ADVERTISEMENT

ಹುಬ್ಬಳ್ಳಿ | ಖಾಲಿ ನಿವೇಶನ: ತ್ಯಾಜ್ಯ ಎಸೆಯುವ ತಾಣ

ಮಳೆ: ಎತ್ತರಕ್ಕೆ ಬೆಳೆದ ಮುಳ್ಳು–ಕಂಟಿ ಗಿಡಗಳು, ಅಕ್ಕ–ಪಕ್ಕದ ನಿವಾಸಿಗಳಿಗೆ ವಿಷ ಜಂತುಗಳ ಕಾಟ

ಗೌರಮ್ಮ ಕಟ್ಟಿಮನಿ
Published 28 ಜುಲೈ 2025, 4:30 IST
Last Updated 28 ಜುಲೈ 2025, 4:30 IST
ಹುಬ್ಬಳ್ಳಿಯ ರೇಲ್ವೆ ಸ್ಟೇಷನ್‌ ರಸ್ತೆಯಲ್ಲಿ ಖಾಲಿ ನಿವೇಶನವೊಂದರಲ್ಲಿ ತ್ಯಾಜ್ಯ ಎಸೆಯಲಾಗಿದೆ
ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ರೇಲ್ವೆ ಸ್ಟೇಷನ್‌ ರಸ್ತೆಯಲ್ಲಿ ಖಾಲಿ ನಿವೇಶನವೊಂದರಲ್ಲಿ ತ್ಯಾಜ್ಯ ಎಸೆಯಲಾಗಿದೆ ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ಈ ಜಾಗದ ಮಾಲಕ್‌ ಯಾರೊ ಗೊತ್ತಿಲ್ಲ, ಕಸದ ಗಾಡಿ ಮನಿ ಬಾಗಿಲಿಗೆ ಬಂದ್ರು, ಈ ರಸ್ತೆದಾಗ ಓಡಾಡೊರೆಲ್ಲ ಇಲ್ಲೆ ಕಸ  ಚೆಲ್ತಾರಿ, ಆಜು–ಬಾಜುದವರು ರಾತ್ರಿ ತಮ್ಮ ಕಾರು, ಬೈಕು ನಿಲ್ಲಸ್ತಾರಿ, ಅದಕೂ ಜಗಳ ಮಾಡ್ತಾರಿ. ಜೊತಿಗ ಬಿಟ್ಟು ಬಿಡದಂಗ ಮಳಿ ಸುರಿಯಾಕತ್ತಿರೋದಕ ಹಾವು, ಹೆಗ್ಗಣ, ಮುಂಗುಸಿಗಳ ವಾಸದ ತಾಣಾನೂ ಆಗೇತ್ರಿ. ಎಲ್ಲಿ ಮನಿಯೊಳಗ ಇವು ಬರ್ತಾವ ಅನ್ನೊ ಹೆದರಿಕಿನೂ ಸುರು ಆಗೇದ್ರಿ. ಮೊನ್ನೆ ಮನಿ ಬಾಗಿಲ ಮುಂದ ಹಾವಿನ ಮರಿ ಬಂದಿತ್ರಿ... ಅವತ್ತಿಂದ ಮನಿ ಬಾಗಿಲ ಮುಚ್ಚೆ ಇರ್ತೇವ್ರಿ...

