
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ, ಮೊಬೈಲ್ ಬಳಕೆಗೆ ಅವಕಾಶ ನೀಡಿದ್ದ ಪ್ರಕರಣದಲ್ಲಿ ಜೈಲಿನ ಸೂಪರಿಂಟೆಂಡೆಂಟ್ ಇಮಾಮ್‌ಸಾಬ್ ಮ್ಯಾಗೇರಿ ಹಾಗೂ ಸಹಾಯಕ ಸೂಪರಿಂಟೆಂಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತು ಮಾಡಲಾಗಿದೆ. ಕಾರಾಗೃಹದ ಮುಖ್ಯ ಅಧೀಕ್ಷಕ ಕೆ.ಸುರೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಜಾಗಕ್ಕೆ ಇದೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ಅನ್ಶು ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಅತ್ಯಾಚಾರ, ಸರಣಿ ಕೊಲೆಯ ಪಾತಕಿ ಉಮೇಶ್ ರೆಡ್ಡಿ, ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆಯ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ, ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದ ಆರೋಪಿ ತರುಣ್ ರಾಜ್ ತಾವಿರುವ ಬ್ಯಾರಕ್‌ನಲ್ಲಿ ಮೊಬೈಲ್ ಹಿಡಿದು ಮಾತನಾಡುತ್ತಿರುವ, ಟಿ.ವಿ ವೀಕ್ಷಣೆ ಮಾಡುತ್ತಿರುವ ವಿಡಿಯೊಗಳು ಹರಿದಾಡಿದ್ದವು. ಅದರ ಬೆನ್ನಲ್ಲೇ, ವಿಚಾರಣಾ ಕೈದಿಗಳು ಮಾಂಸ, ಮದ್ಯ ಸೇವಿಸಿ ಜೈಲಿನಲ್ಲಿ ನೃತ್ಯ ಮಾಡುತ್ತಿರುವ ವಿಡಿಯೊವೊಂದು ಜಾಲತಾಣದಲ್ಲಿ ಹರಿದಾಡಿತ್ತು.
ಈ ಬೆಳವಣಿಗೆಗಳ ಬಳಿಕ ಕಾರಾಗೃಹಗಳ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಗೃಹ ಸಚಿವ ಜಿ.ಪರಮೇಶ್ವರ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಜೈಲಿನೊಳಗೆ ಕೈದಿಗಳು ಮೋಜು–ಮಸ್ತಿ ಮಾಡುತ್ತಿದ್ದಾರೆ ಅಂದರೆ ಏನರ್ಥ? ಸಿಬ್ಬಂದಿ ಏನು ಮಾಡುತ್ತಿದ್ದಾರೆ? ಕೈದಿಗಳಿಗೆ ಮೊಬೈಲ್ ಪೂರೈಸಿದ್ದವರು ಯಾರು’ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವುದೇ ಕಾರಾಗೃಹದಲ್ಲಿ ಈ ರೀತಿಯ ಘಟನೆಗಳಿಗೆ ಆಸ್ಪದ ಕೊಡಬಾರದು ಎಂದೂ ಸೂಚಿಸಿದರು.
ತನಿಖೆಗೆ ಸಮಿತಿ: ಪ್ರಕರಣದ ಕುರಿತು ತನಿಖೆಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರು ಮುಖ್ಯಸ್ಥರಾಗಿರುವ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಐಜಿಪಿ ಸಂದೀಪ್ ಪಾಟೀಲ, ಎಸ್‌ಪಿಗಳಾದ ಅಮರನಾಥ್ ರೆಡ್ಡಿ, ಸಿ.ಬಿ. ರಿಷ್ಯಂತ್ ಅವರೂ ತಂಡದ ಸದಸ್ಯರಾಗಿದ್ದಾರೆ. ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ತಂಡಕ್ಕೆ ಸೂಚಿಸಲಾಗಿದೆ.
ಈ ಸಮಿತಿಯು ವಿವಿಧ ಜಿಲ್ಲೆಗಳ ಕಾರಾಗೃಹಕ್ಕೂ ಭೇಟಿ ನೀಡಿ ಸುಧಾರಣೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳು ಸಮಿತಿಯ ಸಹ ಸದಸ್ಯ
ರಾಗಿರುತ್ತಾರೆ.
‘ಈಗ ಹರಿದಾಡುತ್ತಿರುವ ಕೆಲವು ವಿಡಿಯೊಗಳು 2023ರಲ್ಲಿ ಆಗಿರುವಂಥದ್ದು. ನಿನ್ನೆ, ಮೊನ್ನೆ ಅಗಿರುವ ವಿಡಿಯೊಗಳಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ →ತಿಳಿಸಿದರು.
