
ನಮ್ಮ ಮೆಟ್ರೊ
ಪ್ರಜಾವಾಣಿ ಚಿತ್ರ. ಅನೂಪ್ ರಾಘ . ಟಿ.
ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣಿಕರಿಗೆ ಶೀಘ್ರವೇ ಮತ್ತೊಮ್ಮೆ ದರ ಏರಿಕೆ ಬಿಸಿ ತಟ್ಟಲಿದೆ. ಫೆಬ್ರುವರಿಯಿಂದ ಶೇಕಡ 5ರಷ್ಟು ಟಿಕೆಟ್ ದರ ಏರಿಕೆ ಮಾಡಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮುಂದಾಗಿದೆ ಎಂದು ವರದಿಯಾಗಿದೆ.
ದರ ನಿಗದಿ ಸಮಿತಿಯ (ಎಫ್‌ಎಫ್‌ಸಿ) ಶಿಫಾರಸಿನಂತೆ ಪ್ರತಿ ವರ್ಷ ಫೆಬ್ರುವರಿಯಲ್ಲಿ ಮೆಟ್ರೊ ಪ್ರಯಾಣ ದರವನ್ನು ಶೇಕಡ 5ರಷ್ಟು ಹೆಚ್ಚಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
2002ರ ಮೆಟ್ರೊ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆಯ ಸೆಕ್ಷನ್ 33ರ ಅಡಿಯಲ್ಲಿ ಎಫ್‌ಎಫ್‌ಸಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಸ್ವೀಕರಿಸಿದ ನಂತರ ಕಳೆದ ವರ್ಷ ಬಿಎಂಆರ್‌ಸಿಎಲ್ ದರಗಳನ್ನು ಹೆಚ್ಚಿಸಿತ್ತು.
ಕಳೆದ ವರ್ಷ ಕೆಲವು ಮಾರ್ಗಗಳಲ್ಲಿ ಶೇಕಡ 71ರಷ್ಟು ಪ್ರಯಾಣ ದರ ಏರಿಕೆಯಾಗಿತ್ತು. ಇದೀಗ ಮತ್ತೊಮ್ಮೆ ದರ ಏರಿಕೆಗೆ ಮುಂದಾಗಿರುವುದರಿಂದ ಸಾರಿಗೆಯನ್ನು ಬಳಸುವ ಜನರ ಮೇಲಿನ ಆರ್ಥಿಕ ಭಾರ ಮತ್ತಷ್ಟು ಹೆಚ್ಚಲಿದೆ. ಬಿಎಂಆರ್‌ಸಿಎಲ್ ನಿರ್ಧಾರ ಖಂಡಿಸಿ ಪ್ರಯಾಣಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಎಫ್‌ಎಫ್‌ಸಿ ಶಿಫಾರಸು ಏನಾಗಿತ್ತು?
ಕಳೆದ ವರ್ಷ ಬಿಎಂಆರ್‌ಸಿಎಲ್‌ಗೆ ಸಲ್ಲಿಸಿದ ಎಫ್‌ಸಿಸಿ ವರದಿಯ ಪ್ರಕಾರ 2026ರ ಫೆಬ್ರುವರಿಯಿಂದ ಪ್ರಯಾಣ ದರಗಳನ್ನು ವಾರ್ಷಿಕವಾಗಿ ಶೇಕಡ 5ರಷ್ಟು ಪರಿಷ್ಕರಿಸಲು ಅವಕಾಶವಿದೆ.
ನೌಕರರ ವೇತನ ಹೆಚ್ಚಳ, ಸಾಮಗ್ರಿಗಳ ಬೆಲೆ ಹೆಚ್ಚಳ, ಸಾಲ ಹೆಚ್ಚಳ ಹೀಗೆ ಎಲ್ಲವೂ ಅಧಿಕವಾಗಿರುವುದರಿಂದ ವಾರ್ಷಿಕ ದರ ಪರಿಷ್ಕರಣೆ ಮಾಡಲು ಬಿಎಂಆರ್‌ಸಿಎಲ್ ಬೇಡಿಕೆ ಮುಂದಿಟ್ಟಿತ್ತು. ಇದಲ್ಲದೆ, 2029-30ರಲ್ಲಿ ನಿವ್ವಳ ನಷ್ಟವು ₹577 ಕೋಟಿಯಷ್ಟಿರುತ್ತದೆ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.