ADVERTISEMENT

ಬೆಂಗಳೂರು ಸುರಂಗ ರಸ್ತೆ: ಲಾಲ್‌ಬಾಗ್‌ನ 6 ಎಕರೆ ಬಳಕೆ

ಕಸಬಾ ಹೋಬಳಿಯ ನಾಲ್ಕು ಸರ್ವೆ ನಂಬರ್‌ಗಳಲ್ಲಿ ಭೂಸ್ವಾಧೀನಕ್ಕೆ ಡಿಪಿಆರ್‌ನಲ್ಲಿ ಅಲೈನ್‌ಮೆಂಟ್‌

ಆರ್. ಮಂಜುನಾಥ್
Published 29 ಅಕ್ಟೋಬರ್ 2025, 0:30 IST
Last Updated 29 ಅಕ್ಟೋಬರ್ 2025, 0:30 IST
   

ಬೆಂಗಳೂರು: ಸುರಂಗ ಮಾರ್ಗಕ್ಕೆ ಬೆಂಗಳೂರು ಉತ್ತರ ತಾಲ್ಲೂಕು ಕಸಬಾ ಹೋಬಳಿಯ ನಾಲ್ಕು ಸರ್ವೆ ನಂಬರ್‌ಗಳಲ್ಲಿ ಲಾಲ್‌ಬಾಗ್‌ನ ಆರು ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್‌) ಅಲೈನ್‌ಮೆಂಟ್‌ ಜೊತೆಗೆ ವಿವರಿಸಲಾಗಿದೆ.

ಲಾಲ್‌ಬಾಗ್‌ ಸಿದ್ದಾಪುರ ಮುಖ್ಯರಸ್ತೆಯಲ್ಲಿ ಲಾಲ್‌ಬಾಗ್‌ ದಕ್ಷಿಣ ಗೇಟ್‌ (ಸಿದ್ದಾಪುರ ಗೇಟ್‌) ಪ್ರವೇಶದ್ವಾರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಂಗ ಮಾರ್ಗದ ಪ್ರವೇಶ ಹಾಗೂ ನಿರ್ಗಮನವಿರಲಿದ್ದು, ಹಲವು ಸೌಲಭ್ಯಗಳನ್ನು ಒಳಗೊಂಡ ಐದು ಅಂತಸ್ತಿನ ವಾಣಿಜ್ಯ ಸಂಕೀರ್ಣವೂ ಇಲ್ಲಿ ನಿರ್ಮಾಣವಾಗಲಿದೆ.

ಕಸಬಾ ಹೋಬಳಿಯ ಲಾಲ್‌ಬಾಗ್‌, ಅಣ್ಣಿಪುರ, ಅರೆಕೆಂಪನಹಳ್ಳಿ, ಸಿದ್ದಾಪುರ ಗ್ರಾಮಗಳು ಬರುವ ವಿಶ್ವೇಶ್ವರಪುರ ವಾರ್ಡ್‌ನಲ್ಲಿ 2.56 ಲಕ್ಷಕ್ಕೂ ಹೆಚ್ಚು ಚದರಡಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಡಿಪಿಆರ್‌ನಲ್ಲಿ ಅಲೈನ್‌ಮೆಂಟ್‌ ಅನ್ನು ಗುರುತಿಸಲಾಗಿದೆ.

ADVERTISEMENT

ಬಿ–ಸ್ಮೈಲ್‌ಗೆ ಸಲ್ಲಿಸಲಾಗಿರುವ ಡಿಪಿಆರ್‌ನಲ್ಲಿ ‘ಭೂಸ್ವಾಧೀನ ನಕ್ಷೆ (ಲಾಲ್‌ಬಾಗ್‌)’ ಎಂಬ ಶೀರ್ಷಿಕೆಯಲ್ಲಿ 2025ರ ಆಗಸ್ಟ್‌ 30ರಂದು ತಯಾರಿಸಿರುವ ಡ್ರಾಯಿಂಗ್‌ ನಂ. ಎಸ್‌ಎಸ್‌ಪಿ/ಡಿಡಬ್ಲ್ಯುಜಿ/24–25/002 ಅನ್ನು ವಿವರವಾಗಿ ನೀಡಲಾಗಿದೆ.

ಮರಿಗೌಡ ಜಂಕ್ಷನ್‌ನಿಂದ ಸಿದ್ದಾಪುರ ರಸ್ತೆಯಲ್ಲಿ ಲಾಲ್‌ಬಾಗ್‌ನ ಭೂಪ್ರದೇಶವನ್ನು ಬಳಸಿಕೊಂಡು, ರೇಸ್‌ಕೋರ್ಸ್‌ ಕಡೆಯಿಂದ ಬರುವ ಸುರಂಗ ರಸ್ತೆಯ ನಿರ್ಗಮನ ರ್‍ಯಾಂಪ್‌ ನಿರ್ಮಾಣವಾಗುತ್ತದೆ. ಮುಂದೆ, ಸಿದ್ದಾಪುರ ಗೇಟ್‌ ಸಮೀಪ ಬೃಹತ್‌ ಪ್ರಮಾಣದಲ್ಲಿ ಲಾಲ್‌ಬಾಗ್‌ ಪ್ರದೇಶವನ್ನು ಬಳಸಿಕೊಂಡು ಶಾಫ್ಟ್‌ ಸಂಕೀರ್ಣವನ್ನು ನಿರ್ಮಿಸಲಾಗುತ್ತದೆ. 

