ADVERTISEMENT

ನಾಪತ್ತೆಗೂ ಮುನ್ನ ಹಲವರಿಗೆ ಕರೆ, ದಾರಿಯುದ್ದಕ್ಕೂ ‘ಕ್ಷಮಿಸಿ’ ಎನ್ನುತ್ತಿದ್ದರು!

ಸಿದ್ದಾರ್ಥ ಹೆಗ್ಡೆ

ವಿ.ಎಸ್.ಸುಬ್ರಹ್ಮಣ್ಯ
Published 30 ಜುಲೈ 2019, 20:00 IST
Last Updated 30 ಜುಲೈ 2019, 20:00 IST
ವಿ.ಜಿ.ಸಿದ್ದಾರ್ಥ ಹೆಗ್ಡೆ
ವಿ.ಜಿ.ಸಿದ್ದಾರ್ಥ ಹೆಗ್ಡೆ   

ಮಂಗಳೂರು: ಸ್ವಗ್ರಾಮ ಗೌತಹಳ್ಳಿಗೆ ಹೇಳಿ ಹೊರಟಿದ್ದ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಹೆಗ್ಡೆ ಸೋಮವಾರ ಸಂಜೆ ಮಂಗಳೂರು ತಲುಪುವ ಮುನ್ನ ಹಲವರಿಗೆ ಕರೆ ಮಾಡಿ ‘ನನ್ನನ್ನು ಕ್ಷಮಿಸಿ ಬಿಡಿ’ ಎಂದು ಮನವಿ ಮಾಡಿಕೊಂಡಿದ್ದರು!

ಕಾರು ಚಾಲಕ ಬಸವರಾಜ್‌ ಪಾಟೀಲ್‌ ಪೊಲೀಸರೊಂದಿಗೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಿಂದ ಇನ್ನೊವಾ ಕಾರಿನಲ್ಲಿ ಹೊರಟಿದ್ದ ಸಿದ್ಧಾರ್ಥ ಅವರು ದಾರಿಯುದ್ದಕ್ಕೂ ಮೊಬೈಲ್‌ನಲ್ಲಿ ಮಾತನಾಡುತ್ತಾ ಬಂದಿದ್ದಾರೆ. ಹಲವು ಕರೆಗಳನ್ನು ಮಾಡಿರುವ ಅವರು ಯಾರೊಂದಿಗೂ ಹೆಚ್ಚು ಮಾತನಾಡಿಲ್ಲ. ‘ನನ್ನನ್ನು ಕ್ಷಮಿಸಿ ಬಿಡಿ’ ಎಂದಷ್ಟೇ ಹೇಳಿ ಕರೆ ತುಂಡರಿಸುತ್ತಿದ್ದರು. ಮಂಗಳೂರು ತಲುಪಿದ ಬಳಿಕವೂ ಅವರು ಕರೆಗಳನ್ನು ಮಾಡುತ್ತಲೇ ಇದ್ದರು ಎಂದು ಬಸವರಾಜ್‌ ತನಿಖಾ ತಂಡಕ್ಕೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ADVERTISEMENT

ಕಾಫಿ ಡೇ ಆಡಳಿತ ಮಂಡಳಿ ನಿರ್ದೇಶಕರು ಮತ್ತು ನೌಕರರನ್ನು ಉದ್ದೇಶಿಸಿ ಶನಿವಾರವೇ ಪತ್ರವೊಂದನ್ನು ಬರೆದಿಟ್ಟಿರುವ ಅವರು, ಅಲ್ಲಿಯೂ ಕ್ಷಮೆಯ ಮಾತುಗಳನ್ನು ಉಲ್ಲೇಖಿಸಿದ್ದರು. ಅದೇ ದಾಟಿಯಲ್ಲಿ ಕ್ಷಮೆ ಕೇಳುತ್ತಾ ಬಂದಿದ್ದರು ಎಂಬ ಮಾಹಿತಿ ಅವರು ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಕಂಪನಿಯ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಹೂಡಿಕೆದಾರರನ್ನು ಎದುರಿಸಲು ಸಾಧ್ಯವಾಗದೇ ಆತ್ಮಹತ್ಯೆ ನಿರ್ಧಾರ ಕೈಗೊಂಡೇ ಹೊರಟಿರಬಹುದು ಎಂಬ ಅನುಮಾನಕ್ಕೆ ಪುಷ್ಟಿ ನೀಡಿದೆ.

ಸಿಬ್ಬಂದಿಗೆ ಕೊನೆಯ ಕರೆ:

ಸಿದ್ಧಾರ್ಥ ಅವರು ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಕಲ್ಲಾಪು ಬಳಿಯ ನೇತ್ರಾವತಿ ಸೇತುವೆ ಸಮೀಪ ತಲುಪಿದ್ದರು. ಅಲ್ಲಿ ಕಾರಿನಿಂದ ಇಳಿದು ನಡೆದುಕೊಂಡ ಹೊರಟ ಬಳಿಕವೂ ಮೊಬೈಲ್‌ನಲ್ಲಿ ಮಾತನಾಡುತ್ತಲೇ ಇದ್ದರು.

