ADVERTISEMENT

ಮಂಗಳೂರು | ಮೋದಿ ಮತ್ತೆ ಗೆದ್ದರೆ ಚುನಾವಣೆಯೇ ಇರದು: ಖರ್ಗೆ ಕಳವಳ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 15:35 IST
Last Updated 17 ಫೆಬ್ರುವರಿ 2024, 15:35 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

ಮಂಗಳೂರು: ‘ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಪ್ರಧಾನಿ ನರೇಂದ್ರ ಮೋದಿ ಮತ್ತಷ್ಟು ಸರ್ವಾಧಿಕಾರಿ ಆಗುತ್ತಾನೆ.‌ ಭವಿಷ್ಯದಲ್ಲಿ ದೇಶದಲ್ಲಿ ಚುನಾವಣೆಗಳೇ ನಡೆಯುವುದಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದ ಅವರು ಮೋದಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ‘ಪ್ರಜಾಪ್ರಭುತ್ವ ಕಡೆ ಪ್ರಧಾನಿ ನರೇಂದ್ರ‌ ಮೋದಿಗೆ ‌ಲಕ್ಷ್ಯವೇ ಇಲ್ಲ. ಮಾಧ್ಯಮ, ನ್ಯಾಯಾಂಗ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ವಿಜಿಲೆನ್ಸ್‌ ... ಎಲ್ಲ ಸಂಸ್ಥೆಗಳ ಮೇಲೆ ಹತೋಟಿ ಸಾಧಿಸಿ ದೇಶವನ್ನೇ ನಿಯಂತ್ರಿಸಲು ಮೋದಿ ಹೊರಟಿದ್ದಾನೆ. ಅವನನ್ನು ಇನ್ನಷ್ಟು ಶಕ್ತಿಶಾಲಿ ಮಾಡಬೇಡಿ' ಎಂದು ಕೋರಿದರು.

ADVERTISEMENT

ಭೂಸುಧಾರಣೆಯಿಂದ ಹಿಡಿದು ನರೇಗಾ ಯೋಜನೆವರೆಗೆ, ಆಹಾರ ಭದ್ರತೆ ಕಾಯ್ದೆಯಿಂದ ಹಿಡಿದು ಕಡ್ಡಾಯ ಶಿಕ್ಷಣದವರೆಗೆ ‌ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳು ಜಾರಿಗೊಳಿಸಿದ ಕಾರ್ಯಕ್ರಮಗಳಿಂದ ಜನ ಹೇಗೆ ಶಕ್ತಿ ಪಡೆದರು ಎಂಬುದನ್ನು ವಿವರಿಸಿದ ಖರ್ಗೆ, 'ಹೆಣ್ಣು, ಗಂಡು ಬಡವರು, ಶೋಷಿತರಿಗೆಲ್ಲ ಸರಿಸಮಾನ ಹಕ್ಕು ನೀಡಿದ್ದು ಕಾಂಗ್ರೆಸ್ ಪಕ್ಷ. ಇದರಿಂದಾಗಿಯೇ ದೇಶವು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಪಾಯಕ್ಕೆ ಸಿಲುಕಿರುವ ಈಗ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ. ಇದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ’ ಎಂದರು.

