ADVERTISEMENT

ಕಾನೂನು ನೆಪದಲ್ಲಿ ಕಲೆ, ಧಾರ್ಮಿಕ ನಂಬಿಕೆಗಳಿಗೆ ತೊಂದರೆ ಕೊಡಬೇಡಿ: ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 9:25 IST
Last Updated 9 ಸೆಪ್ಟೆಂಬರ್ 2025, 9:25 IST
   

ಮಂಗಳೂರು: ಕಾನೂನು ಸುವ್ಯವಸ್ಥೆ ನೆಪದಲ್ಲಿ ಕಲೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ತೊಂದರೆ ಕೊಡಬಾರದು. ದಕ್ಷಿಣ ಕನ್ನಡಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೆರವಣಿಗೆ ಯಕ್ಷಗಾನ ನಾಟಕ ದೈವಕೋಲ, ಭರತನಾಟ್ಯ, ಇತ್ಯಾದಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡುವಾಗ ಎದುರಾಗಿರುವ ತೊಂದರೆಗಳನ್ನು ನಿವಾರಿಸಿ ಅವುಗಳನ್ನು ಮೊದಲಿನ ಹಾಗೆ ನಡೆಸಲು ಅನುವು ಮಾಡಿ ಕೊಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಘಟನೆಗಳ ಆಶ್ರಯದಲ್ಲಿ‌ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಬೃಹತ್ ಜನಾಗ್ರಹ ಸಭೆಯಲ್ಲಿ ಈ ಕುರಿತ ಮನವಿಯನ್ನು ಶಾಸಕರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಇದೆ ರಾತ್ರಿ-ಹಗಲು ಕಾರ್ಯಕ್ರಮ ನಡೆಯುವುದು ಇಲ್ಲಿಯ ಸಂಪ್ರದಾಯ. ಹಿಂದಿಗಿಂತ ಈಗ ಜನಸಂಖ್ಯೆ ಹೆಚ್ಚಾಗಿದ್ದು ಇತ್ತೀಚೆಗೆ ಇಂತಹ ಕಾರ್ಯಕ್ರಮದಲ್ಲಿ ಜನರು ಉತ್ಸಾಹದಿಂದ ಭಕ್ತಿ ಶ್ರದ್ದೆಯಿಂದ ಬಹಳ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಧ್ವನಿವರ್ಧಕ ಬಳಕೆ ಅನಿವಾರ್ಯ. ಆದರೆ ಈ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಸಂಧರ್ಭದಲ್ಲಿ, ರಾತ್ರಿ ಧ್ವನಿವರ್ಧಕ ಉಪಯೋಗಿಸದಂತೆ ಹಾಗೂ ರಾತ್ರಿ 10.30ರ ಒಳಗೆ ಕಾರ್ಯಕ್ರಮ ನಿಲ್ಲಿಸುವಂತೆ ಷರತ್ತು ವಿಧಿಸಲಾಗುತ್ತದೆ. ಇದರಿಂದ ಜಿಲ್ಲೆಯಲ್ಲಿ ಧಾರ್ಮಿಕ ಮತ್ತು ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಲಕ್ಷಾಂತರ ಜನರಿಗೆ ಆಘಾತವಾಗಿದೆ. ಇವುಗಳನ್ನೇ ನೆಚ್ಚಿಕೊಂಡು ಬದುಕುವ ಕಲಾವಿದರು ಮತ್ತು ಧ್ವನಿವರ್ಧಕ, ಶಾಮಿಯನ ಮುಂತಾದ ಕ್ಷೇತ್ರಗಳ ಕಾರ್ಮಿಕರ ಜೀವನ ನಿರ್ವಹಣೆಗೂ ತೊಂದರೆ‌ ಆಗಿದೆ. ಅನೇಕರ ಬದುಕೇ ಸ್ಥಬ್ಧವಾಗಿದೆ' ಎಂದು ಸಂಘಟನೆಗಳು ಆರೋಪಿಸಿವೆ.

