ADVERTISEMENT

ನಟಿ ರನ್ಯಾ ರಾವ್‌ ಫ್ಲ್ಯಾಟ್‌ನಲ್ಲಿತ್ತು ₹17.29 ಕೋಟಿ ಮೌಲ್ಯದ ಆಭರಣ, ನಗದು ಜಪ್ತಿ

ಪ್ರಕರಣ ಇ.ಡಿಗೆ ವರ್ಗ?

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 23:30 IST
Last Updated 5 ಮಾರ್ಚ್ 2025, 23:30 IST
ರನ್ಯಾ ರಾವ್‌
ರನ್ಯಾ ರಾವ್‌   

ಬೆಂಗಳೂರು: ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪದಡಿ ಬಂಧನಕ್ಕೆ ಒಳಗಾಗಿರುವ  ನಟಿ ರನ್ಯಾ ರಾವ್‌ ಅವರು ನೆಲಸಿದ್ದ ನಗರದ ಲ್ಯಾವೆಲ್ಲೆ ರಸ್ತೆಯ ನಂದವಾಣಿ ಮ್ಯಾನ್ಶನ್​ ಫ್ಲ್ಯಾಟ್‌ ಮೇಲೆ ದಾಳಿ ನಡೆಸಿದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು, ಅಪಾರ ಪ್ರಮಾಣದ ನಗದು ಹಾಗೂ ಚಿನ್ನದ ಬಿಸ್ಕತ್‌ಗಳನ್ನು ಜಪ್ತಿ ಮಾಡಿದ್ದಾರೆ.

‘ರನ್ಯಾ ರಾವ್ ಅವರನ್ನು ಫ್ಲ್ಯಾಟ್‌ಗೆ ಕರೆದೊಯ್ದು ಅವರ ಸಮ್ಮುಖದಲ್ಲೇ ಐವರು ಅಧಿಕಾರಿಗಳು ತಪಾಸಣೆ ನಡೆಸಿದರು. ಪರಿಶೀಲನೆ ವೇಳೆ ₹2.06 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್‌ಗಳು ಹಾಗೂ ₹2.67 ಕೋಟಿ ನಗದು ಪತ್ತೆಯಾಗಿವೆ.  ಇದುವರೆಗೂ ನಡೆದಿರುವ ಕಾರ್ಯಾಚರಣೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನಗರದ ಫ್ಲ್ಯಾಟ್‌ನಲ್ಲಿ ರನ್ಯಾ ರಾವ್‌ ಅವರಿಂದ ಒಟ್ಟು ₹17.29 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಕ್ಕೆ ಪಡೆದುಕೊಂಡಂತಾಗಿದೆ’ ಎಂದು ಮೂಲಗಳು ತಿಳಿಸಿವೆ.

ಆರೋಪಿಯ ವಿರುದ್ಧ 1962ರ ಕಸ್ಟಮ್ಸ್‌ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಚಿನ್ನ ಕಳ್ಳ ಸಾಗಣೆ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಕಮಿಷನ್‌ ಆಸೆಗೆ ನಟಿ ದುಬೈನಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡಿಕೊಂಡು ಬಂದು ನಗರದಲ್ಲಿರುವ ಚಿನ್ನದ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನುವ ಅನುಮಾನವಿದೆ. ಯಾರಿಗೆ ಚಿನ್ನದ ಬಿಸ್ಕತ್‌ಗಳನ್ನು ಮಾರಾಟ ಮಾಡುತ್ತಿದ್ದರು? ಎಷ್ಟು ಹಣ ಪಡೆದುಕೊಳ್ಳುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಪ್ರಕರಣದಲ್ಲಿ ಪ್ರಭಾವಿಗಳೂ ಶಾಮೀಲಾಗಿರುವ ಸಂಶಯವಿದ್ದು, ಬಾಡಿ ವಾರಂಟ್‌ ಮೇಲೆ ರನ್ಯಾ ರಾವ್‌ ಅವರನ್ನು ಮತ್ತೆ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲಿ ಒಂದೇ ಪ್ರಕರಣದಲ್ಲಿ ಇಷ್ಟೊಂದು ಪ್ರಮಾಣದ ಚಿನ್ನವನ್ನು ಮೊದಲ ಬಾರಿಗೆ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಫ್ಲ್ಯಾಟ್‌ನಲ್ಲಿ ಅಪಾರ ಪ್ರಮಾಣದ ನಗದು ಸಿಕ್ಕಿದ್ದು ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ವರ್ಗಾವಣೆ ಮಾಡಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸೋಮವಾರ ರಾತ್ರಿ ಎಮಿರೇಟ್ಸ್‌ ಏರ್‌ಲೈನ್ಸ್‌ನಲ್ಲಿ ದುಬೈನಿಂದ ಬೆಂಗಳೂರಿಗೆ ರನ್ಯಾ ರಾವ್‌ ಬಂದಿದ್ದರು. ಆಗ ಅವರನ್ನು ವಶಕ್ಕೆ ಪಡೆದುಕೊಂಡು ಬಂಧಿಸಲಾಯಿತು. ತಪಾಸಣೆ ವೇಳೆ 14.2 ಕೆ.ಜಿ ಚಿನ್ನ ಪತ್ತೆಯಾಗಿತ್ತು.

