ADVERTISEMENT

ಮಡಿಕೇರಿ | 11 ದಿನ ನಡೆದ ಸಾಂಸ್ಕೃತಿಕ ಉತ್ಸವ; ಪೌರಕಾರ್ಮಿಕರ ಅವಿರತ ದುಡಿಮೆ

ಕೆ.ಎಸ್.ಗಿರೀಶ್
ಜೆ.ಸೋಮಣ್ಣ
Published 11 ಅಕ್ಟೋಬರ್ 2025, 6:07 IST
Last Updated 11 ಅಕ್ಟೋಬರ್ 2025, 6:07 IST
ಗೋಣಿಕೊಪ್ಪಲು ಬಸ್ ನಿಲ್ದಾಣದ ಬಳಿ ಗುಡಿಸಿ ಚೀಲದಲ್ಲಿ ತುಂಬಿರುವ ಕಸದ ರಾಶಿ
ಗೋಣಿಕೊಪ್ಪಲು ಬಸ್ ನಿಲ್ದಾಣದ ಬಳಿ ಗುಡಿಸಿ ಚೀಲದಲ್ಲಿ ತುಂಬಿರುವ ಕಸದ ರಾಶಿ   

ಮಡಿಕೇರಿ: ದಸರೆಯ ನಂತರವೂ ದಸರೆಗಾಗಿ ದುಡಿದವರು ಪೌರಕಾರ್ಮಿಕರು. ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಗೋಣಿಕೊಪ್ಪಲಿನಲ್ಲಿ ದಸರಾ ಉತ್ಸವ ಯಶಸ್ಸಿನ ಹಿಂದೆ ಇವರ ಅಗಾಧ ಶ್ರಮ ಅಡಗಿದೆ.

ಮಡಿಕೇರಿ ನಗರದಲ್ಲಿ ನಡೆದ ದಸರೆಯ ವೇಳೆ ಚಾಲಕರೂ ಸೇರಿದಂತೆ ಒಟ್ಟು 65 ಮಂದಿ ಪೌರಕಾರ್ಮಿಕರು ಕಸ ತೆಗೆದಿದ್ದಾರೆ. ಇವರಲ್ಲಿ 20 ಮಂದಿ ಗಿಡಗಂಟಿಗಳನ್ನು ತೆರವುಗೊಳಿಸಿದ್ದಾರೆ. 4 ವಾಹನಗಳು 3 ದಿನ ನಿರಂತರವಾಗಿ ಕಸ ಸಂಗ್ರಹ ಮಾಡಿವೆ. ಒಟ್ಟು 12–13 ಟನ್‌ ಕಸ ಸಂಗ್ರಹವಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಖ್ಯವಾಗಿ, ಸಂಗ್ರಹವಾದ ಕಸದಲ್ಲಿ ಹಸಿ ಕಸಕ್ಕಿಂತ ಒಣ ಕಸ ಹೆಚ್ಚಾಗಿ ಕಂಡು ಬಂದಿದೆ. ಪ್ಲಾಸ್ಟಿಕ್‌ ಬಾಟಲಿಗಳು, ಪ್ಲಾಸ್ಟಿಕ್‌ ಕವರ್‌ಗಳ ಸಂಖ್ಯೆಯೇ ದೊಡ್ಡದಿದೆ. ಇಲ್ಲಿಗೆ ಬಂದಿದ್ದ ಲಕ್ಷಾಂತರ ಮಂದಿ ಪ್ರವಾಸಿಗರು ಬಿಸಾಡಿದ್ದ ಕಸದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವೇ ಅತ್ಯಧಿಕ ಎಂಬುದು ಗಮನಾರ್ಹ. ಒಂದು ದಿನವೂ ತಡಮಾಡದೆ ಪೌರಕಾರ್ಮಿಕರು ಕಸವನ್ನು ತೆಗೆದು ನಗರವನ್ನು ಮೊದಲಿನಂತೆ ಮಾಡಿದರು. ಕಾಗದದ ಚೂರುಗಳ ಸಂಖ್ಯೆಯೂ ಹೆಚ್ಚಿತ್ತು. ತುಂಡು ಪ್ಲಾಸ್ಟಿಕ್‌ ಕವರ್‌ ಅನ್ನು ತೆಗೆಯುವಷ್ಟರಲ್ಲಿ ಸಾಕು ಸಾಕಾಯಿತು ಎಂದು ಪೌರಕಾರ್ಮಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪೌರಕಾರ್ಮಿಕರಿಗೆ ಹೆಚ್ಚಿನ ವೇತನ ನೀಡಿ ಇದರ ಬಗ್ಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಹಾಗೂ ಕಾವೇರಿ ಜಲಮೂಲ ಸಂರಕ್ಷಣಾ ವೇದಿಕೆ ಮಾಜಿ ಅಧ್ಯಕ್ಷ ಪುಳಿಂಜನ ಪೂವಯ್ಯ, ಪಟ್ಟಣ ಸ್ವಚ್ಛಮಾಡಬೇಕಾದರೆ ಒಂದು ವಾರ ಬೇಕಾಗುತ್ತದೆ. ಇಷ್ಟೊಂದು ಕಸ ತುಂಬಿರುವ ಪಟ್ಟಣದ ಶ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಗೋಣಿಕೊಪ್ಪಲಿನಲ್ಲಿ 20 ಮಂದಿ ಅವಿರತ ಶ್ರಮ