‘ಸ್ವಾತಂತ್ರ್ಯಪೂರ್ವದಲ್ಲಿ ಡಿಪ್ರೆಸ್ಡ್ ಕ್ಲಾಸ್ ಮಿಷನ್ ಆರಂಭಿಸಿ ಶೋಷಿತರಿಗೆ, ಅಸ್ಪೃಶ್ಯರಿಗೆ, ಶಿಕ್ಷಣ, ಉತ್ತಮ ರಸ್ತೆ, ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಶ್ರಮಿಸಿದ ಇಲ್ಲಿನ ಕುದ್ಮುಲ್ ರಂಗರಾವ್ ಅವರನ್ನೇ ಜನ ನೆನಪಿಟ್ಟುಕೊಂಡಿಲ್ಲ. ಇಲ್ಲಿ ಏನೇನೋ ಬೆಳವಣಿಗೆಗಳನ್ನು ನೋಡುತ್ತಿದ್ದೇವೆ. ಕಾಂಗ್ರೆಸ್ ‌ಪಕ್ಷ ಜಾರಿಗೆ ತಂದ ಭೂಸುಧಾರಣೆ ಕಾನೂನಿನಿಂದ ಉಡುಪಿ ಮಂಗಳೂರು ಪ್ರದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಬಡವರು ಭೂಮಾಲೀಕರಾದರು. ಕನಿಷ್ಠ ಪಕ್ಷ ನಿಮ್ಮ ತಂದೆ ತಾಯಿ ಎಂತಹ ಸ್ಥಿತಿಯಲ್ಲಿದ್ದರು. ಅವರನ್ನು ಭೂಮಾಲೀಕರನ್ನಾಗಿ‌ಮಾಡಿದ್ದು ಯಾರು ಎಂಬುದನ್ನು ಇಲ್ಲಿನವರು ನೆನಪಿಸಿಕೊಳ್ಳಬೇಕು. ನಮ್ಮ ಕಾರ್ಯಕ್ರಮಳಿಂದ ಜಮೀನು ಪಡೆದವರು, ಅನ್ನ ಉಂಡವರೂ, ಶಿಕ್ಷಣ ಹೊಂದಿದವರೂ ನಮ್ಮನ್ನೇ ಬೈಯುತ್ತಾರೆ. ಇದು ಯಾವ ನ್ಯಾಯ. ಈ ಪ್ರದೇಶದಲ್ಲಿ ಮೋದಿ ಅವರಿಗೆ ಜೈಕಾರ ಕೇಳುತ್ತಿದ್ದೇವೆ. ಅವರೇನಾದರೂ ಜಮೀನು ಕೊಟ್ಟರೇ, ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಿದ್ದಾರೆಯೇ. 2 ಕೋಟಿ ನೌಕರಿ ಕೊಟ್ಟರೇ. ಆದರೂ ಇಲ್ಲಿ ಬಿಜೆಪಿಯ ಬಾವುಟ ಹಾರಾಡುತ್ತಿರುವುದೇಕೆ’ ಎಂದು ಪ್ರಶ್ನಿಸಿದರು.

‘ಬಿಜೆಪಿಯವರು ಚುನಾವಣಾ ಬಾಂಡ್‌ನಿಂದ ₹ 6 ಸಾವಿರ ಕೋಟಿ ಕಪ್ಪುಹಣವನ್ನು ಉಳ್ಳವರಿಂದ ಗಳಿಸಿದ್ದಾರೆ. ಆದರೆ, ನಮ್ಮ ಪಕ್ಷವನ್ನು ಪೂರ್ತಿ ಮುಗಿಸಲು ಹೊರಡಿದ್ದಾರೆ.‌ ಪಕ್ಷದ ವಿವಿಧ ಬ್ಯಾಂಕ್‌ ಖಾತೆಗಳನ್ನೂ ಸ್ಥಗಿತಗೊಳಿಸಿದರು. ಜನ ರೊಚ್ಚಿಗೆದ್ದಿದ್ದರಿಂದ ಅವುಗಳನ್ನು ಈಗ ಮತ್ತೆ ಚಾಲ್ತಿಗೊಳಿಸಿದರು. ಜನರು ಕೊಟ್ಟ ದುಡ್ಡೂ ವಿರೋಧ ಪಕ್ಷಗಳ ಬಳಿ ಇರಬಾರದು ಎಂಬ ಧೋರಣೆ ಅವರದು. ಸದಸ್ಯತ್ವದಿಂದ ಗಳಿಸಿದ ಹಣಕ್ಕೂ ಅವರು ಕೈ ಹಾಕಿದ್ದಾರೆ’ ಎಂದು ಬೇಸರ ತೋಡಿಕೊಂಡರು.

‘ಬಿಜೆಪಿಯವರು ಬರೇ ಜಗಳ ಹಚ್ಚುತ್ತಾರೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ, ಕಡುಬಡವರನ್ನು ತುಳಿಯುವುದೇ ಅವರ ಉದ್ದೇಶ. ಈ ಸಲ ಮತ್ತೆ ಆರು ಗ್ಯಾರಂಟಿ ಯೋಜನೆಗಳೊಂದಿಗೆ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೆವೆ.‌ ಆಶೀರ್ವಾದ ಮಾಡಿ’ ಎಂದರು.

