
‘ಕೃಷ್ಣೆಯಿಂದ ಕಾವೇರಿವರೆಗೆ...’ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಂದಿಗೆ ನಾಗತಿಹಳ್ಳಿ ಚಂದ್ರಶೇಖರ್ ಮಾತುಕತೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಸಿ.ರಮೇಶ್ ಜತೆಗಿದ್ದರು
-ಪ್ರಜಾವಾಣಿ ಚಿತ್ರ
ಬೆಂಗಳೂರು: ‘ನನ್ನ ಹೆಸರು ರೌಲ್’, ‘ನನ್ನ ಹೆಸರೂsss ಸೈಫಾಲಿ’, ‘ನನ್ನ ಹೆಸರು ಅಂಬರೀಷ್’...
ಇದು ಯಾವುದೋ ಸಂವಾದ–ಸಭೆಯಲ್ಲಿ ಜನರು ತಮ್ಮನ್ನು ತಾವು ಪರಿಚಯಿಸಿಕೊಂಡದ್ದಲ್ಲ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಶನಿವಾರ ಆಯೋಜಿಸಿದ್ದ ‘ಕೃಷ್ಣೆಯಿಂದ ಕಾವೇರಿವರೆಗೆ...’ ಕನ್ನಡ ಕಾರ್ಯಕ್ರಮದಲ್ಲಿ, ಟೆಕ್ಕಿ ಅರ್ಪಿತ್ ಕುಮಾರ್ ಅವರು ನಡೆಸಿಕೊಟ್ಟ ಕಾರ್ಯಾಗಾರದಲ್ಲಿ ಕಿವಿಗೆ ಬಿದ್ದ ನುಡಿಗಳಿವು.
30ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದ ಕಾರ್ಯಾಗಾರದಲ್ಲಿ, ಅನ್ಯಭಾಷಿಕರಿಗೆ ಪ್ರಾಯೋಗಿಕವಾಗಿ ಕನ್ನಡ ಕಲಿಸುವ ಯತ್ನ ಮಾಡಲಾಯಿತು. ಅಲ್ಲಿ ನೆರೆದಿದ್ದ ಕನ್ನಡ ಕಲಿಕಾಸಕ್ತರನ್ನು ಉದ್ದೇಶಿಸಿ ಅರ್ಪಿತ್, ‘ನೀವು ಪೂರ್ಣವಾಗಿ ಕನ್ನಡದಲ್ಲಿ ಮಾತನಾಡಬೇಕು ಎಂದು ಗೂಗಲ್‌ನಲ್ಲಿ ಹುಡುಕಿ, ಕಲಿಯುವ ಪ್ರಯತ್ನ ಮಾಡಲೇಬೇಡಿ’ ಎಂದು ಕಿವಿಮಾತು ಹೇಳಿದರು.
‘ಇಂಗ್ಲಿಷ್ ಜತೆಗೆ ಕನ್ನಡ ಪದಗಳನ್ನು ಮಿಶ್ರಣ ಮಾಡಿ ಮಾತನಾಡಿ. ಮೊದಲಿಗೆ, ‘ನನ್ನ ನೇಮ್...’ ಎಂದು ಆರಂಭಿಸಿ. ನಂತರ ‘ನನ್ನ ಹೆಸರು...’ ಎಂದು ಮುಂದುವರೆಸಿ’ ಎಂದು ಹೇಳಿಕೊಟ್ಟ ನಂತರ ಕಲಿಕಾಸಕ್ತರು ತಮ್ಮನ್ನು ಮೇಲಿನಂತೆ ಪರಿಚಯಿಸಿಕೊಂಡರು.
ನಿಮಗೆ ಯಾವುದೆಲ್ಲಾ ಕನ್ನಡ ಪದಗಳು ಗೊತ್ತು ಎಂದು ಪ್ರಶ್ನಿಸಿದಾಗ, ‘ನಮಸ್ತೆ, ತಿಂಡಿ, ಊಟ, ಹೇಗಿದ್ದೀರಿ, ಬರುತ್ತೇನೆ, ಕೊಡಿ, ದಯವಿಟ್ಟು, ಸ್ವಲ್ಪಸ್ವಲ್ಪ’ ಎಂಬ ನುಡಿಗಳು ಕೇಳಿಬಂದವು. ಸಭಿಕರೊಬ್ಬರು ಮುಂದುವರೆದು, ‘ನಾನು ಇಲಿ ಇದೀನಿ’ ಎಂದರು. ಕಲಿಸುವವರು, ‘ಇಲಿ ಅಂದರೆ ರ‍್ಯಾಟ್. ಇಲ್ಲಿ ಇದೀನಿ ಹೇಳಬೇಕು’ ಎಂದು ತಿದ್ದಿದರು.
ಹೀಗೆ ಕನ್ನಡದಲ್ಲಿ ತಮ್ಮ ಊರು, ತಾಯಿನುಡಿ, ಕೆಲಸ, ಕನ್ನಡದ ಅಂಕಿಗಳನ್ನು ಬಳಸಿಕೊಂಡು ಸಣ್ಣ–ಸಣ್ಣ ವಾಕ್ಯಗಳನ್ನು ಹೇಳುವ ವೇಳೆಗೆ ಕಾರ್ಯಾಗಾರಕ್ಕೆ ತೆರೆಬಿತ್ತು. ಆದರೆ ಕಾರ್ಯಾಗಾರದ ಆಚೆಗೂ, ‘ನನ್ನ ಊರು ಸಿಲಗುರಿ’, ‘ನನ್ನ ಹೆಸರು ಮಿಥಾಲಿ’, ಎಂಬ ನುಡಿಗಳು ಕೇಳುತ್ತಲೇ ಇದ್ದವು.
