ADVERTISEMENT

ಉದ್ಯಮಿ ಸಿದ್ಧಾರ್ಥ ನಾಪತ್ತೆ ಪ್ರಕರಣ | ತನಿಖೆಗೆ ನಾಲ್ಕು ತಂಡಗಳ ರಚನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 16:51 IST
Last Updated 30 ಜುಲೈ 2019, 16:51 IST
   

ಮಂಗಳೂರು: ಉದ್ಯಮಿ ಸಿದ್ಧಾರ್ಥ ನಾಪತ್ತೆ ಪ್ರಕರಣದ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಿದ್ದು, ಬಹು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಬಸವರಾಜ್ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಕೆಲವು ಸೂಕ್ಷ್ಮ ಮಾಹಿತಿಗಳು ಲಭ್ಯವಾಗಿದ್ದು ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ. ಸಿಸಿಬಿ ಸೇರಿದಂತೆ ಒಟ್ಟು ನಾಲ್ಕು ತಂಡಗಳು ತನಿಖೆ ನಡೆಸುತ್ತಿವೆ’ ಎಂದರು.

ಘಟನೆ ನಡೆದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಗಿದೆ. ಸಿದ್ದಾರ್ಥ ಅವರ ಮೊಬೈಲ್‌ ಕರೆಗಳ ವಿವರ ಸೇರಿದಂತೆ ಕೆಲವೊಂದು ತಾಂತ್ರಿಕ ಮಾಹಿತಿಯ ಆಧಾರದಲ್ಲೂ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ADVERTISEMENT

ನದಿಯ ಎರಡೂ ಬದಿಗಳಲ್ಲಿ ರಾತ್ರಿ ನಿಗಾ ಇಡಲಾಗುವುದು. ಇದಕ್ಕಾಗಿ ವಿಶೇಷ ‘ಸರ್ಚ್‌ ಲೈಟ್‌’ ಬಳಸಲಾಗುತ್ತಿದೆ. ನದಿಯ ಎರಡೂ ಬದಿಗಳಲ್ಲಿ ಪೊಲೀಸ್‌ ತಂಡಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ರಾತ್ರಿ ಶೋಧ ಸ್ಥಗಿತ: ಸಮುದ್ರದಲ್ಲಿ ಅಲೆಗಳ ಉಬ್ಬರ ಜಾಸ್ತಿಯಾಗಿರುವುದು ಮತ್ತು ಅಳಿವೆ ಬಾಗಿಲಿನಲ್ಲಿ ಕಾರ್ಯಾಚರಣೆಗೆ ತೊಡಕು ಇರುವುದರಿಂದ ರಾತ್ರಿ ಶೋಧ ಕಾರ್ಯಾಚರಣೆ ನಡೆಸುತ್ತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ತಿಳಿಸಿದರು.

‘ಅಲೆಗಳ ಉಬ್ಬರ ಹೆಚ್ಚಿದ್ದು, ದೋಣಿಗಳನ್ನು ಬಳಸಿ ಕಾರ್ಯಾಚರಣೆ ನಡೆಸುವುದು ಸಾಧ್ಯವಿಲ್ಲ. ಮುಳುಗು ತಜ್ಞರು ಕೂಡ ಶೋಧ ನಡೆಸಲು ಆಗುತ್ತಿಲ್ಲ. ಪ್ರತಿಕೂಲ ಪರಿಸ್ಥಿತಿಯ ಕಾರಣದಿಂದ ಶೋಧ ನಿಲ್ಲಿಸಲಾಗಿದೆ. ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಕಾರ್ಯಾಚರಣೆ ಮತ್ತೆ ಆರಂಭವಾಗಲಿದೆ’ ಎಂದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.