ಕಮಾಂಡ್ ಸೆಂಟರ್ ಸ್ಥಾಪನೆ
* ರಾಜ್ಯದ ಎಲ್ಲ ಕಾರಾಗೃಹಗಳಲ್ಲಿನ ಚಟುವಟಿಕೆಗಳನ್ನು ಕಾರಾಗೃಹ ಪ್ರಧಾನ ಕಚೇರಿಯಿಂದಲೇ ನಿಗಾ ವಹಿಸಲು ‘ಕಮಾಂಡ್ ಸೆಂಟರ್’ ಸ್ಥಾಪನೆ
* ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿ ಅಥವಾ ಎಡಿಜಿಪಿಗೆ ‘ಕಮಾಂಡ್ ಸೆಂಟರ್’ ನಿಗಾ ವಹಿಸುವ ಜವಾಬ್ದಾರಿ
* ಸಿ.ಸಿ.ಟಿ.ವಿ ಕ್ಯಾಮೆರಾ ಸೇರಿದಂತೆ ಎಲ್ಲಾ ತಂತ್ರಜ್ಞಾನಗಳ ಕುರಿತು ‘ಟೆಕ್ನಿಕಲ್ ಆಡಿಟ್’ ನಡೆಸಲು ತೀರ್ಮಾನ. ಪ್ರಧಾನ ಕಚೇರಿಗೆ ಮಾಹಿತಿ ಬರುವ ಹಾಗೆ ಕ್ರಮ
* ಬ್ಯಾಗೇಜ್ ಸ್ಕ್ಯಾನರ್ ಸೇರಿದಂತೆ ಎಲ್ಲ ರೀತಿಯ ತಾಂತ್ರಿಕ ಉಪಕರಣಗಳನ್ನು ದ್ವಿಗುಣ ಮಾಡಲು ಕ್ರಮ
* ಒಂದೇ ಕಡೆ ಐದು ವರ್ಷ ಕಾರ್ಯನಿರ್ವಹಿಸಿದ ಕಾರಾಗೃಹ ಅಧಿಕಾರಿಗಳ ವರ್ಗಾವಣೆಗೆ ನಿರ್ಧಾರ
ವಿಡಿಯೊ ಹರಿಯಬಿಟ್ಟ ದರ್ಶನ್ ಆಪ್ತ?
ಜೈಲಿನಲ್ಲಿ ನಡೆದಿರುವ ಘಟನೆಗಳ ವಿಡಿಯೊ, ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ
ಹರಿಯಬಿಟ್ಟಿರುವ ಅನುಮಾನದ ಅಡಿ, ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರ ಆಪ್ತ, ನಟ ಧನ್ವೀರ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ದೇವನಹಳ್ಳಿಯ ವಿಮಾನ ನಿಲ್ದಾಣದತ್ತ ಹೊರಟಿದ್ದ ಧನ್ವೀರ್ ಅವರನ್ನು ಭಾನುವಾರ ರಾತ್ರಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ದರ್ಶನ್ ತಂಡದ ಸದಸ್ಯರಿಂದಲೇ ವಿಡಿಯೊ ಹರಿಯಬಿಟ್ಟಿರುವ ಅನುಮಾನ ವ್ಯಕ್ತವಾಗಿದೆ.
‘ದರ್ಶನ್ ಅವರಿಗೆ ಜೈಲಾಧಿಕಾರಿಗಳು ಹಾಸಿಗೆ, ದಿಂಬು ನೀಡಿರಲಿಲ್ಲ. ಅವರು ಹಾಸಿಗೆ, ದಿಂಬು ಪಡೆದುಕೊಳ್ಳಲು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲೂ ಹಿನ್ನಡೆ ಆಗಿತ್ತು. ಅದೇ ಕಾರಣಕ್ಕೆ ಜೈಲಿನ ಒಳಗೆ ನಡೆಯುತ್ತಿರುವ ಅಕ್ರಮಗಳ ಕುರಿತು ವಿಡಿಯೊವನ್ನು ಧನ್ವೀರ್ ಅವರು ಜೈಲಿನಿಂದ ಬಿಡುಗಡೆಯಾಗಿದ್ದ ಕೈದಿಯಿಂದ ಪಡೆದು ಬಹಿರಂಗ ಪಡಿಸಿದ್ದಾರೆ ಎಂಬ ಅನುಮಾನದ ಮೇರೆಗೆ 10 ತಾಸು ವಿಚಾರಣೆ ನಡೆಸಲಾಗಿದೆ. ಈಗ ನಡೆದ ತನಿಖೆ ವೇಳೆ ಧನ್ವೀರ್ ಮೊಬೈಲ್‌ನಲ್ಲಿ ಯಾವುದೇ ವಿಡಿಯೊಗಳು ಪತ್ತೆಯಾಗಿಲ್ಲ. ಡಿಲೀಟ್ ಮಾಡಿರುವ ಸಾಧ್ಯತೆಯಿದೆ. ಮೊಬೈಲ್ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್ಎಲ್) ರವಾನೆ ಮಾಡಲಾಗಿದೆ. ವರದಿ ಬಂದ ಬಳಿಕ ಧನ್ವೀರ್ ಅವರಿಗೆ ವಿಡಿಯೊಗಳು ಸಿಕ್ಕಿದ್ದವೇ? ಇಲ್ಲವೇ ಎಂಬುದು ಗೊತ್ತಾಗಲಿದೆ’ ಎಂದು ಮೂಲಗಳು ಹೇಳಿವೆ.
ರಾಜ್ಯದ ಯಾವುದೇ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಫೋನ್ ಬಳಕೆ ಕಂಡುಬಂದರೆ ಆ ಅವಧಿಯಲ್ಲಿದ್ದ ಕಾರಾಗೃಹದ ಸೂಪರಿಂಟೆಂಡೆಂಟ್ ಅವರನ್ನೇ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು.– ಜಿ.ಪರಮೇಶ್ವರ, ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.