ಗೋಣಿಕೊಪ್ಪಲು: ಇಲ್ಲಿನ ದಸರಾ ಉತ್ಸವ ಯಶಸ್ವಿಯಾಗಿ ಮುಗಿದಿದೆ. ಮುಗಿದ ಬಳಿಕ ಪಟ್ಟಣವನ್ನು ಯಶಸ್ವಿಯಾಗಿ ಸ್ವಚ್ಛಗೊಳಿಸಿದವರು 20 ಮಂದಿ ಪೌರಕಾರ್ಮಿಕರು. ಇವರ ಅವಿರತ ಶ್ರಮದಿಂದ ಪಟ್ಟಣ ಈಗ ಮೊದಲಿನಂತಾಗಿದೆ.

ದಸರಾ ಸಮಾರಂಭದ ಕೊನೆಯ ದಿನವಾದ ವಿಜಯದಶಮಿಯಂದು ನಡೆದ ಸ್ತಬ್ಧ ಚಿತ್ರ ಮೆರವಣಿಗೆ ಮತ್ತು ದಶಮಂಟಪ ಶೋಭಾ ಯಾತ್ರೆಯಲ್ಲಿ 15 ಸಾವಿರಕ್ಕೂ ಹೆಚ್ಚಿನ ಜನ ಸೇರಿದ್ದರು.

ವಿಜಯದಶಮಿ ದಿನ ಮಧ್ಯಾಹ್ನದಿಂದ ಮಾರನೆ ದಿನ 10 ಗಂಟೆವೆರೆಗೆ ನಡೆದ ಉತ್ಸವದಲ್ಲಿ ಪಾಲ್ಗೊಂಡಿದ್ದ ಜನತೆ ಕುಡಿಯುವ ನೀರಿನ ಬಾಟಲ್, ಜ್ಯೂಸ್ ಬಾಟಲ್, ತಿಂಡಿ ತಿನುಸಗಳ ಪ್ಲಾಸ್ಟಿಕ್ ಪೊಟ್ಟಣ ಮೊದಲಾದವುಗಳನ್ನು ಪಟ್ಟಣದಲ್ಲಿ ಎಲ್ಲೆಂದರಲ್ಲಿ ಎಸೆದಿದ್ದರು. ‘ನಿತ್ಯ 2 ಟ್ರಾಕ್ಟರ್ ಮತ್ತು 2 ಸರಕು ಸಾಗಣೆ ಆಟೊದಷ್ಟು ಕಸ ಸಂಗ್ರಹವಾಗುತ್ತಿತ್ತು. ಈಗ ಅಂದಾಜು 10ರಿಂದ 12 ಟ್ರಾಕ್ಟರ್‌ ಕಸ ಆಗಿದೆ. ಅವುಗಳನ್ನೆಲ್ಲ 20 ಪೌರಕಾರ್ಮಿಕರು ತೆಗೆದಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಹೇಳಿದರು.

ದಸರೆಯ ನಂತರ ಸ್ವಚ್ಛತಾ ಕಾರ್ಯಕ್ಕಾಗಿ ಪೌರಕಾರ್ಮಿಕರಿಗೆ ಹೆಚ್ಚುವರಿ ಹಣ ನೀಡುವುದಿಲ್ಲ.
-ತಿಮ್ಮಯ್ಯ, ಗೋಣಿಕೊಪ್ಪಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಕಸ ಗುಡಿಸುತ್ತಿರುವ ಪೌರ ಕಾರ್ಮಿಕ ಗಣೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.