ADVERTISEMENT

ಧರ್ಮಸ್ಥಳ ಪ್ರಕರಣ | ಹಿಂದೂಗಳ ತಾಳ್ಮೆ ಪರೀಕ್ಷೆ ಬೇಡ: ಬಿ.ವೈ. ವಿಜಯೇಂದ್ರ

ಬಿಜೆಪಿಯ ‘ಧರ್ಮಸ್ಥಳ ಚಲೋ’ ಸಮಾವೇಶ * ಕ್ಷೇತ್ರದ ಪರ ಶಕ್ತಿ ಪ್ರದರ್ಶನ * ಎನ್‌ಐಎ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
<div class="paragraphs"><p>ಧರ್ಮಸ್ಥಳ ಚಲೋ ಸಮಾವೇಶದ ವೇದಿಕೆಯಲ್ಲಿ ಬಿಜೆಪಿ ಮುಖಂಡರು ಪರಸ್ಪರ ಕೈಗಳನ್ನು ಜೋಡಿಸುವ ಮೂಲಕ ‘ಧರ್ಮಸ್ಥಳ ಕ್ಷೇತ್ರದ ಜೊತೆ, ವೀರೇಂದ್ರ ಹೆಗ್ಗಡೆ ಕುಟುಂಬದ ಜೊತೆ ನಾವಿದ್ದೇವೆ’ ಎನ್ನುವ ಸಂದೇಶ ಸಾರಿದರು. </p></div>

ಧರ್ಮಸ್ಥಳ ಚಲೋ ಸಮಾವೇಶದ ವೇದಿಕೆಯಲ್ಲಿ ಬಿಜೆಪಿ ಮುಖಂಡರು ಪರಸ್ಪರ ಕೈಗಳನ್ನು ಜೋಡಿಸುವ ಮೂಲಕ ‘ಧರ್ಮಸ್ಥಳ ಕ್ಷೇತ್ರದ ಜೊತೆ, ವೀರೇಂದ್ರ ಹೆಗ್ಗಡೆ ಕುಟುಂಬದ ಜೊತೆ ನಾವಿದ್ದೇವೆ’ ಎನ್ನುವ ಸಂದೇಶ ಸಾರಿದರು.

   

ಧರ್ಮಸ್ಥಳ (ದಕ್ಷಿಣ ಕನ್ನಡ): ‘ಧರ್ಮಸ್ಥಳ ಕ್ಷೇತ್ರದ ವಿಚಾರದಲ್ಲಿ ನಿತ್ಯ ಅಪಪ್ರಚಾರ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹಿಂದೂ ಸಮಾಜದ ತಾಳ್ಮೆಯನ್ನು ಇನ್ನಷ್ಟು ಪರೀಕ್ಷೆ‌ ಮಾಡಬೇಡಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಬಿಜೆಪಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ 'ಶ್ರೀಕ್ಷೇತ್ರ ಧರ್ಮಸ್ಥಳ ಚಲೋ' ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.

ADVERTISEMENT

‘ಕ್ಷೇತ್ರದ ಅಪಪ್ರಚಾರದ ಹಿಂದೆ‌ ಷಡ್ಯಂತ್ರ ನಡೆದಿದೆ. ಇದನ್ನು ಹೊರತರಲು ತನಿಖೆಯನ್ನು ತಕ್ಷಣವೇ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಅಥವಾ ಸಿಬಿಐಗೆ ವಹಿಸಬೇಕು. ಹಿಂದೂ ಧರ್ಮ ವಿರೋಧಿ ಶಕ್ತಿಗಳು ಕೋಟಿಗಟ್ಟಲೆ ಹಣ ಪಡೆದು ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡುತ್ತಿವೆ. ಆ ಶಕ್ತಿಗಳನ್ನು ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಆಗದು. ಸಿಬಿಐ ಅಥವಾ ಎನ್ಐಎಯಿಂದ ತನಿಖೆ ಆದರೆ ಮಾತ್ರ ನ್ಯಾಯ ಸಿಗಲು ಸಾಧ್ಯ’ ಎಂದರು.

ಸಮಾವೇಶ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ದೇಶದ ಬಹುಸಂಖ್ಯಾತರ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಲೇ ಬಂದಿದೆ. ಅದರ ಮುಂದುವರಿದ ಭಾಗವೇ ಧರ್ಮಸ್ಥಳ ಪ್ರಕರಣ. ಶನಿಶಿಂಗಣಾಪುರ, ಶಬರಿಮಲೆ ಶ್ರದ್ಧೆಗೆ ಭಂಗ ತರುವ ಯತ್ನ ನಡೆದ ಬಳಿಕ ಧರ್ಮಸ್ಥಳದ ಹೆಸರು ಕೆಡಿಸುವ ಯತ್ನಕ್ಕೆ ಕೈಹಾಕಿದ್ದಾರೆ’ ಎಂದು ಆರೋಪಿಸಿದರು.

'ಧರ್ಮಸ್ಥಳ ಪ್ರಕರಣ ಯಾವ ಸಿನಿಮಾದ ಚಿತ್ರಕತೆಗಿಂತ ಕಡಿಮೆ ಇಲ್ಲ. ಈ ಸಿನಿಮಾ ಮುಂದೆ ಕೆಜಿಎಫ್, ಆರ್.ಆರ್.ಆರ್ ಏನೂ ಅಲ್ಲ. ನಿರ್ದೇಶಕ ಯಾರೂ ಇರಬಹುದು, ನಿರ್ಮಾಪಕ‌ ಕಾಂಗ್ರೆಸ್’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಹೇಳಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಂಸದ ಜಗದೀಶ ಶೆಟ್ಟರ್,  ಮುಖಂಡ ಶ್ರಿರಾಮುಲು, ಶಾಸಕ ಸುರೇಶ ಗೌಡ ಮಾತನಾಡಿದರು. 

