ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಬಿಸಿಲ ಧಗೆಗೆ ಉದರಬೇನೆ, ಬೆವರುಗುಳ್ಳೆಯಂತಹ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ಶೇ 20 ರಷ್ಟು ಹೆಚ್ಚಳವಾಗಿದೆ.
ಹವಾಮಾನ ಇಲಾಖೆ ಪ್ರಕಾರ ನಗರದಲ್ಲಿ ಸಾಮಾನ್ಯಕ್ಕಿಂತ ಮೂರು ಡಿಗ್ರಿ ಸೆಲ್ಸಿಯಸ್‌ವರೆಗೂ ಉಷ್ಣಾಂಶ ಅಧಿಕ ವರದಿಯಾಗುತ್ತಿದೆ. ಈ ತಿಂಗಳ ಬಹುತೇಕ ದಿನಗಳು ಗರಿಷ್ಠ ಉಷ್ಣಾಂಶವು 34ರಿಂದ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಆಗಾಗ ಬಿಸಿ ಗಾಳಿಯೂ ಬೀಸುತ್ತಿರುವುದರಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಸ್ವಸ್ಥಗೊಳ್ಳುತ್ತಿದ್ದು, ಕೆಂಪು ಗುಳ್ಳೆಗಳು, ಜ್ವರ ಹಾಗೂ ಉಸಿರಾಟ ಸಂಬಂಧಿ ಸಮಸ್ಯೆಗಳಿಗೆ ವಿವಿಧ ವಯೋಮಾನದವರು ಆಸ್ಪತ್ರೆಗಳಿಗೆ ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡಲಾರಂಭಿಸಿದ್ದಾರೆ.
ಕಲುಷಿತ ನೀರು, ಅಸುರಕ್ಷಿತ ಆಹಾರ ಸೇವನೆಯಿಂದ ಉದರಬೇನೆ, ವಿಷಮಶೀತ ಜ್ವರ, ಕಾಲರಾದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ಇಲಾಖೆಯ ವಿಶ್ಲೇಷಣೆ ಪ್ರಕಾರ ಪ್ರಕಾರ ಮಾರ್ಚ್ ಮೊದಲ ವಾರದಿಂದ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ ಹಾಗೂ ಅತಿಸಾರ ಪ್ರಕರಣಗಳು ಏರುಗತಿ ಪಡೆದಿವೆ. ವಾರದಲ್ಲಿ ದೃಢಪಟುತ್ತಿರುವ ಅತಿಸಾರ ಪ್ರಕರಣಗಳು 3 ಸಾವಿರದ ಗಡಿ ದಾಟಿದೆ.
ಬಿಸಿಲಾಘಾತದಿಂದ ಸಮಸ್ಯೆ: ಉಷ್ಣಾಂಶ ಹೆಚ್ಚಳದಿಂದ ಜ್ವರ, ತಲೆನೋವು, ಊತಗಳು, ಸ್ನಾಯು ಸೆಳೆತ, ಪ್ರಜ್ಞೆ ತಪ್ಪುವಿಕೆ, ಸುಸ್ತು ಸೇರಿ ವಿವಿಧ ಸಮಸ್ಯೆಗಳು ನಗರದ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ವಿಕ್ಟೋರಿಯಾ, ಜಯನಗರ ಸಾರ್ವಜನಿಕ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಕಿಮ್ಸ್, ಮಣಿಪಾಲ್, ಫೋರ್ಟಿಸ್, ಅಪೋಲೊ, ನಾರಾಯಣ ಹೆಲ್ತ್ ಸೇರಿದಂತೆ ಪ್ರಮುಖ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವ ಹೊರ ರೋಗಿಗಳಲ್ಲಿ, ಶೇ 10 ಹಾಗೂ ಅದಕ್ಕಿಂತ ಅಧಿಕ ರೋಗಿಗಳು ಉದರಬೇನೆ, ವಿಷಮಶೀತ ಜ್ವರ, ಅತಿಸಾರ, ಬೆವರು ಗುಳ್ಳೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರಾಗಿದ್ದಾರೆ.