ಹೀಗೆ ಸಾಲಾಗಿ ದೂರುಗಳನ್ನು ಹೇಳಿದವರು ಕೋಟಿಲಿಂಗ ನಗರದ ನಿವಾಸಿ ಮಹಾಲಕ್ಷ್ಮಿ. ಈಗ ಮಳೆಗಾಲ ಆರಂಭವಾಗಿದ್ದು,  ಬೇಗ ಹುಲ್ಲು, ಗಿಡ ಬೆಳೆಯುತ್ತಿವೆ. ಜೊತೆಗೆ ಸಾರ್ವಜನಿಕರು ಕಸ ಎಸೆಯುವ ತಾಣವನ್ನಾಗಿ ಮಾಡಿಕೊಂಡಿದ್ದು ಬೀದಿನಾಯಿ, ದನಗಳು ಕಸ ಎಳೆದು ರಸ್ತೆಗೆ ತರುತ್ತಿವೆ. ಇದರಿಂದ ಎಲ್ಲೆಡೆ ಕೊಳಕು ಮನೆಮಾಡಿದೆ. ಅನಾರೋಗ್ಯ ಭೀತಿಯೂ ಕಾಡುತ್ತಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಒಂದು ಬಿಲ್ಡಿಂಗ್, ಒಂದೆರೆಡು ಖಾಲಿ ನಿವೇಶನ ಮತ್ತೆ ನಾಲ್ಕಾರು ಕಟ್ಟಡ, ನಂತರ ನಾಲ್ಕೈದು ಖಾಲಿ ನಿವೇಶನ ಹೀಗೆ ಗೋಕುಲ ರಸ್ತೆಯ ರೇಣುಕಾ ನಗರ, ದೇವಿನಗರ, ಮಾನಸಗಿರಿ, ಗಿರಿನಗರ, ಲೋಹಿಯಾ ನಗರ, ಮುರಾರ್ಜಿ ನಗರ, ರಾಧಾಕೃಷ್ಣ ನಗರ ನೆಹರು ಕಾಲೊನಿ, ಶಕ್ತಿ ಕಾಲೊನಿ, ಸಿಲ್ವರ್ ಟೌನ್ ಸೇರಿದಂತೆ ಹತ್ತಾರು ಹೊಸ ಬಡಾವಣೆಗಳಲ್ಲಿ ಈ ದೃಶ್ಯ ಸಾಮಾನ್ಯವಾಗಿದೆ. ಇದರಿಂದ ಅಕ್ಕ–ಪಕ್ಕದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಹುಬ್ಬಳ್ಳಿಯ ಸಮಾಜ ಸೇವಕ ನವೀದ್ ಮುಲ್ಲಾ ತಿಳಿಸಿದರು. 

ADVERTISEMENT

‘ಮನೆ ಅಕ–ಪಕ್ಕ ಖಾಲಿ ನಿವೇಶನಗಳಿದ್ದು ಕಸದ ರಾಶಿಯಿದೆ. ದುರ್ನಾತದ ಜೊತೆಗೆ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಇದರಿಂದ ಡೆಂಗಿ, ಮಲೇರಿಯಾ, ಇತರೆ ಸಾಂಕ್ರಾಮಿಕ ರೋಗಗಳು ಹರಡಬಹುದು. ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವೇ ನಾಗರಿಕರ ಆರೋಗ್ಯದ ವೆಚ್ಚ ಭರಿಸಬೇಕು’ ಎಂದು ಹಳೇ ಹುಬ್ಬಳ್ಳಿ ನಿವಾಸಿ ಚೇತನ್ ಡೊಂಬರಪೇಟ ಒತ್ತಾಯಿಸಿದರು.

ಮನೆ ಹತ್ತಿರ ಚಿಕ್ಕಮಕ್ಕಳ ಆಸ್ಪತ್ರೆ, ಶಾಲಾ ಮಕ್ಕಳ ಸಮವಸ್ತ್ರದ ಅಂಗಡಿ ಇದ್ದು, ಇವುಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಖಾಲಿ ನಿವೇಶನವಿದೆ. ಇದರಲ್ಲಿಯೇ ಸಾರ್ವಜನಿಕರು ತ್ಯಾಜ್ಯ ಎಸೆಯುತ್ತಾರೆ. ಕಸ ವಿಲೇವಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ’ ಎಂದು ರೇಲ್ವೆ ಸ್ಟೇಷನ್ ರಸ್ತೆ ನಿವಾಸಿ ಪ್ರಮೋದ ಹಬೀಬ ದೂರಿದರು. 

