ADVERTISEMENT

ರಸ್ತೆ ಬಂದ್; ದುಬಾರಿಯಾಯಿತು ವಿಮಾನ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 19:30 IST
Last Updated 10 ಆಗಸ್ಟ್ 2019, 19:30 IST
   

ಬೆಂಗಳೂರು: ನಗರದಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್‌, ಮತ್ತು ಚಾರ್ಮಾಡಿ ಘಾಟ್‌ ರಸ್ತೆಗಳಲ್ಲಿ ಭಾರಿ ಮಳೆಯಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ವಿಮಾನ ಪ್ರಯಾಣಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದು, ವಿಮಾನಯಾನ ಕಂಪನಿಗಳು ಪ್ರಯಾಣ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿವೆ.

ಸಾಮಾನ್ಯ ದಿನಗಳಲ್ಲಿ ವಿಮಾನ ಪ್ರಯಾಣ ದರ ಸರಾಸರಿ ₹2,280ರಷ್ಟು ಇರುತ್ತಿತ್ತು. ಆದರೆ, ಶುಕ್ರವಾರ ಕೆಲ ಪ್ರಯಾಣಿಕರು, ₹ 9,715 ರಿಂದ ₹ 53,600ರವರೆಗೆ ಹಣ ಕೊಟ್ಟು ನಗರದಿಂದ ಮಂಗಳೂರಿಗೆವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.

‘ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ನದಿಗಳು ತುಂಬಿ ಹರಿಯುತ್ತಿದ್ದು, ಹಲವೆಡೆ ಗುಡ್ಡ ಕುಸಿಯುತ್ತಿದೆ. ಅದರಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ. ಬೆಂಗಳೂರಿನಿಂದ ಮಂಗಳೂರು ಹಾಗೂ ಸುತ್ತಮುತ್ತ ಊರುಗಳಿಗೆ ವಾಹನ ಸಂಪರ್ಕ ಕಡಿತಗೊಂಡಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಿಮಾನಯಾನ ಕಂಪನಿಗಳು, ಟಿಕೆಟ್ ದರ ಹೆಚ್ಚಳ ಮಾಡಿ ದುಡ್ಡು ಮಾಡುತ್ತಿವೆ’ ಎಂದು ಕೆಲ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಬಹುತೇಕ ಗ್ರಾಮಗಳು ಜಲಾವೃತಗೊಂಡಿದ್ದು, ಜನರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಮಂಗಳೂರಿನ ಜನ, ಊರಿಗೆ ಹೋಗಲು ಬಸ್‌ಗಳಿಲ್ಲ. ಪ್ರಯಾಣಿಕರು ವಿಮಾನವನ್ನೇ ನೆಚ್ಚಿಕೊಳ್ಳಬೇಕಾಗಿದೆ. ಇಂಥ ಸಂದರ್ಭದಲ್ಲೇ ಪ್ರಯಾಣ ದರ ಹೆಚ್ಚಳ ಮಾಡಿರುವುದು ನಾಚಿಕೆಗೇಡು’ ಎಂದು ಯಶವಂತ್ ಕದ್ರಿ ಎಂಬುವರು ಕಿಡಿಕಾರಿದ್ದಾರೆ.

ಪ್ರಯಾಣ ದರ ಏರಿಕೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ವಿಮಾನಯಾನ ಕಂಪನಿಯವರು ಕರೆಗೆ ಲಭ್ಯರಾಗಿಲ್ಲ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.