‘ಉದರಬೇನೆ ಸಮಸ್ಯೆಗೆ ಹೊರ ರೋಗಿಗಳ ವಿಭಾಗಕ್ಕೆ ಪ್ರತಿ ದಿನ ಸರಾಸರಿ 15 ರೋಗಿಗಳು ಬರುತ್ತಿದ್ದಾರೆ. ಶುಚಿ ಇಲ್ಲದ ಆಹಾರ ಮತ್ತು ನೀರು ಸೇವನೆಯಿಂದ ಈ ಸಮಸ್ಯೆ ಉಂಟಾಗುತ್ತಿದೆ’ ಎಂದು ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.
ಈ ಅವಧಿಯಲ್ಲಿ ಅತಿನೇರಳೆ ಕಿರಣಗಳು ಬಲಿಷ್ಠವಾಗಿರುತ್ತವೆ. ಮಕ್ಕಳು ಹಾಗೂ ವೃದ್ಧರ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಶುದ್ಧ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬೇಕುಡಾ. ಸಂಜಯ್ ಕೆ.ಎಸ್. ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ
ಬಿಸಿಲ ಧಗೆಗೆ ಚರ್ಮಕ್ಕೆ ಸಂಬಂಧಿಸಿದ ವಿವಿವಿಧ ಸಮಸ್ಯೆಗಳು ಕೆಲವರಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಸಂಬಂಧ ಚಿಕಿತ್ಸೆಗೆ ಬರುವವರ ಸಂಖ್ಯೆ ಶೇ 20 ರಷ್ಟು ಹೆಚ್ಚಳವಾಗಿದೆಡಾ.ಎಂ.ಎಸ್. ಗಿರೀಶ್ ರಾಜಾಜಿನಗರ ಇಎಸ್‌ಐ ಆಸ್ಪತ್ರೆಯ ಚರ್ಮರೋಗ ತಜ್ಞ
ಡಾ.ಎಂ.ಎಸ್. ಗಿರೀಶ್
ಅತಿಯಾದ ಬಿಸಿಲಿಗೆ ಕಣ್ಣುರಿ, ಕಣ್ಣಿನಲ್ಲಿ ನೀರು, ತುರಿಕೆ, ಕಣ್ಣು ಕೆಂಪಾಗುವುದು, ಕಣ್ಣಿನ ಊತ ಸೇರಿ ವಿವಿಧ ಸಮಸ್ಯೆಗಳಿಗೆ ಜನ ಆಸ್ಪತ್ರೆಗಳತ್ತ ಮುಖಮಾಡುತ್ತಿದ್ದಾರೆ. ಇದರಿಂದಾಗಿ ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಾದ ಮಿಂಟೊ, ನಾರಾಯಣ ನೇತ್ರಾಲಯ, ಡಾ.ಅಗರವಾಲ್ಸ್ ಐ ಹಾಸ್ಪಿಟಲ್, ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಬೆಂಗಳೂರು ನೇತ್ರಾಲಯದಲ್ಲಿ ಹೊರ ರೋಗಿಗಳ ಸಂಖ್ಯೆ ಶೇ 10ರಷ್ಟು ಹೆಚ್ಚಳವಾಗಿದೆ.
ಚರ್ಮಕ್ಕೆ ಸಂಬಂಧಿಸಿದಂತೆ ಕೆಂಪು ಗುಳ್ಳೆಗಳು, ಬೆವರು ಗುಳ್ಳೆಗಳು, ಶಿಲೀಂದ್ರ ಸೋಂಕು, ಬೊಬ್ಬೆಗಳು ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮಕ್ಕಳಲ್ಲಿ ಹೆಚ್ಚಾಗಿ ‘ಚಿಕನ್ ಪಾಕ್ಸ್’ ಸೋಂಕು ದೃಢಪಡುತ್ತಿದೆ ಎಂದು ಚರ್ಮರೋಗ ತಜ್ಞರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.