ಕೆಫೆ ಕಾಫಿ ಡೇ ಕಂಪನಿಯ ಹಣಕಾಸು ವಿಭಾಗದ ಪ್ರಮುಖ ಅಧಿಕಾರಿ ಜಾವೇದ್‌ ಮತ್ತು ಬೆಂಗಳೂರು ಕಚೇರಿಯ ಇನ್ನೊಬ್ಬ ಪ್ರಮುಖ ಸಿಬ್ಬಂದಿ ಚಿದಂಬರ್‌ ಜೊತೆ ಕೊನೆಯ ಕರೆಗಳಲ್ಲಿ ಮಾತನಾಡಿದ್ದರು. ಇಬ್ಬರೊಂದಿಗೆ ದೀರ್ಘವಾಗಿ ಸಂಭಾಷಣೆ ನಡೆಸಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಬ್ಯಾಗ್‌ನಲ್ಲಿ ಏನಿದೆ?:

ಬೆಂಗಳೂರಿನಿಂದ ಹೊರಡುವಾಗ ಬಟ್ಟೆ ಮತ್ತು ಇತರ ವಸ್ತುಗಳಿದ್ದ ಬ್ಯಾಗ್‌ ಒಂದನ್ನು ಸಿದ್ಧಾರ್ಥ ಕಾರಿನಲ್ಲಿ ಇರಿಸಿಕೊಂಡಿದ್ದರು. ಬ್ಯಾಗ್‌ ಸಮೇತವಾಗಿಯೇ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು, ಕಂಕನಾಡಿ ನಗರ ಠಾಣೆಯಲ್ಲಿ ಇರಿಸಿದ್ದಾರೆ. ಬ್ಯಾಗ್‌ನಲ್ಲಿ ಏನಿರಬಹುದು ಎಂಬ ಕುತೂಹಲ ಹೆಚ್ಚಿದೆ.

ಚಿಕ್ಕಂದಿನಿಂದಲೇ ಮಂಗಳೂರಿನ ನಂಟು

ಸಿದ್ಧಾರ್ಥ ಹೆಗ್ಡೆ ಅವರು ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮಂಗಳೂರಿನಲ್ಲಿಯೇ ಪೂರೈಸಿದ್ದರು. ಆ ಬಳಿಕವೂ ಮಂಗಳೂರಿನೊಂದಿಗೆ ನಂಟು ಇರಿಸಿಕೊಂಡಿದ್ದರು.

1975ರ ಜೂನ್‌ 18ರಂದು ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಪ್ರಥಮ ಪಿಯು ತರಗತಿಗೆ ದಾಖಲಾಗಿದ್ದ ಸಿದ್ಧಾರ್ಥ, ಅದೇ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನೂ ಪೂರೈಸಿದ್ದರು. ಪದವಿಯಲ್ಲಿ ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಅಧ್ಯಯನ ಮಾಡಿದ್ದರು. ನಂತರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿದ್ದರು.

ಪೋಲೊ ಮೈದಾನಕ್ಕೆ ಯೋಜನೆ

ಉಳ್ಳಾಲ ನಗರಸಭೆ ವ್ಯಾಪ್ತಿಯ ಮುಕ್ಕಚ್ಚೇರಿ ಸೀ ಗ್ರೌಂಡ್ ಸಮೀಪ ಸಿದ್ದಾರ್ಥ ಅವರು 20 ವರ್ಷಗಳ ಹಿಂದೆ 22 ಎಕರೆ ಜಮೀನು ಖರೀದಿಸಿದ್ದರು. ಸಮುದ್ರ ತೀರದಲ್ಲಿರುವ ಜಾಗದಲ್ಲಿ ಪೋಲೊ ಮೈದಾನ ನಿರ್ಮಿಸುವ ಯೋಜನೆಯನ್ನು ಹಾಕಿದ್ದರು.

22 ಎಕರೆಯ ಪಹಣಿ ಅವರ ಹೆಸರಿಗೆ ಬಂದಿದ್ದರೂ, ಸಿಆರ್‌ಜೆಡ್‌ ಕಾನೂನಿಂದ ಯೋಜನೆಗೆ ಅಡ್ಡಿಯಾಗಿತ್ತು. ಇದರಿಂದ ಪೋಲೊ ಮೈದಾನ ಯೋಜನೆ ವಿಳಂಬವಾಗಿತ್ತು. ಖರೀದಿಸುವ ಸಂದರ್ಭ ಸುಮಾರು 30 ಎಕರೆ ಪ್ರದೇಶವಿದ್ದರೂ, ಹಲವು ಎಕರೆ ಸಮುದ್ರ ಕೊರೆತದಿಂದಾಗಿ ಸಮುದ್ರ ಪಾಲಾಗಿತ್ತು.

ಒಂದೂವರೆ ವರ್ಷದ ಹಿಂದೆ ಪತ್ನಿ ಹಾಗೂ ಮಂಗಳೂರಿನ ಅವರ ಕಂಪನಿ ಸಿಬ್ಬಂದಿ ಜತೆಯಾಗಿ ಸ್ಥಳಕ್ಕೆ ಬಂದು, ಆ ಜಾಗದಲ್ಲಿ ಒಂದು ಗಂಟೆ ಇದ್ದು ಬಳಿಕ ವಾಪಸಾಗಿದ್ದರು. ಸಿಆರ್‌ಜೆಡ್‌ ವ್ಯಾಪ್ತಿಯನ್ನು ರದ್ದುಗೊಳಿಸಿದ ಬಳಿಕವಷ್ಟೇ ಕಾಮಗಾರಿ ಆರಂಭಿಸುವ ಕುರಿತು ಸ್ಥಳೀಯರಲ್ಲಿ ತಿಳಿಸಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.