ADVERTISEMENT

ಜನಿವಾರದ ಕಾರಣಕ್ಕಾಗಿ ಪರೀಕ್ಷೆಗೆ ನಿರಾಕರಣೆ: ಕ್ರಿಮಿನಲ್‌ ಪ್ರಕರಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 12:38 IST
Last Updated 19 ಏಪ್ರಿಲ್ 2025, 12:38 IST
   

ಬೀದರ್‌: ಜನಿವಾರದ ಕಾರಣಕ್ಕಾಗಿ ವಿದ್ಯಾರ್ಥಿ ಸುಚಿವ್ರತ್‌ ಅವರಿಗೆ ಕೆ–ಸಿಇಟಿ ಪರೀಕ್ಷೆ ಬರೆಯಲು ನಿರಾಕರಿಸಿದ ಕ್ರಮವನ್ನು ಖಂಡಿಸಿ ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೀದರ್‌ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮುಖಂಡರು ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿ, ಜನಿವಾರ ಬ್ರಾಹ್ಮಣ ಸಮಾಜಕ್ಕೆ ಅತ್ಯಂತ ಪವಿತ್ರವಾದುದು. ಜನಿವಾರ ಇಲ್ಲದೆ ಬ್ರಾಹ್ಮಣ ಇಲ್ಲ ಎನ್ನುವಷ್ಟರ ಮಟ್ಟಿಗೆ ಇದಕ್ಕೆ ಮಹತ್ವ ಇದೆ. ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದ ಬ್ರಾಹ್ಮಣ ಸಮಾಜದ ವಿದ್ಯಾರ್ಥಿ ಸುಚಿವ್ರತ್‌ನಿಗೆ ಸಾಯಿ ಸ್ಫೂರ್ತಿ ಕಾಲೇಜಿನ ಸಿಬ್ಬಂದಿ ವಿನಾಕಾರಣ ಕಿರಿಕಿರಿ ಕೊಟ್ಟು, ಜನಿವಾರ ತೆಗೆದು ಪರೀಕ್ಷೆಗೆ ಹಾಜರಾಗುವಂತೆ ಹೇಳಿದ್ದಾರೆ. ಇದು ಖಂಡನಾರ್ಹ. ಕೆಇಎ ಪರೀಕ್ಷಾ ನಿಯಮದಲ್ಲಿ ಜನಿವಾರ ತೆಗೆಯಬೇಕೆಂಬ ನಿಯಮ ಇಲ್ಲದಿದ್ದರೂ ಸಿಬ್ಬಂದಿ ತೆಗೆಯುವಂತೆ ಹೇಳಿದ್ದಾರೆ. ಗಣಿತ ಪರೀಕ್ಷೆಯಿಂದ ವಿದ್ಯಾರ್ಥಿ ವಂಚಿತನಾಗಿದ್ದು, ಸಿಬ್ಬಂದಿ ಅಕ್ಷಮ್ಯ ಅಪರಾಧ ಎಸಗಿದ್ದಾನೆ ಎಂದು ತಿಳಿಸಿದರು.

ADVERTISEMENT

ಇದು ಸಂವಿಧಾನದ ಪರಿಚ್ಛೇದ 25ರ ಧಾರ್ಮಿಕ ಹಕ್ಕಿನ ಸ್ಪಷ್ಟ ಉಲ್ಲಂಘನೆ. ಜೊತೆಗೆ ಮಕ್ಕಳ ಶಿಕ್ಷಣ ಹಕ್ಕಿನ ಉಲ್ಲಂಘನೆ. ಮಾನವ ಹಕ್ಕುಗಳ ಉಲ್ಲಂಘನೆಯೂ ಹೌದು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕ್ರಿಮಿನಲ್‌ ಖಟ್ಲೆ ಹೂಡಿ, ಕೆಲಸದಿಂದ ವಜಾಗೊಳಿಸಬೇಕು. ಇದರ ಹಿಂದೆ ಯಾರ ಕೈವಾಡ ಇದೆ ಎನ್ನುವುದರ ಬಗ್ಗೆ ತನಿಖೆ ನಡೆಸಿ, ಸತ್ಯಾಂಶ ಸಾರ್ವಜನಿಕರ ಮುಂದಿಡಬೇಕು ಎಂದು ಹೇಳಿದರು.

ಪರೀಕ್ಷೆಯಿಂದ ವಂಚಿತನಾದ ಸುಚಿವ್ರತ್‌ನಿಗೆ ಪುನಃ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಇಲ್ಲವಾದರೆ ಗಣಿತ ವಿಷಯದಲ್ಲಿ ಶೇ 90ರಷ್ಟು ಅಂಕ ನೀಡಬೇಕು. ಸರ್ಕಾರವೇ ವಿದ್ಯಾರ್ಥಿಗೆ ಉಚಿತವಾಗಿ ಎಂಜಿನಿಯರಿಂಗ್‌ ಕೋರ್ಸ್‌ನಲ್ಲಿ ಪ್ರವೇಶ ಕೊಡಿಸಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ, ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ಜಿಲ್ಲಾಧ್ಯಕ್ಷ ರಮೇಶ ಕುಲಕರ್ಣಿ, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಬಸವರಾಜ ಧನ್ನೂರ, ಹನುಮಂತ, ಆನಂದ್‌ ಹುಮನಾಬಾದೆ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.