ದುಬಾರಿ ಬಾಡಿಗೆ?: ಮೂರು ತಿಂಗಳ ಹಿಂದಷ್ಟೇ ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳ ಯುವಕನನ್ನು ರನ್ಯಾ ರಾವ್ ಮದುವೆ ಆಗಿದ್ದರು. ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಮದುವೆ ಸಮಾರಂಭ ನಡೆದಿತ್ತು. ರನ್ಯಾ ಅವರ ಪತಿ ಆರ್ಕಿಟೆಕ್ಟ್‌ ಆಗಿದ್ದಾರೆ. ಮದುವೆಯ ಬಳಿಕ ದಂಪತಿ, ಫ್ಲ್ಯಾಟ್‌ಗೆ ಸ್ಥಳಾಂತರಗೊಂಡಿದ್ದರು. ಪ್ರತಿ ತಿಂಗಳು ಫ್ಲ್ಯಾಟ್‌ಗೆ ದುಬಾರಿ ಬಾಡಿಗೆ ಪಾವತಿಸುತ್ತಿದ್ದರು. ರನ್ಯಾ ದಂಪತಿ ಬರುವುದಕ್ಕೂ ಮೊದಲು ಹೊರ ರಾಜ್ಯವೊಂದರ ಮುಖ್ಯಮಂತ್ರಿಯೊಬ್ಬರ ಪುತ್ರ ವಿದ್ಯಾಭ್ಯಾಸಕ್ಕೆಂದು ಈ ಫ್ಲ್ಯಾಟ್‌ನಲ್ಲಿ ನೆಲಸಿದ್ದರು ಎಂದು ಮೂಲಗಳು ಹೇಳಿವೆ.

 ರನ್ಯಾ ರಾವ್‌ ಅವರಿಂದ ಜಪ್ತಿ ಮಾಡಿಕೊಂಡ ಚಿನ್ನದ ಬಿಸ್ಕತ್‌ಗಳು 

‘ಮಾಣಿಕ್ಯ’ ನಟಿ ಚಿನ್ನ ಸಾಗಣೆ ಮಾಡುತ್ತಿದ್ದ ಪರಿ

* ದುಬೈ ವಿಮಾನ ನಿಲ್ದಾಣಕ್ಕೆ ರನ್ಯಾ ರಾವ್‌ ತಲುಪುತ್ತಿದ್ದಂತೆಯೇ ಶೌಚಾಲಯಕ್ಕೆ ಚಿನ್ನದ ಬಿಸ್ಕತ್‌ಗಳನ್ನು ತಲುಪಿಸಲಾಗುತ್ತಿತ್ತು

* ಚಿನ್ನದ ಬಿಸ್ಕತ್‌ಗಳನ್ನು ಟೇಪ್‌ ಸಹಾಯದಿಂದ ಬೆಲ್ಟ್‌ ರೀತಿಯಲ್ಲಿ ಅಂಟಿಸಿಕೊಂಡು ವಿಮಾನದ ಮೂಲಕ ಬೆಂಗಳೂರಿನತ್ತ ನಟಿ ಪ್ರಯಾಣಿಸುತ್ತಿದ್ದರು

* ಕೆಲವೊಮ್ಮೆ ಉಡುಪು ಹಾಗೂ ಬ್ಯಾಗ್‌ನಲ್ಲೂ ಚಿನ್ನವನ್ನು ಬಚ್ಚಿಟ್ಟುಗೊಂಡು ಬರುತ್ತಿದ್ದರು

* ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ಡಿಜಿಪಿ ಪುತ್ರಿ ಎಂಬುದಾಗಿ ಅಧಿಕಾರಿಗಳಿಗೆ ತಿಳಿಸುತ್ತಿದ್ದರು. ನಿಲ್ದಾಣದ ಅಧಿಕಾರಿಗಳು ಪರಿಶೀಲನೆ ನಡೆಸದೇ ಹೊರಗೆ ಕರೆತಂದು ಕಾರಿಗೆ ಹತ್ತಿಸಿ ಕಳುಹಿಸುತ್ತಿದ್ದರು