ಮಾಲೀಕರಿಗೆ ದಂಡ; ಸಾರ್ವಜನಿಕವಾಗಿ ಬಹಿರಂಗಪಡಿಸಲಿ

‘ಖಾಲಿ ನಿವೇಶನ ಕಂಡರೆ ಕಸ ಎಸೆಯುವುದು ಜನರಿಗೆ ರೂಢಿಯಾಗಿದೆ. ಪಾಲಿಕೆಯ ಕಸದ ವಾಹನಗಳು ನಿತ್ಯ ಬರುವುದಿಲ್ಲ. ಬಂದರೂ ಮೂರ್ನಾಲ್ಕು ದಿನಕ್ಕೊಮ್ಮೆ, ಅದು ಬೇರೆ ಬೇರೆ ಸಮಯಕ್ಕೆ. ಇದರಿಂದ ಜನರು ಕಸದ ವಾಹನ ನೆಚ್ಚದೆ, ಎಲ್ಲೆಂದೆರಲ್ಲಿ ಬಿಸಾಕುತ್ತಾರೆ. ಮುಖ್ಯ ನಗರ ಅಥವಾ ಮುಖ್ಯ ಕ್ರಾಸ್‌ನಲ್ಲಿ ಖಾಲಿ ನಿವೇಶನಗಳ ಸಂಖ್ಯೆ ಹೆಚ್ಚಿದೆ. ಅವುಗಳ ಮಾಲೀಕರು ಬೇರೆ ಊರಿನಲ್ಲಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಬರಬಹುದು ಎಂಬ ನಂಬಿಕೆಯಿಂದ ಅನೇಕರು ಅವುಗಳನ್ನು ವರ್ಷಾನುಗಟ್ಟಲೇ ಖಾಲಿಯೇ ಬಿಡುತ್ತಾರೆ. ಅಂತಹವರಿಗೆ ಪಾಲಿಕೆ ನೋಟಿಸ್ ನೀಡಬೇಕು, ಅವರೂ ಸ್ಪಂದಿಸದಿದ್ದಾಗ, ನಿವೇಶನಗಳನ್ನು ವಶಕ್ಕೆ ಪಡೆಯಬೇಕು’ ಎನ್ನುತ್ತಾರೆ ಹುಬ್ಬಳ್ಳಿ–ಧಾರವಾಡ ನಾಗರಿಕ ವಾರ್ಡ್‌ ಸಮಿತಿ ಬಳಗದ ಸಹಸಂಚಾಲಕ ಶಿವಶಂಕರ್‌ ಐಹೊಳಿ.

‘ಇಂತಹ ಖಾಲಿ ನಿವೇಶನದ ಮಾಲೀಕರಿಗೆ ನೋಟಿಸ್‌ ನೀಡಿ, ಇಂತಿಷ್ಟು ದಂಡ ವಿಧಿಸಲಾಗಿದೆ ಎಂದು ಪಾಲಿಕೆಯವರು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಪಾಲಿಕೆಯಿಂದಲೇ ಸ್ವಚ್ಛಗೊಳಿಸಿ ಅದರ ಮೊತ್ತವನ್ನು ತೆರಿಗೆಯಲ್ಲಿ ಸೇರಿಸುವುದರಿಂದ ಹಲವರು ತಮ್ಮ ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಮುಂದಾಗುತ್ತಿಲ್ಲ.‌ ವಾರ್ಡ್ ಸಮಿತಿಗಳನ್ನು ರಚಿಸಬೇಕು. ಆಯಾ ನಗರದ ನಿವಾಸಿಗಳ ಸಂಘದ ಅಧ್ಯಕ್ಷರಿಗೆ ಅವರ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳ ಮಾಲೀಕರಿಗೆ ಸೂಚನೆ ನೀಡುವಂತೆ ತಿಳಿಸಬೇಕು. ಇದು ಕೇವಲ ಪಾಲಿಕೆ ಜವಾಬ್ದಾರಿ ಮಾತ್ರವಲ್ಲ, ನಾಗರಿಕರೂ ಜವಾಬ್ದಾರಿ ತೆಗೆದುಕೊಳ್ಳಬೇಕು. ಸಾಧ್ಯವಿರುವ ಕಡೆ ಸಿಸಿ ಟಿ.ವಿ ಕ್ಯಾಮೆರಾ ಅಳವಡಿಸಬೇಕು. ಕಸ ಎಸೆಯುವವರ ಫೋಟೊವನ್ನು ಸಹ ಬಹಿರಂಗಪಡಿಸಬೇಕು. ನಗರದ ಸ್ವಚ್ಛತೆ ಕುರಿತು ಶಾಲೆಗಳಲ್ಲಿ ಜಾಗೃತಿ ಮೂಡಿಸಬೇಕು ಎಂಬುದು ಅವರ ಒತ್ತಾಯ.

