
ಮಂಗಳೂರು: ಅಮೆರಿಕ ಹಾಗೂ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ನ ಆಗಸದಲ್ಲಿ ವಿಮಾನ ಹಾರಾಟ ನಿರ್ಬಂಧಿಸಿದ ಬಳಿಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಲ್ಲಿ ರಾಷ್ಟ್ರಿಗಳಿಗೆ ತೆರಳುವ ಹಾಗೂ ಆ ರಾಷ್ಟ್ರಗಳಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಅನೇಕ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ.
ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಐಎಕ್ಸ್ 831 (ಐಎಕ್ಸ್‌ಇ– ಡಿಎಕ್ಸ್‌ಬಿ) ವಿಮಾನವು ಮಧ್ಯಾಹ್ನ 3ಕ್ಕೆ ಹಾರಾಟ ನಡೆಸಲು ರನ್‌ವೇಯತ್ತ ಹೋಗಿತ್ತು. ಇರಾನ್‌ನ ಆಗಸದಲ್ಲಿ ವಿಮಾನಗಳ ಹಾರಾಟ ನಿರ್ಬಂಧಿಸಿದ ಮಾಹಿತಿ ಸಿಕ್ಕಿದ ಬಳಿಕ ಆ ವಿಮಾನ ನಿಲ್ದಾಣಕ್ಕೆ ಮರಳಿ ಕರೆಸಿಕೊಳ್ಳಲಾಯಿತು. ಆ ವಿಮಾನದಲ್ಲಿದ್ದ 174 ಮಂದಿ ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಇದ್ದರು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
‘ಇಲ್ಲಿಂದ ದೋಹಾಕ್ಕೆ ತೆರಳುತ್ತಿದ್ದ ಐಎಕ್ಸ್ 821 (ಐಎಕ್ಸ್‌ಇ–ಡಿಒಎಚ್) ವಿಮಾನವನ್ನು ಮುಂಬೈನಲ್ಲಿ ಇಳಿಸಲಾಯಿತು. ಆ ವಿಮಾನವು ರಾತ್ರಿ 7 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಲಿದೆ.’
‘ಇಲ್ಲಿಂದ ದುಬೈಗೆ ತೆರಳಬೇಕಾದ ಮೂರು ವಿಮಾನಗಳು, ದಮಾಮ್‌ಗೆ, ಕುವೈತ್‌ಗೆ ಹಾಗೂ ಅಬುಧಾಬಿಗೆ ತೆರಳಬೇಕಿದ್ದ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. ದೋಹಾದಿಂದ ಹಾಗೂ ದುಬೈನಿಂದ ಮಂಗಳೂರಿಗೆ ಬರಬೇಕಿದ್ದ ವಿಮಾನಗಳ ಹಾರಾಟವೂ ರದ್ದಾಗಿದೆ.’ ಎಂದು ಮೂಲಗಳು ತಿಳಿಸಿವೆ.
ಕೆಲ ದೇಶಗಳಲ್ಲಿ ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಿಧಿಸಿದ ಹಾಗೂ ಕೆಲ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ತಾತ್ಕಾಲಿಕವಾಗಿ ರದ್ದುಪಡಿಸಿದ ಕಾರಣಕ್ಕೆ ಕೆಲವು ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ವ್ಯತ್ಯಯವಾಗಿದೆ. ಇದರಿಂದಾಗಿ ಕೆಲವು ವಿಮಾನಗಳ ಹಾರಾಟ ರದ್ದಾಗಿದ್ದರೆ, ಇನ್ನು ಕೆಲವು ವಿಮಾನಗಳನ್ನು ನಿಗದಿತ ನಿಲ್ದಾಣಗಳ ಬದಲು ಬೇರೆ ನಿಲ್ದಾಣಗಳಲ್ಲಿ ಇಳಿಸಲಾಗಿದೆ. ಕೆಲವು ವಿಮಾನಗಳು ನಿಗದಿತ ಸಮಯಕ್ಕಿಂತ ತಡವಾಗಿ ತಲುಪಬಹುದು. ಹಾಗಾಗಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸುವ ಎಲ್ಲ ಪ್ರಯಾಣಿಕರು, ತಾವು ಪ್ರಯಾಣಿಸಲಿರುವ ವಿಮಾನಗಳ ಹಾರಾಟದ ಇತ್ತೀಚಿನ ಸ್ಥಿತಿಯ ಬಗ್ಗೆ ಮರು ಪರಿಶೀಲಿಸಿಕೊಳ್ಳಬೇಕು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.