 15 ನಿಮಿಷ ಕಾಯಬೇಕಾಗುತ್ತದೆ. ಸಿಗ್ನಲ್‌ನಿಂದಾಗಿ ಹಳೆ ವಿಮಾನ ನಿಲ್ದಾಣದಿಂದ ಬರುವ ವಾಹನಗಳು ಕಿ.ಮೀ.ವರೆಗೂ ನಿಂತಿರುತ್ತವೆ. ಅಷ್ಟೇ ಅಲ್ಲದೆ ಮುಖ್ಯ ರಸ್ತೆಯಲ್ಲಿ(ಹಳೆ ಮದ್ರಾಸ್ ರಸ್ತೆ) ಬೈಯಪ್ಪನಹಳ್ಳಿ ಪೊಲೀಸ್ ಠಾಣೆವರೆಗೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ.
ಕೃಷ್ಣಯ್ಯನಪಾಳ್ಯ, ಸದಾನಂದ ನಗರ ಮೊದಲಾದ ಪ್ರದೇಶಗಳಿಂದ ಬರುವ ವಾಹನಗಳಿಗೆ ಎನ್‌ಜಿಇಎಫ್ ಬಳಿ ಹಳೆ ಮದ್ರಾಸ್ ರಸ್ತೆ ಪ್ರವೇಶಿಸಲು ಅವಕಾಶ ಇಲ್ಲ. ಈ ಕಡೆಯಿಂದ ಬರುವವರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ಹತ್ತಿರದ ಸಿಗ್ನಲ್‌ಗೆ ತಲುಪಿ, ಅಲ್ಲಿ ಯು–ಟರ್ನ್ ಪಡೆಯಬೇಕು. ಹೀಗಾಗಿ, ವಾಹನಗಳು ಬೇಗ ಮುಂದಕ್ಕೆ ಹೋಗುವುದಿಲ್ಲ. ದಟ್ಟಣೆಗೆ ಇದೂ ಒಂದು ಕಾರಣ ಎನ್ನುತ್ತಾರೆ ಪೊಲೀಸರು.
ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ದಾಟಿದ ನಂತರ ಎಡಕ್ಕೆ ಆರ್‌ಎಂಝಡ್ ಮೊದಲಾದ ಕಂಪನಿಗಳಿವೆ. ಬಲಕ್ಕೆ ಗೋಪಾಲನ್ ಮಾಲ್ ಇದೆ. ಇನ್ನು ನಾಗವಾರ ಪಾಳ್ಯದಿಂದ ಬರುವ ವಾಹನಗಳಿಗೆ ನೇರವಾಗಿ ಹಳೆ ಮದ್ರಾಸ್ ರಸ್ತೆ ಪ್ರವೇಶಿಸಲು ಅವಕಾಶ ಇಲ್ಲ. ಅವರು ಎಡಕ್ಕೆ ತಿರುಗಿ ಪೊಲೀಸ್ ಠಾಣೆವರೆಗೂ ಬಂದು, ಅಲ್ಲಿ ಯು–ಟರ್ನ್ ಪಡೆಯಬೇಕು. ಹೀಗಾಗಿ, ಎರಡೂ ಕಡೆ ವಾಹನಗಳ ದಟ್ಟಣೆ ಕಂಡುಬರುತ್ತಿದೆ.
ಟಿನ್ ಫ್ಯಾಕ್ಟರಿ ಬಳಿ ಮೊದಲಿಗೆ ಹೋಲಿಸಿದರೆ ಸ್ವಲ್ಪಮಟ್ಟಿಗೆ ಸಮಸ್ಯೆ ಬಗೆಹರಿದಿದೆ. ನಗರದಿಂದ ಹೊರಗೆ ಹೋಗುವ ವಾಹನಗಳು ಹೆಚ್ಚು ಹೊತ್ತು ಅಲ್ಲಿ ನಿಲ್ಲುವುದಿಲ್ಲ. ಆದರೆ, ನಗರಕ್ಕೆ ಪ್ರವೇಶಿಸುವಾಗ ತುಂಬಾ ಹೊತ್ತು ತೂಗು ಸೇತುವೆ ಮೇಲೆಯೇ ವಾಹನಗಳು ನಿಂತಿರುತ್ತವೆ. ಹೊರ ವರ್ತುಲ ರಸ್ತೆ ಕಡೆಯಿಂದ ಬರುವ ವಾಹನಗಳು ಹಾಗೂ ತೂಗು ಸೇತುವೆ ಮೇಲಿಂದ ಬರುವ ವಾಹನಗಳು ಒಮ್ಮೆಲೇ ಹಳೆ ಮದ್ರಾಸ್ ರಸ್ತೆ ಪ್ರವೇಶಿಸುವುದನ್ನು ತಪ್ಪಿಸಲು ಅಲ್ಲಿ ಸಿಗ್ನಲ್ ಅಳವಡಿಸಲಾಗಿದೆ. ತೂಗು ಸೇತುವೆ ಮೇಲೆ ವಾಹನಗಳು ಹೆಚ್ಚು ಹೊತ್ತು ನಿಲ್ಲುವುದಕ್ಕೆ ಈ ಅಂಶವೂ ಕಾರಣವಾಗಿದೆ.