‌ನಗರದಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಹಲವರು ತಳ್ಳು ಗಾಡಿಗಳನ್ನು ಇಟ್ಟುಕೊಂಡು ಬೆಳಿಗ್ಗೆ ತಿಂಡಿ ಮಾರಾಟ ಮಾಡಿ, ನಂತರ ಅಲ್ಲಿಯೇ ಪಾತ್ರೆಗಳನ್ನು ತೊಳೆದು ತ್ಯಾಜ್ಯ ಎಸೆಯುತ್ತಾರೆ. ಇನ್ನು ಅಪಾರ್ಟ್‌ಮೆಂಟ್‌ನವರು ಕೆಲವರು ತಮ್ಮ ವಾಹನಗಳನ್ನು ನಿಲ್ಲಿಸಲು ಖಾಲಿ ನಿವೇಶನಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. 

ವಲಯ ಸಂ.6ರ ವ್ಯಾಪ್ತಿಯಲ್ಲಿ  ನವೀನ್ ಪಾರ್ಕ್‌, ಶಬರಿ ಲೇಔಟ್‌, ಸುಂದರಪುರಂ, ಗೋಪನಕೊಪ್ಪ, ಸಪ್ತಗಿರಿ, ದೇಶಪಾಂಡೆ ನಗರ ಸೇರಿದಂತೆ ವಿವಿಧೆಡೆ 2ಸಾವಿರಕ್ಕೂ ಹೆಚ್ಚು ಖಾಲಿ ನಿವೇಶನಗಳಿದ್ದು ಜೆಸಿಬಿ ಮೂಲಕ ಅವುಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಒಂದು ತಿಂಗಳವರೆಗೆ ಪಾಲಿಕೆ ಜೆಸಿಬಿ ನೀಡಿದೆ’ ಎಂದು ವಲಯ ಸಂ.6ರ ವಲಯ ಮೇಲ್ವಿಚಾರಕ ಗಿರೀಶ್‌ ತಳವಾರ ತಿಳಿಸಿದರು. 

8500 ಮಾಲೀಕರಿಗೆ ನೋಟಿಸ್: ಘಾಳಿ

ಕಳೆದ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಖಾಲಿ ನಿವೇಶನ ಸ್ವಚ್ಛಗೊಳಿಸುವಂತೆ ಮಾಲೀಕರಿಗೆ ನೋಟಿಸ್‌ ನೀಡಬೇಕು ದಂಡ ವಿಧಿಸಬೇಕು. ಆಗಲೂ ಸ್ವಚ್ಛಗೊಳಿಸದಿದ್ದಲ್ಲಿ ಖಾಲಿ ನಿವೇಶನ ವಶಕ್ಕೆ ಪಡೆಯುವಂತೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದರು.  ಮೂರು ವಾರಗಳಿಂದ ಕಾರ್ಯಾಚರಣೆಯಲ್ಲಿ ತೊಡಗಿರುವ ಪಾಲಿಕೆ ಅಧಿಕಾರಿಗಳು ಈವರೆಗೆ ಅವಳಿ ನಗರದಲ್ಲಿ 8500 ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.

