ADVERTISEMENT

ಮೈಸೂರು | ಅಂಬೇಡ್ಕರ್ ಬ್ಯಾನರ್ ತೆರವು: ವಿದ್ಯಾರ್ಥಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 7:19 IST
Last Updated 12 ಜೂನ್ 2025, 7:19 IST
   

ಮೈಸೂರು: ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರು ಗುರುವಾರ ಮಾನಸ ಗಂಗೋತ್ರಿ ಆವರಣದಲ್ಲಿ ಪ್ರತಿಭಟನೆ ಮುಂದುವರೆಸಿದರು.

ಸಂಶೋಧಕರ ಸಂಘಟನೆಯು ವಿಶ್ವವಿದ್ಯಾಲಯ ಆವರಣದಲ್ಲಿ ಅಂಬೇಡ್ಕರ್ ಜಯಂತಿಗೆ ಶುಭಕೋರಿ ಬ್ಯಾನರ್ ಅಳವಡಿಸಿತ್ತು. ಬುಧವಾರ ಸಂಜೆ ಕಾಲೇಜು ಆಡಳಿತ ಮಂಡಳಿ ಸಿಬ್ಬಂದಿ ಬ್ಯಾನರ್ ತೆರವು ಮಾಡಿದ್ದರು. ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸಂಘಟನೆ ಪದಾಧಿಕಾರಿಗಳು ರಾತ್ರಿಯಿಡೀ ಪ್ರತಿಭಟಿಸಿದರು. ತಡರಾತ್ರಿ ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಸಂಘಟನೆ ಪ್ರಮುಖರು ಬ್ಯಾನರ್ ತೆರವುಗೊಳಿಸಿದ್ದವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಜಯಲಕ್ಷ್ಮಿಪುರಂ ಠಾಣೆಗೆ ದೂರು ನೀಡಿದ್ದು, ಎಪ್ ಐ ಆರ್ ದಾಖಲಾಗಿದೆ.

ಗುರುವಾರ ಬೆಳಿಗ್ಗಿನಿಂದಲೇ ಕ್ಲಾಕ್ ಟವರ್ ಮುಂಭಾಗದ ರಸ್ತೆ ತಡೆಗಟ್ಟಿ ಪ್ರತಿಭಟಿಸಿದರು. 'ಕುಲಪತಿಗಳನ್ನು ರಾಜ್ಯಸರ್ಕಾರ ವಜಾಗೊಳಿಸಬೇಕು', 'ಆಡಳಿತಾಧಿಕಾರಿ ರಾಮಚಂದ್ರ ಅವರನ್ನು ಅಮಾನತು ಮಾಡಬೇಕು', 'ದಲಿತ ವಿರೋಧಿಗಳ ವಿರುದ್ಧ ಕ್ರಮವಹಿಸಬೇಕು', 'ಘಟನಾ ಸ್ಥಳಕ್ಕೆ ಬಾರದ ಕುಲಪತಿ, ಕುಲಸಚಿವರಿಗೆ ಧಿಕ್ಕಾರ' ಇತ್ಯಾದಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮಾನಸ ಗಂಗೋತ್ರಿ ಆವರಣದ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದು, ಆವರಣಕ್ಕೆ ಪ್ರವೇಶಿಸುವವರನ್ನು ಪರಿಶೀಲಿಸಿ ವಿಶ್ವವಿದ್ಯಾಲಯ ಆವರಣಕ್ಕೆ ಬಿಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.