ಭಟ್ರಹಳ್ಳಿಯಿಂದ ಸಮಸ್ಯೆ ಶುರು: ಹೊಸಕೋಟೆ ಕಡೆಯಿಂದ ಬರುವ ವಾಹನಗಳು ಭಟ್ರಹಳ್ಳಿವರೆಗೂ ಸುಗಮವಾಗಿ ಸಾಗುತ್ತವೆ. ಅಲ್ಲಿ ಸಿಗ್ನಲ್ ಇದ್ದು ಅಲ್ಲಿಂದಲೇ ಸಂಚಾರ ದಟ್ಟಣೆ ಶುರುವಾಗುತ್ತದೆ. ಅಯ್ಯಪ್ಪನಗರ ಕಡೆಯಿಂದ ಬರುವ ವಾಹನಗಳು ಈ ಸಿಗ್ನಲ್ ಬಳಿ ಮುಖ್ಯರಸ್ತೆಗೆ ತಿರುವು ಪಡೆಯುತ್ತವೆ. ಇಲ್ಲಿ ರಸ್ತೆ ಕಿರಿದಾಗಿರುವುದರಿಂದ ದಟ್ಟಣೆಯಲ್ಲಿ ಸಿಲುಕಿ, ವಾಹನಗಳು ನಿಧಾನವಾಗಿ ಚಲಿಸುತ್ತವೆ.
ಹಳೆ ಮದ್ರಾಸ್ ರಸ್ತೆಯಲ್ಲಿನ ವಾಹನ ದಟ್ಟಣೆ
ಈ ಮಾರ್ಗದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರು ವುದರಿಂದ ದಟ್ಟಣೆ ತಡೆಯುವುದು ಅಸಾಧ್ಯ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಟ್ರಹಳ್ಳಿಯಿಂದ ಇಂದಿರಾ ನಗರದ ವರೆಗೆ ಮೇಲ್ಸೇತುವೆ ನಿರ್ಮಾಣವಾಗಬೇಕು ಎಂಬುದು ಸ್ಥಳೀಯರ ಬೇಡಿಕೆ.
ರಸ್ತೆಗಳು ಇದ್ದಷ್ಟೇ ಇವೆ. ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಅಧಿಕಾರಿಗಳು, ರಾಜಕಾರಣಿಗಳ ಆದಾಯವೂ ಹೆಚ್ಚಾಗಿದೆ. ಆದರೆ, ಸಂಚಾರ ದಟ್ಟಣೆ ತಡೆಯಲು ಏನು ಮಾಡಬೇಕು ಎಂದು ಯೋಚಿಸಲು ಜನಪ್ರತಿನಿಧಿಗಳಿಗೆ ಸಮಯವಿಲ್ಲ ಎಂದು ಖಾಸಗಿ ಸಂಸ್ಥೆಯ ಉದ್ಯೋಗಿ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಎನ್‌ಜಿಇಎಫ್ ಬಳಿ ಮೇಲ್ಸೇತುವೆ ನಿರ್ಮಾಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದರು. ಆದರೆ, ಇದರ ಅನುಷ್ಠಾನಕ್ಕೆ ಇದುವರೆಗೆ ಯಾವುದೇ ಪ್ರಯತ್ನಗಳು ಆಗಿಲ್ಲ. ಘೋಷಣೆಯಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷ್ಣರಾಜಪುರ ಬಸ್ ನಿಲ್ದಾಣ ದಾಟಿ ಮುಂದಕ್ಕೆ ಹೋಗುತ್ತಿದ್ದಂತೆಯೇ ರಸ್ತೆಯ ಎಡ ಭಾಗದಲ್ಲಿ ಟೆಂಪೊಗಳನ್ನು ನಿಲ್ಲಿಸಿಕೊಂಡು ಕಲ್ಲಂಗಡಿ ಹಣ್ಣ, ಪಪ್ಪಾಯ, ಅನಾನಸ್ ಸೇರಿದಂತೆ ಹಣ್ಣು–ತರಕಾರಿಗಳನ್ನು ಮಾರಾಟ ಮಾಡುವುದು ಕಂಡು ಬರುತ್ತದೆ.
