ADVERTISEMENT

ಕಾಂಗ್ರೆಸ್‌ನವರು ತಮಿಳುನಾಡು ವಿರುದ್ಧ ಪ್ರತಿಭಟನೆ ಮಾಡಲಿ: ಸಚಿವ ಬಿ.ಸಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 9:39 IST
Last Updated 12 ಜನವರಿ 2022, 9:39 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಕಲಬುರಗಿ: ಮೇಕೆದಾಟು ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ನಮ್ಮ ಸರ್ಕಾರದ ‌ವಿರುದ್ಧ ಪ್ರತಿಭಟನಾ ಪಾದಯಾತ್ರೆ ನಡೆಸುವ ಬದಲು ತಮಿಳುನಾಡು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಸವಾಲು ಹಾಕಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಯೋಜನೆ ಜಾರಿಗೆ ಏನು ಮಾಡಬೇಕೋ ಅದನ್ನು ಮಾಡಿದೆ. ಕೋವಿಡ್ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಅನಗತ್ಯವಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರನ್ನು ಪಕ್ಕಕ್ಕೆ ಸರಿಸಲು ಡಿ.ಕೆ.ಶಿವಕುಮಾರ್ ‌ದುಡ್ಡು ಖರ್ಚು ಮಾಡಿ ಪಾದಯಾತ್ರೆ ನಡೆಸುತ್ತಿದ್ದಾರೆ. ಈಗಾಗಲೇ ಅವರ ಮೇಲೆ ಕೋವಿಡ್ ನಿಯಮಾವಳಿ ಉಲ್ಲಂಘನೆಗಾಗಿ ಪ್ರಕರಣ ದಾಖಲಾಗಿದೆ. ಸರ್ಕಾರ ಅವರಿಗೆ ಹೆದರಿಲ್ಲ. ಅವರೇ ತಿಳಿದುಕೊಂಡು ಪಾದಯಾತ್ರೆ ನಿಲ್ಲಿಸಬಹುದು ಎಂದುಕೊಂಡು ‌ಸುಮ್ಮನಾಗಿದ್ದೇವೆ ಎಂದರು.

ADVERTISEMENT

ಮೇಕೆದಾಟು ಬಗ್ಗೆ ಇಷ್ಟೊಂದು ಆಸಕ್ತಿ ವಹಿಸಿರುವ ಕಾಂಗ್ರೆಸ್ ನವರು ಹಿಂದೆ ಸೋನಿಯಾ ಗಾಂಧಿ ಅವರು ಮಹದಾಯಿಯಲ್ಲಿ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡುವುದಿಲ್ಲ ಎಂದಾಗ ಏಕೆ ಮೌನವಾಗಿದ್ದರು. ಕಾವೇರಿ ಬಗ್ಗೆ ಇರುವ ಆಸಕ್ತಿ ಮಹದಾಯಿ, ಕೃಷ್ಣಾಕ್ಕೆ ಇಲ್ಲವೇ ಎಂದು ಪ್ರಶ್ನಿಸಿದರು.

ಕಲಬುರಗಿ ನಗರದಲ್ಲಿ ಕೃಷಿ ಇಲಾಖೆಯ ವತಿಯಿಂದ ₹ 9.80 ಕೋಟಿ ವೆಚ್ಚದಲ್ಲಿ ಶೀಥಲೀಕರಣ ಘಟಕಕ್ಕೆ ಮಂಜೂರಾತಿ ದೊರಕಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.