‘ನಾವು ಸಿದ್ದರಾಮಯ್ಯ ಗ್ಯಾರಂಟಿ ಎನ್ನುವುದಿಲ್ಲ. ಅದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ. ಆದರೆ, ಬಿಜೆಪಿಯು ತನ್ನ ಕಾರ್ಯಕ್ರಮಗಳನ್ನು ಮೋದಿ ಗ್ಯಾರಂಟಿ ಎನ್ನುವ ಮೂಲಕ ಜನರ ದಿಕ್ಕು ತಪ್ಪಿಸುತ್ತದೆ’ ಎಂದರು.

‘ಸಾರ್ವಜನಿಕ ಉದ್ದಿಮೆಗಳನ್ನು ಒಂದೊಂದಾಗಿ ಮುಚ್ಚಿದ ಮೋದಿ, ಒಕ್ಕೂಟದ ವ್ಯವಸ್ಥೆಗೂ ಧಕ್ಕೆಯನ್ನು ಉಂಟುಮಾಡಿದ್ದಾರೆ.‌ ಕೇಂದ್ರದಿಂದ ನೀಡಬೇಕಾದ‌ಷ್ಟು ಅನುದಾನವನ್ನೂ ನೀಡುತ್ತಿಲ್ಲ.‌ ರಕ್ಷಣೆ ಮತ್ತಿತರ ಉದ್ದೇಶಕ್ಕೆ ಹಣ ಬಳಸಲಿ. ಆದರೆ, ಬರಗಾಲ ಬಂದಾಗ, ಪರಿಶಿಷ್ಟ ಜಾತಿಯವರ ವಿದ್ಯಾರ್ಥಿವೇತನಕ್ಕೂ ದುಡ್ಡು ಕೊಡುತ್ತಿಲ್ಲ. ಇದರ ವಿರುದ್ಧವೂ ಹೋರಾಟ ಮಾಡಬೇಕಾಗಿದೆ’ ಎಂದರು.

ತಮ್ಮ ಎಂದಿನ ವ್ಯಂಗ್ಯಭರಿತ ಶೈಲಿಯಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಹತ್ತು ವರ್ಷದ ಹಿಂದೆ ನರೇಂದ್ರ ಮೋದಿಯವರು ಏನೇನು ಹೇಳಿದ್ದರು. ಯಾವುದಾದರೂ ಪ್ರಮುಖ ಭರವಸೆ ಈಡೇರಿಸಿದ್ದಾರೆಯೇ ವಿಮರ್ಶೆ ಮಾಡಿಕೊಳ್ಳಿ. ಧರ್ಮ, ಜಾತಿ‌ಗಳ ನಡುವೆ ಬೆಂಕಿ ಹಚ್ಚಿ, ಕೋಮುವಾದ, ಧಾರ್ಮಿಕ ಮತ್ತು ಭಾವನಾತ್ಮಕ ವಿಚಾರ‌ ಮುಂದಿಟ್ಡು ಹತ್ತು ವರ್ಷದಿಂದ ಅಧಿಕಾರ‌ ನಡೆಸುತ್ತಿದ್ದಾರೆ. ನಾವು ಹಾಗೆ ಮಾಡಿಲ್ಲ ನುಡಿದಂತೆ ನಡೆದಿದ್ದೇವೆ. ಸುಳ್ಳು ಯಾವುದು ನಿಜ ಯಾವುದು ವಿಮರ್ಶೆ‌ಮಾಡುವ ಶಕ್ತಿ ನಿಮಗಿದೆ’ ಎಂದರು.

