
ಬೆಂಗಳೂರು: ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ (ಉತ್ತರ–ದಕ್ಷಿಣ ಕಾರಿಡಾರ್) ಮೂರು ಪಥಗಳ ಅವಳಿ ಸುರಂಗ ರಸ್ತೆ (ಟ್ವಿನ್ ಟನಲ್) ನಿರ್ಮಾಣಕ್ಕೆ ಆಹ್ವಾನಿಸಲಾಗಿದ್ದ ಟೆಂಡರ್ ನಲ್ಲಿ ಹೆಚ್ಚಿನ ಕಂಪನಿಗಳು ಭಾಗವಹಿಸದ ಕಾರಣ ಬಿಡ್ ಸಲ್ಲಿಸುವ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.
ಬೃಹತ್ ಮೂಲಸೌಕರ್ಯಗಳ ಅಭಿವೃದ್ಧಿಗೆ ರಚಿಸಲಾಗಿರುವ ವಿಶೇಷ ಉದ್ದೇಶದ ಸಂಸ್ಥೆ (ಎಸ್‌ಪಿವಿ)– ‘ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆ’ (ಬಿ–ಸ್ಮೈಲ್) ವತಿಯಿಂದ ಎರಡು ಪ್ಯಾಕೇಜ್‌ಗಳಲ್ಲಿ ‘ನಿರ್ಮಾಣ– ಕಾರ್ಯಾಚರಣೆ– ವರ್ಗಾವಣೆ’ (ಬೂಟ್) ಮಾದರಿಯಲ್ಲಿ ₹17,698 ಕೋಟಿ ಅಂದಾಜು ವೆಚ್ಚದಲ್ಲಿ ಜುಲೈ 16ರಂದು ಟೆಂಡರ್ ಆಹ್ವಾನಿಸಲಾಗಿತ್ತು. ಸೆಪ್ಟೆಂಬರ್ 3ರಂದು ಬಿಡ್ ಸಲ್ಲಿಸಲು ಅಂತಿಮ ದಿನವಾಗಿತ್ತು.
ಅದಾನಿ ಗ್ರೂಪ್, ಎಲ್ ಆ್ಯಂಡ್ ಟಿ, ಟಾಟಾ ಪ್ರಾಜೆಕ್ಟ್ಸ್ ಸೇರಿದಂತೆ ದೇಶದ ಪ್ರಮುಖ ಹತ್ತು ಸಂಸ್ಥೆಗಳು ನಗರದಲ್ಲಿನ ಉದ್ದೇಶಿತ ಸುರಂಗ ರಸ್ತೆ ಯೋಜನೆಯ ಟೆಂಡರ್‌ನಲ್ಲಿ ಭಾಗವಹಿಸಲು ಆಸಕ್ತಿ ತೋರಿವೆ ಎಂದು ಹೇಳಲಾಗಿತ್ತು.
ಈ ಟೆಂಡರ್ ಅವಧಿಯನ್ನು ಸೆ.3ರಿಂದ ಸೆ.30ಕ್ಕೆ ವಿಸ್ತರಿಸಲಾಯಿತು. ನಂತರ, ಅ.29ರ ಗಡುವು ನೀಡಲಾಗಿತ್ತು. ಇದೀಗ ಮತ್ತೆ ಅವಧಿಯನ್ನು ವಿಸ್ತರಿಸಿ, ನ.11ರವರೆಗೆ ಬಿಡ್ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಬಿಬಿಎಂಪಿ, ಬಿ–ಸ್ಮೈಲ್ ನೋಂದಣಿಯಾಗಿರುವ ಗುತ್ತಿಗೆದಾರರು ಅಥವಾ ಕೇಂದ್ರ ಲೋಕೋಪಯೋಗಿ, ರಾಜ್ಯ ಲೋಕೋಪಯೋಗಿ ಇಲಾಖೆ, ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೋಂದಣಿಯಾಗಿರುವ ಗುತ್ತಿಗೆದಾರರು ಬಿಡ್ ಸಲ್ಲಿಸಲು ಅರ್ಹರಾಗಿರುತ್ತಾರೆ. ಜಂಟಿ ಸಂಸ್ಥೆಗಳಾಗಿ ಅಥವಾ ಒಕ್ಕೂಟಗಳಾಗಿಯೂ ಬಿಡ್ ಸಲ್ಲಿಬಹುದಾಗಿದೆ ಎಂದು ಟೆಂಡರ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಕ್ರೋಶ: ‘ಸುರಂಗ ರಸ್ತೆಯಿಂದ ಲಾಲ್‌ಬಾಗ್ ಉದ್ಯಾನ, ಸ್ಯಾಂಕಿ ಕೆರೆ, ಹೆಬ್ಬಾಳ ಕೆರೆಗೆ ಧಕ್ಕೆಯಾಗುತ್ತಿದೆ. ಸುರಂಗ ರಸ್ತೆಯಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದಿಲ್ಲ’ ಎಂದು ನಾಗರಿಕರು, ಪರಿಸರ ಕಾರ್ಯಕರ್ತರು, ತಜ್ಞರು ಅಭಿಪ್ರಾಯಪಟ್ಟಿದ್ದರು. ‘ಈ ಯೋಜನೆ ಕೈಬಿಡಬೇಕು’ ಎಂದು ಬಿಜೆಪಿ ಮುಖಂಡರು ಆಗ್ರಹಿಸುತ್ತಿದ್ದಾರೆ.
