ಕನ್ನಡ ಕಲಿಸಿದ್ದಕ್ಕೆ ದೀಪಿಕಾ ಪಡುಕೋಣೆಗೆ ಶಿರಬಾಗಿ ಧನ್ಯವಾದ ಹೇಳಿದ ದಿಲ್‌ಜೀತ್ ದೋಸಾಂಜ್
ಎಕ್ಸ್ ಚಿತ್ರ
ಬೆಂಗಳೂರು: ತುಮಕೂರು ರಸ್ತೆಯಲ್ಲಿರುವ ಮಾದಾವರ ಬಳಿಯ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಪಾಪ್ ಗಾಯಕ ದಿಲ್‌ಜೀತ್ ದೋಸಾಂಜ್ ಅವರ ಸಂಗೀತ ಸಂಜೆ ಕಾರ್ಯಕ್ರಮ ಶುಕ್ರವಾರ ನಡೆಯಿತು.
ದಿಲ್‌ಜೀತ್ ಪಾಪ್ ಗೀತೆಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಯುವಜನರು ಹುಚ್ಚೆದ್ದು ಕುಣಿದರು. ಇದರ ನಡುವೆಯೇ ದಿಲ್‌ಜೀತ್ ಕಾರ್ಯಕ್ರಮಕ್ಕೆ ನಟಿ ದೀಪಿಕಾ ಪಡುಕೋಣೆ ಹಾಜರಾಗಿ, ಹೆಜ್ಜೆ ಹಾಕಿದ್ದು ಅಭಿಮಾನಿಗಳ ಪಾಲಿಗೆ ಮತ್ತಷ್ಟು ಖುಷಿ ನೀಡಿತ್ತು.
ನಮಸ್ತೆ, ಚೆನ್ನಾಗಿದ್ದೀರಾ ಎಲ್ಲವನ್ನೂ ಹೇಳಿದ್ದೇನೆ. ಕನ್ನಡದ ಒಂದು ವಾಕ್ಯವನ್ನು ನನಿಗೆ ಕಲಿಸಿಕೊಡಿ ಎಂದು ದಿಲ್‌ಜೀತ್ ದೀಪಿಕಾ ಬಳಿ ಕೇಳಿಕೊಂಡರು.
‘ನಾನು ನಿನಿಗೆ ಪ್ರೀತಿಸ್ತೀನಿ’ ಎಂದು ಹೇಳಿಕೊಟ್ಟ ದೀಪಿಕಾ, ಶಾಲೆಯಲ್ಲಿ ನಾನು ಕನ್ನಡ ಕಲಿತಿದ್ದೀನಿ’ ಎಂದರು. ಇದಕ್ಕೆ ಇಡೀ ಸಭಾಂಗಣವೇ ಕೇಕೆ ಹಾಕಿ ಸಂಭ್ರಮಿಸಿತು.
‘ದೊಡ್ಡ ಪರದೆಯಲ್ಲಿ ನೋಡಿದ ನಿಮ್ಮನ್ನು ಹೀಗೆ ನೇರವಾಗಿ ನೋಡುವ ಅವಕಾಶ ಸಿಗುತ್ತದೆ ಎಂದು ಭಾವಿಸಿರಲಿಲ್ಲ. ಪ್ರತಿಭಾವಂತ ನಟಿಯಾದ ನೀವು ನಮ್ಮೊಂದಿಗಿದ್ದೀರಾ ಎಂಬುದೇ ನಮ್ಮ ಹೆಮ್ಮೆ’ ಎಂದು ದಿಲ್‌ಜೀತ್ ಧನ್ಯವಾದ ಹೇಳಿದರು.
ನಂತರ ತಾವು ಪ್ರಾಯೋಜಿಸುವ ಸೋಪುಗಳ ಪೊಟ್ಟಣವನ್ನು ದೀಪಿಕಾ ಸಭಿಕರತ್ತ ತೂರಿದರು.
ಕಾರ್ಯಕ್ರಮ ಸಂಜೆ 7ಕ್ಕೆ ಆರಂಭವಾಗುವುದಾಗಿ ಆಯೋಜಕರು ಹೇಳಿದ್ದರು. ಸಂಜೆ 4ಕ್ಕೆ ಸಭಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಮಯಕ್ಕಿಂತ ಮುಂಚೆಯೇ ನಗರಕ್ಕೆ ಬಂದಿದ್ದ ದಿಲ್‌ಜೀತ್, ರಾಮೇಶ್ವರಂ ಕೆಫೆಗೆ ತೆರಳಿ ತುಪ್ಪದ ಪೋಡಿ ಇಡ್ಲಿ ಹಾಗೂ ದೋಸೆಯನ್ನು ಸವಿದರು.
ಸಾರೇಗಾಮಾ ಪ್ರಾಯೋಜಕತ್ವದಲ್ಲಿ ದೇಶದ 10 ನಗರಗಳಲ್ಲಿ ದಿಲ್‌ಜೀತ್ ಕಾರ್ಯಕ್ರಮ ನೀಡುತ್ತಿದ್ದಾರೆ. ಇದರಲ್ಲಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮ ಗೀತೆಗಿಂತಲೂ ಹೆಚ್ಚಾಗಿ, ತುಮಕೂರು ರಸ್ತೆಯಲ್ಲಿ ಶುಕ್ರವಾರ ಸೃಷ್ಟಿಯಾದ ಹಠಾತ್ ಟ್ರಾಫಿಕ್‌ನಿಂದ ಕುಖ್ಯಾತಿ ಪಡೆಯಿತು. ರಸ್ತೆಯಲ್ಲಿ ಸಿಲುಕಿಕೊಂಡ ಹಲವರು ಒಂದು ಗಂಟೆಗೂ ಹೆಚ್ಚು ಕಾಲ ಸಂಚರಿಸಲಾಗದೆ ಪರಿತಪಿಸಿದರು. ಹಲವರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಕೋರಿಕೆ ನಂತರ ಮೆಟ್ರೊ ಸೇವೆಯನ್ನು ರಾತ್ರಿ 11ರ ಬದಲಾಗಿ 12ರವರೆಗೂ ವಿಸ್ತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.