ಗ್ಯಾರಂಟಿ ಯೋಜನೆಯಿಂದ ಜನರಿಗೆ ಏನೆಲ್ಲ ಪ್ರಯೋಜನವಾಗಿದೆ ಎಂದು ಬೊಟ್ಟು ಮಾಡಿದ ಸಿದ್ದರಾಮಯ್ಯ, ‘ಕಾಂಗ್ರೆಸ್‌ ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವೇ ಇಲ್ಲ. ಅವುಗಳನ್ನು ಜಾರಿಗೊಳಿಸಿದರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಸ್ವತಃ ಮೋದಿ ಹೇಳಿದ್ದರು. ನಾವು ಎಂಟೇ ತಿಂಗಳಲ್ಲಿ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಬಜೆಟ್‌ ಗಾತ್ರ ₹3.71ಲಕ್ಷ ಕೋಟಿಗೆ ಹೆಚ್ಚಳವಾಗಿದೆಯೇ ಹೊರತು, ರಾಜ್ಯವೇನೂ ದಿವಾಳಿ ಆಗಿಲ್ಲ. ಮುಂದಿನ ವರ್ಷ ಗ್ಯಾರಂಟಿ ಕಾರ್ಯಕ್ರಮಗಳಿಗಾಗಿ ₹ 52 ಸಾವಿರ ಕೋಟಿಯನ್ನು ಮೀಸಲಿಟ್ಟಿದ್ದೇವೆ. ಇಷ್ಟಾಗಿಯೂ ರಾಜ್ಯ ಆರ್ಥಿಕವಾಗಿ ಮತ್ತಷ್ಟು ಸುಭದ್ರ ವಾಗಿದೆ’ ಎಂದರು.

‘ಬಿಜೆಪಿಯವರು ನಮ್ಮ ಕಾರ್ಯಕ್ರಮಗಳನ್ನಷ್ಟೇ ಅಲ್ಲ, ನಾವು ಬಳಸಿದ ‘ಗ್ಯಾರಂಟಿ’ ಪದವನ್ನೂ ಕದ್ದು ‘ಮೋದಿ ಗ್ಯಾರಂಟಿ’ ಎಂದು ಪ್ರಚಾರ ಮಾಡಲಾರಂಭಿಸಿದ್ದಾರೆ. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಇದನ್ನೆಲ್ಲ ಮೋದಿಯವರೇ ಮಾಡಿದ್ದು ಹೇಳುವಂತಹ ನೀಚ ಮನಸ್ಥಿತಿ ಹೊಂದಿದ್ದಾರೆ. ಉತ್ತಮ ಆಡಳಿತ ನೀಡಿಯೂ 2018ರಲ್ಲಿ ನಾವು ಸೋತಿದ್ದು ಪ್ರಚಾರಕ್ಕೆ ಮಹತ್ವ ನೀಡದ ಕಾರಣಕ್ಕೆ. ನಮ್ಮ ಕಾರ್ಯಕರ್ತರು ಎಚ್ಚರವಾಗಿರಬೇಕು. ಸರ್ಕಾರದ ಯೋಜನೆಗಳನ್ನು ನಮ್ಮ ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು’ ಎಂದರು.

ತೆರಿಗೆಯ ಪಾಲು ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಅಂಕಿ ಅಂಶ ಸಹಿತವಾಗಿ ಎಳೆ ಎಳೆಯಾಗಿ ವಿವರಿಸಿದ ಮುಖ್ಯಮಂತ್ರಿ, ‘ತೆರಿಗೆ ಸಂಗ್ರಹದಲ್ಲಿ ರಾಜ್ಯವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. 2023–24ರಲ್ಲಿ ರಾಜ್ಯದಿಂದ ₹4.30 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ ನೀಡಿದ್ದೇವೆ. ನಮಗೆ ವಾಪಾಸ್ ಬಂದಿದ್ದು ₹50,257 ಕೋಟಿ ಮಾತ್ರ. ನಾವು ನೀಡುವ ಪ್ರತಿ ₹ 100 ತೆರಿಗೆಯಲ್ಲಿ ನಮಗೆ ಮರಳುವುದು ₹ 13 ರೂ ಮಾತ್ರ. 15ನೇ ಕೇಂದ್ರ ಹಣಕಾಸು ಆಯೋಗವು ರಾಜ್ಯಕ್ಕೆ ₹ 11,435 ಕೋಟಿ ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ ನಮ್ಮ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾದ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್‌ ಅದಕ್ಕೂ ಕತ್ತರಿ ಹಾಕಿದರು. ಈ ಅನ್ಯಾಯಯ ವಿರುದ್ಧ ಧ್ವನಿ ಎತ್ತಿದರೆ ಬಿಜೆಪಿಯವರು ಉರಿದುಕೊಳ್ಳುತ್ತಾರೆ’ ಎಂದರು.