ಕಾರ್ಯಕ್ರಮದ ಸಂಚಾಲಕ, ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್‌.ವಿಶ್ವನಾಥ್ ಪ್ರಸ್ತಾವಿಕವಾಗಿ ಮಾತನಾಡಿದರು. ಸ್ಥಳೀಯ ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ನಿರೂಪಿಸಿದರು. ಮೇಲ್ಮನೆ ಸದಸ್ಯ ಪ್ರತಾಪಸಿಂಹ ನಾಯಕ್, ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಸಂದೇಶ ಓದಿದರು.

ಪರಿಷತ್ತಿನ ಉಪಸಭಾಪತಿ ಪ್ರಾಣೇಶ್‌, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಯಾ.ಬ್ರಿಜೇಶ್ ಚೌಟ, ತೇಜಸ್ವಿಸೂರ್ಯ, ಶಾಸಕರಾದ ಡಾ.ಅಶ್ವತ್ಥನಾರಾಯಣ, ಎಸ್.ರಘು, ಮನಿರತ್ನ,  ಡಿ.ವೇದವ್ಯಾಸ ಕಾಮತ್,  ಡಾ.ವೈ‌.ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಉಳಿಪಾಡಿ, ಭಾಗಿರಥಿ ಮುರುಳ್ಯ, ಯಶಪಾಲ್ ಸುವರ್ಣ, ಮುಖಂಡ ಎಸ್‌.ಕೆ. ಬೆಳ್ಳುಬ್ಬಿ ಇತರರು ಭಾಗವಹಿಸಿದ್ದರು.

‘ಧರ್ಮಸ್ಥಳ ಚಲೋ’ ಸಮಾವೇಶಕ್ಕೂ ಮುನ್ನ ಬಿಜೆಪಿ ಮುಖಂಡರಾದ  ಹರೀಶ್‌ ಪೂಂಜ ಬಿ.ವೈ.ವಿಜಯೇಂದ್ರ ಕ್ಯಾ.ಬ್ರಿಜೇಶ್ ಚೌಟ ಛಲವಾದಿ ನಾರಾಯಣಸ್ವಾಮಿ ಎಸ್‌.ಆರ್‌.ವಿಶ್ವನಾಥ್‌ ಮೊದಲಾದವರು ಮಂಜುನಾಥ ಸ್ವಾಮಿಯ ದರ್ಶನ ಪಡೆದರು

ಕರಾವಳಿ ಶಾಸಕರಿಗೆ ಸಿಗದ ಅವಕಾಶ

ಕರಾವಳಿ ಜಿಲ್ಲೆಗಳ ಶಾಸಕರಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶವಿರಲಿಲ್ಲ. ಮುಖಂಡ ನಳಿನ್ ಕುಮಾರ್ ಕಟೀಲ್‌ ಶಾಸಕ ವಿ.ಸುನಿಲ್ ಕುಮಾರ್‌ ವೇದಿಕೆಯಲ್ಲಿದ್ದರೂ ಅವಕಾಶ ಕಲ್ಪಿಸಲಿಲ್ಲ. ಡಿ.ವಿ.ಸದಾನಂದ‌ ಗೌಡರು ಕಾರ್ಯಕ್ರಮ ಆರಂಭವಾದ ಕೆಲ ಹೊತ್ತಿಗೆ ನಿರ್ಗಮಿಸಿದರು. ಭಾಷಣ ಮಾಡಲು ಹೆಸರು ಕರೆದಾಗ ಅವರು ವೇದಿಕೆಯಲ್ಲಿ ಇರಲಿಲ್ಲ. ಕಾರ್ಯಕ್ರಮದಲ್ಲಿ ಹೊರ ಜಿಲ್ಲೆಗಳಿಂದ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಧರ್ಮಸ್ಥಳ ಪುಣ್ಯಭೂಮಿ. ಇಲ್ಲಿ ಎದ್ದಿರುವ ಕೂಗು ತೂಫಾನ್ ಆಗಲಿದೆ. ತಮಿಳುನಾಡಿನ ಸಂಸದ ಈ ಷಡ್ಯಂತ್ರದ ಹಿಂದಿದ್ದು ಆತನನ್ನು ಬಂಧಿಸಿ ವಿಚಾರಣೆ ನಡೆಸಬೇಕು
-ಸುಧಾಕರ ರೆಡ್ಡಿ, ರಾಜ್ಯ ಬಿಜೆಪಿ ಸಹ ಉಸ್ತುವಾರಿ 
ತನಿಖೆ ನೆಪದಲ್ಲಿ ಎಸ್ಐಟಿ 22 ಅಡಿ ಆಳದ ಗುಂಡಿ ತಗೆದಿದೆಯಲ್ಲವೆ? ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಅದರಲ್ಲೇ ಹೂತು ಹಾಕಿ ಎಂದು ಕೇಳಲು ನಾವಿಲ್ಲಿಗೆ ಬಂದಿದ್ದೇವೆ
-ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.