ಸುರಂಗ ರಸ್ತೆಯ ಡಿಎಪಿಆರ್‌ನಲ್ಲಿ 121 ಲೋಪಗಳನ್ನು ಗುರುತಿಸಿರುವ, ಸರ್ಕಾರವೇ ರಚಿಸಿರುವ ತಜ್ಞರ ಸಮಿತಿ ವರದಿ, ಭೂವಿಜ್ಞಾನ, ಭೂತಾಂತ್ರಿಕ ಸೇರಿದಂತೆ ಮಣ್ಣು ಅಧ್ಯಯನ ಪರೀಕ್ಷೆಗಳೇ ನಡೆದಿಲ್ಲ ಎಂದು ಹೇಳಿದೆ. ಸುರಂಗ ರಸ್ತೆಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲೂ ಇದೆ.
ತೇಜಸ್ವಿ ನಾನು ತಜ್ಞರಲ್ಲ: ಡಿಕೆಶಿ
ಬೆಂಗಳೂರು: ‘ಸುರಂಗ ರಸ್ತೆ ವಿಚಾರದಲ್ಲಿ ನಾನು ತಾಂತ್ರಿಕ ತಜ್ಞ ಅಲ್ಲ. ತೇಜಸ್ವಿ ಸೂರ್ಯ ಅವರೂ ತಜ್ಞರಲ್ಲ. ಅದಕ್ಕಾಗಿಯೇ ತಾಂತ್ರಿಕ ತಜ್ಞರ ತಂಡವೇ ಇದೆ. ಅವರು ಕೆಲಸ ಮಾಡಲಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
‘ಸುರಂಗ ರಸ್ತೆ ಮಾಡಲು ಬಿಡುವುದಿಲ್ಲ’ ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ತೇಜಸ್ವಿ ನಗರ ರೈಲು ಯೋಜನೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಅದನ್ನು ಮಾಡಲಿ. ಅದಕ್ಕೆ ಅಗತ್ಯವಾದ ಅನುದಾನವನ್ನು ಕೇಂದ್ರ ಸರ್ಕಾರದಿಂದ ಕೊಡಿಸಲಿ. ನಮ್ಮದೇ ರಾಜ್ಯದ ಸೋಮಣ್ಣ ಅವರು ಕೇಂದ್ರ ಸಚಿವರಾಗಿದ್ದಾರೆ. ಅವರ ನೆರವು ಪಡೆಯಲಿ ಏನು ಬೇಕಾದರೂ ಮಾಡಲಿ. ಆವರು ಹೋರಾಟ ಮಾಡುವುದಾದರೆ ಮಾಡಲಿ ಬೇಡ ಎಂದು ಹೇಳಿದವರು ಯಾರು? ಬಿಜೆಪಿಯಲ್ಲಿ ತೇಜಸ್ವಿ ಸೂರ್ಯ ಹಾಗೂ ಅಶೋಕ ಹೊರತಾಗಿ ಉಳಿದ ಯಾವುದೇ ನಾಯಕರು ಮಾತನಾಡುತ್ತಿಲ್ಲ’ ಎಂದರು.
‘ಸ್ಟೀಲ್ ಬ್ರಿಡ್ಜ್ ಮಾದರಿಯಲ್ಲೇ ಟನಲ್ ರಸ್ತೆ ಯೋಜನೆ ಮುರಿದು ಬೀಳುತ್ತಾ’ ಎಂದು ಸುದ್ದಿಗಾರರು ಕೇಳಿದಾಗ ’ನಾವು ನಮ್ಮ ಕೆಲಸ ಮಾಡುತ್ತೇವೆ. ನಮ್ಮ ಆಸಕ್ತಿ ನೋಡಿ ಜನರು ನಮ್ಮ ಪ್ರಯತ್ನಕ್ಕೆ ಬೆಂಬಲ ನೀಡುತ್ತಿದ್ದಾರೆ. ನಮ್ಮ ಕೆಲಸ ಅನುಷ್ಠಾನ ಆಗಲಿದೆ ಎಂಬ ವಿಶ್ವಾಸ ಇದೆ’ ಎಂದು ಶಿವಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.