
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇದುವರೆಗೂ ಬಿರು ಬಿಸಿಲು ಹಾಗೂ ಅಸಾಧ್ಯ ಚಳಿಯ ವಾತಾವರಣ ಇತ್ತು. ಆದರೆ, ಮಂಗಳವಾರ ಇದ್ದಕ್ಕಿದ್ದಂತೆ ಶುಭ್ರ ಆಕಾಶದಲ್ಲಿ ಮೋಡಗಳು ಕಾಣಿಸಿಕೊಂಡಿದ್ದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ಬೆಳಿಗ್ಗೆಯಿಂದಲೇ ಆರಂಭವಾದ ಮೋಡ ಕವಿಯುವಿಕೆ ಇಡೀ ದಿನ ಬಿಸಿಲು ನೆಲಕ್ಕೆ ತಾಗಲಿಲ್ಲ. ಕವಿದ ಮೋಡಗಳು ಮುಂಗಾರಿನಂತಹ ವಾತಾವರಣ ಸೃಷ್ಟಿಸಿತು. ಸೋಮವಾರಪೇಟೆಯ ಕೆಲವೆಡೆ ಕೆಲವೊಂದು ಹನಿಗಳೂ ಉದುರಿದವು. ಇದರಿಂದ ನಿಜಕ್ಕೂ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ ಭತ್ತ ಹಾಗೂ ಕಾಫಿ ಕೊಯ್ಲು ಮುಗಿದಿಲ್ಲ. ಕೆಲವೆಡೆ ಮಾತ್ರ ಮುಗಿದಿದೆ. ಇನ್ನೂ ಹಲವು ಕಡೆ ಕೊಯ್ಲಿಗೆ ಬಾಕಿ ಇದೆ. ಕಾಫಿ ಕೊಯ್ಲು ಆಗಿರುವ ಕಡೆಯೂ ಇನ್ನೂ ಕಾಫಿ ಒಣಗಿಲ್ಲ. ಈ ಹಂತದಲ್ಲಿ ಮಳೆ ಬಂದರೆ ಅಪಾರ ನಷ್ಟವಾಗುವ ಭೀತಿ ಎದುರಾಗಿದೆ.
ರೊಬೊಸ್ಟಾ ಕಾಫಿ ಇನ್ನೂ ಹಲವೆಡೆ ಹಣ್ಣಾಗಿಲ್ಲ. ಬಿಸಿಲು ಬಾರದೇ ಈ ಬಗೆಯಲ್ಲಿ ಮೋಡ ಕವಿದ ವಾತಾವರಣ ಇದ್ದರೆ ಹಣ್ಣಾಗುವುದೂ ತಡವಾಗಲಿದೆ. ಜೊತೆಗೆ ಮೋಡ ಕವಿದ ವಾತಾವರಣದಿಂದ ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲಾರದೇ ಪರದಾಡಬೇಕಾಗುತ್ತದೆ. ಹೀಗಾಗಿ, ಮಳೆ ಇರಲಿ, ಮೋಡ ಕವಿದ ವಾತಾವರಣವೂ ಬೆಳೆಗಾರರ ಪಾಲಿಗೆ ನಷ್ಟ ತರಿಸುವ ಸಾಧ್ಯತೆ ಇದೆ.
ಉತ್ತರ ಭಾರತದ ಅಸ್ವಾಭಾವಿಕ ಗಾಳಿ ತಿರುಗುವಿಕೆಯ ವ್ಯಾಪ್ತಿ ಹೆಚ್ಚಾಗಿ ಬಂಗಾಳಕೊಲ್ಲಿಯ ಕಡೆಯಿಂದ ಗಾಳಿಯು ಬೀಸುತ್ತಿರುವುದರಿಂದ ಹಾಗೂ ಅರಬ್ಬಿ ಸಮುದ್ರದ ಕೇರಳ ಕರಾವಳಿ ಸಮೀಪ ವಾಯುಭಾರ ಕುಸಿತದಂತಹ ತಿರುಗುವಿಕೆ ಉಂಟಾಗಿದ್ದರಿಂದ ಈ ಮೋಡದ ವಾತಾವರಣ ಉಂಟಾಗಿದೆ ಎಂದು ಮೈಸೂರಿನ ನಾಗನಹಳ್ಳಿಯಲ್ಲಿರುವ ಕೃಷಿ ಹವಾಮಾನ ಸೇವಾ ವಿಭಾಗ ತಿಳಿಸಿದೆ. ಆದರೆ, ಸದ್ಯದಲ್ಲೇ ಮೋಡದ ವಾತಾವರಣ ತಿಳಿಯಾಗಿ ಬಿಸಿಲು ಮೂಡುವ ಸಾಧ್ಯತೆ ಇದೆ ಎಂಬ ಮುನ್ಸೂಚನೆಯೂ ಇದೆ.
