ಉಜಿರೆ: ‘ಪವಿತ್ರ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆದಿದ್ದು, ‘ಬುರುಡೆ ಪ್ರಕರಣ’ದಿಂದ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದರ ಪತ್ತೆಗೆ ತನಿಖೆಯನ್ನು ಎನ್‌ಐಎಗೆ ಒಪ್ಪಿಸಬೇಕು’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.
ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾದ ‘ಧರ್ಮಸ್ಥಳ ಸತ್ಯ ಯಾತ್ರೆ’ ವಾಹನ ರ್‍ಯಾಲಿ ಬಳಿಕ ಇಲ್ಲಿನ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.
‘ವ್ಯಕ್ತಿಯೊಬ್ಬನ ದೂರು ಆಧರಿಸಿ ಎಸ್‌ಐಟಿ ರಚಿಸಿದ್ದು ಖಂಡನೀಯ. ಷಡ್ಯಂತ್ರ ನಡೆದಿದೆ ಎಂಬುದನ್ನು ರಾಜ್ಯದ ಉಪಮುಖ್ಯಮಂತ್ರಿಯೇ ಹೇಳಿದ್ದಾರೆ. ಸತ್ಯವನ್ನು ಹೊರಗೆಳೆಯಲು ನಾವು ನೈತಿಕ ಬೆಂಬಲ ನೀಡುತ್ತೇವೆ’ ಎಂದರು.
ಭಕ್ತರೇ ಕ್ಷೇತ್ರದ ಸಂಪತ್ತು: ‘ದೇಶ– ವಿದೇಶಗಳಲ್ಲಿರುವ ಕೋಟ್ಯಂತರ ಭಕ್ತರೇ ಕ್ಷೇತ್ರದ ಸಂಪತ್ತು. ಇಲ್ಲಿ ಯಾವುದೇ ತಪ್ಪು ಅಥವಾ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತೆ ವಹಿಸುತ್ತಿದ್ದೇವೆ. ಅಂತಹ ಘಟನೆ ನಡೆದಿಲ್ಲ, ನಡೆಯಲು ಸಾಧ್ಯವೂ ಇಲ್ಲ’ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸ್ಪಷ್ಟಪಡಿಸಿದರು.
ಡಿ. ಸುರೇಂದ್ರ ಕುಮಾರ್, ಶಾಸಕರಾದ ಜಿ.ಡಿ. ಹರೀಶ್ ಗೌಡ ಹುಣಸೂರು, ಎ. ಮಂಜು ಅರಕಲಗೂಡು, ಸ್ವರೂಪ್ ಹಾಸನ, ಮಲ್ಲೇಶ್ ಬಾಬು ಕೋಲಾರ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಮುಖಂಡ ಕೆ. ಮಹಾದೇವ ಮೊದಲಾದವರು ಭಾಗವಹಿಸಿದ್ದರು. ಸುಮಾರು 10 ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಧರ್ಮಸ್ಥಳದ ವಿಷಯ ಹುಡುಗಾಟದ್ದಲ್ಲ. ಬಿಜೆಪಿ ರಾಜಕೀಯ ಮಾಡುತ್ತಿಲ್ಲ. ಸೋಮವಾರ ನಡೆಯಲಿರುವ ಧರ್ಮಸ್ಥಳ ಚಲೊ ಪಕ್ಷಾತೀತವಾದುದು.–ಬಿ.ವೈ ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ದಕ್ಷಿಣ ಕನ್ನಡ, ಕರಾವಳಿಯಲ್ಲಿ ಜನರು ಕಾಂಗ್ರೆಸ್‌ಗೆ ಮಣೆ ಹಾಕುತ್ತಿಲ್ಲ. ಈ ಭಾಗದ ಜನರ ಒಲವು ಗಳಿಸಲು ರಾಜ್ಯ ಸರ್ಕಾರವೇ ಧರ್ಮಸ್ಥಳ ಪ್ರಕರಣದಲ್ಲಿ ಹುನ್ನಾರ ನಡೆಸಿದೆ.–ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
‘ಬಿಜೆಪಿಯವರು ಸಮಾವೇಶ ಮಾಡಲು ಹೊರಟಿರುವುದು ರಾಜಕೀಯ ದುರುದ್ದೇಶವೇ ಹೊರತು ಬೇರೇನೂ ಅಲ್ಲ. ಮಂಜುನಾಥ ಸ್ವಾಮಿಗೆ ಯಾವ ಸಮಾವೇಶದ ಅಗತ್ಯವೂ ಇಲ್ಲ.–ದಿನೇಶ್ ಗುಂಡೂರಾವ್,ಸಚಿವ
‘ಧರ್ಮಸ್ಥಳ ಚಲೊ– ಧರ್ಮದೆಡೆಗೆ ನಮ್ಮ ನಡಿಗೆ’ ಧ್ಯೇಯವಾಕ್ಯದೊಂದಿಗೆ ಸೆ. 1ರ ಮಧ್ಯಾಹ್ನ 2 ಗಂಟೆಯಿಂದ ಬಿಜೆಪಿ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ಸಮಾವೇಶ ನಡೆಯಲಿದೆ.–ಕ್ಯಾ.ಬ್ರಿಜೇಶ್ ಚೌಟ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.