ಅಶೋಕ ಪಿಲ್ಲರ್‌ನಿಂದ (ಸರ್ಕಾರಿ ಡ್ರಗ್‌ ಟೆಸ್ಟಿಂಗ್‌ ಲ್ಯಾಬೊರೇಟರಿ) ಸಿದ್ದಾಪುರ ಗೇಟ್‌ವರೆಗೆ ಸುರಂಗ ರಸ್ತೆಯ ಪ್ರವೇಶ ರ್‍ಯಾಂಪ್‌ ನಿರ್ಮಾಣವಾಗಲಿದ್ದು, ಈ ಹಾದಿಯಲ್ಲಿ ಲಾಲ್‌ಬಾಗ್‌ ಪ್ರದೇಶ ಬಳಕೆಯಾಗಲಿದೆ.

‘ಲಾಲ್‌ಬಾಗ್‌ನೊಳಗೆ ಏನೂ ಬರುವುದಿಲ್ಲ, ಎಕರೆಗಟ್ಟಲೆ ಭೂಮಿ ಬಳಸುವುದಿಲ್ಲ. ಒಂದು ಬದಿಯಲ್ಲಿ ಮಾತ್ರ ಸಾಗುತ್ತದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಆದರೆ, ಡಿಪಿಆರ್‌ನಲ್ಲಿ 6 ಎಕರೆ ಭೂಸ್ವಾಧೀನದ ವಿವರ ಸ್ಪಷ್ಟವಾಗಿದೆ’ ಎಂದು ‘ಸಿಟಿಜನ್ಸ್‌ ಫಾರ್ ಸಿಟಿಜನ್ಸ್‌’ನ ಸಂಸ್ಥಾಪಕ ರಾಜಕುಮಾರ್‌ ದುಗಾರ್‌ ಹೇಳಿದರು.

‘ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವ ಬ್ಲಾಕ್‌ಗಳು ಲಾಲ್‌ಬಾಗ್‌ನಲ್ಲಿದ್ದು, ಶತಮಾನದ ಹಿಂದೆ ಲಾಲ್‌ಬಾಗ್‌ನಲ್ಲಿ ಹುಲಿ, ಕರಡಿಗಳಿದ್ದ ಪ್ರಾಣಿ ಸಂಗ್ರಹಾಲಯವೂ ಇತ್ತು’ ಎಂದರು.

ಹೆಬ್ಬಾಳ ಕೆರೆ ನಾಲಾಗೆ ಕತ್ತರಿ?

ಹೆಬ್ಬಾಳ ಜಂಕ್ಷನ್‌ನಲ್ಲಿ ಉತ್ತರ ತಾಲ್ಲೂಕಿನ ಕಸಬಾ ಹೋಬಳಿಯ ಹೆಬ್ಬಾಳದ ಮೂರು ಸರ್ವೆ ನಂಬರ್‌ನಲ್ಲಿ ಸುಮಾರು ಎರಡು ಎಕರೆ ಭೂಸ್ವಾಧೀನದ ಅಗತ್ಯವಿದೆ ಎಂದು ಡಿಪಿಆರ್‌ನಲ್ಲಿ ವಿವರಿಸಲಾಗಿದೆ. ‘ಡಿಫೆನ್ಸ್‌ ಭೂಮಿ’ಯಲ್ಲಿಯೇ ಭೂಸ್ವಾಧೀನವಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಅಲೈನ್‌ಮೆಂಟ್‌ನಲ್ಲಿ ನಿರ್ಗಮನ ರ‍್ಯಾಂಪ್–8 ಹೆಬ್ಬಾಳ ಕೆರೆಯ ಬದಿಯಲ್ಲೇ ಸಾಗಲಿದ್ದು, ಕೆರೆ ಕೋಡಿಯ ನಾಲಾ ಕತ್ತರಿಸುವಂತೆ ತೋರಿಸಲಾಗಿದೆ. ಒಂದು ಬದಿ ನಿರ್ಗಮನ ರ‍್ಯಾಂಪ್‌ ಹಾದುಹೋದರೆ, ಅದರ ಪಕ್ಕದ ಕೆಳಭಾಗದಲ್ಲಿ ಸುರಂಗ ರಸ್ತೆಯ ಮುಖ್ಯ ಮಾರ್ಗದ ಎರಡು ಟ್ಯೂಬ್‌ಗಳು ನಿರ್ಮಾಣವಾಗಲಿವೆ ಎಂದು ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.