
ಹಾವೇರಿ: ‘ವಿದ್ಯಾರ್ಥಿ ಜೀವನದಲ್ಲಿ ಜ್ಞಾನ ಸಂಪಾದನೆ ಮುಖ್ಯ. ಪರೀಕ್ಷೆಯಲ್ಲಿ ತೆಗೆದುಕೊಳ್ಳುವ ಅಂಕಗಳಲ್ಲ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ನವಚೇತನ ಫೌಂಡೇಶನ್‌ನ ವಿದ್ಯಾಶಿಲ್ಪ ಇಂಟರನ್ಯಾಷನಲ್ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ‘ಮಕ್ಕಳು ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳಾಗಬೇಕಾದರೆ, ಅವರು ಉತ್ತಮ ತಿಳಿವಳಿಕೆಯ ಜ್ಞಾನಾರ್ಜನೆ ಪಡೆಯಬೇಕು. ಅದನ್ನು ಅರಿಯದೇ ಪೋಷಕರು, ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬೇಕೆಂದು ಒತ್ತಡ ಹೇರುವುದು ಸರಿಯಲ್ಲ’ ಎಂದರು.
‘ನಾನು ಜಿಲ್ಲಾಧಿಕಾರಿಯಾಗಲು, ಶಾಲಾ ಹಂತದಿಂದಲೇ ತಯಾರಿ ನಡೆಸಿ ಯುಪಿಎಸ್‌ಸಿ ಪರೀಕ್ಷೆ ಬರೆದು ಯಶಸ್ವಿಯಾಗಿದ್ದೇನೆ. ವಿದ್ಯಾರ್ಥಿಗಳು ಇಂದಿನಿಂದಲೇ ತಮ್ಮ ಜೀವನದ ಗುರಿಯತ್ತ ಸಾಗಬೇಕು’ ಎಂದರು.
ಸಾಹಿತಿ ಸತೀಶ ಕುಲಕರ್ಣಿ, ‘ಶಾಲೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತು ಕೊಡುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಲಿ’ ಎಂದರು.
ಸಂಸ್ಥೆಯ ಅಧ್ಯಕ್ಷ ನಾಗೇಂದ್ರ ಮಾಳಿ ಮಾತನಾಡಿ, ‘ನಮ್ಮ ವಿದ್ಯಾಸಂಸ್ಥೆಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿದೆ. 2024ರಲ್ಲಿ 300 ಮಕ್ಕಳಿದ್ದ ಶಾಲೆ, ಇಂದು 600ಕ್ಕೆ ಏರಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಇಂಗ್ಲಿಷ್ ಭಾಷಾ ಶಿಕ್ಷಣ ಸಿಗಬೇಕೆಂಬ ಉದ್ದೇಶ ನಮ್ಮದು’ ಎಂದರು.
2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಮಧುರಾ ಬಿ. ಅವರಿಗೆ ₹5,000 ನಗದು ಸಮೇತ ಪಾರಿತೋಷಕ ನೀಡಲಾಯಿತು. 2025ರ ಉತ್ತಮ ವಿದ್ಯಾರ್ಥಿ ನಿಸಬಾ ಕೌಸರ ಅವರಿಗೆ ಪಾರಿತೋಷಕ ನೀಡಲಾಯಿತು.
ಶಾಲೆಯ ನಿರ್ದೇಶಕ ಚಂದ್ರಶೇಖರ ಮಣಿಗಾರ, ಚಂದ್ರಕಲಾ ಮಾಳಿ, ಆಡಳಿತಾಧಿಕಾರಿ ಸೌಮ್ಯ ಮಾಳಿ, ನವಚೇತನ ಫೌಂಡೇಶನ್ ಅಧ್ಯಕ್ಷ ಶಾಂತಕುಮಾರ ಮಾಳಿ, ಕ್ಸೇವಿಯರ್ ಆಂಥೋನಿ, ಶಿಕ್ಷಣ ಸಂಯೋಜಕಿ ಹೇಲನ್ ಮಾರ್ಗೇಟ್ ರಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.