‘ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಬಿಜೆಪಿಯ 25 ಸಂಸದರು ಯಾವತ್ತಾದರೂ ಪ್ರಶ್ನೆ ಮಾಡಿದ್ದಾರೆಯೇ. ಮಿಸ್ಟರ್‌ ನಳಿನ್‌ ಕುಮಾರ್‌ ಕಟೀಲ್‌, ಸಚಿವೆ ಶೋಭಾ ಕರಂದ್ಲಾಜೆ ಯಾವತ್ತಾದರೂ ಈ ಬಗ್ಗೆ ಬಾಯಿ ಬಿಟ್ಟಿದ್ದಾರೆಯೇ. ಅವರನ್ನು ಮತ್ತೆ ಗೆಲ್ಲಿಸಬೇಕಾ’ ಎಂದು ಪ್ರಶ್ನಿಸಿದರು.

‘ಪ್ರಧಾನಿಯವರು ಸಬ್‌ ಕಾ ಸಾತ್‌... ಸಬ್ಕಾ‌ ವಿಕಾಸ್ .. ಎಂದು ಒಂದು ಕಡೆ ಹೇಳುತ್ತಾರೆ. ಆದರೆ ಅವರದೇ ಪಕ್ಷದ ಬಸನಗೌಡ ಯತ್ನಾಳ್‌ ಅವರಂತಹವರು ಟೋಪಿ ಧರಿಸಿದವರು, ಬುರ್ಕಾ ಹಾಕಿದವರು ಕಚೇರಿಗೆ ಬರಬೇಡಿ ಎನ್ನುತ್ತಾರೆ. ಹೇಳಿದ್ದಕ್ಕೂ ನಡೆದುಕೊಳ್ಳುವುದಕ್ಕೂ ಸ್ವಲ್ಪವಾದರೂ ಸಂಬಂಧ ಇರಬೇಕಲ್ಲವೇ’ ಎಂದು ಪ್ರಶ್ನಿಸಿದರು.

‘ಸರ್ವ ಜನಾಂಗದ ಶಾಂತಿಯ ತೋಟ ಸೃಷ್ಟಿಸಲು ಬಯಸುವ ನಮ್ಮ ಪಕ್ಷ ಬಸವಾದಿ ಶರಣರು, ಗಾಂಧೀಜಿ, ಬುದ್ಧ ಹಾಗೂ ಅಂಬೇಡ್ಕರ್‌ ಸಿದ್ಥಾಂತಗಳಲ್ಲಿ ಹಾಗೂ ಸಂವಿಧಾನದಲ್ಲಿ ನಂಬಿಕೆ ಇಟ್ಟಿದೆ. ಬಿಜೆಪಿಯವರಿಗೆ ಮೋದಿಯೇ ಬಂಡವಾಳ.‌ ಮೋದಿಯವರು ವಿಧಾನ ಸಭಾ ಚುನಾವಣೆಯಲ್ಲಿ, ರಸ್ತೆ ರಸ್ತೆಯಲ್ಲಿ ತಿರುಗಿದರೂ ಜನ ನಮಗೆ 136 ಸ್ಥಾನ‌ಗಳನ್ನು ಕೊಟ್ಟಿದ್ದಾರೆ. ಈ ಸಲವೂ ನಾವು ರಾಜ್ಯದಲ್ಲಿ ಕನಿಷ್ಟ 20 ಸ್ಥಾನ‌ಗಳನ್ನು ಗೆದ್ದೇ ಗೆಲ್ಲುತ್ತೇವೆ. ಇಲ್ಲಿನ‌ ಎರಡು ಸ್ಥಾನ ಗೆಲ್ಲಿಸಿಕೊಡಿ’ ಎಂದು ಮನವಿ ಮಾಡಿದರು.

ಪ್ರಾಸ್ರಾವಿಕವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,'ಇದು ಐತಿಹಾಸಿಕ ಭೂಮಿ. ಕೋಟಿ–ಚೆನ್ನಯ, ವೀರರಾಣಿ ಅಬ್ಬಕ್ಕ, ನಾರಾಯಣ ಗುರುಗಳಂತವರು ಹೋರಾಟ ನಡೆಸಿದ್ದ ಭೂಮಿ. ನಮ್ಮ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಮೊದಲು ಜಾರಿಯಾದ ಶಕ್ತಿ ಯೋಜನೆಯನ್ನು ರಾಹುಲ್‌ ಗಾಂಧಿ ಅವರು ಘೋಷಣೆ ಮಾಡಿದ್ದು ಇಲ್ಲೇ. ಹಾಗಾಗಿ ಇಲ್ಲೇ ಸಮಾವೇಶ ಹಮ್ಮಿಕೊಂಡಿದ್ದೇವೆ’ ಎಂದರು.