’ಖಾಲಿ ನಿವೇಶನಗಳ ಮಾಲೀಕರನ್ನು ಪತ್ತೆ ಮಾಡುವುದು ಸವಾಲಿನ ಕೆಲಸವಾಗಿದೆ. ನಿವೇಶನ ಒಂದು ಕಡೆ ಇರುತ್ತೆ ಮಾಲೀಕರು ಮತ್ತೊಂದು ಕಡೆ ವಾಸವಾಗಿರುತ್ತಾರೆ. ಅವರ ಪಿಐಡಿ (ಪ್ರಾಪರ್ಟಿ ಐಡೆಂಟಿಫಿಕೆಷನ್) ನಂಬರ್ ಹುಡುಕಿ ಮಾಲೀಕರಿಗೆ ನೋಟಿಸ್‌ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನೋಟಿಸ್‌ಗೂ ಉತ್ತರಿಸದಿದ್ದಲ್ಲಿ ದಂಡ ವಿಧಿಸಲಾಗುವುದು’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದರು. 

’ನೋಟಿಸ್‌ ನೀಡಿ 15ದಿನದೊಳಗೆ ಅವರು ತಮ್ಮ ನಿವೇಶನವನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು. ದಂಡದ ಮೊತ್ತ ನಿವೇಶನದ ಅಳತೆ ಮೇಲೆ ನಿರ್ಧರಿಸಲಾಗುತ್ತದೆ. ಇನ್ನು ಮೂರು ತಿಂಗಳು ಕಾರ್ಯಾಚರಣೆ ನಡೆಯಲಿದೆ’ ಎಂದು ತಿಳಿಸಿದರು.

44 ಸಾವಿರ ಅಕ್ರಮ ನಿವೇಶನ 

‘ಅವಳಿ ನಗರದಲ್ಲಿ 14 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು ಒಟ್ಟು 3.50 ಲಕ್ಷ ನಿವೇಶನ ಇವೆ. ಇದರಲ್ಲಿ 1.5ಲಕ್ಷ ಜನವಸತಿ ನಿವೇಶನ 45 ಸಾವಿರ ವಾಣಿಜ್ಯ ನಿವೇಶನ 44 ಸಾವಿರಕ್ಕೂ ಹೆಚ್ಚು ಅಕ್ರಮ ನಿವೇಶನಗಳಿವೆ ಹಾಗೂ 1 ಲಕ್ಷಕ್ಕೂ ಹೆಚ್ಚು ಖಾಲಿ ನಿವೇಶನಗಳಿವೆ’ ಎಂದು  ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳಿದರು. ‘ಅನೇಕರು ನೋಟರಿ ಪತ್ರಗಳನ್ನು ಹಿಡಿದುಕೊಂಡು ಬಂದು ಇದು ನಮ್ಮ ಆಸ್ತಿ ಎನ್ನುತ್ತಾರೆ. ಆದರೆ ಆಸ್ತಿಗಳ ನೋಂದಣಿ ಪತ್ರ ಇದ್ದಲ್ಲಿ ಮಾತ್ರ ಅವುಗಳನ್ನು ಸಕ್ರಮ ಮಾಡಲಾಗುವುದು. ಬಹುತೇಕರ ಬಳಿ ನೋಂದಣಿ ಪತ್ರಗಳೇ ಇರುವುದಿಲ್ಲ. ಹಾಗಾಗಿ ಅಕ್ರಮ ನಿವೇಶನಗಳ ಸಂಖ್ಯೆ ಜಾಸ್ತಿಯಾಗಿದೆ’ ಎಂದು ಅವರು ತಿಳಿಸಿದರು.