ಪೂಜಾ ಕುಣಿತ ಸೋಮನ ಕುಣಿತದ ಮೇಳದೊಂದಿಗೆ ನಾಡಗೀತೆ. ನಂತರ ತಲೆಯೆತ್ತಿ ಹಾರಾಡಿದ ನಾಡಬಾವುಟ. ಅತ್ತ ಶರಣ–ಶರಣೆಯರ ವಚನಗಳ ಭಿತ್ತಿಪತ್ರ ಇತ್ತ ಬೇಂದ್ರೆ ಕವನಗಳ ವಾಚನದ ಇಂಪು. ಇನ್ನೊಂದೆಡೆ ರಂಗನತಿಟ್ಟುವಿನ ಬಾನಾಡಿಗಳು ಚಿತ್ರದಲ್ಲಿ ಬಂಧಿಯಾಗಿದ್ದರೆ ಮತ್ತೊಂದೆಡೆ ಹಂಪಿಯ ಬೋಳುಬಂಡೆಗಳ ಮೇಲೆ ಮಡುಗಟ್ಟಿದ ಗೋಧೂಳಿ ನೋಡುಗರ ಕಣ್ಣುಗಳಿಗೂ ಇಳಿಯುತ್ತಿತ್ತು... ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಕನ್ನಡ ರಾಜ್ಯೋತ್ಸವದ ದಿನ ಬಿಐಸಿಯಲ್ಲಿ ಕನ್ನಡ ನಾಡು–ನುಡಿ–ನಡೆಯನ್ನು ಕಟ್ಟಿಕೊಡುವ ಯತ್ನದಲ್ಲಿ ರೂಪಿಸಿದ್ದ ‘ಕೃಷ್ಣೆಯಿಂದ ಕಾವೇರಿವರೆಗೆ...’ ಮೇಳದ ಭಿನ್ನ–ಭಿನ್ನ ಚಿತ್ರಪಟಗಳಿವು. ಮೇಳಕ್ಕೆ ಬಂದವರಿಗೆ ಕನ್ನಡ ಕಲಿಸುವುದು ಕನ್ನಡದ ಕವಿ–ಕಾವ್ಯಗಳನ್ನು ಪರಿಚಯಿಸುವುದು ನೆಲದ ಜನಪದ ಕುಣಿತ ಕಾಡು–ಬೆಟ್ಟಗಳನ್ನು ತೋರಿಸಿಕೊಡುವ ಹಲವು ಪ್ರದರ್ಶನಗಳು ಮೇಳದಲ್ಲಿದ್ದವು. ಮೇಳಕ್ಕೆ ಚಾಲನೆ ನೀಡಿದ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ನೆರೆದಿದ್ದ ಮಕ್ಕಳ ತಲೆ ನೇವರಿಸಿ ಕನ್ನಡ ನಾಡುನುಡಿಗಳ ವೈಶಿಷ್ಟ್ಯವನ್ನು ವಿವರಿಸಿದರು.
‘ಕನ್ನಡದ ಸಂಸ್ಕೃತಿಯನ್ನು ಅನ್ಯಭಾಷಿಕರಿಗೆ ಕಲಿಸುವ ಈ ಪ್ರಯತ್ನ ಶ್ಲಾಘನೀಯ. ಇಂತಹ ಹತ್ತಾರು ಕಾರ್ಯಕ್ರಮಗಳು ನಡೆಯಲಿ. ಅನ್ಯಭಾಷಿಕರನ್ನೂ ಕರುನಾಡು ಒಳಗೊಳ್ಳಲಿ’ ಎಂದರು. ಕಲಬುರಗಿಯ ಕಲಾ ಮಂಡಳಿಯ ಕಲಾವಿದರ ‘ಬೀಸೋ ಹಾಡ’ ವಿನಾಯಕ್ ತೊರವಿ ಅವರ ಹಿಂದುಸ್ತಾನಿ ಗಾಯನದ ಮುಂಜಾನೆಯ ರಾಗಗಳು ಗೀತಾಸಕ್ತರ ಹಸಿವು ನೀಗಿಸಿದವು. ದೇಸಿ ಮತ್ತು ದೇಶೀಯ ಕಲಾಪ್ರಕಾರಗಳಿಗೆ ಒಂದೆಡೆಯೇ ವೇದಿಕೆ ಒದಗಿಸುವ ಯತ್ನಕ್ಕೆ ಜನರು ತಲೆದೂಗಿದರು. ಈ ಎಲ್ಲವನ್ನೂ ಕಣ್ತುಂಬಿ–ಕಿವಿ ತುಂಬಿಕೊಳ್ಳುವ ವೇಳೆಗೆ ಬಿಸಿ ಬೇಳೆಯ ಬಾತು ಕೊಡಗಿನ ಕೋಳಿ ಸಾರು ಹಿಚುಕಿದ ಬೇಳೆಯ ಗೊಜ್ಜು ಕರೆಯುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.