ಒಂದು ವೇಳೆ ಮಳೆಯಾದರೆ ಗಿಡದಲ್ಲಿರುವ ಕಾಫಿ ಉದುರಲಿದೆ, ಕೊಳೆಯಲಿದೆ. ಕಾಫಿ ಹಣ್ಣು ಬಿರಿದು ನೆಲಕಚ್ಚಲಿದೆ. ಆಗ ಬಿದ್ದ ಕಾಫಿಯನ್ನು ತೆಗೆಯುವುದು ಇನ್ನೂ ಕಷ್ಟದ ಕೆಲಸವಾಗಲಿದೆ. ಮಾತ್ರವಲ್ಲ, ಇದಕ್ಕೆ ಹೆಚ್ಚಿನ ಕೂಲಿ ನೀಡಲಬೇಕಾಗುತ್ತದೆ. ಒಂದು ವೇಳೆ ಹಾಗೆ ಬಿಟ್ಟರೆ ಇದು ಮುಂದೆ ಕಾಯಿಲೆಗೂ ಕಾರಣವಾಗಲಿದೆ. ಮತ್ತೊಂದೆಡೆ ಕಾಫಿ ಕೋಯ್ದು ಒಣಗಿ ಹಾಕಿರುವುದು ಸಹ ಮಳೆಯಿಂದ ನಷ್ಟವಾಗಲಿದೆ. ಮೋಡಕವಿದ ವಾತಾವರಣದಿಂದ ಒಣಗುವುದೂ ನಿಧಾನವಾಗಲಿದೆ. ಯಾವಾಗ ಮಳೆ ಹನಿ ಬೀಳುವುದೋ ಎಂಬ ಆತಂಕದಲ್ಲೇ ಬೆಳೆಗಾರರು ಇರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
ಇಷ್ಟೆಲ್ಲ ಆತಂಕಗಳ ಮಧ್ಯೆ ಹೆಚ್ಚಿನ ಮಳೆಯಾಗದು, ಕವಿದ ಮೋಡಗಳು ತಿಳಿಯಾಗುವ ನಿರೀಕ್ಷೆ ಇದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದು ಕೊಂಚ ಸಮಾಧಾನಕ್ಕೆ ಕಾರಣವಾಗಿದ್ದರೂ, ಮಂಗಳವಾರದ ವಾತಾವರಣ ನೋಡಿದ ಬೆಳೆಗಾರರಿಗೆ ಆತಂಕ ಮಾತ್ರ ದೂರವಾಗಿಲ್ಲ.
ಹವಾಮಾನ ಅನಿಶ್ಚಿತತೆ ಬೆಳೆಗಾರರನ್ನು ಕಾಡುತ್ತಿದೆ. ಮಳೆ ಮೋಡ ದೂರವಾಗಿ ಬಿಸಿಲು ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಮತ್ತೆ ಮಳೆಯ ಆತಂಕ ಎದುರಾಗಿದೆ. ಇದೀಗ ಕಾಫಿ ಕೊಯ್ಲಿನ ಅವಧಿ ಜೊತೆಗೆ ಭತ್ತದ ಬೆಳೆಯು ಕೊಯ್ಲಿಗೆ ಬಂದಿದೆ. ಮಳೆ ಬಂದರೆ ರೈತರ ಗೋಳು ಹೇಳತೀರದು. ಈಗಾಗಲೇ ಕೋಯ್ಲು ಮಾಡಿರುವ ಕಾಫಿ ಅಂಗಳದಲ್ಲಿದೆ. ಗಿಡಗಳಲ್ಲಿರುವ ಕಾಫಿಯು ಉದುರಿ ಹೋಗಲಿದೆ. ಪಿ.ವಿ.ಮಂಜುನಾಥ್ ಕಾಫಿ ಬೆಳೆಗಾರ ಕುಂಜಿಲ
ವಾಯುಭಾರ ಕುಸಿತದಿಂದಾಗಿ ಡಿ. 16 ಮತ್ತು 17ರಂದು ಮೋಡ ಕವಿದ ವಾತಾವರಣ ಇರುವ ಸಾಧ್ಯತೆ ಇದ್ದು 18ರಂದು ಬಿಸಿಲು ಬರುವ ಸಾಧ್ಯತೆ ಹೆಚ್ಚಿದೆ. ಡಿ. 18ರಿಂದ ಸ್ವಚ್ಛ ವಾತಾವರಣದೊಂದಿಗೆ ಒಣ ಹವೆ ಚಳಿ ಹೆಚ್ಚಾಗಬಹುದು. ಡಾ.ಜಿ.ವಿ.ಸುಮಂತ್ ಕುಮಾರ್ ತಾಂತ್ರಿಕ ಅಧಿಕಾರಿ ಕೃಷಿ ಹವಾಮಾನ ಕ್ಷೇತ್ರ ವಿಭಾಗ ಮೈಸೂರಿನ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗ.
ಜಿಲ್ಲೆಯಲ್ಲಿ ಇನ್ನೂ ಕಾಫಿ ಕೊಯ್ಲು ಮುಗಿದಿಲ್ಲ. ಸದ್ಯದ ವಾತಾವರಣದ ಪರಿಸ್ಥಿತಿಯನ್ನು ಗಮನಿಸಿದರೆ ಬೆಳೆಗಾರರು ಸೂಕ್ತವಾದ ಮುನ್ನಚ್ಚರಿಕೆ ವಹಿಸಬೇಕು. ಮೋಡ ಮುಸುಕಿದ ವಾತಾವರಣದಿಂದ ಕಾಫಿ ಒಣಗಿಸುವುದು ಕಷ್ಟವಾಗಲಿದೆ. ಅದಕ್ಕಾಗಿಯೇ ಕಾಫಿ ಒಣಗಿಸುವ ಯಂತ್ರ ಖರೀದಿಸಲು ಕಾಫಿ ಮಂಡಳಿಯು ಬೆಳೆಗಾರರಿಗೆ ಸಹಾಯಧನ ನೀಡಲಿದೆ.-ಚಂದ್ರಶೇಖರ್, ಕಾಫಿ ಮಂಡಳಿ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.