ವಾಹನಗಳಲ್ಲಿ ಹೋಗುವವರು ರಸ್ತೆಯಲ್ಲೇ ಕಾರುಗಳನ್ನು ನಿಲ್ಲಿಸಿ ಹಣ್ಣುಗಳ ಖರೀದಿಗೆ ಮುಂದಾಗುತ್ತಾರೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ವಾಹನಗಳು ನಿಧಾನಗತಿಯಲ್ಲಿ ಸಾಗಲು ರಸ್ತೆಬದಿ ವ್ಯಾಪಾರವೂ ಕಾರಣವಾಗಿದೆ. ವ್ಯಾಪಾರಿಗಳಿಗೆ ಬೇರೆ ಕಡೆ ಅವಕಾಶ ಮಾಡಿಕೊಡುವ ಮೂಲಕ, ರಸ್ತೆಯಲ್ಲಿ ವಾಹನಗಳು ಸುಲಲಿತವಾಗಿ ಸಾಗಲು ಅವಕಾಶ ಮಾಡಿಕೊಡಬೇಕು ಎಂಬುದು ಈ ಭಾಗದ ಜನರ ಬೇಡಿಕೆ.
ರಸ್ತೆಬದಿಯಲ್ಲಿ ಮಾರಾಟ ಮಾಡುತ್ತಿದ್ದ 200 ಮಂದಿಯ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಇದು ನಿರಂತರ ಪ್ರಕ್ರಿಯೆ. ನಮ್ಮ ಕಡೆಯಿಂದ ತೆರವಿಗೆ ಪ್ರಯತ್ನಗಳು ನಡೆದಿವೆ ಎಂದು ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಿ.ಜೆ.ಚೈತನ್ಯ ತಿಳಿಸಿದರು.
ಎಲ್ಲೆಲ್ಲಿ ದಟ್ಟಣೆ?
* ಎನ್‌ಜಿಇಎಫ್ ವೃತ್ತ
* ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ಸಿಗ್ನಲ್
* ಐಟಿಐ ಗೇಟ್
* ಕೆ.ಆರ್.ಪುರ
* ಭಟ್ರಹಳ್ಳಿ ಸಿಗ್ನಲ್
ಎನ್‌ಜಿಇಎಫ್‌ನಿಂದ ಕೃಷ್ಣರಾಜಪುರ ರೈಲು ನಿಲ್ದಾಣದ ವರೆಗೆ ಸಮಸ್ಯೆ ಇದೆ. 4ಕಿ.ಮೀ. ಚಲಿಸಲು ಕೆಲವೊಮ್ಮೆ ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಸಿಗ್ನಲ್‌ಗಳನ್ನು ದಾಟಿ ಹೋಗಲು ನಿತ್ಯ ಹರಸಾಹಸ ಮಾಡಬೇಕು.-ಮಲ್ಲೇಶಪ್ಪ, ಬೈಕ್ ಸವಾರ
ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಿಂದ ಸ್ವಲ್ಪ ಮುಂದೆ ಸಾಗಿ, ಯು–ಟರ್ನ್ ಪಡೆದು ಎನ್‌ಜಿಇಎಫ್ ವೃತ್ತಕ್ಕೆ ಬರಲು ಅರ್ಧ ಗಂಟೆ ಬೇಕಾಗುತ್ತದೆ. ಎನ್‌ಜಿಇಎಫ್ ಬಳಿ ಮೇಲ್ಸೇತುವೆ ಇಲ್ಲವೇ ಅಂಡರ್‌ಪಾಸ್ ನಿರ್ಮಾಣ ಮಾಡಬೇಕು. ಪಾಂಡು, ಆಟೊ ಚಾಲಕ-ಪಾಂಡು, ಆಟೊ ಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.