
ಹೆತ್ತೂರು: ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಚಳಿ ತೀವ್ರಗೊಂಡಿದೆ. ಕೊರೆವ ಚಳಿಗೆ ಜನ ತತ್ತರಿಸಿದ್ದಾರೆ. ಶನಿವಾರ 12 ಡಿಗ್ರಿ ಸೆಲ್ಸಿಯಸ್‌ಗೆ ಕನಿಷ್ಠ ತಾಪಮಾನ ಇಳಿಕೆಯಾಗಿತ್ತು.
ಮಲೆನಾಡು ಜನ ತಡೆಯಲಾಗದ ಕೊರೆವ ಚಳಿ ಅನುಭವಿಸುತ್ತಿದ್ದು, ಪಶ್ಚಿಮ ಘಟ್ಟ, ಗುಡ್ಡದ ಮೇಲಿರುವ ಜನವಸತಿಗಳ ಜನರು ನಡುಗುತ್ತಿದ್ದಾರೆ. ಶನಿವಾರ ಮಧ್ಯಾಹ್ನದ ಬಿಸಿಲಿದ್ದರೂ ಚಳಿಯ ಅನುಭವವಾಯಿತು. ಸಾಮಾನ್ಯ ವಾಗಿಯೇ ಸ್ವಲ್ಪ ತಣ್ಣನೆಯ ವಾತಾವರಣ ಹೊಂದಿರುವ ಜಿಲ್ಲೆಯ ಮಲೆನಾಡಿನಲ್ಲಿ ಈಗ ಶೀತ ಗಾಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಮಕ್ಕಳು, ವೃದ್ದರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಜನ ಚಳಿಯಿಂದ ಹೆಚ್ಚು ಆರೋಗ್ಯ ಸಮಸ್ಯೆ ಅನುಭವಿಸುವಂತಾಗಿದೆ.
ಚಳಿಯಿಂದ ರಕ್ಷಣೆ ಪಡೆಯಲು ಟೋಪಿ, ಸ್ವೆಟರ್, ಜಾಕೆಟ್, ಮಫ್ಲರ್ ಸೇರಿದಂತೆ ಹಲವು ಬೆಚ್ಚನೆಯ ಉಡುಪುಗಳನ್ನು ಧರಿಸುತ್ತಿದ್ದಾರೆ. ಜೊತೆಗೆ ಅಲ್ಲಲ್ಲಿ ಬೆಂಕಿ ಕಾಯಿಸಿಕೊಳ್ಳುವುದೂ ಕಾಣಿಸುತ್ತಿದೆ.
ಚಳಿಯಿಂದಾಗಿ ಶೀತ, ಕೆಮ್ಮು, ಗಂಟಲು ನೋವು, ಜ್ವರ ಕೂಡ ಹೆಚ್ಚಾಗುವ ಆತಂಕ ಇದೆ. ಸದ್ಯಕ್ಕೆ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿಲ್ಲ. ಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಚಳಿ ಹೆಚ್ಚಾಗಿರುವುದರಿಂದ ಮನೆಗಳ ಹೊರಗೆ ಕೆಲಸ ಮಾಡುವ, ನಸುಕಿನಲ್ಲಿ ಕೆಲಸಕ್ಕೆ ಹೊರಡುವ ಕಾರ್ಮಿಕರು, ರೈತರು, ಬೀದಿಬದಿ ವ್ಯಾಪಾರಿಗಳು ಹೆಚ್ಚಿನ ತೊಂದರೆ ಎದುರಿಸುತ್ತಿದ್ದಾರೆ. ಮಲೆನಾಡಿನಲ್ಲಿ ಚಳಿ ಮತ್ತು ಮಳೆ ಎದುರಿಸಿ ಜನರಿಗೆ ಅನುಭವ ಇದೆ. ಆದರೂ, ಈ ವರ್ಷದ ಚಳಿಯ ಪ್ರಮಾಣ ಜಾಸ್ತಿಯಾಗಿರುವುದು ಜನರನ್ನು ತತ್ತರಿಸುವಂತೆ ಮಾಡಿದೆ.
ಮುಂಜಾನೆ ಹಾಗೂ ರಾತ್ರಿ ಚಳಿ ವಾಡಿಕೆಗಿಂತ ತುಸು ಹೆಚ್ಚೇ ಇರಲಿದೆ. ಇದು ವಾತಾವರಣದ ಜೊತೆಗೆ ಜನರ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಚಳಿಯ ತೀವ್ರತೆ ಹೆಚ್ಚಿದಷ್ಟು ಜನರ ಆರೋಗ್ಯ ಕಾಳಜಿಯೂ ಹೆಚ್ಚಬೇಕು. ಅದರಲ್ಲೂ ಮಕ್ಕಳು, ಹಿರಿಯ ನಾಗರಿಕರು ಹೆಚ್ಚು ಜಾಗ್ರತೆ ವಹಿಸಬೇಕು. ಬೆಚ್ಚನೆಯ ಉಡುಪು, ಬಿಸಿಯಾದ ಆಹಾರಕ್ಕೆ ಆದ್ಯತೆ ನೀಡಬೇಕು ಎನ್ನುವುದು ವೈದ್ಯರ ಸಲಹೆ.
ಹವಾಮಾನ ತಜ್ಞರ ಪ್ರಕಾರ ಇನ್ನೂ ಕೆಲ ದಿನ ಜಿಲ್ಲೆಯಲ್ಲಿ ಚಳಿ ಮುಂದುವರಿಯುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಮನವಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.