ADVERTISEMENT

'ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಯಾವುದೇ ಧಾರ್ಮಿಕ ಮತ್ತು ಕಲೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಅಹಿತಕರ ಘಟನೆಗಳು ಇದುವರೆಗೆ ನಡೆದಿಲ್ಲ. ಕಾನೂನು ಸುವ್ಯವಸ್ಥೆ ಬಿಗಡಾಯಿಸಲು ಕಾರಣವಾಗಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಿಂದಿನಂತೆ ನಡೆಯಲು ಅನುಮತಿ ನೀಡಬೇಕು. ಇಂತಹ ಕಾರ್ಯಕ್ರಮಗಳಿಗೆ ರಕ್ಷಣೆ ಕೊಟ್ಟು ಜಿಲ್ಲೆಯ ಸಹಬಾಳ್ವೆಯನ್ನು ಮುಂದುವರೆಸಿಕೊಂಡು ಹೋಗಲು ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು' ಎಂದು ಈ ಸಂಘಟನೆಗಳು ಒತ್ತಾಯಿಸಿವೆ.

'ಎಲ್ಲರಿಗೂ ಸಮಾನವಾಗಿ ಜಾರಿಗೊಳಿಸಬೇಕಾದ ಕಾನೂನನ್ನು ತಾರತಮ್ಯದಿಂದ ಜಾರಿಗೊಳಿಸಲಾಗುತ್ತಿದೆ ಎಂದು ಅರೋಪಿಸಿರುವ ಸಂಘಟನೆಗಳು, ಈ ತಾರತಮ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿವೆ.

ಯಕ್ಷಗಾನ, ನಾಟಕ ಭರತನಾಟ್ಯ ಇತ್ಯಾದಿ ಕಲಾ ಪ್ರಕಾರಗಳನ್ನು ಆಯೋಜಿಸುವ ಪ್ರಮುಖರನ್ನು ಹಾಗೂ ಧ್ವನಿವರ್ಧಕ ಮತ್ತಿತರ ಸೇವೆ ಒದಗಿಸುವವರನ್ನು ಕರೆದು ಎಲ್ಲರ ಅಭಿಪ್ರಾಯ ಪಡೆದು, ಅವರ ಅನುಭವಗಳ ಆಧಾರದ ಮೇಲೆ, ಕಾರ್ಯಕ್ರಮ ಆಯೋಜನೆಗೆ ಅಡ್ಡಿಯಾದ ನಿಯಮಗಳನ್ನು ಪುನರ್ರಚಿಸಬೇಕು. ಅಲ್ಲಿವರೆಗೆ ಇಂಹ ನಿಯಮ ಜಾರಿ ತಡೆಯಬೇಕು. ಅಲದಲಿವರೆಗೆ ಈ ಹಿಂದಿನಂತೆ ಕಾರ್ಯ ಕ್ರಮ ಮೆರವಣಿಗೆ ನಡೆಸಲು ಅನುಕೂಲ ಮಾಡಿಕೊಡುವಂತೆ ಕ್ರಮಕೈಗೊಳ್ಳಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ಮುಂಬರುವ ನಾಡಹಬ್ಬವಾದ ದಸರಾ ಆಚರಣೆ ಸಲುವಾಗಿ ಶಬ್ದ ಮಾಲಿನ್ಯ ( ನಿರ್ಬಂಧ ಮತ್ತು ನಿಯಂತ್ರಣ) ನಿಯಮ 5 (3)ರ ಪ್ರಕಾರ ಸೆ. 22 ರಿಂದ ಅ. 3ರ ವರೆಗೆ 12 ದಿನಗಳ ಕಾಲ ಇಡೀ ರಾಜ್ಯದಲ್ಲಿ ಈ ನಿಯಮಾವಳಿಗಳಿಗೆ ರಿಯಾಯಿತಿಯನ್ನು ಕೊಟ್ಟು ಸರ್ಕಾರವು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿವೆ.

