ADVERTISEMENT

ಬೆಂಗಳೂರು ಸಂಚಾರ ನಿರ್ವಹಣೆ: ಮಾಹಿತಿ ಪಡೆದ ನೆದರ್ಲೆಂಡ್ಸ್‌ ಪ್ರಧಾನಿ ಡಿಕ್ ಶೂಫ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 13:25 IST
Last Updated 20 ಫೆಬ್ರುವರಿ 2026, 13:25 IST
   

ಬೆಂಗಳೂರು: ಇನ್‌ಫೆಂಟ್ರಿ ರಸ್ತೆಯ ಸಂಚಾರ ನಿರ್ವಹಣೆ ಕೇಂದ್ರದ ಮೊದಲ ಮಹಡಿಯಲ್ಲಿ ಸ್ಥಾಪಿಸಲಾಗಿರುವ ‘ಸಂಚಾರ ಪೊಲೀಸ್‌ ವಸ್ತು ಸಂಗ್ರಹಾಲಯ ಹಾಗೂ ಅನುಭವ ಕೇಂದ್ರ’ಕ್ಕೆ ನೆದರ್ಲೆಂಡ್ಸ್‌ ಪ್ರಧಾನಿ ಡಿಕ್ ಶೂಫ್ ಅವರು ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು.

ಇದಕ್ಕೂ ಮುನ್ನ ಬೆಂಗಳೂರು ಸಂಚಾರ ನಿರ್ವಹಣೆ ವ್ಯವಸ್ಥೆಯ ಮಾಹಿತಿ ಬಗ್ಗೆ ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್‌ ಹಾಗೂ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಕಾರ್ತಿಕ್‌ ರೆಡ್ಡಿ ಅವರು ಡಿಕ್‌ ಶೂಫ್‌ ಅವರನ್ನು ಸ್ವಾಗತಿಸಿ, ಬೆಂಗಳೂರಿನಲ್ಲಿ ಸಂಚಾರ ನಿರ್ವಹಣೆಗೆ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ADVERTISEMENT

ಸಂಚಾರ ದಟ್ಟಣೆ ನಿಯಂತ್ರಣ, ವಾಹನಗಳ ಸುಗಮ ಸಂಚಾರ ವ್ಯವಸ್ಥೆಗೆ ಕೈಕೊಂಡಿರುವ ಕ್ರಮಗಳು, ರಸ್ತೆ ಸುರಕ್ಷತೆ, ತಂತ್ರಜ್ಞಾನ ಆಧಾರಿತ ವ್ಯವಸ್ಥೆ, ಸಿಗ್ನಲ್‌ಗಳಲ್ಲಿ ಅಳವಡಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ, ಎ.ಐ ಆಧಾರಿತ ನಿಗಾ ವ್ಯವಸ್ಥೆ, ‘ಏಕೀಕೃತ ಕಮಾಂಡ್‌ ಹಾಗೂ ಕಂಟ್ರೋಲ್‌’ ಕಾರ್ಯಾಚರಣೆಯ ಕುರಿತು ಪ್ರಧಾನಿ ಅವರಿಗೆ ಮಾಹಿತಿ ನೀಡಲಾಯಿತು ಎಂದು ಜಂಟಿ ಪೊಲೀಸ್ ಕಮಿಷನರ್ ಕಾರ್ತಿಕ್‌ ರೆಡ್ಡಿ ಮಾಹಿತಿ ನೀಡಿದರು.

ಬೆಂಗಳೂರಿನ ಸಂಚಾರ ಪೊಲೀಸ್‌ ವ್ಯವಸ್ಥೆ ರೂಪುಗೊಂಡಿದ್ದು ಹೇಗೆ? ಆರಂಭಿಕ ದಿನಗಳಲ್ಲಿ ಸಂಚಾರ ಪೊಲೀಸರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದರು? ಹಿಂದೆ ಪೊಲೀಸ್‌ ಸಮವಸ್ತ್ರಗಳು ಹೇಗಿದ್ದವು? ಹಿಂದೆ ಜಂಕ್ಷನ್‌ಗಳು, ಟ್ರಾಫಿಕ್‌ ಸಿಗ್ನಲ್‌ಗಳು ಹೇಗೆ ಕಾರ್ಯ ನಿರ್ವಹಣೆ ಮಾಡುತ್ತಿದ್ದವು ಎಂಬ ಛಾಯಾಚಿತ್ರಗಳು ವಸ್ತು ಸಂಗ್ರಹಾಲಯ ಹಾಗೂ ಅನುಭವ ಕೇಂದ್ರದಲ್ಲಿದ್ದು ಅವುಗಳನ್ನು ಡಿಕ್‌ ಶೂಫ್‌ ಅವರು ವೀಕ್ಷಿಸಿದರು.

ಜಂಕ್ಷನ್‌ಗಳಲ್ಲಿ ಪೊಲೀಸರು ತಮ್ಮ ಕೈಗಳನ್ನು ಬಳಸಿ ವಾಹನ ದಟ್ಟಣೆ ನಿಯಂತ್ರಣ ಮಾಡುತ್ತಿದ್ದ ಛಾಯಾಚಿತ್ರಗಳಿಂದ ಹಿಡಿದು ಈವರೆಗಿನ ಕೃತಕ ಬುದ್ಧಿಮತ್ತೆ(ಎ.ಐ) ಕ್ಯಾಮೆರಾಗಳ ವರೆಗಿನ ಚಿತ್ರಗಳು ಸಂಗ್ರಹಾಲಯದಲ್ಲಿ ಇವೆ. ಪ್ರಾರಂಭದ ದಿನಗಳಲ್ಲಿ ಸಂಚಾರ ಪೊಲೀಸರು, ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಎರಡು ಅಡಿ ಎತ್ತರದ ಪೀಠದ ಮೇಲೆ ನಿಂತು ಸಂಚಾರ ನಿಯಂತ್ರಿಸುತ್ತಿದ್ದರು. 1970ರಲ್ಲಿ ಸಂಚಾರ ಕಿಯೋಸ್ಕ್‌ಗಳನ್ನು ಅಳವಡಿಕೆ ಮಾಡಲಾಗಿತ್ತು. 1976ರಲ್ಲಿ ಸಂಚಾರ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ನೃಪತುಂಗ ರಸ್ತೆಯ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ನಿಯಂತ್ರಣ ಮಾಡುತ್ತಿದ್ದ ಚಿತ್ರಗಳೂ ಸಂಗ್ರಹಾಲಯದಲ್ಲಿದ್ದು, ಆ ಎಲ್ಲ ಚಿತ್ರಗಳನ್ನು ನೆದರ್ಲೆಂಡ್ಸ್ ಪ್ರಧಾನಿ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.