ಸಾಮಾನ್ಯ ಸಭೆಯಲ್ಲಿ ಚರ್ಚೆ: ಎಲಿಗಾರ

’ಜಿಲ್ಲೆಯಲ್ಲಿ ಒಟ್ಟು 12 ವಲಯಗಳಿವೆ. ಖಾಲಿ ನಿವೇಶನ ಸ್ವಚ್ಛಗೊಳಿಸಲು ವಲಯಕ್ಕೊಂದು ಜೆಸಿಬಿ ನೀಡುವಂತೆ ಹು–ಧಾ ಮಹಾನಗರ ಪಾಲಿಕೆ ಆಯುಕ್ತರಿಗೆ ತಿಳಿಸಲಾಗಿದೆ. ಈ ಕುರಿತು ಜುಲೈ 30ರಂದು ನಡೆಯುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಲಾಗುವುದು. ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಮಾಡಲಾಗುವುದು’ ಎಂದು ಪಾಲಿಕೆಯ ವಿಪಕ್ಷ ನಾಯಕ ಇಮ್ರಾನ್ ಎಲಿಗಾರ ತಿಳಿಸಿದರು. ‘ನಿರಂತರವಾಗಿ ಸ್ವಚ್ಛಗೊಳಿಸುವ  ಕಾರ್ಯ ಮಾಡಿದರೆ ಅವಳಿ ನಗರವನ್ನು ಸ್ವಚ್ಛ ಹಾಗೂ ಸುಂದರವನ್ನಾಗಿ ಮಾಡಬಹುದು. ವಾರ್ಡ್‌ ಸದಸ್ಯರೂ ಖಾಲಿ ನಿವೇಶನ ಸ್ವಚ್ಛಗೊಳಿಸಲು ಆದ್ಯತೆ ನೀಡುತ್ತಿದ್ದಾರೆ’ ಎನ್ನುತ್ತಾರೆ ಅವರು.

ಅಕ್ರಮ ಚಟುವಟಿಕೆ ಅಡ್ಡೆ ಹಾವು–ಹಂದಿ ಆಶ್ರಯ

ಧಾರವಾಡ: ನಗರದ ಹಲವೆಡೆ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ಹಾವು ಹಂದಿ ಕ್ರಿಮಿಕೀಟಗಳ ಆವಾಸ ಸ್ಥಾನಗಳಾಗಿವೆ. ನಿವೇಶನಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಕೆಲ ನಿವೇಶನಗಳಲ್ಲಿ ಹಲವು ವರ್ಷಗಳಿಂದ ಬಳಸದೆ ನಿಲ್ಲಿಸಿರುವ ವಾಹನಗಳು ತುಕ್ಕುಹಿಡಿದಿವೆ. ಕಸ ಸಂಗ್ರಹ ಗಾಡಿ ಬರದಿದ್ದರೆ ನಿವೇಶನಗಳಿಗೆ ಕಸ ಸುರಿಯವ ಪರಿಪಾಟ ಇದೆ. ಬೀಡಾಡಿ ಜಾನುವಾರುಗಳಿಗೂ (ಹಸು ಎಮ್ಮೆ... ) ನಿವೇಶನಗಳು ‘ತಂಗುದಾಣ'ಗಳಂತಾಗಿವೆ. ನಗರದ ಹೊರವಲಯದ ಹಲವೆಡೆ ನಿವೇಶನಗಳು ಅಕ್ರಮ ಚಟುವಟಿಕೆಗಳ ಅಡ್ಡೆಗಳಾಗಿವೆ. ‌ಪುಂಡಪೋಕರಿಗಳು ಇಳಿಸಂಜೆ ರಾತ್ರಿ ಹೊತ್ತಿನಲ್ಲಿ ಮದ್ಯ ಸೇವಿಸಿ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ. ಮದ್ಯದ ಖಾಲಿ ಬಾಟಲಿಗಳು ಸಿಗರೇಟು ಗುಟ್ಕಾ ಖಾಲಿ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಇನ್ನು ಕೆಲವು ಕಡೆ ಮಾದಕ (ಗಾಂಜಾ) ಪದಾರ್ಥಗಳನ್ನು ಸೇವಿಸುತ್ತಾರೆ. ‘ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಎಸೆಯುತ್ತಾರೆ. ತ್ಯಾಜ್ಯರಾಶಿಗಳನ್ನು ಜಾನುವಾರುಗಳು ರಾಡಿ ಎಬ್ಬಿಸುತ್ತವೆ. ಅಕ್ಕಪಕ್ಕದ ಮನೆಯವರು ನೊಣ ಸೊಳ್ಳೆಗಳ ಕಾಟ ಅನುಭವಿಸಬೇಕು. ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿರುತ್ತವೆ. ಜಾನುವಾರುಗಳು ಹಂದಿ ನಾಯಿಗಳ ಉಪಟಳ ಹೆಚ್ಚಾಗಿದೆ. ನಿವೇಶನಗಳಿಗೆ ಬೇಲಿ ಹಾಕಿ ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಮಹಾನಗರ ಪಾಲಿಕೆಯವರು ನಿವೇಶನ ಮಾಲೀಕರಿಗೆ ಸೂಚನೆ ನೀಡಬೇಕು’ ಎಂದು ಸಂಪಿಗೆ ನಗರದ ಮಂಗಳಾ ಕರಿಯಣ್ಣವರ ಒತ್ತಾಯಿಸಿದರು.