'ಜಿಲ್ಲೆ ಸೂಕ್ಷ್ಮ ಪ್ರದೇಶ ಶಾಂತಿ ಸುವ್ಯವಸ್ಥೆ ಕಾಪಾಡಲು ನಿಯಮಗಳನ್ನು ಕಟ್ಡುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ನಡೆದಿರುವ ಯಾವುದೇ ಅಹಿತಕರ ಘಟನೆಗಳಿಗೂ ಧ್ವನಿವರ್ಧಕ ಬಳಕೆಗೂ ಯಾವುದೇ ಸಭೆ ಮೆರವಣಿಗೆಗಳಿಗೂ ಸಂಬಂಧವೇ ಇಲ್ಲ. ಯಾವುದೇ ಮೆರವಣಿಗಗಳನ್ನು ರಾತ್ರಿ ನಡೆಸಬಾರದೆಂದು ನಿಯಮಗಳು ಇಲ್ಲ. ಹಲವಾರು ಶತಮಾನಗಳಿಂದ ಜಿಲ್ಲೆಯಲ್ಲಿ ಯಕ್ಷಗಾನ, ನಾಟಕ ಹಾಗೂ ದೈವ ಕೋಲ, ನೇಮ ಇತ್ಯಾದಿಗಳು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ ತನಕ ನಡೆಸಯವ ಸಂಪ್ರದಾಯ ಇದೆ. ಸ್ವಾತಂತ್ರ್ಯ ಪೂರ್ವದಲ್ಲೂ ಹಾಗೂ ಅದರ ನಂತರ ಇಂದಿನವರೆಗೂ ಯಾವುದೇ ಅಡಚಣೆ ಇಲ್ಲದೇ ನಡೆದುಕೊಂಡು ಬಂದ ಪರಂಪರೆಯನ್ನು ಈಗ ಮೊಟಕುಗೊಳಿಸುವುದು ಸರಿಯಲ್ಲ. ಕಲೆಗಳನ್ನೂ ಹಾಗೂ ಧಾರ್ಮಿಕ ನಂಬಿಕೆಗಳನ್ನೂ ಅದುಮಿ ಹಿಡಿದರೆ, ಅವು ಕ್ರಮೇಣ ನಶಿಸುವ ಸಾಧ್ಯತೆ ಇದೆ. ಆದ್ದರಿಂದ ಕಲೆಯನ್ನೂ ಜಿಲ್ಲೆಯ ವಿಶೇಷವಾಗಿ ಎಲ್ಲಾ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಗಳನ್ನು ಕೊಲ ನೇಮಗಳನ್ನು ಯಥಾವತ್ತಾಗಿ ನಡೆಸುವಂತೆ ಸರ್ಕಾರ ವ್ಯವಸ್ಥೆಗೊಳಿಸಬೇಕು ಎಂದು ಆಗ್ರಹಿಸಿವೆ.

ಶಬ್ದ ಮಾಲಿನ್ಯ ನಿರ್ಬಂಧ ನತ್ತು ನಿಯಂತ್ರಣ ನಿಯಮಗಳು ರಚನೆಯಾಗಿದ್ದು 2000ರಲ್ಲಿ. ಇದು ರೂಪುಗೊಂಡು ಎರಡೂವರೆ ದಶಕಗಳಾಗಿವೆ. ಇಡೀ ದೇಶಕ್ಕೆ ಅನ್ವಯವಾಗುವ ಈ ನಿಯಮಾವಳಿ ಜಾರಿಯಾದ ನಂತರ ನಮ್ಮ ಜಿಲ್ಲೆಯೂ ಸೇರಿ ಇಡೀ ದೇಶದಲ್ಲಿ ಲಕ್ಷಾಂತರ ರಾಜಕೀಯ ಸಾರ್ವಜನಿಕ ಸಭೆಗಳಾಗಿವೆ. ಬಹುತೇಕ ಕಡೆ ಸಾವಿರಾರು, ಲಕ್ಷಾಂತರ ಜನರಿಗೆ ತಲುಪುವಷ್ಟು ಪ್ರಬಲವಾದ ಧ್ವನಿವರ್ಧಕಗಳನ್ನು ಬಳಸಲಾಗಿದೆ. 200 ಡಿಸಿಬಲ್‌ ತನಕದ ಧ್ವನಿವರ್ಧಕವನ್ನು ಬಳಸಿದರೂ ಸರ್ಕಾರವಾಗಲೀ ಪೊಲೀಸರಾಗಲಿ ಅದನ್ನು ನಿಲ್ಲಿಸಲು ಕ್ರಮಗಳನ್ನು ಕೈಗೊಂಡಿಲ್ಲ. ಇತ್ತೀಚೆಗೆ ಹಿಂದೂ ಹಬ್ಬಗಳಿಗೆ ಮಾತ್ರ ಈ ನಿಯಮಾಗಳ ಪ್ರಕಾರ ಷರತ್ತು ವಿಧಿಸುತ್ತಿರುವುದು ಏಕೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ಬಳಕೆಗೆ ಇಲ್ಲದ ನಿರ್ಬಂಧ ಇಲ್ಲಿ ಮಾತ್ರ ಏಕೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಹಬ್ಬಗಳ ಸಂದರ್ಭ ಯಕ್ಷಗಾನ, ನಾಟಕ, ಮೆರವಣಿಗೆ ಸಂದರ್ಭಗಳಲ್ಲಿ ಮಾತ್ರ ಇದನ್ನು ಸೀಮಿತವಾಗಿ ಜಾರಿಗೊಳಿಸಿರುವುದರ ಉದ್ದೇಶವೇನು ಎಂದು ಸಂಘಟನೆಗಳು ಪ್ರಶ್ನಿಸಿವೆ.