‘ಮಂಗಳೂರು ಮತ್ತು ಉಡುಪಿಯ ಕಾರ್ಯಕರ್ತರು ಆತ್ಮವಿಶ್ವಾಸ‌ ಕಳೆದುಕೊಳ್ಳಬೇಕಾಗಿಲ್ಲ. ವಿಧಾನ ಸಭಾ ಚುನಾವಣೆಯಲ್ಲಿ ಕರಾವಳಿಯಲ್ಲಿ ಎರಡೇ ಸೀಟು ಗೆದ್ದಿದ್ದಕ್ಕೆ ಕುಗ್ಗಬೇಕಿಲ್ಲ. ಈ ಹಿಂದೆ ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಉಪಚುನಾವಣೆಯನ್ನು ನಾವು ಗೆದ್ದು ತೋರಿಸಿದ್ದೆವು. ಮೋದಿ ಗೆದ್ದರೆ ದೇಶ ತೊರೆಯುತ್ತೇನೆ ಎಂದಿದ್ದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಈಗ ಮಗನನ್ನು ಬಿಜೆಪಿಗೆ ಕಳುಹಿಸಿದ್ದು ನಾನೇ ಎನ್ನುತ್ತಿದ್ದಾರೆ. ಇದು ನಮ್ಮ ಗ್ಯಾರಂಟಿಗಳ ಶಕ್ತಿ. ಈ ಸಲ ಗ್ಯಾರಂಟಿಯ ಬಲ ನಮ್ಮ ಜೊತೆಗಿದೆ. ರಾಜ್ಯದಲ್ಲಿ ಕನಿಷ್ಠ 20 ಸೀಟುಗಳನ್ನು ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, 'ನರೇಂದ್ರ ಮೋದಿಯವರದ್ದು ಸುಳ್ಳುಗಳ ಮಾದರಿ. ನುಡಿದಂತೆ ನಡೆದ ಕರ್ನಾಟಕ ಸರ್ಕಾರವೇ ದೇಶಕ್ಕೆ ಮಾದರಿ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ಬಿ.ಸಿ.ಚಂದ್ರಪ್ಪ, ಸಚಿವರಾದ ಜಿ.ಪರಮೇಶ್ವರ, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಮಧು ಬಂಗಾರಪ್ಪ, ಮಾಂಕಾಳ ವೈದ್ಯ, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಎಚ್.ಮುನಿಯಪ್ಪ, ಡಿ.ಸುಧಾಕರ್, ಭೈರತಿ ಸುರೇಶ್, ನಾಗೇಂದ್ರ, ವೆಂಕಟೇಶ್, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಮೈಸೂರು ವಿಭಾಗದ ಉಸ್ತುವಾರಿ ರೋಜಿ ಎಂ.ಜಾನ್, ವಿಧಾನಸಭೆಯ ಸಚೇತಕ ಅಶೋಕ್‌ ಪಟ್ಟಣ ಶೆಟ್ಟಿ, ರಾಜ್ಯಸಭಾ ಸದಸ್ಯರಾದ ನಾಸಿರ್ ಹುಸೇನ್, ಜಿ.ಸಿ.ಚಂದ್ರಶೇಖರ, ತೆರಿಗೆ ಸುಧಾರಣಾ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕೆಪಿಸಿಸಿ ಮಹಿಳಾ‌ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಮಂಜುನಾಥ ಭಂಡಾರಿ, ಮುಖಂಡರಾದ ಎಂ.ವೀರಪ್ಪ ಮೊಯಿಲಿ, ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮೋಟಮ್ಮ, ವಿ.ಎಸ್‌.ಉಗ್ರಪ್ಪ, ಮಹಮ್ಮದ್ ಗಪೂರ್, ಮಮತಾ ಗಟ್ಟಿ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.