ವಲಯ ಸಂಖ್ಯೆ 6ರ ವ್ಯಾಪ್ತಿಯ ಮಯೂರಿ ಎಸ್ಟೇಟ್‌ನಲ್ಲಿರುವ ಖಾಲಿ ನಿವೇಶನವನ್ನು ಪಾಲಿಕೆ ವತಿಯಿಂದ ಸ್ವಚ್ಛಗೊಳಿಸಲಾಯಿತು
ಧಾರವಾಡದ ಸಂಪಿಗೆನಗರದ ನಿವೇಶನವೊಂದರಲ್ಲಿ ಗಿಡಗಂಟಿಗಳು ಬೆಳೆದಿರುವುದು ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಹುಬ್ಬಳ್ಳಿಯ ಕೋಟಿಲಿಂಗ ನಗರದ ಖಾಲಿ ನಿವೇಶನದಲ್ಲಿ ಗಿಡಗಳು ಬೆಳೆದಿವೆ
ಮಕ್ಕಳು ವಯೋವೃದ್ಧರು ರಸ್ತೆಯಲ್ಲಿ ಓಡಾಡುವಾಗ ತೊಂದರೆ ಆಗುತ್ತಿದೆ. ಖಾಲಿ ನಿವೇಶನಗಳನ್ನು ಮಾಲೀಕರು ಸ್ವಚ್ಛವಾಗಿಟ್ಟುಕೊಳ್ಳಬೇಕು
-ನವೀದ್ ಮುಲ್ಲಾ, ಸಮಾಜ ಸೇವಕ ಹುಬ್ಬಳ್ಳಿ 
ಅವಳಿನಗರದ ಹೊರವಲಯದಲ್ಲಿ ಹೆಚ್ಚಿನ ಖಾಲಿ ನಿವೇಶನಗಳಿವೆ. ಅವುಗಳ ಮಾಲೀಕರನ್ನು ಪತ್ತೆ ಹಚ್ಚಿ ನೋಟಿಸ್ ನೀಡಲಾಗುತ್ತಿದೆ
-ರುದ್ರೇಶ ಘಾಳಿ, ಆಯುಕ್ತ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ
ಜಿಲ್ಲೆಯ ಸ್ವಚ್ಛತೆ ಸೌಂದರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಆಯಾ ವಾರ್ಡ್‌ಗಳಲ್ಲಿ ಖಾಲಿ ನಿವೇಶನಗಳಿದ್ದಲ್ಲಿ ಸ್ವಚ್ಛಗೊಳಿಸಲು ಮಾಲೀಕರಿಗೆ ಸೂಚಿಸುವಂತೆ ವಾರ್ಡ್‌ ಸದಸ್ಯರಿಗೂ ತಿಳಿಸಲಾಗಿದೆ
-ಜ್ಯೋತಿ ಪಾಟೀಲ, ಮೇಯರ್‌ ಹು–ಧಾ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.