ADVERTISEMENT

‘ಫೋರ್ಬ್ಸ್‌’ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಮೈಸೂರಿನ ಉದ್ಯಮಿ ರಮೇಶ್ ಕಣ್ಣನ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 14:21 IST
Last Updated 5 ಏಪ್ರಿಲ್ 2024, 14:21 IST
<div class="paragraphs"><p>ರಮೇಶ್‌ ಕಣ್ಣನ್</p></div>

ರಮೇಶ್‌ ಕಣ್ಣನ್

   

ಮೈಸೂರು: ಇಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇನ್ಸ್‌ ಟೆಕ್ನಾಲಜಿ ಕಂಪನಿಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ರಮೇಶ್‌ ಕಣ್ಣನ್‌ ಅಮೆರಿಕದ ‘ಫೋರ್ಬ್ಸ್‌’ ನಿಯತಕಾಲಿಕ ಪ್ರಕಟಿಸುವ ಬಿಲಿಯನೇರ್‌ಗಳ (ಶತಕೋಟ್ಯಧಿಪತಿ) ಪಟ್ಟಿಗೆ ಇದೇ ಮೊದಲ ಬಾರಿಗೆ ಸೇರ್ಪಡೆಯಾಗಿದ್ದಾರೆ.

ದೇಶದ ಹೆಗ್ಗಳಿಕೆಯಾದ ‘ಚಂದ್ರಯಾನ–3’ರ ನೌಕೆಯ ಲ್ಯಾಂಡರ್ ಹಾಗೂ ರೋವರ್‌ಗೆ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಇಸ್ರೊಗೆ ಪೂರೈಕೆ ಮಾಡಿದ್ದ ಈ ಕಂಪನಿಯ ಷೇರುಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾದ ಪರಿಣಾಮ, ರಮೇಶ್ ಅವರ ಸಂಪತ್ತಿನಲ್ಲೂ ಏರಿಕೆ ಕಂಡಿದೆ ಎಂದು ಹೇಳಲಾಗಿದೆ.

ADVERTISEMENT

ರಮೇಶ್ ಅವರು ‘ಫೋರ್ಬ್ಸ್‌’ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದನ್ನು ಕಂಪನಿಯ ಮೂಲಗಳು ಖಚಿತಪಡಿಸಿವೆ.

₹10ಸಾವಿರ ಕೋಟಿಗೂ ಮೀರಿ ಆಸ್ತಿಯನ್ನು ಅವರು ಹೊಂದಿದ್ದಾರೆ. ವಿಶ್ವದ ಶ್ರೀಮಂತ ಉದ್ಯಮಿಗಳಾದ ಎಲಾನ್‌ ಮಸ್ಕ್‌, ಮುಕೇಶ್ ಅಂಬಾನಿ, ಜೆಫ್‌ ಬೇಜೋಸ್ ಮೊದಲಾದವರ ಸಾಲಿಗೆ ಸೇರಿದ್ದಾರೆ. ಎಲೆಕ್ಟ್ರಿಕಲ್‌ ಎಂಜಿನಿಯರ್‌ ಆಗಿರುವ ಅವರು, 1988ರಲ್ಲಿ ಕೇನ್ಸ್‌ ಟೆಕ್ನಾಲಜಿ ಕಂಪನಿಯನ್ನು ಸ್ಥಾಪಿಸಿದ್ದಾರೆ.

ಅವರ ಪತ್ನಿ ಸವಿತಾ ರಮೇಶ್ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದಾರೆ. ಈ ಕಂಪನಿಯಲ್ಲಿ ರಮೇಶ್ ಅವರು ಶೇ 64ರಷ್ಟು ಷೇರು ಹೊಂದಿದ್ದಾರೆ. ಕಂಪನಿಯು 2022ರ ನವೆಂಬರ್‌ನಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿತ್ತು. ‘ಚಂದ್ರಯಾನ–3’ರ ಯಶಸ್ಸಿನ ನಂತರ ಷೇರು ಮೌಲ್ಯ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.