* ಈ ಬಾರಿ ಖಚಿತ ಮಾಹಿತಿ ಆಧರಿಸಿ ದೆಹಲಿಯ ಅಧಿಕಾರಿಗಳು ನಿಲ್ದಾಣದ ಕೊನೆಯ ಗೇಟ್‌ನಲ್ಲಿ ಕಾದು ನಟಿಯನ್ನು ಬಂಧಿಸಲು ಯಶಸ್ವಿ ಆಗಿದ್ದಾರೆ  

ರಾಮಚಂದ್ರರಾವ್ ವಿರುದ್ಧದ ಪ್ರಕರಣ ವಜಾ

‘ಡಿಜಿಪಿ ಕೆ.ರಾಮಚಂದ್ರ ರಾವ್‌ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಎಸ್ಟೇಟ್‌ ಹೊಂದಿದ್ದ ಮಹಿಳೆಯನ್ನು ಎರಡನೇ ಮದುವೆ ಆಗಿದ್ದರು. ರಾಮಚಂದ್ರ ರಾವ್‌ ಅವರ ಮಲಮಗಳು ನಾನು ಎಂಬುದಾಗಿ ರನ್ಯಾ ರಾವ್‌ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ. ರಾಮಚಂದ್ರ ರಾವ್​ ಆಂಧ್ರ ಪ್ರದೇಶದವರು. ಕರ್ನಾಟಕ ಕೇಡರ್​​​ನ ಐಪಿಎಸ್ ಅಧಿಕಾರಿ. 2023ರಲ್ಲಿ ಇವರಿಗೆ ಬಡ್ತಿ ನೀಡಿ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ವರ್ಗಾವಣೆ ಮಾಡಲಾಗಿತ್ತು’ ಎಂದು ಮೂಲಗಳು ಹೇಳಿವೆ. ‘ರಾಮಚಂದ್ರ ರಾವ್ ಅವರು 2014ರಲ್ಲಿ ದಕ್ಷಿಣ ವಲಯದ ಐಜಿಪಿ ಆಗಿದ್ದರು. ಆಗ ₹2.20 ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪ ಇವರ ಮೇಲಿತ್ತು. ಸಿಐಡಿ ತನಿಖೆಯಲ್ಲಿ ಆರೋಪ ಸಾಬೀತಾಗಲಿಲ್ಲ. ನ್ಯಾಯಾಲಯದಲ್ಲೂ ಪ್ರಕರಣ ವಜಾಗೊಂಡಿತ್ತು’ ಎಂದು ಮೂಲಗಳು ಹೇಳಿವೆ.

15 ದಿನದಲ್ಲಿ ನಾಲ್ಕು ಬಾರಿ ದುಬೈಗೆ

‘ಒಂದು ವರ್ಷದಲ್ಲಿ ರನ್ಯಾ ರಾವ್‌ ಅವರು 10ಕ್ಕೂ ಹೆಚ್ಚು ಬಾರಿ ದುಬೈಗೆ ಹೋಗಿ ಬಂದಿದ್ದಾರೆ. ಕಳೆದ 15 ದಿನಗಳಲ್ಲಿ ನಾಲ್ಕು ಬಾರಿ ದುಬೈಗೆ ಹೋಗಿ ವಾಪಸ್ ಆಗಿದ್ದರು. ಪ್ರತಿ ಬಾರಿ ಬಂದಾಗಲೂ ಚಿನ್ನವನ್ನು ಕಳ್ಳ ಸಾಗಣೆ ಮೂಲಕ ತಂದಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಡಿಆರ್‌ಐ ಮೂಲಗಳು ತಿಳಿಸಿವೆ. ‘ಸೋಮವಾರ ತಪಾಸಣೆ ನಡೆಸಿದಾಗ ರನ್ಯಾ ರಾವ್‌ ಅವರು ಹೆಚ್ಚಿನ ಚಿನ್ನಾಭರಣಗಳನ್ನು ಧರಿಸಿದ್ದರು. ಉಳಿದ ಚಿನ್ನವನ್ನು ಬಟ್ಟೆಯಲ್ಲಿ ಬಚ್ಚಿಟ್ಟುಕೊಂಡಿದ್ದರು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.