ಸಮಿತಿಯ ಸಂಚಾಲಕರಾದ ಎಚ್. ಕೆ.ಪುರುಷೋತ್ತಮ, ಶಿವಾನಂದ ಮೆಂಡನ್, ದೇವದಾಸ್ ಕಾಪಿಕಾಡ್, ಪಟ್ಲ ಸತೀಶ್ ಶೆಟ್ಟಿ, ಧನರಾಜ್ ಶೆಟ್ಟಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ದಯಾನಂದ್ ಕತ್ತಲಸಾರ್, ಮಧು ಬಂಗೇರ, ಪಮ್ಮಿ ಕೊಡಿಯಾಲ್ ಬೈಲ್, ಕಿಶೋರ್ ಡಿ.ಶೆಟ್ಟಿ ಮೊದಲಾದವರು ಸಲ್ಲಿಸಿದ ಮನವಿಯನ್ನು ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಉಳಿಪಾಡಿ, ಭಾಗಿರಥಿ ಮುರುಳ್ಯ, ಉಮಾನಾಥ ಕೋಟ್ಯಾನ್ ಅವರು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ವಿಎಚ್ ಪಿ ಮುಖಂಡ ಎಂ.ಬಿ.ಪುರಾಣಿಕ್, ಶರಣ್ ಪಂಪ್ ವೆಲ್, ಪಿ.ಎಸ್.ಪೃಕಾಶ್, ಕಟೀಲಿನ ಹರಿನಾರಾಯಣ ದಾಸ ಅಸ್ರಣ್ಣ, , ವಿಜಯ ಕುಮಾರ್ ಕೊಡಿಯಾಲ್ ಬೈಲ್, ಅರವಿಂದ ಬೋಳಾರ್, ತುಷಾರ್ ಸುರೇಶ್, ರಾಜೇಶ್ ರೈ, ಆಶಾ ಜ್ಯೋತಿ ರೈ, ರಾಜಶೇಖರ್‌ ಶೆಟ್ಟಿ ವಿಟ್ಲ, ಲೀಲಾಧರ ಕರ್ಕೇರ, ಗೋಕುಲ್ ಕದ್ರಿ ಕಿರಣ್ ಜೋಗಿ, ಅಣ್ಣು ಪೂಜಾರಿ, ಭಾಸ್ಕರ ಚಂದ್ರ ಶೆಟ್ಟಿ, ಲಕ್ಷ್ಮಣ ಮಲ್ಲೂರು, ಸರಪಾಡಿ ಅಶೋಕ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಪೊಳಲಿ ಗಿರೀಶ‌ ತಂತ್ರಿ ಮೊದಲಾದವರು ಭಾಗವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.